ವಿಜಯ್‌ ರಾಘವೇಂದ್ರ ನಟನೆಯ ರಿಪ್ಪನ್‌ ಸ್ವಾಮಿ ಆಗಸ್ಟ್ 29ಕ್ಕೆ ಬಿಡುಗಡೆ : ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೀಸರ್, ಟ್ರೇಲರ್..!

Most read

ಬೆಂಗಳೂರು: ಖ್ಯಾತ ನಟ ವಿಜಯ್ ರಾಘವೇಂದ್ರ ನಟಿಸಿರುವ ರಿಪ್ಪನ್ ಸ್ವಾಮಿ ಚಿತ್ರ ಆಗಸ್ಟ್ 29ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಹೆಸರು ಹೇಗೆ ಕುತೂಹಲ ಮೂಡಿಸುತ್ತದೆಯೋ ಚಿತ್ರ ಕಥೆ ಸೇರಿದಂತೆ ಚಿತ್ರ ನಿರ್ಮಾಣವೂ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ವಿಜಯ್‌ ರಾಘವೇಂದ್ರ ಚಿತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ. ವಿಭಿನ್ನ ಚಿತ್ರಕಥೆಗಳಿರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ಅವರ ನಟನೆಯ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ರಿಪ್ಪನ್ ಸ್ವಾಮಿ ಸಿನಿಮಾ ಕೂಡಾ ಅದೇ ಸಾಲಿಗೆ ಸೇರುತ್ತದೆ.

ಈ ಮೊದಲು ಮಾಲ್ಗುಡಿ ಡೇಸ್ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಯುವ ನಿರ್ದೇಶಕ ಕಿಶೋರ್ ಮೂಡಬಿದ್ರೆ ರಿಪ್ಪನ್ ಸ್ವಾಮಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ. ಸಿನಿಮಾದ ಹಾಡುಗಳೂ ಸಹ ಮತ್ತೆ ಮತ್ತೆ ಗುನುಗುನಿಸುವಂತಿವೆ.

ವಿಜಯ್ ರಾಘವೇಂದ್ರ ಅವರ ಸಿನಿ ಪಯಣದಲ್ಲಿ ರಿಪ್ಪನ್‌ ಸ್ವಾಮಿ ದಿ ಬೆಸ್ಟ್ ಸಿನಿಮಾ ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಏಕೆಂದರೆ ಕಥೆ, ಪಾತ್ರ ನಿರ್ಮಾಣ ಅಷ್ಟು ಗಟ್ಟಿಯಾಗಿದೆ. ಶ್ರಮವೂ ಅಷ್ಟೇ ಜಾಸ್ತಿ ಇದೆ. ಈಗಾಗಲೇ ಪೋಸ್ಟರ್ ಗಳಿಂದಲೇ ರಿಪ್ಪನ್‌ ಮೆಚ್ಚುಗೆಗೆ ಪಾತ್ರವಾಗಿದೆ.  ವಿಜಯ್‌ ರಾಘವೇಂದ್ರ ಅವರಲ್ಲಿ ಚಿನ್ನಾರಿ‌ ಮುತ್ತನನ್ನ ಕಂಡ ಫ್ಯಾನ್ಸ್‌ ಅವರನ್ನು ರಿಪ್ಪನ್ ಸ್ವಾಮಿ ಅವತಾರದಲ್ಲಿ ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಹೆಚ್ಚು ದಿನ ಕಾಯಬೇಕಿಲ್ಲ. ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ‌ ರಿಲೀಸ್ ಆಗುತ್ತಿದ್ದಾನೆ.

ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ರಾ ಲುಕ್ ನಲ್ಲಿ ಕಾಣಿಸಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಜೋಡಿಯಾಗಿ ಶಿವಮೊಗ್ಗ ಮೂಲದ ಕನ್ನಡ, ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿರುವ ಅಶ್ವಿನಿ ಚಂದ್ರಶೇಖರ್ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿ ನಾಡು , ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್, ಪ್ರಭಾಕರ್ ಕುಂದಾರ್, ರಂಜನ್ ಶೆಟ್ಟಿ, ಸಂತೋಷ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪಂಚಾನನ ಫಿಲಂಸ್ ನ ಚೊಚ್ಚಲ ಸಿನಿಮಾ ಕೂಡ ಹೌದು. ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತ ನೀಡಿದ್ದಾರೆ. ರಂಗನಾಥ್ ಸಿ ಎಂ ಅವರ ಕ್ಯಾಮರಾ ಕೈಚಳಕ ಮನಸೂರೆಗೊಳ್ಳುತ್ತದೆ. ಶಶಾಂಕ್ ನಾರಾಯಣ್ ಸಂಕಲನ ಮಾಡಿದ್ದಾರೆ.

More articles

Latest article