ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡಿದೆ. ಇಂದು ನಸುಕಿನ ಜಾವ 2.30 ಕ್ಕೆ ಅಂಗೀಕಾರ ನೀಡಲಾಯಿತು. ಮಸೂದೆ ಪರವಾಗಿ 128 ಸದಸ್ಯರು ಮತ್ತು ವಿರುದ್ಧವಾಗಿ 95 ಸದಸ್ಯರು ಮತ ಚಲಾಯಿಸಿದರು. ರಾಜ್ಯಸಭೆಯಲ್ಲಿ ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಸ್ಲಿಮರ ಹಕ್ಕುಗಳನ್ನು ಈ ಮಸೂದೆಯು ಕಿತ್ತುಕೊಳ್ಳುತ್ತದೆ ಎಂಬ ಆರೋಪಗಳನ್ನು ನಿರಾಕರಿಸಿ ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಬಲ ತುಂಬುವ, ಮುಸ್ಲಿಮರಲ್ಲಿ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂದರು.
ರಾಜ್ಯಸಭೆಯಲ್ಲೂ ಈ ಮಸೂದೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಮಸೂದೆಯು ಮುಸ್ಲಿಮರನ್ನು ಹತ್ತಿಕ್ಕಲು ಯತ್ನಿಸುತ್ತದೆ, ಇದು ದೇಶದಲ್ಲಿ ತಾರತಮ್ಯದ ಬೀಜವನ್ನು ಬಿತ್ತುತ್ತದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. ಮಸೂದೆಯಲ್ಲಿರುವ ಅಂಶಗಳು ಹಾಗೂ ಮಸೂದೆಯ ಉದ್ದೇಶವು ಸರ್ಕಾರದ ನಡೆಯ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ ಎಂದು ಒತ್ತಾಯಿಸಿದ ಆರ್ಜೆಡಿ ಸದಸ್ಯ ಮನೋಜ್ ಝಾ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ಪಡೆಯಲು ಅವಸರ ಮಾಡುವುದು ಬೇಡ, ಮಸೂದೆಯನ್ನು ಸಂಸತ್ತಿನ ಪರಿ ಶೀಲನಾ ಸಮಿತಿಗೆ ಮತ್ತೊಮ್ಮೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.