ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್ ಇಳಯದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಜೊತೆಗೆ ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಎಂಬ ಪಕ್ಷವನ್ನು ಶುಕ್ರವಾರ ಆರಂಭಿಸಿರುವ ಇಳಯದಳಪತಿ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ್ದಾರೆ.
ಈ ಕುರಿತಾದ ಹೇಳಿಕೆ ಪ್ರಕಟ ಮಾಡಿರುವ ನಟ, “ನಾವು ನಮ್ಮ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ಅನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ, ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ನಮ್ಮ ಗುರಿಯಾಗಿದೆ. ಇದನ್ನೇ ಜನರು ಬಯಸಿದ್ದಾರೆ’ ಎಂದು ತಿಳಿಸಿದ್ದಾರೆ.
ರಾಜಕಾರಣ ಎನ್ನುವುದು ನನ್ನ ಇನ್ನೊಂದು ವೃತ್ತಿಯಲ್ಲ. ಇದು ಜನರ ಪವಿತ್ರ ಕೆಲಸ ಎಂದು ಭಾವಿಸಿದ್ದೇನೆ. ನಾನು ಬಹಳ ಸಮಯದಲ್ಲಿ ರಾಜಕೀಯಕ್ಕೆ ಇಳಿಯುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದ್ದೆ. ರಾಜಕೀಯ ಎಂದಿಗೂ ನನಗೆ ಹವ್ಯಾಸವಲ್ಲ. ಇದು ನನ್ನಲ್ಲಿದ್ದ ಆಳವಾದ ಆಸೆಯಾಗಿದೆ. ನಾನು ನನ್ನನ್ನು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ ಎಂದು ದಳಪತಿ ವಿಜಯ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಅನುಮೋದನೆ ಪಡೆದ ನಂತರ, ಪಕ್ಷವು ಸಾರ್ವಜನಿಕ ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ಯೋಜಿಸುತ್ತಿದೆ, ಅಲ್ಲಿ ಅವರು ಪಕ್ಷದ ನೀತಿಗಳು, ತತ್ವಗಳು ಮತ್ತು ಕ್ರಿಯಾ ಯೋಜನೆಗಳನ್ನು ಪ್ರಸ್ತುತಪಡಿಸಲಿದ್ದೇನೆ ಮತ್ತು ಧ್ವಜ ಮತ್ತು ಪಕ್ಷದ ಚಿಹ್ನೆಯನ್ನು ಜನರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ಈ ಮೂಲಕ ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ.