ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಪ್ರಸ್ತಾವಿತ ಮಸೂದೆಯು ಮುಸ್ಲಿಮರ ವಿರುದ್ಧವಾಗಿಲ್ಲ ಅಥವಾ ಅವರ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ, ಆದರೆ, ವಕ್ಫ್ ಆಸ್ತಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು, ಸಂಕೀರ್ಣತೆಗಳನ್ನು ಪರಿಹರಿಸಲು, ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತಂತ್ರಜ್ಞಾನ ಆಧಾರಿತ ನಿರ್ವಹಣೆಯನ್ನು ಪರಿಚಯಿಸಲು ಪ್ರಯತ್ನಿಸುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
ಸುಮಾರು 12 ಗಂಟೆಗಳ ಚರ್ಚೆಯ ನಂತರ ಗುರುವಾರ ಬೆಳಗಿನ ಜಾವ ಲೋಕಸಭೆಯು 288-232 ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಪರಿಶೀಲಿಸಿ ಪುನರ್ ರಚಿಸಲಾದ ಮಸೂದೆಯನ್ನು ಮೇಲ್ಮನೆಯಲ್ಲಿ ಮಂಡಿಸಿದ ರಿಜಿಜು, ಪ್ರಸ್ತಾವಿತ ಶಾಸನವು ಧರ್ಮದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಆದರೆ, ವಕ್ಫ್ ಮಂಡಳಿ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಎಲ್ಲ ಪಂಗಡಗಳನ್ನು ವಕ್ಫ್ ಮಂಡಳಿಯಲ್ಲಿ ಸೇರಿಸುವ ಗುರಿಯನ್ನು ಮಸೂದೆ ಹೊಂದಿದೆ. 2004ರಲ್ಲಿ 4.9 ಲಕ್ಷ ವಕ್ಫ್ ಆಸ್ತಿಗಳಿದ್ದವು. ಈಗ ಅವು 8.72 ಲಕ್ಷಕ್ಕೆ ಏರಿವೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಮಸೂದೆಯನ್ನು ಅಂಗೀಕರಿಸಲು ವಿರೋಧ ಪಕ್ಷದ ಬೆಂಬಲವನ್ನು ಕೋರಿದ ರಿಜಿಜು, ಹಿಂದಿನ ಸರ್ಕಾರಗಳು ಪೂರೈಸದ ಕಾರ್ಯಗಳನ್ನು ಸಾಧಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಹೇಳಿದರು. ರಕ್ಷಣಾ ಮತ್ತು ರೈಲ್ವೆ ಸಚಿವಾಲಯಗಳ ಒಡೆತನದ ಆಸ್ತಿಗಳನ್ನು ಹೊರತುಪಡಿಸಿ, ವಕ್ಫ್ ದೇಶದಲ್ಲಿ ಅತಿ ಹೆಚ್ಚು ಆಸ್ತಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.