ಸೌಜನ್ಯಾ ಮನೆಗೆ ಕೊಂ*ದ*ವರು ಯಾರು ಅಭಿಯಾನ ತಂಡದ ಭೇಟಿ | ನ್ಯಾಯಕ್ಕಾಗಿನ ಹೋರಾಟದಲ್ಲಿ ಇಡೀ ನಾಡಿನ ಮಹಿಳೆಯರು ಇದ್ದೇವೆ ಎಂಬ ಸಂದೇಶ

Most read


ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಧರ್ಮಸ್ಥಳ -ಪಾಂಗಾಳದಲ್ಲಿರುವ ದಿ. ಸೌಜನ್ಯ ಅವರ ಮನೆಗೆ ಕೊಂ*ದ*ವರು ಯಾರು ಅಭಿಯಾನದ ತಂಡ ಭೇಟಿ ನೀಡಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಅವರೊಂದಿಗೆ ನ್ಯಾಯಕ್ಕಾಗಿನ ಹೋರಾಟದಲ್ಲಿ ಇಡೀ ನಾಡಿನ ಮಹಿಳೆಯರು ಇದ್ದೇವೆ ಎಂಬ ಸಂದೇಶವನ್ನು ನೀಡಿದರು.

ಈ ಭೇಟಿಯ ನಂತರದಲ್ಲಿ ಕೊಂ*ದ*ವರು ಯಾರು ಅಭಿಯಾನದ ಪ್ರತಿನಿಧಿ, ಹೋರಾಟಗಾರ್ತಿ ಚಂಪಾ ಎಚ್‌ ಎಸ್‌ ಮಾಧ್ಯಮದವರೊಂದಿಗೆ ಮಾತನಾಡಿ ‘ಕೊಂ*ದವರು ಯಾರು’ ಈ ಅಭಿಯಾನ ಬೆಂಗಳೂರಿನಲ್ಲಿ ಪ್ರಾರಂಭವಾದದ್ದು ನಾಲ್ಕು – ಐದು ತಿಂಗಳಿಂದೀಚೆಗೆ. ಈ ಅಭಿಯಾನದಲ್ಲಿ ಜಾತಿ, ದೇವರು, ಧರ್ಮ ಯಾವುದೂ ಕೆಲಸ ಮಾಡುವುದಿಲ್ಲ. ‘ ಈ ಅಭಿಯಾನ ಒಂದು ವಿಶಾಲವಾದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ. ಇಲ್ಲಿ ಯಾವುದೇ ರಾಜಕೀಯ ಅಜೆಂಡಾಗಳಿಲ್ಲ. ಮಹಿಳೆಯರಿಗೆ ನ್ಯಾಯ ಸಿಗಬೇಕೆಂಬುದು  ಮುಖ್ಯ ಕಾಳಜಿ. ರಾಜ್ಯ ಹಾಗೂ ಭಾರತದಲ್ಲಿ  ಮಹಿಳೆಯರ ಮೇಲೆ ನಡೆಯುವ ಎಲ್ಲಾ  ರೀತಿಯ ಹಿಂಸೆಗಳಿಗೆ ಧ್ವನಿ ಎತ್ತುವ ಹಾಗೆ ಧರ್ಮಸ್ಥಳ ಗ್ರಾಮದ ಸುತ್ತ-ಮುತ್ತ ನಡೆಯುತ್ತಿರುವ ಹಾಗೂ ನಡೆದಿರುವ ಅತ್ಯಾಚಾರ, ಕೊ*ಲೆ, ಹಿಂಸೆಗಳ ಬಗ್ಗೆ ಈ ಅಂದೋಲನ ಧ್ವನಿ ಎತ್ತುತ್ತಿದೆ.  ಮಾನವೀಯ ಹಕ್ಕುಗಳಿಗೆ ಹೋರಾಟ ನಡೆಸುವವರು, ವಿವಿಧ ರಾಜಕೀಯ ಬದ್ಧತೆ ಇರುವ ಮಹಿಳಾ ಸಂಘಟನೆಗಳು ಇಲ್ಲಿ ಕೆಲಸ ಮಾಡುತ್ತವೆ. ಇಲ್ಲಿ ಎಡ-ಬಲ ಸಿದ್ಧಾಂತಗಳು ನಮಗೆ ಮುಖ್ಯವಲ್ಲ. ಮಹಿಳೆಗೆ ನ್ಯಾಯ ಸಿಗಬೇಕು, ಅಂದೋಲನದ ದಾರಿ ನೇರ ಹಾಗೂ ಸ್ಪಷ್ಟ ಎಂದು ಹೇಳಿದರು.

 ಈ ಅಂದೋಲನದ ಮೂಲಕ ಮಹಿಳಾ ಆಯೋಗಕ್ಕೆ, ಮುಖ್ಯ ಮಂತ್ರಿಗಳಿಗೆ ಹಾಗೂ ಇತರ ಮಂತ್ರಿಗಳಿಗೆ ಎಸ್. ಐ. ಟಿ. ಮುಂದುವರಿಸ ಬೇಕೆಂದು ಈಗಾಗಲೇ ಒತ್ತಾಯಿಸಲಾಗಿದೆ. ಸರ್ಕಾರದ ಆದೇಶ ದಲ್ಲಿ ಎಸ್. ಐ. ಟಿ. ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದ ಸುತ್ತ-ಮುತ್ತ ನಡೆದ ಅತ್ಯಾಚಾರ, ಕೊಲೆ, ನಾಪತ್ತೆಯಾದ ಮಹಿಳೆಯರ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸ ಬೇಕೆಂದು ಹೇಳುತ್ತದೆ. ಆದರೆ ಎಸ್. ಐ. ಟಿ. ದಾರಿ ತಪ್ಪಿರುವುದು ಸ್ಪಷ್ಟವಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರ ಅನುಕೂಲಕ್ಕೆ ಫೋನ್ ಹಾಗೂ ಭದ್ರತೆಯ ಭರವಸೆಯನ್ನು ಎಸ್. ಐ. ಟಿ. ನೀಡಿತ್ತು. ಬೆಳ್ತಂಗಡಿಯಲ್ಲೂ ಎಸ್. ಐ. ಟಿ. ದೂರುದಾರರಿಗೆ ಭರವಸೆ ಹಾಗೂ ಭದ್ರತೆ ನೀಡಬೇಕು, ನೊಂದವರ ಜೊತೆ ನಾವಿದ್ದೇವೆ ಎನ್ನುವ ಭರವಸೆ ನೀಡಬೇಕು ಎಂದು ‘ಕೊಂ*ದ*ವರು ಯಾರು?’ ಅಂದೋಲನವು ಒತ್ತಾಯಿಸುತ್ತದೆ ಎಂದು ಹೇಳಿದರು.

ಮಾತಾಡಿದ ಮತ್ತೋರ್ವ ಹೋರಾಟಗಾರ್ತಿ ಜ್ಯೋತಿ ಎ ಅವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿಯವರ ವಿರುದ್ಧ ಕೆಲವು ಮಾಧ್ಯಮಗಳು ವಿಷ ಕಾರುತ್ತಿರುವುದು ಅವುಗಳ ಬೇಜವಾಬ್ದಾರಿತನದ ಮತ್ತು ಹೊಣೆಗೇಡಿ ವರ್ತನೆಯಾಗಿದೆ. ಅವುಗಳ ಈ ನಡವಳಿಕೆಯನ್ನು ನಾವು ಮಹಿಳಾ ಸಂಘಟನೆಗಳು ಮತ್ತು ಕೊಂ*ದವರು ಯಾರು ಆಂದೋಲನದ ಹೋರಾಟಗಾರ್ತಿಯರು ಖಂಡಿಸುತ್ತೇವೆ. ಅವರು ಧರ್ಮಸ್ಥಳದಲ್ಲಿ ಅತ್ಯಾಚಾರಗಳು, ಕೊಲೆಗಳು, ಅಸಹಜ ಸಾವುಗಳು ಮತ್ತು ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ ತನಿಖೆ ನಡೆಸಲಾಗಿದೆಯೇ ಎಂದು ಕೇಳಿ ಎಸ್‌ಐಟಿ ಮುಖ್ಯಸ್ಥರಿಗೆ ಇದೇ ಅಕ್ಟೋಬರ್ 31ರಂದು ಪತ್ರ ಬರೆದು, ಹಾಗಿಲ್ಲವಾದರೆ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸಂಬಂಧಪಟ್ಟಂತೆ ಈ ಅಪರಾಧ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಿ ತಮಗೆ ವರದಿ ನೀಡುವಂತೆ ತಿಳಿಸಿದ್ದರು. ಇದು ಕೆಲವು ಮಾಧ್ಯಮಗಳಿಗೆ ಮತ್ತವುಗಳ ಪತ್ರಕರ್ತರಿಗೆ ಅವರ ಬಗ್ಗೆ ಕೋಪ ಉಂಟಾಗಲು ಕಾರಣವಾಗಿರುವುದು ಆ ಮಾಧ್ಯಮಗಳ ಮಹಿಳಾ-ವಿರೋಧಿ, ನ್ಯಾಯ-ವಿರೋಧಿ ಮತ್ತು ಒಟ್ಟಾರೆ ಜನ-ವಿರೋಧಿ ಧೋರಣೆಯನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.

ಸಂದರ್ಭಕ್ಕೆ ಅತ್ಯಂತ ತಕ್ಕನಾಗಿ ಮತ್ತು ಸಮರ್ಪಕವಾಗಿ ಪತ್ರ ಬರೆದು ಮಹಿಳೆಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿರುವ ಆಯೋಗದ ಅಧ್ಯಕ್ಷರನ್ನು ಲೆಫ್ಟಿಸ್ಟ್ ಎಂದು ಬ್ರ್ಯಾಂಡ್ ಮಾಡುವುದಾಗಲೀ ದಗಾಕೋರ ಎಂದು ನಿಂದಿಸುವುದಾಗಲೀ ಪತ್ರಿಕಾಧರ್ಮಕ್ಕೆ ಸಮಂಜಸವಾದುದಲ್ಲ. ರಾಜ್ಯದ ಮಹಿಳಾ ಅಧ್ಯಕ್ಷರು ಯಾವ ಒಂದು ಪಂಥದ ಅಥವಾ ಪಕ್ಷದ, ಜಾತಿ-ಮತದ ಮಹಿಳೆಯರ ಪ್ರತಿನಿಧಿಯಲ್ಲ. ಅವರು ಇಡೀ ರಾಜ್ಯದ ಸಮಸ್ತ ಮಹಿಳೆಯರನ್ನು ಪ್ರತಿನಿಧಿಸುತ್ತಾರೆ, ಅವರ ನೋವು, ಸಂಕಟಗಳಿಗೆ ಪರಿಹಾರ ಒದಗಿಸಲು ಇರುವ ಸಾಂಸ್ಥಿಕ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಮಹಿಳೆಯ ಮೇಲೆ ಎಂತಹದ್ದೇ ಬಗೆಯ ದೌರ್ಜನ್ಯ, ಹಿಂಸೆ ನಡೆದರೂ ಅದರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುವ ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರಾಗಿ ಅವರು ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌ಐಟಿ ಗೆ ಪತ್ರ ಬರೆದು ತಮ್ಮ ಕರ್ತವ್ಯಪಾಲನೆ ಮಾಡಿದ್ದಾರೆ, ಮಹಿಳೆಯರ ಬಗ್ಗೆ ಬದ್ದತೆ ಮೆರೆದಿದ್ದಾರೆ. ಇದನ್ನು ಮೆಚ್ಚುವ ಬದಲಿಗೆ ಕೆಲವು ಮಾಧ್ಯಮಗಳು ಬಾಯಿಗೆ ಬಂದಂತೆ ಮಾತಾಡುವುದು ಅವುಗಳ ನೀಚತನವನ್ನು ತೋರಿಸುತ್ತದೆ. “ಕೊಂ*ದವರು ಯಾರು” ಆಂದೋಲನದ ಪರವಾಗಿ, ರಾಜ್ಯದ ಮಹಿಳೆಯರ ಪರವಾಗಿ ಮತ್ತು ನೊಂದವರ ಕುಟುಂಬಗಳ ಪರವಾಗಿ ನಾವು ಡಾ.ನಾಗಲಕ್ಷ್ಮಿ ಚೌಧರಿಯವರ ದೃಢತೆಯನ್ನು ಶ್ಲಾಘಿಸುತ್ತ, ಅವರು ತಮ್ಮ ಕೆಲಸವನ್ನು ಹೀಗೇ ಮುಂದುವರಿಸಲಿ, ನಾವೆಲ್ಲರೂ ಅವರೊಂದಿಗಿದ್ದು ಬೆಂಬಲ ಸೂಚಿಸುತ್ತೇವೆ ಎಂದರು.

ಮುಂದುವರಿದು ರಾಜ್ಯದ ಸಾಂವಿಧಾನಿಕ ಸಂಸ್ಥೆಯ ಓರ್ವ ಮುಖ್ಯಸ್ಥೆಯ ಬಗ್ಗೆಯೇ ಒಬ್ಬ “ಹಿರಿಯ ಪತ್ರಕರ್ತ”ರಿಂದ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳು ಬಂದರೆ ಮತ್ತು ಸಹಜವಾಗಿ ಆತನನ್ನು ಅನುಸರಿಸುವ ಪಡೆಗಳು ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯವಾಗಿ ವೈಯಕ್ತಿಕವಾಗಿ ಟ್ರೋಲ್ ಮಾಡಿದರೆ, ಇನ್ನು ಸಾಮಾನ್ಯ ಮಹಿಳೆಯರ ಪರಿಸ್ಥಿತಿ ಏನು ಎಂಬುದು ಅನೂಹ್ಯವೇ! ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರಾಮಾಣಿಕ ಮತ್ತು ದಿಟ್ಟ ನಡೆಯ ಪರವಾಗಿ “ಕೊಂ*ದವರು ಯಾರು” ಆಂದೋಲನದಿಂದ ಸಾಮಾಜಿಕ ಮಾಧ್ಯಮದಿಂದ ಪೋಸ್ಟರ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

ಧರ್ಮಸ್ಥಳ ಗ್ರಾಮದಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮಹಿಳೆಯರ ಕೊಲೆ, ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಆಗ್ರಹಿಸಿ “ಕೊಂ*ದ*ವರು ಯಾರು? ಎಂಬ ಅಭಿಯಾನ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದೆ. ಈಗಾಗಲೇ ಸೋನಿಯಾ ಗಾಂಧಿಯವರಿಗೆ ಪತ್ರ, ರಾಜ್ಯದಾದ್ಯಂತ ಸಹಿ ಸಂಗ್ರಹ ಅಭಿಯಾನ, ಹಣತೆ ಹಚ್ಚುವ ಅಭಿಯಾನ,  ಮಾನ್ಯ ಮುಖ್ಯಮಂತ್ರಿಗಳ ಭೇಟಿ, ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ ಹೀಗೆ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಹಿಳಾ ಸಂಘಟನೆಗಳ ಮುಖಂಡರು, ಮಹಿಳಾ ವಿದ್ವಾಂಸರು ಹಾಗೂ ಮಹಿಳಾ ವೃತ್ತಿಪರರ ನೇತೃತ್ವದಲ್ಲಿ ಈ ಅಭಿಯಾನ ನಡೆಯುತ್ತಿದೆ.‌

ಅಭಿಯಾನದ ತಂಡದಲ್ಲಿ ಗೀತಾ ಸುರತ್ಕಲ್‌ ಶಶಿಕಲಾ ಶೆಟ್ಟಿ, ಅಮ್ಮುಲು, ಮಮತಾ, ಪೂರ್ಣ,ಮಧು, ಸುರೇಖಾ, ಶೈಲಜ, ಮಲ್ಲಿಗೆ , ಮುಂತಾದವರು ಇದ್ದರು.

More articles

Latest article