ಪರಿಹಾರ ಕೊಡದ ಸುಪ್ರೀಂ ತಂತ್ರ; ಸಂದೇಹದ ಸುಳಿಯಲ್ಲಿ ಮತಯಂತ್ರ

Most read

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನೂ ತನ್ನ ವಶಕ್ಕೆ ಪಡೆದಿರುವ ಬಿಜೆಪಿ ಯಂತಹ ಆಕ್ರಮಣಕಾರಿ ಪಕ್ಷ ಇರುವಾಗ, ಚುನಾವಣಾ ಆಯೋಗದ ಆಯುಕ್ತರನ್ನೇ ಮೋಸದಿಂದ ಆಯ್ಕೆ ಮಾಡಿರುವಾಗ ಅದು ಹೇಗೆ ಬಿಜೆಪಿ ಆಡಳಿತದಲ್ಲಿ ಚುನಾವಣಾ ಆಯೋಗದ ಮೇಲೆ, ವ್ಯವಸ್ಥೆಯ ಮೇಲೆ ನಂಬಿಕೆ ಬರಲು ಸಾಧ್ಯ?-ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂ ಮತಯಂತ್ರಗಳು ಅನೇಕ ಸಂದೇಹಗಳಿಗೆ ಆಕರವಾಗಿವೆ. ಚಿಪ್ ಆಧರಿತ ಈ ಯಂತ್ರಗಳನ್ನು ತಿರುಚುವ ಸಾಧ್ಯತೆಗಳ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿವೆ. ಚುನಾವಣಾ ಆಯೋಗ ಹಾಗೂ ಬಿಜೆಪಿ ಪಕ್ಷಗಳು ಮಾತ್ರ ಮತಯಂತ್ರಗಳ ಸುರಕ್ಷಿತತೆಯನ್ನು ಸಮರ್ಥಿಸಿಕೊಳ್ಳುತ್ತಲೇ ಬಂದಿವೆ. 

ಈ ಇವಿಎಂ ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ವಿರೋಧ ಪಕ್ಷಗಳು, ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದವು.  ಹೊಸ ವ್ಯವಸ್ಥೆ ತನ್ನಿ ಎಂದು 2013 ರಲ್ಲಿ  ಚುನಾವಣಾ ಆಯೋಗಕ್ಕೆ ಸುಪ್ರೀಂ ಆದೇಶಿಸಿತ್ತು. ಆ ನಂತರ ಇವಿಎಂ ಜೊತೆಗೆ ವಿವಿ- ಪ್ಯಾಟ್ ವ್ಯವಸ್ಥೆ ಜಾರಿಗೆ ಬಂದಿತ್ತು. ಮತದಾರ ಮತಯಂತ್ರದ ಬಟನ್ ಒತ್ತಿದ ಕೂಡಲೇ ಯಾವ ಪಕ್ಷದ ಅಭ್ಯರ್ಥಿಗೆ ಮತ ಹೋಗಿದೆ ಎಂದು ಮತದಾರ ವಿವಿ ಪ್ಯಾಟ್ ಲ್ಲಿ ನೋಡಿ ದೃಢ ಪಡಿಸಿಕೊಳ್ಳುವ ವ್ಯವಸ್ಥೆ ಇದು. ಆದರೆ ಮತಯಂತ್ರದಲ್ಲಿ ನಮೂದಾದ ಮತಗಳನ್ನು ವಿವಿ ಪ್ಯಾಟ್ ಲ್ಲಿ ಮುದ್ರಣಗೊಂಡ ಮತಚೀಟಿಯ ಜೊತೆಗೆ ಹೋಲಿಸಿ ಪರಿಶೀಲಿಸಿ ಎಣಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಇವಿಎಂ ಮೇಲಿನ ಸಂದೇಹ ಹಾಗೆಯೇ ಉಳಿದಿತ್ತು. ಮತ್ತೆ ಕೆಲವು ಸಂಸ್ಥೆಗಳು ಸುಪ್ರೀಂ ಕೋರ್ಟ್ ಲ್ಲಿ ದೂರು ದಾಖಲಿಸಿ ಮತಯಂತ್ರ ಹಾಗೂ ಮತಚೀಟಿ ಎರಡನ್ನೂ ಹೋಲಿಕೆ ಮಾಡಿಯೇ ಚುನಾವಣಾ ಫಲಿತಾಂಶ ಘೋಷಿಸ ಬೇಕೆಂದು ಆಗ್ರಹಿಸಿದವು.

ಮತಯಂತ್ರ

ಮತ್ತೆ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ರವರಿದ್ದ ದ್ವಿಸದಸ್ಯ ಪೀಠದ ನ್ಯಾಯಾಲಯವು ದೂರುದಾರರ ನಿರೀಕ್ಷೆಯ ವಿರುದ್ಧ ಎಪ್ರಿಲ್ 26 ರಂದು ತೀರ್ಪನ್ನು ಕೊಟ್ಟಿತು. ‘ಇವಿಎಂ ಯಂತ್ರಗಳು ಸುರಕ್ಷಿತ ಹಾಗೂ ನಂಬಿಕಾರ್ಹ’ವೆಂದು ಹೇಳಿತು. ಜನರಲ್ಲಿರುವ ಮತಯಂತ್ರದ ಕುರಿತ ಸಂದೇಹವನ್ನು ನಿವಾರಿಸುವುದನ್ನು ಬಿಟ್ಟು ಇನ್ನಷ್ಟು ಯಥಾಸ್ಥಿತಿಯನ್ನು ಮುಂದುವರೆಸಲು ಅನುಮತಿ ಇತ್ತಿತು. “ಇವಿಎಂ ವ್ಯವಸ್ಥೆ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತಂದಿದೆ. ಹೀಗಿರುವಾಗ ಮತಪತ್ರ ವ್ಯವಸ್ಥೆಗೆ ವಾಪಸ್ಸಾಗುವ ಪ್ರಶ್ನೆಯೇ ಇಲ್ಲ” ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ರವರು ಸ್ಪಷ್ಟಪಡಿಸಿದರು.

ಮತಪತ್ರ ವ್ಯವಸ್ಥೆಗೆ ಮರಳಿ ಹೋಗುವುದು ಬೇಕಿಲ್ಲ. ಕನಿಷ್ಟ ಮತಯಂತ್ರಗಳಲ್ಲಿ ದಾಖಲಾದ ಮತಗಳಿಗೂ ಹಾಗೂ ವಿವಿ ಪ್ಯಾಟಲ್ಲಿ ದಾಖಲಾದ ಮತಚೀಟಿಗಳಿಗೂ ಹೋಲಿಕೆ ಮಾಡಿ ಫಲಿತಾಂಶ ಘೋಷಿಸಲಿ ಎನ್ನುವ ಆಗ್ರಹದಲ್ಲಿ ತಪ್ಪೇನೂ ಇರಲಿಲ್ಲ. ಇದರಿಂದಾಗಿ ಮತಯಂತ್ರ ತಿರುಚಲಾಗುವುದು ಎನ್ನುವ ಸಂದೇಹ ಪರಿಹಾರವಾದರೂ ಆಗುತ್ತಿತ್ತು. ಆದರೆ ಸುಪ್ರೀಂ ಕೋರ್ಟ್ ಆ ನ್ಯಾಯಯುತ ಆಸೆಗೂ ತಣ್ಣೀರು ಎರಚಿತು. “ಚುನಾವಣಾ ಆಯೋಗದಲ್ಲಿ, ಚುನಾವಣಾ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು” ಎಂದೂ ನ್ಯಾಯಮೂರ್ತಿಗಳು ಪ್ರವಚನ ನೀಡಿದರು.

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನೂ ತನ್ನ ವಶಕ್ಕೆ ಪಡೆದಿರುವ ಬಿಜೆಪಿ ಯಂತಹ ಆಕ್ರಮಣಕಾರಿ ಪಕ್ಷ ಇರುವಾಗ, ಚುನಾವಣಾ ಆಯೋಗದ ಆಯುಕ್ತರನ್ನೇ ಮೋಸದಿಂದ ಆಯ್ಕೆ ಮಾಡಿರುವಾಗ ಅದು ಹೇಗೆ ಬಿಜೆಪಿ ಆಡಳಿತದಲ್ಲಿ ಚುನಾವಣಾ ಆಯೋಗದ ಮೇಲೆ, ವ್ಯವಸ್ಥೆಯ ಮೇಲೆ ನಂಬಿಕೆ ಬರಲು ಸಾಧ್ಯ?

ಇಷ್ಟಕ್ಕೂ ವಿವಿ ಪ್ಯಾಟಲ್ಲಿ ಮುದ್ರಣಗೊಂಡ ಮತಚೀಟಿಗಳನ್ನು ಪರಿಶೀಲಿಸಲು ಏನಿದೆ ಪ್ರಾಬ್ಲಮ್ಮು? ಮತಚೀಟಿಗಳು ಅಂಟುವ ಸ್ವರೂಪದವಂತೆ, ಪ್ರತಿಯೊಂದು ಮತಯಂತ್ರದ ಜೊತೆ ಮತಚೀಟಿ ತಾಳೆ ಹಾಕಿ ನೋಡಲು 5 ಗಂಟೆ ಸಮಯ ಬೇಕಂತೆ. ಸಿಬ್ಬಂದಿಯ ಸಂಖ್ಯೆ ದುಪ್ಪಟ್ಟು ಬೇಕಂತೆ. ಹೀಗಾಗಿ ವಿವಿ ಪ್ಯಾಟ್ ಜೊತೆ ಎಣಿಕೆ ಸಾಧ್ಯವಿಲ್ಲವಂತೆ ಎಂಬುದು ನ್ಯಾಯಮೂರ್ತಿಗಳ ಆದೇಶದಲ್ಲಿದೆ.  ಚುನಾವಣೆಗಾಗಿ ಇಷ್ಟೊಂದು ಕೋಟಿ ಹಣವನ್ನು ಖರ್ಚು ಮಾಡುತ್ತಿರುವಾಗ ಇನ್ನೊಂದಿಷ್ಟು ಸಿಬ್ಬಂದಿಗಳನ್ನು ಬಳಸಿ ಮತಚೀಟಿಗಳನ್ನು ತಾಳೆ ಹಾಕಿದರೆ ಕಳೆದುಕೊಳ್ಳುವುದಾದರೂ ಏನು? ಬಿಜೆಪಿ ಹಾಗೂ ಚುನಾವಣಾ ಆಯೋಗ ಹೊರತುಪಡಿಸಿ ಎಲ್ಲರಲ್ಲೂ ಇರುವ ಸಂದೇಹಗಳ ನಿವಾರಣೆಯಾದರೂ ಆಗುತ್ತಿತ್ತಲ್ಲಾ.  ಸಂದೇಹಮುಕ್ತ ಚುನಾವಣಾ ವ್ಯವಸ್ಥೆ ಜಾರಿಗೆ ಬಂದಂತಾದರೂ ಆಗುತ್ತಿತ್ತಲ್ಲಾ.

ನ್ಯಾಯಮೂರ್ತಿ ದೀಪಂಕರ್ ದತ್ತಾ

ಮತಚೀಟಿಯ ಎಣಿಕೆಗೆ ಬೇಕಾಗುವ ಸಿಬ್ಬಂದಿಗಳನ್ನೂ ಕಡಿಮೆ ಮಾಡಲು ಪರ್ಯಾಯವಾಗಿ ಉತ್ತಮ ಬಾರ್ ಕೋಡ್ ವ್ಯವಸ್ಥೆಯ ಸಲಹೆಯನ್ನೂ ನ್ಯಾಯಾಧೀಶರ ಮುಂದೆ ಇರಿಸಲಾಗಿತ್ತು. ಅದಕ್ಕೆ ನ್ಯಾಯಾಧೀಶರು “ಶೇ.100 ರಷ್ಟು ವಿವಿ ಪ್ಯಾಟ್ ಯಂತ್ರಗಳಲ್ಲಿನ ಮತಚೀಟಿಗಳನ್ನು ಬಾರ್ ಕೋಡ್ ವ್ಯವಸ್ಥೆಯು ಸಾಧ್ಯವಾಗಿಸಬಹುದು. ಈ ಮನವಿ ಮತ್ತು ಸಲಹೆ ಸಮಂಜಸವಿದ್ದಂತೆ ಕಾಣುತ್ತದೆ.‌ ಆದರೆ ಇದು ಸಂಪೂರ್ಣವಾಗಿ ತಾಂತ್ರಿಕ ವಿಷಯವಾದ ಕಾರಣ ಚುನಾವಣಾ ಆಯೋಗವೇ ಈ ಬಗ್ಗೆ ಗಮನ  ಹರಿಸಬೇಕು. ಇದರ ಕಾರ್ಯಸಾಧ್ಯತೆಯನ್ನು ಆಯೋಗವು ಪರಿಶೀಲಿಸ ಬಹುದು‌. ಆದರೆ ನ್ಯಾಯಾಲಯವು ಈ ಬಗ್ಗೆ ಹೆಚ್ಚಿನದ್ದೇನನ್ನು ಹೇಳಲು ಸಾಧ್ಯವಿಲ್ಲ” ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಆದೇಶ ಮಾಡಿದರು.

ಬಾರ್ ಕೋಡ್ ವ್ಯವಸ್ಥೆಯಿಂದ ಮತಚೀಟಿಯ ಎಣಿಕೆ ಸುಲಭ ಸಾಧ್ಯ ಎನ್ನುವುದಾದರೆ ಅದನ್ನು ಜಾರಿಗೆ ತರಲು ಆದೇಶಿಸಿ ಜನರ ಸಂದೇಹವನ್ನು ನ್ಯಾಯಾಲಯ ನಿವಾರಿಸ ಬಹುದಾಗಿತ್ತು. ಅದನ್ನೂ ಮೋದಿ ಸರಕಾರದ ಅಡಿಯಾಳಾಗಿರುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಬಿಟ್ಟ ನ್ಯಾಯಾಧೀಶರು ಪರಿಹರಿಸಬಹುದಾದ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದರು.

ನ್ಯಾಯಾಲಯದ ಈ ತೀರ್ಪನ್ನು ಸಮರ್ಥಿಸಿಕೊಂಡ ಮೋದಿಯವರು “ವಿರೋಧ ಪಕ್ಷಗಳು ಇವಿಎಂ ಮೇಲೆ ಅಪನಂಬಿಕೆ ಸೃಷ್ಟಿಸಲು ಪ್ರಯತ್ನಿಸಿದರು. ಇವಿಎಂ ಪರವಾಗಿ ತೀರ್ಪು ನೀಡಿದ ಸರ್ವೋಚ್ಛ ನ್ಯಾಯಾಲಯವು ಈ ಪಕ್ಷಗಳ ಕಪಾಳಕ್ಕೆ ಸರಿಯಾಗಿ ಬಾರಿಸಿದೆ” ಎಂದು ಹೇಳಿಕೆ ನೀಡಿದರು.

ಇದಕ್ಕೆ ಕೌಂಟರ್ ಕೊಟ್ಟ ಕಾಂಗ್ರೆಸ್ ವಕ್ತಾರ ಪವನ್ ಖೇರಾ ರವರು ” ಬಿಜೆಪಿಯ ಮಹಾನಾಯಕ ಎಲ್.ಕೆ.ಅಡ್ವಾಣಿಯವರು 2009 ರಲ್ಲಿ ಇವಿಎಂ ವಿರುದ್ಧ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದರು. ಇವಿಎಂ ವಿರುದ್ಧ ಜಿ.ವಿ.ಎಲ್. ನರಸಿಂಹ ಎಂಬವರು ಬರೆದಿದ್ದ ಪುಸ್ತಕವನ್ನೂ ಬಿಡುಗಡೆ ಮಾಡಿದ್ದರು. ಹಾಗಾದರೆ ಆಗ ಅಡ್ವಾಣಿಯವರೂ ದೇಶದ ಹಾದಿ ತಪ್ಪಿಸಿದ್ದರೇ?” ಎಂದು ಪ್ರಶ್ನಿಸಿದ್ದರು.

ಆದರೆ ಸುಪ್ರೀಂ ಕೋರ್ಟಿನ ಈ ಇವಿಎಂ ವಿಚಾರಣೆ ಎಂಬುದು ಗುಡ್ಡ ಅಗೆದು ಇಲಿ ಹಿಡಿದಂತಾಗಿ ಯಥಾಸ್ಥಿತಿಗೆ ಬಂದಂತಾಗಿದೆ.  ಪರಿಹಾರ ಕಣ್ಮುಂದೆ ಇದ್ದರೂ ಅದಕ್ಕೆ ಆದೇಶಿಸದ ನ್ಯಾಯಾಲಯವು ಚುನಾವಣಾ ಆಯೋಗದ ಮೇಲೆ ಭಾರ ಹಾಕಿ ಇವಿಎಂ ಪರವಾಗಿ ತೀರ್ಪನ್ನು ಪ್ರಕಟಿಸಿದೆ. ಕೊನೆಗೂ ಇವಿಎಂ ಕುರಿತ ಅಗೋಚರ ಅನುಮಾನ ಹಾಗೆಯೇ ಉಳಿದಂತಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತರೆ ” ಇವಿಎಂ ಸುರಕ್ಷಿತ ಹಾಗೂ ನಂಬಿಕಾರ್ಹ” ಎನ್ನುವ ನ್ಯಾಯಾಲಯದ ತೀರ್ಪು ಒಪ್ಪಬಹುದಾಗಿದೆ. ಆದರೆ ಜನಪ್ರಿಯತೆಯಿಂದ ಜಾರಿಹೋಗುತ್ತಿರುವ ಬಿಜೆಪಿ ಅದರ ಸಾಮರ್ಥ್ಯ ಮೀರಿ ಬಹುಮತ ಗಳಿಸಿದ್ದೇ ಆದರೆ ಮತ್ತೆ ಇವಿಎಂ ಮತಯಂತ್ರಗಳ ಮೇಲಿನ ಅನುಮಾನ ದ್ವಿಗುಣವಾಗುವುದರಲ್ಲಿ ಸಂದೇಹವೇ ಇಲ್ಲ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಸೂಕ್ತ ಅಭ್ಯರ್ಥಿಯ ಆಯ್ಕೆಯೇ ದೇಶಕ್ಕೆ ಮತದಾರರ ಕಾಣ್ಕೆ

More articles

Latest article