1 .ಮನ್ನಿಸಿ ಮಕ್ಕಳೇ
ಓ ಅಲ್ಲಿ, ಎಲ್ಲಿ
ಇರುಳಾಗಸದ ಹೊಳೆಹೊಳೆವ ಚಿಕ್ಕೆಗಳಿಗೆಲ್ಲ
ಅರಬರೊಂದೊಂದು ಹೆಸರಿಟ್ಟರೋ ಆ ನೆಲದಲ್ಲಿ
ಇಂದು
ನಮ್ಮದೇ ಒಡಲ ಕೂಸುಗಳು
ಕುಳಿತುಬಿಟ್ಟಿವೆ ಮ್ಲಾನ ಚಿಕ್ಕೆಗಳಾಗಿ..
ನಲ್ಮೆಯ ಕಂದಮ್ಮಗಳೇ,
ನಾವೇ ಕೈಯಾರ
ಇಟ್ಟಿಗೆ ಮೇಲೆ ಇಟ್ಟಿಗೆಯಿಟ್ಟು
ಮನೆಯೆಂದು ಕರೆದು
ನಿಮ್ಮ ಕರೆ ತಂದೆವು
ಬಾಲ್ಯದ ಬೆಚ್ಚಗಿನ ಗೂಡು
ಬಾಂಬಿನಬ್ಬರಕೆ ಭಡಭಡನುದುರಿಬಿದ್ದು
ಧೂಳು ಕಬ್ಬಿಣದ ರಾಶಿಯಾದೀತೆಂದು
ಊಹಿಸದೇ ಹೋದೆವು
ತೋರಿಸಬೇಕಿತ್ತು ನಿಮಗೆ
ಹುಳ ಚಿಟ್ಟೆಯಾಗುವ
ಮೊಟ್ಟೆ ಮರಿಯಾಗುವ
ಮೊಗ್ಗರಳಿ ಹೂ ಬಿರಿವ
ನಿಸರ‍್ಗವೆಂಬ ವಿಸ್ಮಯವ
ಉಣಿಸಬೇಕಿತ್ತು ನಿಮಗೆ
ಕರುಳು ತುಂಬುವಷ್ಟು
ಪ್ರೇಮದ ಬೋನ
ಕರುಣೆಯ ಹಾಲು
ಮುದ್ದಿನ ತಿನಿಸು
ಹುಳಿಸಿಹಿ ಅರಿವಿನ ಹಣ್ಣುಗಳ..
ತೋರಿಸಬೇಕಿತ್ತು ನಿಮಗೆ
ಚಂದ್ರ ಚಿಕ್ಕೆ ಗುಡುಗು ಸಿಡಿಲಬ್ಬರ
ಮಳೆ ಮಂಜು ನದಿ ಬೆಟ್ಟ
ಕಾಡು ಕಣಿವೆ ಕಡಲುಗಳ
ಮನ್ನಿಸಿ
ಕಾಣಲೇ ಇಲ್ಲ ನಮಗೆ ಕಣ್ಣೆದುರ ಲೋಕ
ಮರೆತುಬಿಟ್ಟೆವು ಉಂಡ ರುಚಿಯ
ಕಳಿಸಿದೆವು ಹೇಳದೇ
ನಾವು ಕೇಳಿದ ಚಂದಮಾಮದ ಕತೆಗಳ
ಮನ್ನಿಸಿ ಮಕ್ಕಳೇ
ತೋರಿಸುತಿದ್ದೇವೆ
ಪ್ರೇಮವಿರದ ಕರುಣೆಯಿರದ
ಮನುಜರೆದೆಯ ಬೆಂಗಾಡುಗಳ
ರಕ್ತ ಕಲೆ ಹೊತ್ತ ಮುರಿದ ಗೋಡೆಗಳ
ನುಜ್ಜುಗುಜ್ಜಾದ ನಿಮ್ಮ ಪ್ರಿಯ ಬರ‍್ಬಿಗಳ
ಧೂಳು ಹೊಗೆ ಕವಿದು ಮಬ್ಬಾದ ಆಗಸವ
ಮನ್ನಿಸಿ ಮಕ್ಕಳೇ
ಮುತ್ತಿಡದೆ ವಿದಾಯ ಹೇಳುವ,
ಬಾಯೊಣಗಿದರೂ ನೀರು ಹನಿಕಿಸದ,
ಕೃತಕ ಬುದ್ಧಿಮತ್ತೆಯಲೂ
ಯುದ್ಧಬುದ್ಧಿಯ ತುಂಬಿದ,
ಪಟಾಕಿ ಹೊಡೆವ ಎಳಸು ಕೈಗಳಿಗೆ
ತುಪಾಕಿ ಕೊಡುವ ಪಿಪಾಸು ಜಗಕೆ
ಕೇಳದೇ ನಿಮ್ಮ ಕರೆತಂದದ್ದಕ್ಕೆ..
ಮನ್ನಿಸಿ ಮಕ್ಕಳೇ
ಇಟ್ಟ ಹೆಜ್ಜೆ ಗಟ್ಟಿ ನಿಲಿಸಲೊಂದು
ಪುಟ್ಟ ಇಟ್ಟಿಗೆಯ ಸುಟ್ಟು ಕೊಡದಿದ್ದಕ್ಕೆ,
ನಿಮ್ಮ ನಾಳೆಗಳ ಹೊಸಕಿ ಹಾಕಿದ್ದಕ್ಕೆ,
ಗಾಯ ಹೊತ್ತು ಬಾಳಬೇಕಿರುವುದಕ್ಕೆ,
ಬಂದೂಕಿನ ಸಿಡಿ ಬಾಯಿಗೆ
ಜನಮತದ ಬೀಗ ಹಾಕದೇ ಹೋದದ್ದಕ್ಕೆ..
ನೀವು ಮನ್ನಿಸಿದರೂ ನಮ್ಮ ನಾವು
ಮನ್ನಿಸಿಕೊಳ್ಳಲಾರೆವು ಮಕ್ಕಳೇ,
ಸಾಧ್ಯವಾದರೆ ಮನ್ನಿಸಿ
ಗರುಕೆಯ ನರ‍್ಭೀತ ಬದುಕನೂ
ಕಟ್ಟಿಕೊಡದ ನಮ್ಮ ಅಸಹಾಯಕತೆಯನ್ನು..
ಕ್ಷಮೆಯೆಂದರೇನೆಂದೇ ಅರಿಯದ ನಿಮ್ಮಲ್ಲಿ
ಮನ್ನಿಸಿ ಎಂದು ಕೇಳುತ್ತ
ನಮ್ಮ ತಪ್ಪು ಮುಚ್ಚಿಕೊಳ್ಳುತ್ತಿರುವುದನ್ನು..
ಡಾ. ಎಚ್. ಎಸ್. ಅನುಪಮಾ
ವೈದ್ಯರು, ಹೋರಾಟಗಾರರು
ಇದನ್ನೂ ಓದಿ- ಜಗದ ಮೊದಲ ಕವಿಯ ಮೊದಲ ಯುದ್ಧ ವಿರೋಧಿ ಕವಿತೆ