ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ಮತ ಕಳ್ಳತನ ನಡೆಸುತ್ತಿದೆ ಎಂದು ಆರೋಪಿಸಿ ರಾಜ್ಯ ಯುವ ಕಾಂಗ್ರೆಸ್ ಘಟಕ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿ ಕ್ರೋಶ ವ್ಯಕ್ತಪಡಿಸಿತು.
ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವ ಸಂತೋಷ್ ಲಾಡ್, ರಾಜ್ಯಸಭೆ ಮಾಜಿ ಸದಸ್ಯ ಜಿ.ಸಿ. ಚಂದ್ರಶೇಖರ್, ಮೇಲ್ಮನೆ ಮುಖ್ಯ ಸಚೇತಕ ಸಲೀಂ ಅಹ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಬಾನು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತತರು ಬಿಜೆಪಿ, ಪ್ರಧಾನಿ ಮೋದಿ ಮತ್ತು ಚುನಾವಣಾ ಆಯೋಗದ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಚುನಾವಣಾ ಆಯೋಗ ಬಿಜೆಪಿ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್ ಬಿಹಾರ ಚುನಾವಣೆ ಸೋತಿದ್ದಕ್ಕೆ ಪ್ರತಿಭಟನೆ ನಡೆಸುತ್ತಿಲ್ಲ. ಸೋತಿದ್ದು ಏಕೆ ಎಂದು ತೋರಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬಿಹಾರದಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಪಟ್ಟಿ ಬದಲಾಗಿದೆ. ಮುಂಚಿತವಾಗಿ ರಾಹುಲ್ ಗಾಂಧಿ ಈ ಬಗ್ಗೆ ದೇಶದ ಗಮನ ಸೆಳೆದಿದ್ದರು. ಚುನಾವಣಾ ಆಯೋಗ ಆಯುಕ್ತ ಜ್ಙಾನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಬಿಹಾರ, ಮಹಾರಾಷ್ಟ್ರ, ಹರಿಯಾಣದಲ್ಲಿ ಮತಪಟ್ಟಿ ಬದಲಾವಣೆ ಮಾಡಿದ್ದಾರೆ. ನಾವು ದೇಶದ ಜನರಿಗೆ ಮಾಹಿತಿ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಹರಿಯಾಣದಲ್ಲಿ 25 ಲಕ್ಷ, . ಮಹಾರಾಷ್ಟ್ರದಲ್ಲಿ 45 ಲಕ್ಷ ಮತದಾರರ ಸಂಖ್ಯೆಯಲ್ಲ ಹೆಚ್ಚಳವಾಗಿದೆ. ಸಂಸತ್ ಚುನಾವಣೆ ನಡೆದ ನಂತರ ಅಲ್ಪವಾಧಿಯಲ್ಲಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬಿಹಾರದಲ್ಲಿ ಬಿಜೆಪಿ ಜೆಡಿಯು ತಲಾ 101 ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಶೇ.90 ರಷ್ಟು ಸ್ರೈಕ್ ರೇಟ್ ಬಂದಿದ್ದು, ಸಹಜವಾಗಿಯೇ ಅನುಮಾನ ಉಂಟಾಗುತ್ತದೆ ಎಂದರು.
20 ವರ್ಷದಿಂದ ಅಲ್ಲಿ ಬಿಜೆಪಿ ಜೆಡಿಯು ಆಡಳಿತ ನಡೆಸುತ್ತಿದೆ. ಆದರೆ ಅವರು ಅಭಿವೃದ್ಧಿ ಹೆಸರಿನಲ್ಲಿ ಮತ ಯಾಚಿಸಲಿಲ್ಲ ಎಂದು ಕಿಡಿ ಕಾರಿದರು.
ಸಲೀಂ ಅಹ್ಮದ್ ಮಾತನಾಡಿ ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದರು. ಮಹದೇವಪುರದ ವೋಟ್ ಚೋರಿ ಕುರಿತು ದೇಶದ ಗಮನ ಸೆಳೆದಿದ್ದರು. ಅದು ಇಂದು ನಿಜವಾಗಿದೆ. ಬಿಹಾರ ದ ಗೆಲುವು ಬಿಜೆಪಿ, ಚುನಾವಣಾ ಆಯೋಗದ ಗೆಲುವಾಗಿದೆ. ಮತಗಳನ್ನು ಕದ್ದು ಗೆದ್ದಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಿಜೆಪಿಗೆ ನಾಯಕತ್ವ ಇಲ್ಲ. ಜೆಡಿಎಸ್ ಅದೋಗತಿಗೆ ಹೋಗುತ್ತಿದೆ. ಬಿಜೆಪಿ ಜೆಡಿಎಸ್ ಏನೆಲ್ಲಾ ಕಸರತ್ತು ಮಾಡಿದರೂ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಇಂದು ಸೋತಿರಬಹುದು. ಮುಂದೆ ಗುಜರಾತ್ ನಾವು ಮೇಲಕ್ಕೆ ಬರುತ್ತೇವೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಗುಡುಗಿದರು.

