ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಕದಿಯುವಾಗ ಎಚ್ಚರವಹಿಸದೆ ನಾನು ಸೋಲುತ್ತಿದ್ದೆ ಎಂದು ಸ್ಥಳೀಯ ಶಾಸಕ ಬಿ.ಆರ್. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ. ಈ ಷಡ್ಯಂತ್ರದ ಹಿಂದೆ ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿರುವ ಬಗ್ಗೆ ಅನುಮಾನಗಳಿವೆ ಎಂದೂ ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ಮತದಾನಕ್ಕೆ ಅರ್ಹರಾಗಿರುವ 6,018 ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲು ನಕಲಿ ಐಡಿಗಳನ್ನು ನಕಲಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ನಾವು ಸಕಾಲಕ್ಕೆ ಎಚ್ಚೆತ್ತುಕೊಂಡು ಈ ಸಂಚನ್ನು ಕುರಿತು ಆಯೋಗದ ಗಮನಕ್ಕೆ ತಂದೆವು. ನಾನು ನೀಡಿದ ದೂರಿನ ಆಧಾರದಲ್ಲಿ ಅಂದಿನ ಉಪ ವಿಭಾಗಾಧಿಕಾರಿ ಎಫ್ಐಆರ್ ದಾಖಲು ಮಾಡಿದ್ದರು. ಆಗ ಮತದಾರರ ಪಟ್ಟಿಯಿಂದ ಅರ್ಹರನ್ನು ತೆಗೆಯುವ ಕೆಲಸಕ್ಕೆ ಕೊಕ್ಕೆ ಬಿದ್ದಿತು. ಆದರೆ ಮತ ಕಳವಿಗೆ ಪ್ರಯತ್ನ ನಡೆಸಿದವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಚುನಾವಣಾ ಆಯೋಗ ಸ್ಪಂದಿಸಲಿಲ್ಲ ಎಂದು ಅವರು ಆಪಾದಿಸಿದರು.
ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿದರು. ಸಿಐಡಿ ಹಲವು ಬಾರಿ ಪತ್ರ ಬರೆದರೂ ಚುನಾವಣಾ ಆಯೋಗ ಸೂಕ್ತ ದಾಖಲೆಗಳನ್ನು ಒದಗಿಸಲೇ ಇಲ್ಲ ಈಗ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ ನಂತರ ರಾಜ್ಯ ಚುನಾವಣಾಧಿಕಾರಿಗೆ ಉತ್ತರ ನೀಡಿರುವುದಾಗಿ ಸುಳ್ಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರು ಯಾವ ಉತ್ತರವನ್ನೂ ನೀಡಿಲ್ಲ ಎಂದು ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.