ಹೊಸದಿಲ್ಲಿ: “ಅಮ್ಮಾ, ಕುಸ್ತಿ ನನ್ನನ್ನು ಸೋಲಿಸಿತು. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ಕುಸ್ತಿಗೆ ವಿದಾಯ ಹೇಳುತ್ತಿದ್ದೇನೆ…”
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಘಾತಕಾರಿ ಬೆಳವಣಿಗೆಯಲ್ಲಿ ಅನರ್ಹಗೊಂಡು ಪದಕ ವಂಚಿತರಾದ ಭಾರತೀಯ ಕುಸ್ತಿಪಟು ವಿನೇಶಾ ಪೋಗಟ್ ಕುಸ್ತಿಗೆ ವಿದಾಯ ಹೇಳಿದ್ದಾರೆ.
ಎಕ್ಸ್ ನಲ್ಲಿ ಭಾವುಕ ಪೋಸ್ಟ್ ಹಾಕಿರುವ ಅವರು, ಇನ್ನು ನನ್ನಲ್ಲಿ ಆ ಶಕ್ತಿ ಇಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಮಹಿಳೆಯರ 50 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಘಟಾನುಘಟಿ ಪಟುಗಳನ್ನು ಸೋಲಿಸಿ ಫೈನಲ್ ತಲುಪಿದ್ದ ವಿನೇಶಾ ಪೋಗಟ್ 100 ಗ್ರಾಂ ದೇಹದ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ಪಂದ್ಯಾವಳಿಯಿಂದಲೇ ಅನರ್ಹಗೊಂಡು ಪದಕ ವಂಚಿತರಾಗಿದ್ದರು.
ಫೈನಲ್ ಹಿಂದಿನ ರಾತ್ರಿ ದಿಢೀರನೆ ಹೆಚ್ಚಾದ 2 ಕೆಜಿ ತೂಕ ಇಳಿಸಿಕೊಳ್ಳಲು ವಿನೇಶಾ ಪೋಗಟ್ ಇಡೀ ರಾತ್ರಿ ನಿದ್ದೆ ಮಾಡದೆ ಸೈಕ್ಲಿಂಗ್, ಜಾಗಿಂಗ್, ವರ್ಕ್ ಔಟ್ ಮಾಡಿದ್ದರಲ್ಲದೆ ಸಂಪೂರ್ಣ ಉಪವಾಸಕ್ಕೆ ಶರಣಾಗಿದ್ದರು. ಕೊನೆಯ ಹಂತದಲ್ಲಿ ಕೊಂಚ ರಕ್ತವನ್ನೂ ಡ್ರಾ ಮಾಡಿಸಿ, ತಲೆಕೂದಲನ್ನೂ ಟ್ರಿಮ್ ಮಾಡಿಸಿದ್ದರು. ಆದರೆ ಪರೀಕ್ಷೆಯ ಸಮಯದಲ್ಲಿ ನೂರು ಗ್ರಾಂ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ವಿನೇಶಾ ಅನರ್ಹಗೊಂಡಿದ್ದರು.
ವಿನೇಶಾ ಅನರ್ಹತೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಕ್ರೋಶದ ಅಲೆಯೇ ಎದ್ದಿತ್ತು. ವಿನೇಶಾ ಅನರ್ಹತೆ ಹಿನ್ನೆಲೆಯಲ್ಲಿ ದೊಡ್ಡ ಸಂಚು ನಡೆದಿರುವ ಕುರಿತು ಅನುಮಾನಗಳು ಎದ್ದಿದ್ದವು. ಜಗತ್ತಿನ ನಾನಾ ಕುಸ್ತಿಪಟುಗಳು ವಿನೇಶಾಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ವ್ಯಕ್ತಪಡಿಸಿದ್ದರು.ಇದೀಗ ವಿನೇಶಾ ಕುಸ್ತಿ ಕ್ರೀಡೆಯಿಂದಲೇ ವಿದಾಯ ಹೇಳಿ, ನಿರ್ಗಮಿಸಿದ್ದಾರೆ.