ಬೆಂಗಳೂರು: ರಾಜೀವ್ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕೊಟ್ಟರು. ಇದರಿಂದ ಜನರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ. ಪಕ್ಷ ನನಗೆ ಅನೇಕ ಅವಕಾಶಗಳನ್ನು ಕೊಟ್ಟಿದೆ ಎಂದು ಪ್ರಚಾರ ಸಮಿತಿಯ ನೂತನ ಅಧ್ಯಕ್ಷ ವಿನಯ್ ಕುಮಾರ ಸೊರಕೆ ತೃಪ್ತಿ ವ್ಯಕ್ತಪಡಿಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಪಕ್ಷ ನೀಡಿದ ಜವಾಬ್ದಾರಿಗಳ ಬಗ್ಗೆ ತೃಪ್ತ ಭಾವ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ನಾಯಕರು ಒಟ್ಟಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದ ಫಲಿತಾಂಶ ಬಂದಿದೆ. ಈ ಬಾರಿ ಕರ್ನಾಟಕದಲ್ಲಿ 10 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲ್ಲ. ಈ ವರದಿ ಮೋದಿಯವರಿಗೂ ತಲುಪಿದೆ. ರಾಜ್ಯದಲ್ಲಿ ಅಧಿಕಾರ ಹಿಡಿದ ಕೆಲವೇ ತಿಂಗಳಲ್ಲಿ ಭರವಸೆ ನೀಡಿದಂತೆ ಐದೂ ಗ್ಯಾರಂಟಿಗಳನ್ನು ಜಾರಿಗೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳಿಂದಾಗಿ ಶೇ.10 ರಿಂದ ಶೇ.15 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಡೈವರ್ಟ್ ಆಗಲಿವೆ. ಇದರಿಂದ ಯಾವತ್ತೂ ಕಾಣದ ಫಲಿತಾಂಶ ರಾಜ್ಯದಲ್ಲಿ ಕಾಣಲಿದ್ದೇವೆ ಎಂದರು.
ಮುಂದೆಂದೂ ಲೋಕಸಭಾ ಚುನಾವಣೆ ಬರುವುದೇ ಇಲ್ಲ ಎಂಬ ರೀತಿ ಬಿಜೆಪಿ ಈ ಬಾರಿ ವರ್ತನೆ ಮಾಡಿದೆ. AICC ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಇಬ್ಬರು ಸಿಎಂಗಳನ್ನ ಬಂಧನ ಮಾಡಿದ್ದಾರೆ ಎಂದು ಬಿಜೆಪಿಯ ದಮನಕಾರಿ ನೀತಿಯನ್ನು ಟೀಕಿಸಿದ್ದಾರೆ.