ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ವಿಎಚ್ ಪಿಯ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ನಿವೃತ್ತ ನ್ಯಾಯಾಧೀಶರು ಭಾಗವಹಿಸುತ್ತಾರೆ. ನ್ಯಾಯಮೂರ್ತಿ ಗೊಗೋಯಿ ಬಿಜೆಪಿ ಮೂಲಕ ರಾಜ್ಯಸಭೆ ಸೇರುತ್ತಾರೆ, ರಾಮಮಂದಿರ ತೀರ್ಪು ನೀಡಿದ ಜಸ್ಟಿಸ್ ಅಬ್ದುಲ್ ನಜೀರ್ ಬಿಜೆಪಿ ಮೂಲಕ ಗವರ್ನರ್ ಆಗುತ್ತಾರೆ. ಸರಕಾರದ ಪರ ನಿಂತ ನ್ಯಾ. ಅರುಣ್ ಮಿಶ್ರಾ ಎನ್ ಎಚ್ ಆರ್ ಸಿ ಮುಖ್ಯಸ್ಥರಾಗುತ್ತಾರೆ, ನ್ಯಾ. ಕಾನ್ವಿಲ್ಕರ್ ಲೋಕಪಾಲರಾಗುತ್ತಾರೆ.ಇದರ ಮುಂದರಿಕೆಯಾಗಿ ಸಿಜೆಐ ಚಂದ್ರಚೂಡರ ಮನೆ ಗಣಪತಿ ಪೂಜೆಯಲ್ಲಿ ದೇಶದ ಪ್ರಧಾನಿ ಭಾಗವಹಿಸುತ್ತಾರೆ… – ಶ್ರೀನಿವಾಸ ಕಾರ್ಕಳ
ಭಾರತದ ಸಂವಿಧಾನದ ವಿಧಿ 50 ಹೀಗೆ ಹೇಳುತ್ತದೆ- “the state should take steps to separate the judiciary from the executive in public services (ಸಾರ್ವಜನಿಕ ಸೇವೆಗಳಲ್ಲಿ ಸರಕಾರದಿಂದ ನ್ಯಾಯಾಂಗವು ಅಂತರ ಕಾಯ್ದುಕೊಳ್ಳುವಂತೆ ಪ್ರಭುತ್ವವು ಕ್ರಮ ತೆಗೆದುಕೊಳ್ಳಬೇಕು).
ಅಧಿಕಾರಗಳ ನಡುವಣ ಪ್ರತ್ಯೇಕತೆಯ ಗೆರೆಗಳು (ಸೆಪರೇಶನ್ ಆಫ್ ಪವರ್) ಪ್ರಜಾತಂತ್ರದ ಮೂಲಭೂತ ತತ್ತ್ವ. ಅಧಿಕಾರವು ಪೂರ್ಣವಾಗಿ ಒಂದು ಕೇಂದ್ರದಲ್ಲಿ ಸಂಗ್ರಹಗೊಳ್ಳದಂತೆ ಅದು ನೋಡಿಕೊಳ್ಳುತ್ತದೆ. ಅಧಿಕಾರದ ದುರುಪಯೋಗವನ್ನು ತಡೆಯುತ್ತಾ ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ.
“ನ್ಯಾಯ ನೀಡಿದರೆ ಸಾಲದು, ನ್ಯಾಯ ನೀಡಿದಂತೆ ವ್ಯಕ್ತವಾಗಿ ಮತ್ತು ನಿಸ್ಸಂಶಯವಾಗಿ ಕಾಣುವುದು ಕೂಡಾ ಅತ್ಯಂತ ಮುಖ್ಯ” ಎಂದು ಇಂಗ್ಲೆಂಡ್ ನ ಖ್ಯಾತ ನ್ಯಾಯಾಧೀಶ ಲಾರ್ಡ್ ಹ್ಯಾವರ್ಟ್ ಹೇಳುತ್ತಾರೆ. “Justice must not only be done, but must be seen to be done” ಎಂಬುದು ನಮ್ಮಲ್ಲಿ ಪದೇ ಪದೇ ಬಳಸುವ ಒಂದು ಮಾತು. ನ್ಯಾಯಾಲಯವೊಂದು ತೀರ್ಪು ನೀಡುವಾಗ ಯಾವುದೇ ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣುವಂತಿರಬೇಕು.
ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಮಹತ್ವದ ಜವಾಬ್ದಾರಿಯನ್ನು ನ್ಯಾಯಾಂಗ ವ್ಯವಸ್ಥೆಗೆ ನೀಡಲಾಗಿದೆ. ಸಾಮಾನ್ಯವಾಗಿ ಪ್ರಜೆಗಳ ಈ ಮೂಲಭೂತ ಹಕ್ಕುಗಳು ಅಪಾಯಕ್ಕೆ ಒಳಗಾಗುವುದು ಯಾರಿಂದ? ಸರಕಾರಗಳಿಂದ.
‘ತಮ್ಮ ಸ್ಥಾನದ ಘನತೆಗೆ ತಕ್ಕುದಾದ ರೀತಿಯಲ್ಲಿ ಅಗತ್ಯ ಪ್ರಮಾಣದ ಅಂತರವನ್ನು ನ್ಯಾಯಾಧೀಶರುಗಳು ಕಾಪಾಡಿ ಕೊಂಡಿರಬೇಕು’ ಎಂದು ನ್ಯಾಯಾಧೀಶರ ನಡತೆಗೆ ಸಂಬಂಧಿಸಿದ ಸಂಹಿತೆ ಹೇಳುತ್ತದೆ.
ಸರಕಾರದ ವಿರುದ್ಧದ ಅನೇಕ ಪ್ರಕರಣಗಳನ್ನು ನ್ಯಾಯಾಲಯಗಳು ಕೈಗೆತ್ತಿಕೊಂಡಿರುತ್ತವೆ. ನ್ಯಾಯ ನೀಡುವಾಗ ಅವುಗಳು ಸರಕಾರದ ಮುಲಾಜಿಗೆ ಒಳಗಾಗಬಾರದು. ಸರಕಾರದೊಂದಿಗೆ ಆಪ್ತ ಸಂಬಂಧ ಹೊಂದಿದ್ದಾಗ ಸರಕಾರದ ವಿರುದ್ಧ ತೀರ್ಪು ನೀಡುವುದು ನ್ಯಾಯಾಲಯಕ್ಕೆ ಸಾಧ್ಯವಾಗುವುದಿಲ್ಲ. ಸರಕಾರದ ಪರ ತೀರ್ಪು ನೀಡಿದಾಗಲೂ ಇದಕ್ಕೆ ಕಾರಣ ಸರಕಾರದ ಪ್ರಭಾವ ಎಂಬ ಅನುಮಾನ ಬಂದುಬಿಡುತ್ತದೆ. ಇಂತಹ ಅನುಮಾನ ಬಂದ ತಕ್ಷಣ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೊರಟು ಹೋಗುತ್ತದೆ.
ಅಧಿಕಾರದ ಪ್ರತಿಜ್ಞಾವಿಧಿ
“ನಾನು ಭಾರತದ ಸಂವಿಧಾನದಲ್ಲಿ ನಿಜ ವಿಶ್ವಾಸ ಹೊಂದಿರುತ್ತೇನೆ, ಭಾರತ ಸಂವಿಧಾನಕ್ಕೆ ವಿಧೇಯನಾಗಿ ನಡೆದುಕೊಳ್ಳುತ್ತೇನೆ, ಭಯ ಅಥವಾ ಪಕ್ಷಪಾತವಿಲ್ಲದೆ, ಅನುರಾಗ ಅಥವಾ ದ್ವೇಷಭಾವನೆ ಇಲ್ಲದೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ, ಭಾರತದ ಸಂವಿಧಾನವನ್ನು ಮತ್ತು ಕಾನೂನನ್ನು ಎತ್ತಿ ಹಿಡಿಯುತ್ತೇನೆ” ಎಂದು ಅಧಿಕಾರ ಸ್ವೀಕರಿಸುವಾಗ ಸಿಜೆಐ ಅವರು ಪ್ರತಿಜ್ಞಾವಿಧಿ ಸ್ವೀಕರಿಸುತ್ತಾರೆ.
ಸೆಕ್ಯುಲರಿಸಂ ಅಥವಾ ಧರ್ಮನಿರಪೇಕ್ಷತೆ ಎನ್ನುವುದು ನಮ್ಮ ಸಂವಿಧಾನದ ಮೂಲಭೂತ ಲಕ್ಷಣ. ಎಸ್ ಆರ್ ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1994) ಪ್ರಕರಣದಲ್ಲಿ ಖ್ಯಾತ ಕಾನೂನು ಪಂಡಿತ ಉಪೇಂದ್ರ ಭಕ್ಷಿಯವರ ಮಾತನ್ನು ಉಲ್ಲೇಖಿಸುತ್ತಾ “ಸಂವಿಧಾನದಲ್ಲಿ ಹೇಳಲಾಗಿರುವ ಸೆಕ್ಯುಲರಿಸಂ ಏನು ಹೇಳುತ್ತದೆ ಎಂದರೆ ಪ್ರಭುತ್ವವು ಯಾವುದೇ ಮತಧರ್ಮವನ್ನು ಬೆಂಬಲಿಸಬಾರದು ಅಥವಾ ಸ್ಥಾಪಿಸಬಾರದು ಅಥವಾ ಆಚರಿಸಬಾರದು” ಎನ್ನುತ್ತದೆ.
ಭಾರತದ ಸಂವಿಧಾನವು ಸೆಕ್ಯುಲರಿಸಂ ಅನ್ನು ಎತ್ತಿಹಿಡಿಯುವುದರಿಂದ ಬಹುಧರ್ಮೀಯರ ಸಮಾಜವಾದ ಭಾರತದಲ್ಲಿ ನ್ಯಾಯಾಧೀಶರೇ ಧಾರ್ಮಿಕ ಆಚರಣೆಗಳನ್ನು, (ಅದೂ ಒಂದು ಧರ್ಮಕ್ಕೆ ಸೇರಿದ) ಬಹಿರಂಗವಾಗಿ ಮಾಡುತ್ತ ಹೋದರೆ ಅದು ಸಂವಿಧಾನದ ವಿರುದ್ಧ ಹೋದಂತಲ್ಲವೇ? ಸಂವಿಧಾನವನ್ನು ಕಾಪಾಡಬೇಕಾದ ನ್ಯಾಯಾಲಯವೇ ಸಂವಿಧಾನದ ವಿರುದ್ಧ ಹೋದರೆ?!
ಮತಧರ್ಮ ಮತ್ತು ಸ್ಟೇಟ್ ಅಧಿಕಾರವನ್ನು ಮಿಶ್ರಗೊಳಿಸುವುದನ್ನು ಸಂವಿಧಾನ ಮಾನ್ಯ ಮಾಡುವುದೂ ಇಲ್ಲ ಅದಕ್ಕೆ ಅನುಮತಿ ನೀಡುವುದೂ ಇಲ್ಲ ಎಂದು ಎಸ್ ಆರ್ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ಸಿಜೆಐ ಮತ್ತು ಪ್ರಧಾನಿಗಳು ಇಬ್ಬರೂ ಸಾಂವಿಧಾನಿಕ ಪದಗಳಲ್ಲಿ ಇರುವವರು. ಅವರಿಗೆ ತಮ್ಮ ಮತಧರ್ಮಾಚರಣೆಯ ಸ್ವಾತಂತ್ರ್ಯವಿದೆ. ಆದರೆ ಅದು ಖಾಸಗಿಯಾಗಿರಬೇಕು. ಬಹಿರಂಗ ಆಚರಣೆಯ ಮೂಲಕ ಅವರು ತಾವು ಯಾವುದೇ ಒಂದು ಮತಧರ್ಮದ ಪರ ಇರುವಂತೆ ತೋರಿಸಿಕೊಳ್ಳಬಾರದು.
ನ್ಯಾಯಾಂಗದ ಮೇಲೆ ಸರಕಾರದ ದಾಳಿ
ಈ ಹಿಂದಿನ ಕಾನೂನು ಮಂತ್ರಿ ಕಿರಣ್ ರಿಜುಜು ಅವರು ನ್ಯಾಯಾಂಗ, ನ್ಯಾಯಮೂರ್ತಿಗಳ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿದ್ದರು. ಕೊಲೀಜಿಯಂ ಮೂಲಕ ನ್ಯಾಯಮೂರ್ತಿಗಳ ನೇಮಕ ಈಗಲೂ ಸರಕಾರಕ್ಕೆ ಇಷ್ಟವಿಲ್ಲ. ನ್ಯಾಯಾಂಗದ ಮೇಲೆ ಪೂರ್ಣ ಅಧಿಕಾರ ತನಗಿರಬೇಕು ಎಂದು ಅದು ಬಯಸುತ್ತದೆ.
ಕೊಲೀಜಿಯಂ ಶಿಫಾರಸು ಮಾಡಿದ ಎಲ್ಲ ಹೆಸರುಗಳನ್ನು ಸರಕಾರ ಮಾನ್ಯ ಮಾಡುವುದಿಲ್ಲ. ಕೆಲವು ಹೆಸರುಗಳನ್ನು ತಿಂಗಳುಗಟ್ಟಲೆ ತಡೆಹಿಡಿದರೆ ಇನ್ನು ಕೆಲವು ಹೆಸರುಗಳನ್ನು ಎಂದೂ ಒಪ್ಪಿಕೊಳ್ಳುವುದೇ ಇಲ್ಲ. ಉದಾಹರಣೆಗೆ ಜಸ್ಟಿಸ್ ಅಕಿಲ್ ಖುರೇಷಿ.
ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯಲ್ಲಿ ನಿಷ್ಪಕ್ಷಪಾತತೆ ಕಾಪಾಡಿಕೊಳ್ಳಲು ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಮತ್ತು ಸಿಜೆಐ ಇರಬೇಕು ಎಂದು ಸಾಂವಿಧಾನಿಕ ಪೀಠ ತೀರ್ಪು ನೀಡಿದರೆ ಹೊಸ ಕಾನೂನು ತಂದು ಸಿಜೆಐ ಯನ್ನು ಅದರಿಂದ ಹೊರಹಾಕಲಾಗುತ್ತದೆ.
ಬಾಬರಿ ಮಸೀದಿ ವಿವಾದ, ನೋಟು ರದ್ಧತಿ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿ (370), ಇವಿಎಸ್ ಮೀಸಲಾತಿ, ವಿಪಕ್ಷ ನಾಯಕರ ಬಂಧನ, ಪಿಎಂಎಲ್ ಎ ಕಾನೂನು, ಈಡಿ ದಾಳಿಗಳು, ಸರಕಾರವನ್ನು ರಾಜಭವನ ದುರುಪಯೋಗದ ಮೂಲಕ ಉರುಳಿಸುವುದು ಹೀಗೆ ಬಹುತೇಕ ಪ್ರಕರಣಗಳಲ್ಲಿ ತೀರ್ಪು ಸರಕಾರದ ಪರ ಬರುತ್ತಿದೆ.
ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲ ಮೂಲಕ ಅಧಿಕಾರಕ್ಕೆ ಬಂದ ಕಾನೂನು ಬಾಹಿರ ಸರಕಾರ ಎರಡು ವರ್ಷದಿಂದ ಮುಂದುವರಿದೇ ಇದೆ. ನ್ಯಾಯಾಲಯ ಇದರ ಬಗ್ಗೆ ದಿಟ್ಟ ಹೆಜ್ಜೆ ಇಡಲೇ ಇಲ್ಲ. ಚುನಾವಣಾ ಬಾಂಡ್ ಸಂವಿಧಾನ ಬಾಹಿರ ಎಂದು ತೀರಾ ತಡವಾಗಿ ತೀರ್ಪು ನೀಡಿದ್ದು ಮಾತ್ರವಲ್ಲ. ನಷ್ಟದಲ್ಲಿರುವ ಕಂಪೆನಿಗಳು, ನಕಲಿ ಕಂಪೆನಿಗಳು ದೇಣಿಗೆ ನೀಡಿದ್ದು ಹೇಗೆ ಎಂಬುದನ್ನು ತನಿಖೆ ಮಾಡಲು SIT ನೇಮಕ ಮಾಡಲು ಕೋರ್ಟ್ ಒಪ್ಪಲಿಲ್ಲ. ಪೆಗಸಸ್ ತನಿಖೆ ಮುಂದುರಿಯಲೇ ಇಲ್ಲ. ಹಿಂಡನ್ ಬರ್ಗ್ ವರದಿ ವಿಚಾರದಲ್ಲಿ ನ್ಯಾಯಾಲಯದ ನಿಲುವು ಅನುಮಾನಾಸ್ಪದವಾಗಿದೆ. ದೇಶದಲ್ಲಿ ‘ಬುಲ್ಡೋಜರ್ ನ್ಯಾಯ’ ಎಂಬ ಹೆಸರಿನಲ್ಲಿ ಬಡ ಮುಸ್ಲಿಮರ ಮನೆ ಕೆಡುಹುವ ಮತ್ತು ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಲಿಂಚಿಂಗ್ ನಡೆದೇ ಇದೆ. ಇದನ್ನು ಸುಪ್ರೀಂ ಕೋರ್ಟ್ ಗೆ ಸುಮೋಟೋ ಕೇಸ್ ಆಗಿ ಕೈಗೆತ್ತಿಕೊಳ್ಳಬೇಕು ಎಂದು ಅನಿಸಲೇ ಇಲ್ಲ.
ನ್ಯಾಯಾಂಗಕ್ಕೆ ಆರ್ ಎಸ್ ಎಸ್ ಒಲವಿನ ಮಂದಿಯ ಪ್ರವೇಶ ದೊಡ್ಡ ಮಟ್ಟದಲ್ಲಿ ಆಗಿದೆ. ಕೆಲವು ಜಡ್ಜ್ ಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಚುನಾವಣೆ ಸ್ಪರ್ಧಿಸುವುದನ್ನೂ ದೇಶ ನೋಡಿದೆ (ಬಂಗಾಳದ ಹೈಕೋರ್ಟ್ ಜಡ್ಜ್ ಅಭಿಜಿತ್ ಗಂಗೋಪಾಧ್ಯಾಯ, ಮಧ್ಯಪ್ರದೇಶ ಹೈಕೋರ್ಟ್ ಜಡ್ಜ್ ರೋಹಿತ್ ಆರ್ಯ). ವಿಎಚ್ ಪಿಯ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ನಿವೃತ್ತ ನ್ಯಾಯಾಧೀಶರು ಭಾಗವಹಿಸುತ್ತಾರೆ. ನ್ಯಾಯಮೂರ್ತಿ ಗೊಗೋಯಿ ಬಿಜೆಪಿ ಮೂಲಕ ರಾಜ್ಯಸಭೆ ಸೇರುತ್ತಾರೆ, ರಾಮಮಂದಿರ ತೀರ್ಪು ನೀಡಿದ ಜಸ್ಟಿಸ್ ಅಬ್ದುಲ್ ನಜೀರ್ ಬಿಜೆಪಿ ಮೂಲಕ ಗವರ್ನರ್ ಆಗುತ್ತಾರೆ. ಸರಕಾರದ ಪರ ನಿಂತ ನ್ಯಾ. ಅರುಣ್ ಮಿಶ್ರಾ ಎನ್ ಎಚ್ ಆರ್ ಸಿ ಮುಖ್ಯಸ್ಥರಾಗುತ್ತಾರೆ, ನ್ಯಾ. ಕಾನ್ವಿಲ್ಕರ್ ಲೋಕಪಾಲರಾಗುತ್ತಾರೆ. ಸಿಎಎ ವಿಷಯವನ್ನು ವರುಷ ವರುಷಗಳ ಬಳಿಕವೂ ಕೋರ್ಟ್ ಕೈಗೆತ್ತಿಕೊಳ್ಳುವುದಿಲ್ಲ, ಕಾಶಿ ಮಥುರಾದ ಮಸೀದಿ ವಿವಾದ ವಿಷಯವನ್ನು ತಡೆಯಲು ಅದು ಸಣ್ಣ ಯತ್ನವನ್ನೂ ಮಾಡುವುದಿಲ್ಲ.
ಇದರ ಮುಂದರಿಕೆಯಾಗಿ ಸಿಜೆಐ ಚಂದ್ರಚೂಡರ ಮನೆ ಗಣಪತಿ ಪೂಜೆಯಲ್ಲಿ ದೇಶದ ಪ್ರಧಾನಿ ಭಾಗವಹಿಸುವುದು, ಅದನ್ನು ಖಾಸಗಿಯಾಗಿಡುವ ಬದಲು ಅದರ ವೀಡಿಯೋ ಚಿತ್ರೀಕರಣ ಮಾಡಿ ಬಹಿರಂಪಡಿಸುವುದು ಮೊದಲಾದವನ್ನು ನೋಡಿ.
ಇಲ್ಲಿ ಮೂಡುವ ಪ್ರಶ್ನೆಗಳು..
ದೇಶದ ಸಿಜೆಐ ಅವರು ದೇಶದ ಸೆಕ್ಯುಲರ್ ಸಂವಿಧಾನದ ಗೌರವವನ್ನು ಅಳಿಸುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅವರು ಖಾಸಗಿಯಾಗಿ ತನ್ನ ಮತಧರ್ಮದ ಆಚರಣೆ ಮಾಡಬಹುದು. ಆದರೆ ಅದು ಬಹಿರಂಗ ಪ್ರದರ್ಶನವಾಗುವ ಮೂಲಕ ಅವರು ಒಂದು ಮತಧರ್ಮದ ಕಟ್ಟಾ ಅನುಯಾಯಿ ಎಂಬ ಅನಿಸಿಕೆ ಮೂಡಿದರೆ ಇತರ ಧರ್ಮಗಳವರಿಗೆ ನ್ಯಾಯಾಂಗದ ಬಗ್ಗೆ ವಿಶ್ವಾಸ ಇಲ್ಲವಾಗುತ್ತದೆ.
ಇಂತಹ ಆಚರಣೆಯನ್ನು ಸಂವಿಧಾನ ಅನುಮತಿಸುತ್ತದೆ ಎಂದು ಕೊಳ್ಳೋಣ. ಹಾಗಾದರೆ, ಪ್ರಧಾನಿಯನ್ನು ಮಾತ್ರ ಆಹ್ವಾನಿಸಿದ್ದು ಯಾಕೆ? ದೇಶದ ರಾಷ್ಟ್ರಪತಿಗಳನ್ನು, ತನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳನ್ನು, ವಿಪಕ್ಷ ನಾಯಕನನ್ನು ಯಾಕೆ ಆಹ್ವಾನಿಸಿಲ್ಲ?
ಕಳೆದ ಜನವರಿಯಲ್ಲಿ ಸಿಜೆಐ ಅವರು ಗುಜರಾತ್ ನ ದ್ವಾರಕೀಶ್ ಮಂದಿರಕ್ಕೆ ಭೇಟಿಕೊಡುತ್ತಾರೆ. ಭೇಟಿ ಕೊಡುವುದು ಮಾತ್ರವಲ್ಲ, ಕೇಸರಿ ಉಡುಗೆ ಧರಿಸಿ ಫೋಟೋ ತೆಗೆಸಿಕೊಳ್ಳುತ್ತಾರೆ, ಮಾಧ್ಯಮಗಳಿಗೆ ಹೇಳಿಕೆ ಕೊಡುತ್ತಾರೆ, ನ್ಯಾಯದ ಧ್ವಜ ಹಾರುತ್ತಾ ಇರುವ ರೀತಿಯಲ್ಲಿ ಜಿಲ್ಲಾ ಕೋರ್ಟ್ ನ ನ್ಯಾಯವಾದಿಗಳು ಕೆಲಸ ಮಾಡಬೇಕು ಎನ್ನುತ್ತಾರೆ. ನೆನಪಿರಲಿ, ಇಲ್ಲಿ ಉಲ್ಲೇಖಿಸಿರುವ ಧ್ವಜ ಹಿಂದೂ ಸಂಕೇತ. ಇದು ಸೆಕ್ಯುಲರಿಸಂ ಮತ್ತು ತನ್ನ ಪ್ರತಿಜ್ಞಾವಿಧಿಗೆ ಹೇಗೆ ಹೊಂದಿಕೊಳ್ಳುತ್ತದೆ
ಮೋದಿಯವರಿಂದ ಹೆಚ್ಚು ನಿರೀಕ್ಷೆಯಿಲ್ಲ
ಧರ್ಮ ನಿರಪೇಕ್ಷತೆ ಅಥವಾ ಸರ್ವಧರ್ಮ ಸಮಭಾವದ ಸಂವಿಧಾನ ಆಶಯದ ವಿಷಯದಲ್ಲಿ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿಯವರ ಬಗ್ಗೆ ನಮಗೆ ವಿಶೇಷ ನಿರೀಕ್ಷೆ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಅವರು ಎಂದೂ ಧರ್ಮನಿರಪೇಕ್ಷವಾಗಿ ನಡೆದ ಉದಾಹರಣೆಯೇ ಇಲ್ಲ. ಹಿಂದೂ ಹೃದಯ ಸಾಮ್ರಾಟನಾಗಿ ಮೆರೆದುದೇ ಹೆಚ್ಚು. ಸಂಸತ್ ನಲ್ಲಿ ಪೂಜಾ ಪುನಸ್ಕಾರ, ರಾಮಮಂದಿರ ಉದ್ಘಾಟನೆ ಎಲ್ಲೆಲ್ಲೂ ಅವರು ಬಹಿರಂಗವಾಗಿಯೇ ಹಿಂದೂ ಮತಧರ್ಮಾಚರಣೆ ಮಾಡಿದರು, ಮಾತ್ರವಲ್ಲ ದೇವರು, ಧರ್ಮ, ಮಂದಿರ, ಆಚರಣೆ ಎಲ್ಲವನ್ನೂ ಅವರು ಚುನಾವಣೆಗೆ ಬಳಸಿಕೊಂಡರು.
ಇನ್ನೇನು ಕೆಲ ತಿಂಗಳಲ್ಲಿ ಮಹಾರಾಷ್ಟ್ರ ಚುನಾವಣೆ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಮೊನ್ನೆ ಸಿಜೆಐಯವರ ಮನೆಗೆ ಹೋಗುವಾಗ ಮೋದಿಯವರು ಮಹಾರಾಷ್ಟ್ರೀಯರ ಸಾಂಪ್ರದಾಯಿಕ ದಿರಿಸು ಧರಿಸಿದ್ದರು. ಅತಿಥಿಯಾಗಿ ಬಂದವರು ಆರತಿಯನ್ನೇ ಬೆಳಗಿದರು. ಕ್ಯಾಮರಾಮನ್ ಗಳನ್ನೂ ಕರೆತಂದರು. ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟುದು ಮಾತ್ರವಲ್ಲ ಮರಾಠಿಯಲ್ಲಿ ಟ್ವೀಟ್ ಮಾಡಿದರು ಕೂಡಾ. ತನ್ನ ಮನೆಯ ಪೂಜೆಯನ್ನು, ತನ್ನೊಂದಿಗಿನ ಸ್ನೇಹವನ್ನು ಚುನಾವಣೆಗೆ ಬಳಸಿಕೊಳ್ಳಲು ಜಸ್ಟಿಸ್ ಚಂದ್ರಚೂಡ ಹೇಗೆ ಅವಕಾಶ ಕೊಟ್ಟರು? ಹೀಗೆ ಅವಕಾಶ ಕೊಡುವ ಮೂಲಕ ಭಾರತದ ನ್ಯಾಯಾಂಗದ ಸರ್ವೋಚ್ಚ ಪೀಠದ ಘನತೆಯನ್ನೆ ಅವರು ತಗ್ಗಿಸಲಿಲ್ಲವೇ?
ಪ್ರತಿಯೊಂದು ತಪ್ಪು ನಡೆಯನ್ನೂ ಹೇಗೆ ಬೇಕಾದರೂ ಸಮರ್ಥಿಸಿಕೊಳ್ಳಬಹುದು. ಆದರೆ ಇಲ್ಲಿ ಮಹಾತ್ಮಾ ಗಾಂಧಿಯವರ ಒಂದು ಮಾತನ್ನು ಸಾರ್ವಜನಿಕ ಜೀವನದಲ್ಲಿರುವವರ ಸಹಿತ ಎಲ್ಲರೂ ನೆನಪಿನಲ್ಲಿಡಬೇಕು. ಅದು ಹೀಗಿದೆ-
There is a higher court than courts of justice and that is the court of conscience. It supercedes all other courts (ಈ ನ್ಯಾಯಾಲಯಗಳಿಗಿಂತಲೂ ಮೇಲೆ ಒಂದು ನ್ಯಾಯಾಲಯ ಇದೆ. ಅದುವೇ ಅಂತಸ್ಸಾಕ್ಷಿಯೆಂಬ ನ್ಯಾಯಾಲಯ. ಅದು ಎಲ್ಲಕ್ಕಿಂತ ಪರಮೋಚ್ಚವಾದುದು).
“ಜುಡಿಶಿಯರಿ ಮತ್ತು ಎಕ್ಸಿಕ್ಯೂಟಿವ್ ಗಳನ್ನು ಪ್ರತ್ಯೇಕಿಸುವ ಒಂದು ಗೋಡೆಯಿದೆಯಲ್ಲ, ಅದು ಯಾವತ್ತೂ ಬೀಳಕೂಡದು. ರಾಜಕಾರಣಿಗಳಿಗೆ ಹೋಲಿಸಿದರೆ ನ್ಯಾಯಾಧೀಶರುಗಳಿಂದ ಸದ್ವರ್ತನೆಯ ನಮ್ಮ ನಿರೀಕ್ಷೆಗಳು ತುಂಬಾ ಹೆಚ್ಚು. ರಾಜಕಾರಣಿಗಳು ಸುಲಭದಲ್ಲಿ ತಪ್ಪಿಸಿಕೊಳ್ಳಬಲ್ಲರು ಮತ್ತು ತಪ್ಪಿಸಿಕೊಳ್ಳುತ್ತಾರೆ” ಎನ್ನುತ್ತಾರೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಸಂಜಯ ಹೆಗ್ಡೆ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಕೋಮು ಪ್ರಚೋದನೆ; ಸುಳ್ಳುಗಳೇ ಮೋದಿಯವರ ಮನೆದೇವರು