ಉಪರಾಷ್ಟ್ರಪತಿ ಧನಕರ್ ರಾಜೀನಾಮೆಗೆ ಬೇರೆ ಏನೋ ಕಾರಣವಿದೆ: ಕಾಂಗ್ರೆಸ್‌  ಅನುಮಾನ

Most read

ನವದೆಹಲಿ: ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ ನೀಡಿರುವುದು ಅಚ್ಚರಿಗೊಳಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ. ಅವರ ರಾಜೀನಾಮೆಗೆ ಆರೋಗ್ಯ ಸಮಸ್ಯೆಗಿಂತಲೂ ಬಲವಾದ ಕಾರಣ ಇರಬಹುದು ಎಂದೂ ಶಂಕಿಸಿದೆ. ಸೋಮವಾರ ಆರೋಗ್ಯದ ಸಮಸ್ಯೆಯ ಕಾರಣಕ್ಕಾಗಿ  ಉಪ ರಾಷ್ಟ್ರಪತಿ ಸ್ಥಾನಕ್ಕೆ ಧನಕರ್‌ ರಾಜೀನಾಮೆ ನೀಡಿದ್ದರು.

ಅವರ ರಾಜೀನಾಮೆ ಕುರಿತು  ಎಕ್ಸ್‌ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್‌,  ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30ರ ನಡುವೆ ಬಹಳ ಗಂಭೀರವಾದ ಬೆಳವಣಿಗೆಗಳು ನಡೆದಿವೆ. ಧನಕರ್ ಅವರು ಸೋಮವಾರ ಮಧ್ಯಾಹ್ನ 12:30ಕ್ಕೆ ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ(ಬಿಎಸಿ) ಸಭೆ ಕರೆದಿದ್ದರು. ಈ ಸಭೆಯಲ್ಲಿ ಜೆ.ಪಿ.ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾಗವಹಿಸಿದ್ದರು. ಹಲವು ವಿಷಯಗಳನ್ನು ಕುರಿತು ಚರ್ಚೆ ನಡೆದ ನಂತರ ಸಂಜೆ 4.30ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಲಾಗಿತ್ತು. ಸಂಜೆ  4.30ಕ್ಕೆ ಧನಕರ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಮತ್ತೆ ಸಭೆ ಸೇರಿತು. ಆದರೆ ನಡ್ಡಾ ಮತ್ತು ರಿಜಿಜು ಸಭೆಗೆ ಹಾಜರಾಗಲಿಲ್ಲ. ಸಭೆಗೆ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದೂ ಅವರು ಧನಕರ್‌ ಅವರಿಗೆ ತಿಳಿಸಿರಲಿಲ್ಲ ಎಂದು ಹೇಳಿದ್ದಾರೆ.

ಅವರ ಗೈರು ಹಾಜರಿಯಿಂದ ಸಿಡಿಮಿಡಿಗೊಂಡ ಧನಕರ್‌ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಸಭೆ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದ್ದರು. ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4:30 ರ ನಡುವೆ ಬಹಳ ಗಂಭೀರವಾದ ಬೆಳವಣಿಗೆ ನಡೆದಿರುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಸಂಜೆ ನಡೆದ ಬಿಎಸಿ ಸಭೆಗೆ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿಯೇ ಹಾಜರಾಗಿರಲಿಲ್ಲ ಎಂದು ಜೈರಾಂ ರಮೇಶ್‌ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ಧನಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಅವರು ಆರೋಗ್ಯದ ಕಾರಣಗಳನ್ನು ನೀಡಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ, ಅವರ ರಾಜೀನಾಮೆಗೆ ಇದಕ್ಕಿಂತಲೂ ಬಲವಾದ ಕಾರಣಗಳಿವೆ ಎನ್ನುವುದಂತೂ ಸತ್ಯ ಎಂದು ವಿವರಣೆ ನೀಡಿದ್ದಾರೆ.

More articles

Latest article