ಸಂಚಾರ ನಿಯಮ ಉಲ್ಲಂಘನೆ; ಒಂದೇ ದಿನ 10 ಲಕ್ಷ ರೂ. ದಂಡ ಸಂಗ್ರಹ

Most read

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಚಾಲಕರು ಹಾಗೂ ಬೈಕ್ ಸವಾರರ ವಿರುದ್ಧ ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಬುಧವಾರ ಒಂದೇ ದಿನ 1,980 ಪ್ರಕರಣ ದಾಖಲಿಸಿದ್ದಾರೆ.


ಬುಧವಾರ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಇಷ್ಟೂ ಪ್ರಕರಣಗಳಿಂದ ಒಟ್ಟು ‍9.96 ಲಕ್ಷ ರೂಪಾಯಿ
ದಂಡ ಸಂಗ್ರಹಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಮೂವರು ಕುಳಿತು ಪ್ರಯಾಣಿಸುತ್ತಿದ್ದ 60 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ರುಪಾಯಿ 30 ಸಾವಿರ ದಂಡ ಸಂಗ್ರಹಿಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಹಾಗೂ ಹೆಲ್ಮಟ್ ಧರಿಸದೇ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 919 ಪ್ರಕರಣ ದಾಖಲಿಸಿಕೊಂಡು, 4.50 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ನಿರ್ಬಂಧಿತ ರಸ್ತೆಯಲ್ಲಿ ಸಂಚರಿಸಿದ ವಾಹನ
ಸವಾರರ ವಿರುದ್ಧ 471 ಪ್ರಕರಣ ದಾಖಲಿಸಿಕೊಂಡು, 2.39 ಲಕ್ಷ ದಂಡ ಸಂಗ್ರಹಿಸಲಾಗಿದೆ. ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದವರ ವಿರುದ್ಧ 178 ಪ್ರಕರಣ ದಾಖಲಿಸಿಕೊಂಡು 90 ಸಾವಿರ ದಂಡ ವಿಧಿಸಲಾಗಿದೆ.
ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿದ್ದ 352 ಮಂದಿಯಿಂದ 1.77 ಲಕ್ಷ ದಂಡ ಸಂಗ್ರಹಿಸಲಾಗಿದೆ.


ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಇನ್ನು ಮುಂದೆಯೂ ಇದೇ ರೀತಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಗುವುದು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಎಚ್ಚರಿಕೆ ನೀಡಿದ್ದಾರೆ.

More articles

Latest article