ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ ಸಿದ್ಧಪಡಿಸಿದ ವರದಿಯನ್ನು ಗುರುವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಭಾರಿ ವಿರೋಧದ ನಡುವೆಯೇ ಮಂಡಿಸಲಾಯಿತು. ವರದಿಯನ್ನು ಮಂಡಿಸಲು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ಎದ್ದು ನಿಂತಾಗ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಬಳಿಕ ಪಾಲ್ ವಿರುದ್ಧ ಘೋಷಣೆ ಕೂಗುತ್ತಾ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.
ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ಕೆಲವು ಸದಸ್ಯರು ಅವರ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಂಪೂರ್ಣವಾಗಿ ಲಗತ್ತಿಸದಿರುವುದಕ್ಕೆ ಆಕ್ಷೇಪಿಸಿದ್ದಾರೆ. ನನ್ನ ಪಕ್ಷದ ಪರವಾಗಿ ನಾನು ನಿಮ್ಮನ್ನು ವಿನಂತಿಸುತ್ತೇನೆ, ಅವರ ಆಕ್ಷೇಪಣೆಗಳು ಏನೇ ಇರಲಿ, ಸಂಸದೀಯ ಪದ್ಧತಿಯ ಪ್ರಕಾರ ನೀವು ಸೂಕ್ತವೆಂದು ಭಾವಿಸಿದರೆ ವರದಿಗೆ ಲಗತ್ತಿಸಬಹುದು ಎಂದು ಸ್ಪೀಕರ್ ಅವರನ್ನು ಕೋರಿದರು. ಅಲ್ಲದೆ ತಮ್ಮ ಪಕ್ಷದಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆ ಸಂಬಂಧ ಜೆಪಿಸಿ ಸಿದ್ಧಪಡಿಸಿದ ವರದಿಯನ್ನು ಜ. 30ರಂದು ಸ್ಪೀಕರ್‌ಗೆ ಸಲ್ಲಿಸಲಾಗಿತ್ತು. ಬಿಜೆಪಿ ಸದಸ್ಯರು ಸೂಚಿಸಿದ ಎಲ್ಲಾ ಬದಲಾವಣೆಗಳಿಗೆ ಒಪ್ಪಿಗೆ ನೀಡಿ, ವಿರೋಧ ಪಕ್ಷದ ಸದಸ್ಯರು ಸೂಚಿಸಿದ್ದ ಎಲ್ಲಾ ಬದಲಾವಣೆಗಳನ್ನು ತಿರಸ್ಕರಿಸಲಾಗಿತ್ತು.