ದೇವನಹಳ್ಳಿ ರೈತ ಹೋರಾಟಕ್ಕೆ ಗೆಲುವು ಸಾಧ್ಯವಾಗಿದ್ದು ಒಂದಾಗಿ ಹೋರಾಡಿದ ಮೂರು ಬಣ್ಣಗಳಿಂದ. ನಿಜಕ್ಕೂ ಇದೊಂದು ಐತಿಹಾಸಿಕ ಜಯ ಮತ್ತು ಸಂದರ್ಭ ಕೂಡ. ಇದು ಬಿಕ್ಕಟ್ಟಿನ ಕಾಲ. ಭಿನ್ನಾಭಿಪ್ರಾಯ ಬಿಟ್ಟು ಹೋರಾಡ ಬೇಕಾಗಿದೆ. ಹೀಗೆ ಹೋರಾಡಿದರೆ ಗೆಲವು ಖಚಿತ ಎನ್ನುವುದನ್ನು ದೇವನಹಳ್ಳಿ ರೈತ ಹೋರಾಟ ಸಾಬೀತು ಮಾಡಿದೆ. ಇದೇ ಐಕ್ಯತೆ ಇತರೆ ಜನಪರ ಹೋರಾಟಗಳಿಗೂ ವಿಸ್ತರಿಸಲಿ – ಚಾರ್ವಾಕ ರಾಘು, ಸಾಗರ.
ಬಹಳ ಕುತೂಹಲ ಮೂಡಿಸಿದ್ದ ದೇವನಹಳ್ಳಿ ರೈತ ಹೋರಾಟಕ್ಕೆ ಗೆಲುವಾಗಿದೆ. ಈ ಗೆಲವು ಸಿಕ್ಕಿದ್ದು ಅಲ್ಲ ಗುದ್ದಾಡಿ ಪಡೆದುಕೊಂಡಿದ್ದು. ಸುಮಾರು ಮೂರು ವರ್ಷಗಳ ಹಿಂದೆ ದೇವನಹಳ್ಳಿಯ 13 ಹಳ್ಳಿಯ ರೈತರು ನಮ್ಮ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಬಿಡೆವು ಎಂದು ಹೋರಾಟಕ್ಕೆ ಇಳಿದಿದ್ದರು. ಇವರ ಭೂಮಿಯನ್ನು ವಶಪಡಿಸಿಕೊಳ್ಳಲು ತೀರ್ಮಾನ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರ. ಆಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ರೈತ ಹೋರಾಟದ ಜಾಗಕ್ಕೆ ಹೋಗಿ ನಮ್ಮ ಸರ್ಕಾರ ಬಂದರೆ ನಿಮ್ಮ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡುತ್ತೇನೆ ಭಾಷಣ ಮಾಡಿ ಬಂದಿದ್ದರು. ಆದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆದರು. ಎರಡು ವರ್ಷವಾದರೂ ದೇವನಹಳ್ಳಿ ರೈತರ ಸಮಸ್ಯೆ ಕುರಿತು ತೀರ್ಮಾನ ತೆಗೆದುಕೊಳ್ಳಲಿಲ್ಲ. ಕುಂಟು ನೆಪ ಹೇಳಿಕೊಂಡು ಬಂದರು. ಇದಕ್ಕೆ ಮುಖ್ಯ ಕಾರಣ ಮಂತ್ರಿಗಳಾದ ಎಂ.ಬಿ.ಪಾಟೀಲ್, ಮುನಿಯಪ್ಪ ಮತ್ತು ಹಲವು ಸಂಪುಟ ಸಚಿವರು. ಇದರಲ್ಲಿ ಪ್ರಿಯಾಂಕ್ ಖರ್ಗೆ ಕೂಡ ಸೇರಿದ್ದು ಬೇಸರದ ವಿಚಾರ.
ಆದರೆ ದೇವನಹಳ್ಳಿಯ ರೈತರು ತಮ್ಮ ಭೂಮಿ ಬಿಟ್ಟು ಕೊಡುವುದಿಲ್ಲ ಎಂದು ಹಠ ಹಿಡಿದು ಕುಳಿತು ಬಿಟ್ಟರು. ಇಲ್ಲೊಂದು ವಿಷಯ ನನಗೆ ನೆನಪಿಗೆ ಬರುತ್ತಾ ಇದೆ. ಅದೇ ಟಿಪ್ಪು ಸುಲ್ತಾನ್. ಟಿಪ್ಪು ಹುಟ್ಟಿದ್ದು ಇದೇ ದೇವನಹಳ್ಳಿಯಲ್ಲಿ. ಇದೇ ಟಿಪ್ಪು ಅಧಿಕಾರಕ್ಕೆ ಬಂದಾಗ ಉಳುವವರಿಗೆ ಭೂಮಿ ಹಂಚಿ ಕರ್ನಾಟಕದಲ್ಲಿ ಮೊದಲು ಭೂ ಸುಧಾರಣೆ ಕಾಯ್ದೆಗೆ ನಾಂದಿ ಹಾಡಿದ್ದ. ಇದೇ ದೇವನಹಳ್ಳಿಯಲ್ಲಿ ತಮ್ಮ ಭೂಮಿ ಉಳಿಸಿಕೊಳ್ಳಲು ರೈತರು ಸತತ ಮೂರು ವರ್ಷಗಳ ಕಾಲ ಮಳೆ, ಚಳಿ ಬಿಸಿಲಿನಲ್ಲಿ ಹೋರಾಟ ಮಾಡಿದರೂ ಸರ್ಕಾರ ಬಗ್ಗಲಿಲ್ಲ. ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಪಕ್ಕಾ ರಿಯಲ್ ಎಸ್ಟೇಟ್ ಏಜೆಂಟರಂತೆ ವರ್ತಿಸಿದರು.
ಚಳವಳಿ ಹೊಸ ಹುಮ್ಮಸ್ಸಿನಿಂದ ಹೊಸ ರೂಪ ತಳೆಯಿತು. ಹಸಿರು, ನೀಲಿ ಕೆಂಪು ಬಣ್ಣಗಳು ಒಂದಾದವು. ಉತ್ತರದಿಂದ ರೈತ ನಾಯಕರುಗಳು ಬಂದು ಹೋರಾಟಕ್ಕೆ ಬಲ ನೀಡಿದರು. ರಾಜ್ಯದ ವಿವಿಧ ಸಂಘಟನೆಗಳು, ಕಲಾವಿದರು, ಸಾಹಿತಿಗಳು, ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿದರು. ಈ ಹೋರಾಟ ನಿಧಾನಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ರೈತಪರವಾದ ಅಭಿಪ್ರಾಯ ರೂಪುಗೊಳ್ಳಲು ಸಾಧ್ಯವಾಯಿತು. ಇದರಿಂದ ಕರ್ನಾಟಕ ಸರ್ಕಾರ ಮುಜುಗರಕ್ಕೆ ಒಳಗಾಗುವಂತೆ ಮಾಡಿತು. ಇದಾಗಲು ಮುಖ್ಯ ಕಾರಣ ಸಂಯುಕ್ತ ಹೋರಾಟ. ಜನಪರ ಹೋರಾಟಕ್ಕಾಗಿ ಹಲವಾರು ಸಂಘಟನೆಗಳು ಇದ್ದರೂ ವ್ಯಕ್ತಿವಾದ, ಕೂದಲು ಸೀಳುವ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಹರಿದು ಹಂಚಿ ಹೋಗಿದ್ದ ಸಂಘಟನೆಗಳನ್ನು ಒಂದೆ ವೇದಿಕೆಯಲ್ಲಿ ತಂದು ಹೋರಾಟಕ್ಕೆ ಸಜ್ಜುಗೊಳಿಸುವುದು ದೊಡ್ಡ ಸವಾಲು. ಆದರೆ ಈ ಸವಾಲನ್ನು ಎದುರಿಸಿ ಬಹುತೇಕರನ್ನು ಒಂದೇ ವೇದಿಕೆಗೆ ತಂದ ಸಮನ್ವಯಕಾರರು ಯಾರೇ ಇರಲಿ ಅವರಿಗೆ ಧನ್ಯವಾದ ಹೇಳಲೇ ಬೇಕು.
ಯಾವಾಗ ಹಸಿರು, ನೀಲಿ, ಕೆಂಪು ಒಂದೇ ವೇದಿಕೆಯಿಂದ ಸರ್ಕಾರದ ನಿಲುವಿನ ವಿರುದ್ಧ ಘೋಷಣೆ ಹೊರಡಿಸಿದರೋ ಸರ್ಕಾರಕ್ಕೆ ಹಿಂದಿನ ಗುಂಡೂರಾವ್ ಸರ್ಕಾರ ನರಗುಂದ ನವಲಗುಂದ ರೈತ ಬಂಡಾಯವನ್ನು ಮಣಿಸಲು ಹೋಗಿ ಪಥನಗೊಂಡಿದ್ದು ನೆನಪಾಗಿರಬೇಕು. ಇತ್ತ ಸಾಹಿತಿಗಳು, ಚಳವಳಿಗಾರರು ಸಿದ್ದರಾಮಯ್ಯ ಅವರನ್ನು ಕಟುವಾಗಿ ಟೀಕಿಸಲು ಆರಂಭಿಸಿದರು. ಸಿದ್ದರಾಮಯ್ಯನವರಿಗಿದ್ದ ಸಾರ್ವಜನಿಕವಾಗಿ ಇದ್ದ ಸಮಾಜವಾದಿ ಸಿದ್ದರಾಮಯ್ಯ ಎನ್ನುವ ಪಟ್ಟಕ್ಕೆ ಕಳಂಕ ಎದುರಾಗಲು ಆರಂಭವಾಯಿತು. ಇದನ್ನೆಲ್ಲ ಗಮನಿಸಿದ ಸಿದ್ದರಾಮಯ್ಯ ಎಚ್ಚರಿಕೆಯ ಹೆಜ್ಜೆ ಇಡಲು ಆರಂಭಿಸಿದರು. ರೈತರನ್ನು ಮಾತುಕತೆಗೆ ಕರೆದರು. ಸಮಯ ಪಡೆದರು. ಅತ್ತ ಕಾಂಗ್ರೆಸ್ಸಿನ ಕಂತ್ರಿ ಮಂತ್ರಿಗಳು ರೈತರಲ್ಲಿ ಒಡಕು ಮೂಡಿಸುವ ಹುನ್ನಾರಕ್ಕೆ ಕೈ ಹಾಕಿದರು. ಇಂತಹ ಬೆಳವಣಿಗೆಯಿಂದ ಹೋರಾಟಕ್ಕೆ ಎಲ್ಲಿ ಹಿನ್ನಡೆ ಆಗುತ್ತದೆಯೋ ಎನ್ನುವ ಆತಂಕ ಎದುರಾದರು ಸಂಯುಕ್ತ ಹೋರಾಟದ ಮೂರು ಬಣ್ಣಗಳು ಜಗ್ಗಲಿಲ್ಲ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದವು. ಮಾಸ್ ಮೀಡಿಯಾ ಮೂಲಕ ದುಪ್ಪಟ್ಟು ಜನಾಭಿಪ್ರಾಯ ಮೂಡುವಂತೆ ಮಾಡಲಾಯಿತು. ಇದೇ ಹೊತ್ತಿನಲ್ಲಿ ಕೆಲವು ಸಡೇಗಳು ಹೋರಾಟಗಾರರು ಸಿದ್ದರಾಮಯ್ಯನವರಿಂದ ಲಾಭ ಪಡೆದವರು, ಇವರು ಹೋರಾಟ ಮಾಡಿದರೆ ಸಿದ್ದರಾಮಯ್ಯ ಬಗ್ಗುತ್ತಾರೆಯೇ ಎನ್ನುವ ವಿಕೃತ ಬರಹಗಳ ಮೂಲಕ ಚಳವಳಿಗೆ ಪೆಟ್ಟು ಕೊಡಲು ಪ್ರಯತ್ನಿಸಿದರು. ಇವರ ನಂಜು ಬರವಣಿಗೆ ಮೂರು ಬಣ್ಣಗಳನ್ನು ವಿಚಲಿತಗೊಳಿಸಲಿಲ್ಲ ಬದಲಿಗೆ ಇನ್ನಷ್ಟು ಹೋರಾಟದ ಕೆಚ್ಚು ಮೂಡಿತು. ಮೂರು ಬಣ್ಣಗಳು ಕೈ ಚೆಲ್ಲಿ ಕೂರದೆ ಐಕ್ಯತೆ ಮೂಡಿಸಲು ಇನ್ನಷ್ಟು ಪ್ರಯತ್ನ ಹಾಕಿದವು. ಇದರಿಂದ ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿತು.
ಇತ್ತ ಮಂತ್ರಿಮಂಡಲದ ಬಹುತೇಕರು ಭೂ ಸ್ವಾಧೀನದ ಪರವಾಗಿ ಇದ್ದರು ಎನ್ನುವುದು ಬಲ್ಲ ಮೂಲಗಳು ಹೇಳುತ್ತವೆ. ಈ ಸಚಿವರುಗಳ ವರಸೆ ಅರಿತಿದ್ದ ಸಿದ್ದರಾಮಯ್ಯ ಅಳೆದು ಸುರಿದು ತೀರ್ಮಾನಕ್ಕೆ ಬರುವ ಸಂದರ್ಭ ಸೃಷ್ಟಿಯಾಯಿತು. ಇತ್ತ ಈ ಮೂರು ಬಣ್ಣಗಳು ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆ ಏನು ಎನ್ನುವುದನ್ನು ಬಹಳ ಎಚ್ಚರಿಕೆಯಿದ ಗಮನಿಸುತ್ತ, ಪಂಜಾಬ್ ರೈತ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿತ್ತು, ಆದರೆ ಕರ್ನಾಟಕ ದೇವನಹಳ್ಳಿ ರೈತರ ಭೂ ಸ್ವಾಧೀನವನ್ನು ನಿಮ್ಮದೆ ಸರ್ಕಾರ ಮಾಡುತ್ತಿದೆ ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಪಕ್ಷದ ಹೈ ಕಮಾಂಡಿಗೆ ಎಸೆಯಿತು. ಮೂರು ಬಣ್ಣಗಳ ಐಕ್ಯತೆ, ಸಂಘಟನಾ ಕೌಶಲ್ಯ ಕಾಂಗ್ರೆಸ್ ಹೈ ಕಮಾಂಡ್ ಮತ್ತು ಸಿದ್ದರಾಮಯ್ಯ ಸರ್ಕಾರ ಮಣಿಯುವಂತೆ ಮಾಡಿ ದೇವನಹಳ್ಳಿ ಭೂಮಿ ರೈತರ ಕೈ ತಪ್ಪದ ಹಾಗೆ ಆಯಿತು. ಸಿದ್ದರಾಮಯ್ಯ ಸಾರ್ವಜನಿಕವಾಗಿ ತಮಗೆ ಇದ್ದ ಸಮಾಜವಾದಿ ಸಿದ್ದರಾಮಯ್ಯ ಎನ್ನುವ ಪಟ್ಟ ಉಳಿಸಿಕೊಳ್ಳುವ ಅನಿವಾರ್ಯ ತೀರ್ಮಾನ ತೆಗೆದುಕೊಳ್ಳಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಗಿ ಸುದ್ದಿಗೋಷ್ಟಿ ಕರೆದು ಭೂ ಸ್ವಾಧೀನ ಕೈ ಬಿಡಲಾಗಿದೆ ಎನ್ನುವ ಹೇಳಿಕೆ ಕೊಟ್ಟರು. ಇವರ ಅಕ್ಕ ಪಕ್ಕ ಕೂತಿದ್ದ ಮಂತ್ರಿ ಮುನಿಯಪ್ಪ, ಎಂ ಬಿ ಪಾಟೀಲ್ ಮುಖ ಮರಗಟ್ಟಿತ್ತು.
ಇದು ಸಾಧ್ಯವಾಗಿದ್ದು ಒಂದಾಗಿ ಹೋರಾಡಿದ ಮೂರು ಬಣ್ಣಗಳಿಂದ ನಿಜಕ್ಕೂ ಇದೊಂದು ಐತಿಹಾಸಿಕ ಜಯ ಮತ್ತು ಸಂದರ್ಭ ಕೂಡ. ಇದು ಬಿಕ್ಕಟ್ಟಿನ ಕಾಲ. ಭಿನ್ನಾಭಿಪ್ರಾಯ ಬಿಟ್ಟು ಹೋರಾಡ ಬೇಕಾಗಿದೆ. ಹೀಗೆ ಹೋರಾಡಿದರೆ ಗೆಲವು ಖಚಿತ ಎನ್ನುವುದನ್ನು ದೇವನಹಳ್ಳಿ ರೈತ ಹೋರಾಟ ಸಾಬೀತು ಮಾಡಿದೆ. ಇದೇ ಐಕ್ಯತೆ ಇತರೆ ಜನಪರ ಹೋರಾಟಗಳಿಗೂ ವಿಸ್ತರಿಸಲಿ. ಈ ಮೂರು ಬಣ್ಣದ ನಾಯಕರು ತಮ್ಮ ತಮ್ಮ ಸಂಘಟನೆಯ ತಾಲೂಕು ಜಿಲ್ಲಾ ನಾಯಕರಿಗೆ ಒಂದಾಗಿ ಹೋರಾಡುವ ಪಾಠ ಮಾಡಿದರೆ ಒಳಿತು. ಈ ಹೋರಾಟದಲ್ಲಿ ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿದ ಜನಪರ ಮನಸ್ಸುಗಳಿಗೆ ಕನ್ನಡ ಪ್ಲಾನೆಟ್ ಮೂಲಕ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ
ಗೆಲವು ನಮ್ಮದೊ ಗೆಲವು ನಮ್ಮದೊ
ಇಂದಿಗೂ ಎಂದೆಂದಿಗೂ ಗೆಲವು ನಮ್ಮದೋ..
ಎನ್ನುವ ಹಾಡನ್ನು ಮೂರು ಬಣ್ಣಗಳು ಮತ್ತೆ ಮತ್ತೆ ಹಾಡುವಂತಾಗಲಿ.
ಚಾರ್ವಾಕ ರಾಘು, ಸಾಗರ
ಪತ್ರಕರ್ತರು, ವಕೀಲರು.
ಇದನ್ನೂ ಓದಿ- ಕೈಬಿಟ್ಟಿದ್ದು ಭೂಸ್ವಾಧೀನವನ್ನೇ ಹೊರತು ಯೋಜನೆಯನ್ನಲ್ಲ