ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1,15,586 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 2,29,632 ಮತಗಳನ್ನು ಪಡೆದಿದ್ದಾರೆ. ಇದೊಂದೇ ಕ್ಷೇತ್ರದಿಂದ ಬಿಜೆಪಿ 1,46,046 ಮತಗಳ ಮುನ್ನಡೆ ಪಡೆದಿರುವುದು ಮತ ಕಳ್ಳತನ ಮಾಡಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕಾಂಗ್ರೆಸ್ ಗಂಭೀರ ಆಪಾದನೆ ಮಾಡಿದೆ.
ಪಕ್ಷದ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಂಕಿಅಂಶಗಳ ಸಹಿತ ಚುನಾವಣಾ ಅಕ್ರಮಗಳನ್ನು ತೆರೆದಿಟ್ಟರು.
ಪ್ರಿಯಾಂಕ್ ಖರ್ಗೆ ಮಾತನಾಡಿ, ಬೆಂಗಳೂರು ಕೇಂದ್ರ ಸಂಸತ್ ಕೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು 6,26,208 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ 1,58,915 ಮತ ಗಳಿಸಿದ್ದಾರೆ. ಸೋಲಿನ ಅಂತರ ಕೇವಲ 32, 707 ಮತಗಳು ಮಾತ್ರ. ಮಹದೇವಪುರ ಮತಕ್ಷೇತ್ರ ಎಣಿಕೆಗೆ ಬರುವ ಮುಂಚಿತವಾಗಿ ಕಾಂಗ್ರೆಸ್ ಅಭ್ಯರ್ಥಿ 75-80 ಸಾವಿರ ಮತಗಳಿಂದ ಮುಂದಿದ್ದರು.
ಮಹದೇವಪುರ ಕ್ಷೇತ್ರದಲ್ಲಿ 2018 ರ ವಿಧಾನಸಭಾ ಚುನಾವಣೆಯಲ್ಲಿ 5,04,850 ಮತದಾರರು ಇದ್ದರೆ, 2019 ರ ಲೋಕಸಭಾ ಚುನಾವಣೆಯಲ್ಲಿ 5,01,884 ಮತದಾರರು ಇದ್ದರು. ಅಂದರೆ 3,566 ಮತದಾರರು ಕಡಿಮೆಯಾಗಿದ್ದರು. ಇದಾದ ನಂತರ 2023 ರ ವಿಧಾನಸಭಾ ಚುನಾವಣೆ ವೇಳೆ 6, 07,755 ಮತದಾರರು ಇದ್ದರು. 2024 ರ ಲೋಕಸಭೆ ವೇಳೆಗೆ ಮತ್ತೆ 6,59,826 ಮತದಾರರು ಅಂದರೆ 52,575 ಮತದಾರರು ಹೆಚ್ಚಾಗಿದ್ದಾರೆ. ಅಂದರೆ ಪ್ರತಿ ದಿನ 160 ಮತಗಳನ್ನು ಮತಪಟ್ಟಿಗೆ ಸೇರಿಸುತ್ತಾ ಬರಲಾಗಿದೆ. ಈ ಏರುಪೇರನ್ನು ರಾಹುಲ್ ಗಾಂಧಿ ಹಾಗೂ ಪರಾಜಿತ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರು ಕೂಲಂಕಷವಾಗಿ ಅಧ್ಯಯನ ಮಾಡಿ ಪತ್ತೆ ಹಚ್ಚಿದ್ದಾರೆ. ನಾವು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿಲ್ಲ. ನಮ್ಮ ಬಳಿ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಚುನಾವಣಾ ಆಯೋಗದ ನಿಮಯ ಮೀರಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಶೇ. 4 ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ ಎಂದು ಪ್ರಶ್ನಿಸಿದರು. ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿಕೊಂಡವರು 11,965, ನಕಲಿ ವಿಳಾಸ ಹೊಂದಿರುವ ಮತದಾರರು 40,009, ಪಾರಂ 6 ದುರುಪಯೋಗ ಮಾಡಿಕೊಂಡು ಚಲಾವಣೆಯಾಗಿರುವ ಮತಗಳು 33,692, ಒಂದೇ ವಿಳಾಸ ಹೊಂದಿರುವ ಅನೇಕ ಮಂದಿ 10,452, ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತ ಫೋಟೊಗಳು 4,132. ಈ ದಾಖಲೆಗಳನ್ನು ಯಾರಿಗೆ ಬೇಕಾದರೂ ನಾವು ನೀಡಲು ತಯಾರಿದ್ದೇವೆ ಎಂದು ಹೇಳಿದರು.
ಗುರುಕ್ರೀತ್ ಸಿಂಗ್ ದಾಂಗ್ 26.02.2024, 27.02.2024, 28.02.2024 ಹೀಗೆ ಮೂರು ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಿದ ಈ ವ್ಯಕ್ತಿಗೆ 4 ವೋಟರ್ ಐಡಿ ಕಾರ್ಡ್ ನೀಡುತ್ತಾರೆ. 116, 124, 125, 126 ಬೂತ್ ನಂಬರ್ ನಲ್ಲಿ ಈತನಿಗೆ ಬೇರೆ ಬೇರೆ ಎಪಿಕ್ ನಂಬರ್ ನೀಡಿ ಮತದಾನದ ಹಕ್ಕು ನೀಡಿದ್ದಾರೆ. ಎಪಿಕ್ ನಂಬರ್ ಅನ್ನು ಸಹ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಸೋನಲ್ ಅವಸ್ಥಿ ಎನ್ನುವವರು 2024 ರ 4ನೇ ತಿಂಗಳಲ್ಲಿ ದಿನಾಂಕ 24ರಂದು, 2ನೇ ತಿಂಗಳ 07 ರಂದು ಹೀಗೆ ಎರಡು ದಿನಗಳಲ್ಲಿ ಐದು ಬಾರಿ ಅರ್ಜಿ ಹಾಕಿದ್ದಾರೆ. ಇವರಿಗೆ ಐದು ಮತದಾರರ ಕಾರ್ಡ್ ನೀಡಿದ್ದಾರೆ. ಇವರ ಹೆಸರು ಒಂದೇ ಬೂತ್ ನಲ್ಲಿ ಐದು ಬಾರಿ ಇದೆ. ಬೇರೆ, ಬೇರೆ ಎಪಿಕ್ ನಂಬರ್ ನೀಡಲಾಗಿದೆ ಎಂದು ಅಕ್ರಮಗಳನ್ನು ಒಂದೊಂದೇ ವಿವರಿಸಿದರು.
ನಕಲಿ ವಿಳಾಸದಲ್ಲಿ ಮನೆ ಸಂಖ್ಯೆ ಇಲ್ಲವೇ ಇಲ್ಲ, ತಂದೆಯ ಹೆಸರಿನಲ್ಲಿ ಇಂಗ್ಲೀಷ್ ಅಕ್ಷರಗಳನ್ನು ಹಾಕಿದ್ದಾರೆ. ಜೊತೆಗೆ ಸ್ಪೆಷಲ್ ಕ್ಯಾರೆಕ್ಟರ್ ಅಕ್ಷರಗಳಿವೆ. ಒಬ್ಬ ಮಹಿಳೆಯ ವಿಳಾಸ ದಾಖಲೆಗೆ ಮದುವೆ ಆಮಂತ್ರಣ ಪತ್ರವನ್ನು ಒಪ್ಪಿತ ದಾಖಲೆ ಎಂದು ಪಡೆಯಲಾಗಿದೆ. ಮದನ್ ಕುಮಾರ್ ಎಂಬಾತನ ಆದಾರ್ ಕಾರ್ಡನ್ನು ದಾಖಲೆ ಎಂದು ಪಡೆಯಲಾಗಿದೆ ಇದರಲ್ಲಿ ಸನ್ ಆಫ್ ನಾಗರಾಜು ಬಯ್ಯಪ್ಪನಹಳ್ಳಿ ಇದೆ ಎಂದು ಇದೆ. ನಕಲಿ ಆದಾರ್ ಕಾರ್ಡ್ ಗಳನ್ನು ಸೃಷ್ಟಿಸಿ ಮತದಾರರ ಕಾರ್ಡ್ ನೀಡಲಾಗಿದೆ ಎನ್ನುವ ಅನುಮಾನ ಮೂಡಿದೆ. ವಿನಯ್ ಕುಮಾರ್ ಎಂಬಾತನ ಮನೆ ಸಂಖ್ಯೆ ಮನೆ ಎಂದೇ ಇದೆ. ಈತನ ವಿಳಾಸ ದಾಖಲೆ ಶಾಲಾ ವರ್ಗಾವಣ ಪತ್ರವಿದೆ. ಕೆಲವೊಬ್ಬರು ಕಾಮೆಡ್ ಕೆ ಪ್ರವೇಶ ಪತ್ರವನ್ನು ವಿಳಾಸ ದಾಖಲೆ ಎಂದು ನೀಡಿದ್ದಾರೆ.
ವಿಳಾಸದ ಜಾಗದಲ್ಲಿ ಸೊನ್ನೆ ಎಂದು ನಮೂದಿಸಿರುವ ಮನೆಗಳ ಸಂಖ್ಯೆ 12, 294, ಕೇವಲ ಡಾಟ್ ಇರುವ 7,510, – ಈ ಚಿಹ್ನೆ ಹೊಂದಿರುವ ಕಾರ್ಡ್ ಗಳ ಸಂಖ್ಯೆ 8,134. ಮನೆ ಸಂಖ್ಯೆ 35 ರಲ್ಲಿ 80 ಮಂದಿ ಇದ್ದಾರೆ ಎಂದು ಹೇಳಲಾಗಿದೆ. ಚುನಾವಣಾ ನೀತಿ ಪ್ರಕಾರ 10 ಜನಕ್ಕಿಂತ ಹೆಚ್ಚಿದ್ದರೆ ಮನೆ ಪರಿಶೀಲನೆ ಮಾಡಬೇಕು ಎಂದು ಹೇಳಲಾಗಿದೆ. ಇನ್ನೊಂದು ಕಡೆ ಬೂತ್ ಸಂಖ್ಯೆ 336 ರಲ್ಲಿ 46 ಜನರು ಒಂದೇ ಮನೆಯಲ್ಲಿ ಇದ್ದಾರೆ. ಮನೆ ಮಾಲೀಕನನ್ನು ಕೇಳಿದರೆ ಗಂಡ, ಹೆಂಡತಿ ಮಕ್ಕಳಿದ್ದಾರೆ.
20 ಕ್ಕೂ ಹೆಚ್ಚು ಮತದಾರರು ಒಂದೇ ರೀತಿ ಇರುವ 284 ವಿಳಾಸದಲ್ಲಿ ಇದ್ದಾರೆ ಇವರ ಸಂಖ್ಯೆ 6,629. 30 ಮತದಾರರು ಇರುವ ಒಂದೇ ರೀತಿಯ ವಿಳಾಸ 86 ಈ ಮತದಾರರ ಸಂಖ್ಯೆ 3,157, 50ಕ್ಕೂ ಹೆಚ್ಚು ಮತದಾರರು ಹೊಂದಿರುವ ಒಂದೇ ರೀತಿ ವಿಳಾಸ ಇರುವ ಮನೆ ಸಂಖ್ಯೆ 10 ಇಲ್ಲಿನ ಮತದಾರರ ಸಂಖ್ಯೆ 636 ಒಟ್ಟು ಮತದಾರರು 10,422. ಭಾವಚಿತ್ರಗಳೇ ಇಲ್ಲದೇ ಇರುವ ಸಂಖ್ಯೆ 4,132.
ಫಾರ್ಮ್ 6 ರ ದುರುಪಯೋಗವಾಗಿದೆ. ಮಾಧ್ಯಮಗಳು ಶಕುನ್ ದೇವಿ ಎನ್ನುವವರನ್ನು ಮಾತನಾಡಿಸಿದ್ದಾರೆ. ಇವರು ಒಮ್ಮೆ ಮಾತ್ರ ಮತ ಹಾಕಿದ್ದೇನೆ ಎಂದಿದ್ದಾರೆ. ಇನ್ನೊಂದು ಮತವನ್ನು ಯಾರು ಹಾಕಿದರು. ಏಕೆಂದರೆ ಇವರ ಹೆಸರಿನಲ್ಲಿ ಫಾರ್ಮ್ 6 ದುರುಪಯೋಗವಾಗಿದೆ. ಬಿಎಲ್ ಓ ಗಳ ಪ್ರಕಾರ ಎರಡು ಕಡೆ ಇವರು ಮತ ಹಾಕಿದಂತೆ ಟಿಕ್ ಹಾಕಿದೆ. 45 ದಿನಗಳ ನಂತರ ಪ್ರತಿ ಬೂತ್ ನ ವಿಡಿಯೋಗಳನ್ನು ನಾಶ ಮಾಡಿ ಎಂದು ಹೇಳಿದ್ದಾರೆ. ಡಿಜಿಟಲ್ ಇಂಡಿಯಾದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳಲು ಸಮಸ್ಯೆ ಏನು ಎಂದು ಪ್ರಶ್ನಿಸಿದರು.
22-30 ವಯಸ್ಸಿನ ಮತದಾರರಿಗೆ 7,639 ಕಾರ್ಡ್ ಗಳು, 31-40 14,253 ಮತದಾರರು, 41- 60 9,453 ಮತದಾರರು, 61- 99 2,423 ಮತದಾರರು ಫಾರ್ಮ್ 6 ಅನ್ನು ಹಂಚಲಾಗಿದೆ. ಆಯೋಗದವರು ಒಬ್ಬೊಬ್ಬರಿಗೆ ಒಂದೊಂದು ಮಾಹಿತಿ ನೀಡಿದ್ದಾರೆ. ಇವರು ಮಹದೇವಪುರದ ಮಾಹಿತಿ ನೀಡಿದ್ದಾರೆ. ಆದರೆ ಸಿವಿ ರಾಮನ್ ನಗರದ ಮಾಹಿತಿ ನೀಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಪಾದಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಪೊನ್ನಣ್ಣ ಮಾತನಾಡಿ, ಚುನಾವಣಾ ಆಯೋಗದವರು ಈ ಅಕ್ರಮವನ್ನು ತನಿಖೆ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದಾರೆ. ಅಕ್ರಮಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿಲ್ಲ. ಆಯೋಗವು ಸಂವಿಧಾನಿಕವಾಗಿ ವರ್ತನೆ ಮಾಡುತ್ತಿಲ್ಲ.
ಮತದಾರನನ್ನು ಹೇಗೆ ಪಟ್ಟಿಗೆ ಸೇರಿಸಬೇಕು, ಪಟ್ಟಿಯಿಂದ ಕೈ ಬಿಡಬೇಕು ಎನ್ನುವ ನಿಯಮಗಳನ್ನೇ ಪಾಲನೆ ಮಾಡಿಲ್ಲ. ದಾರಿ ತಪ್ಪಿಸಲು ಆಯೋಗವು ಕೆಲಸ ಮಾಡುತ್ತಿದೆ. ಇದರಿಂದ ಆಯೋಗದ ಮೇಲೆ ಸಂಶಯ ಉಂಟಾಗುತ್ತಿದೆ ಎಂದರು.