ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ ನಡೆಯುತ್ತಿದ್ದು, 10 ಗಂಟೆಯಿಂದ ಮತದಾನ ಆರಂಭವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ಅನೇಕ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಮತ ಚಲಾಯಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಪ್ರತಿ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಸುದರ್ಶನ ರೆಡ್ಡಿ ಸ್ಪರ್ಧಿಸಿದ್ದಾರೆ. ಜುಲೈ 21ರಂದು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು.
ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಬಹುತೇಕ ಖಚಿತ ಎಂದೇ ಹೇಳಬಹುದು. ಆದರೂ ಈ ಚುನಾವಣೆಯಲ್ಲಿ ಒಂದು ವಿಶೇಷ ಎದ್ದು ಕಾಣುತ್ತಿದೆ. 1962ರಿಂದ ಇದುವರೆಗೂ ಪ್ರತಿಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳಿಗೆ ಹೋಲಿಸಿದರೆ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸಲಿವೆ.
ಒಟ್ಟು ಸಂಸದರು– 788; ರಾಜ್ಯಸಭೆ–245; ಲೋಕಸಭೆ -543; ರಾಜ್ಯಸಭೆಗೆ ನಾಮನಿರ್ದೇಶನಗೊಂಡವರು -12;
ಈ ಬಾರಿಯ ಚುನಾವಣೆಯ ಬಲಾಬಲ; ಒಟ್ಟು ಸಂಸದರು -781; ರಾಜ್ಯಸಭೆ (6 ಸ್ಥಾನಗಳು ಖಾಲಿ)-239: ಲೋಕಸಭೆ (1 ಸ್ಥಾನ ಖಾಲಿ)- 542.
ಚುನಾವಣೆಯಲ್ಲಿ ಗೆಲುವು ಸಾಧಿಸಲು 391 ಮತಗಳ ಅವಶ್ಯಕತೆ ಇರುತ್ತದೆ. ಎನ್‌ಡಿಎ (ವೈಎಸ್‌ಆರ್ ಕಾಂಗ್ರೆಸ್ ಬೆಂಬಲ ಸೇರಿ) 436 ಮತಗಳ ಬಲ ಹೊಂದಿದೆ. ಲೋಕಸಭೆಯಲ್ಲಿ ಒಂದು ಸ್ಥಾನ ಖಾಲಿ ಇದ್ದು, 542 ಸ್ಥಾನಗಳಿದ್ದು, ಎನ್ ಡಿಎ 436 ಮತಗಳನ್ನು ಹೊಂದಿದ್ದರೆ, ಇಂಡಿಯಾ ಒಕ್ಕೂಟ -324; ಪಕ್ಷೇತರರು-10, ಬಿಆರ್ ಎಸ್ -4 ಮತ್ತು ಬಿಜೆಡಿ 7 ಮತಗಳನ್ನು ಹೊಂದಿವೆ.