ಲೋಕಸಭೆ : ಮಧ್ಯಪ್ರಾಚ್ಯದ ಚಿಂತಾಜನಕ ಪರಿಸ್ಥಿತಿಯಿಂದಾಗಿ ಕಚ್ಚಾತೈಲ, ಎಲ್ಪಿಜಿ ಹಾಗೂ ಗೊಬ್ಬರದ ಮೇಲೆ ಪರಿಣಾಮ ಬೀರಿದೆ. ಆದರೂ ಸಾಕಷ್ಟು ಸಂಗ್ರಹವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದರು.
ಮಧ್ಯಪ್ರಾಚ್ಯದಲ್ಲಿ ಕಳೆದ 3 ವಾರಗಳಿಂದ ಪರಿಸ್ಥಿತಿ ಬಿಗಡಾಯಿಸಿದೆ. ಯುದ್ಧದಿಂದ ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ಕೋಟಿಗೂ ಹೆಚ್ಚು ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ. ಭಾರತೀಯರ ಸುರಕ್ಷತೆಯೇ ಸರ್ಕಾರದ ಆದ್ಯತೆ. ರಾಯಭಾರಿ ಕಚೇರಿಗಳು ಭಾರತೀಯರಿಗೆ ನೆರವು ನೀಡುತ್ತಿದ್ದು, 24/7 ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. 3 ಲಕ್ಷ 65 ಸಾವಿರ ಭಾರತೀಯರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ಕಚ್ಚಾತೈಲ ಬರುತ್ತದೆ. ಯುದ್ಧದಿಂದ ಕಚ್ಚಾತೈಲದ ಮೇಲೂ ಪರಿಣಾಮ ಬೀರಿದೆ. ಈ ಕುರಿತು ಗಲ್ಫ್ ರಾಷ್ಟ್ರಗಳ ಬಹುತೇಕ ನಾಯಕರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮಧ್ಯಪ್ರಾಚ್ಯದ ಕದನದ ಬಗ್ಗೆ ಸದನಕ್ಕೆ ಮಾಹಿತಿ ನೀಡಿದರು.
ಭಾರತದಲ್ಲಿ 53ಲಕ್ಷ ಮೆಟ್ರಿಕ್ ಟನ್ ನಷ್ಟು ಕಚ್ಚಾತೈಲದ ಸಂಗ್ರಹ ಇದೆ. ಕಳೆದ 12 ವರ್ಷಗಳಲ್ಲಿ ತೈಲ ಶುದ್ದೀಕರಣದ ಸಾಮರ್ಥ್ಯವನ್ನು ಹೆಚ್ಚಳ ಮಾಡಿದ್ದೇವೆ. ಭಾರತ 40ಕ್ಕೂ ಹೆಚ್ಚು ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದ ಬಳಿ ಕಚ್ಚಾತೈಲ ಸಂಗ್ರಹ ಇದೆ. ತೈಲ ಕಂಪನಿಗಳ ಬಳಿಯೂ ಸಂಗ್ರಹವಿದೆ. ಇತರ ಪೂರೈಕೆದಾರರ ಜೊತೆಗೂ ಚರ್ಚೆ ನಡೆಸಿದ್ದು, ಎಲ್ಲಿಂದ ಸಾಧ್ಯವೋ ಅಲ್ಲಿಂದ ತೈಲ ಆಮದು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಪೆಟ್ರೋಲ್, ಡೀಸೆಲ್ ಸಮಸ್ಯೆ ಇಲ್ಲ. ದೇಶದಲ್ಲೇ ಎಲ್ಪಿಜಿ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ.. 11 ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದು. ನಮ್ಮ ಪ್ರಯತ್ನದಿಂದ ತೈಲ ಹಡಗು ಭಾರತಕ್ಕೆ ಬಂದಿವೆ. ಅವಶ್ಯಕ ವಸ್ತುಗಳನ್ನೊಳಗೊಂಡ ಹಡಗುಗಳು ಸುರಕ್ಷಿತವಾಗಿ ಭಾರತಕ್ಕೆ ಬರಲು ವ್ಯವಸ್ಥೆ ಮಾಡಲಾಗಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದು, ಇಥೆನಾಲ್ ಉತ್ಪಾದನೆಗೆ ಒತ್ತು ನೀಡಲಾಗುವುದು ಎಂದರು.
ಭಾರತದ ಅರ್ಥವ್ಯವಸ್ಥೆ ಸುಭದ್ರವಾಗಿದೆ. ಭಾರತದ ಹಡಗುಗಳು ಹಾರ್ಮುಜ್ ದಾಟುತ್ತಿವೆ. ಸಮಸ್ಯೆ ಎದುರಿಸಲು ನಮ್ಮ ಸರ್ಕಾರ ಸಮರ್ಥವಿದೆ. ದೇಶದಲ್ಲಿ ರಸಗೊಬ್ಬರ ಸಂಗ್ರಹ ಸಾಕಷ್ಟಿದೆ. ರಸಗೊಬ್ಬರ ಬಿಕ್ಕಟ್ಟು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೇಶದ ವಿವಿದೆಡೆ ಮೆಟ್ರೋ ನೆಟ್ ವರ್ಕ್ ಹೆಚ್ಚಿಸಲಾಗಿದೆ. ವಿದ್ಯುತ್ ಬಸ್ ಗಳು ಹೆಚ್ಚಳವಾಗಿವೆ. ಇಂಥಹ ಕ್ರಮಗಳಿಂದ ತೈಲದ ಬೇಡಿಕೆ ಕಡಿಮೆಯಾಗಿದೆ. ಕೃಷಿ ಮೇಲಿನ ಪರಿಣಾಮಗಳೂ ಚರ್ಚೆ. ದೇಶದ ಆಹಾರ ಭದ್ರತೆ ಉತ್ತಮವಾಗಿದೆ. ಎಲ್ಲಾ ರೀತಿಯ ಪರಿಣಾಮಗಳನ್ನು ಎದುರಿಸಲು ಸಚಿವರ ಗುಂಪು ರಚಿಸಲಾಗಿದೆ ಎಂದರು. .
ರೈತರ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ರೈತರಿಗೆ ಮೇಡ್ ಇನ್ ಇಂಡಿಯಾ ಗೊಬ್ಬರ ನೀಡಲಾಗುತ್ತಿದೆ. ರೈತರಿಗೆ ತೊಂದರೆ ಆಗದಂತೆ ಸಕಲ ರೀತಿಯ ಸಹಕಾರ ನೀಡಲಾಗುವುದು. ಇನ್ನೂ ಭಾರತದಲ್ಲಿ ಬೇಸಿಗೆ ಆರಂಭವಾಗುತ್ತಿದ್ದು, ಪಿಎಂ ಕುಸುಮ್ ಯೋಜನೆಯಡಿ, 22 ಲಕ್ಷಕ್ಕೂ ಹೆಚ್ಚು ಸೋಲಾರ್ ಪಂಪ್ಗಳು ಕಾರ್ಯನಿರ್ವಹಿಸುತ್ತಿವೆ. ಸೋಲಾರ್ ಪಂಪ್ ನಿಂದ ಡೀಸೆಲ್ ಮುಕ್ತವಾಗಲಿದೆ ಎಂದು ನರೇಂದ್ರ ಮೋದಿ ಹೇಳಿದರು.
ಯುದ್ಧಕ್ಕೆ ವಿರೋಧ :
ಆರಂಭದಿಂದಲೂ ಯುದ್ದಕ್ಕೆ ವಿರೋಧ. ಇಂಧನ, ಸಾರಿಗೆ ವಿದ್ಯುತ್ ಸ್ಥಾವರ ಮೇಲಿನ ದಾಳಿ ಖಂಡಿಸಿದ್ದೇವೆ. ರಾಜತಾಂತ್ರಿಕತೆ ಮೂಲಕ ಬಿಕ್ಕಟ್ಟು ಶಮನಕ್ಕೆ ಮನವಿ ಮಾಡಲಾಗಿದೆ. ಭಾರತ ಇದೇ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಾಂತಿ ಮರುಸ್ಥಾಪನೆಗೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದರು.
ತೈಲಾಗಾರಗಳ ಮೇಲೆ , ಹರ್ಮುಜ್ ಜಲಸಂಧಿ ಬಂದ್ ಗೆ ವಿರೋಧವಿದೆ. ಭಾರತ ಸದಾ ಮಾನವೀಯತೆ ಪರವಾಗಿದ್ದು, ಭಾರತ ಸದಾ ಶಾಂತಿ ಪರ ಇದೆ. ಮಾತುಕತೆ, ರಾಜತಾಂತ್ರಿಕತೆಯ ಮೂಲಕ ಯದ್ಧಕ್ಕೆ ಪರಿಹಾರ ಕಂಡುಕೊಳ್ಳಬಹುದು. ಕೊರೊನಾ ಅವಧಿಯಲ್ಲಿ ಇಂತಹ ಸವಾಲು ಎದುರಾಗಿತ್ತು. ಈಗಲೂ ನಮಗೆ ಅಂತಹದ್ದೇ ಸವಾಲು ಎದುರಾಗಿದೆ ಎಂದರು.
ಧೈರ್ಯ, ಸಮಾಧಾನ, ಬುದ್ದಿವಂತಿಕೆಯಿಂದ ಎದುರಿಸಬೇಕು. ದೇಶದ ಆಂತರಿಕ ಭದ್ರತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಪೊಲೀಸರು, ಕರಾವಳಿ ಪಡೆಗಳಿಗೆ ಅಲರ್ಟ್ ಮಾಡಿದ್ದೇವೆ. ಯುದ್ದ ನಿಲ್ಲಿಸುವಂತೆ ಎಲ್ಲ ದೇಶಗಳಿಗೂ ಆಗ್ರಹಿಸಲಾಗಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

