ವಿಬಿ-ಜಿ ರಾಮ್ ಜಿ ಯೋಜನೆಯು ನರೇಗಾ ಯೋಜನೆಯಷ್ಟು ಪ್ರಯೋಜನಕಾರಿ ಅಲ್ಲ: ಸಮಾಜ ಕಲ್ಯಾಣ ಸಚಿವ ಡಾ.ಮಹದೇವಪ್ಪ

Most read

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಿರುವುದನ್ನು ವಿರೋಧಿಸಿ, ಮೈಸೂರು ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಸ್ವಾವಲಂಬನೆಯ ಮಾರ್ಗವನ್ನು ಅನುಸರಿಸುವ ಸಲುವಾಗಿ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿ ಮಾಡಿತು. ಹಳ್ಳಿಗಾಡಿನ ಜನರಿಗೆ ನಿಗದಿತ ಆದಾಯವನ್ನು ಖಾತರಿಪಡಿಸುವ ಮತ್ತು ಅವರನ್ನು ಸ್ವಾವಲಂಬಿ ಆಗಿಸುವಂತಹ ಮಹತ್ವದ ಉದ್ದೇಶ ಹೊಂದಿದ ಈ ಉದ್ಯೋಗ ಖಾತರಿ ಯೋಜನೆಗೆ ಅರ್ಹವಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಗ್ರಾಮ ಸ್ವರಾಜ್ಯದ ತತ್ವದ ಪ್ರತಿಪಾದಕ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಿತು.

ಇದೀಗ ದುರಂತ ಎಂಬಂತೆ ಕೇಂದ್ರ ಸರ್ಕಾರವು ಜನರ ಬದುಕಿಗೆ ಸದಾ ನೆರವಾಗಿರುವ ಮತ್ತು ಕರೋನಾದಂತಹ ಸಮಯದಲ್ಲಿ ಜನ ಸಾಮಾನ್ಯರ ಅನ್ನದ ಮಾರ್ಗವೇ ಆಗಿದ್ದ ಮನ್ ರೇಗಾ ಯೋಜನೆಯನ್ನು ದುರ್ಬಲಗೊಳಿಸಿ, ಯೋಜನೆಯ ಹೆಸರು ಬದಲಾಯಿಸುವ ನೆಪದಲ್ಲಿ ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೊರಿಸುವ ಕೆಲಸವನ್ನು ಮಾಡುತ್ತಿರುವ ಕೇಂದ್ರ ಸರ್ಕಾರವು ಗಾಂಧಿ ವಿರೋಧಿಯಾಗಿಯೂ ಮತ್ತು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವದ ವಿರೋಧಿಯಾಗಿಯೂ ವರ್ತಿಸುತ್ತಿದೆ‌.

ದೇಶದ ಆರ್ಥಿಕ ವ್ಯವಸ್ಥೆ ಸಮಸ್ಯೆಗೆ ಟಾನಿಕ್ ನಂತಿದ್ದ ಮನ್ ರೇಗಾ ಯೋಜನೆಯ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ, ರಾಜೀವ್ ಗಾಂಧಿಯವರ ಪಂಚಾಯತ್ ರಾಜ್ ವ್ಯವಸ್ಥೆಯಡಿ ಗ್ರಾಮ ಪಂಚಾಯತಿಗಳಿಗೆ ಇದ್ದಂತಹ ಸ್ವಾತಂತ್ರ್ಯವನ್ನು ಕಿತ್ತುಹಾಕಿ, ಜನ ವಿರೋಧಿ ಕಾರ್ಯಕ್ಕೆ ” ರಾಮನ ಯೋಜನೆ ” ಎಂದು ಹೆಸರಿಟ್ಟಿದ್ದಾರೆ. ಇಲ್ಲಿಯವರೆಗೆ ಸಂಪೂರ್ಣ ಕೂಲಿ ಪಾವತಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿತ್ತು. ರಾಜ್ಯ ಸರ್ಕಾರವು ಕೇವಲ ಸಾಮಗ್ರಿಗಳ ಒಟ್ಟಿ ವೆಚ್ಚದಲ್ಲಿ 25% ಅಷ್ಟನ್ನು ಮಾತ್ರವೇ ಭರಿಸುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರವು  ದೀಢೀರನೇ ಕರ್ನಾಟಕದಂತಹ ರಾಜ್ಯಗಳಿಗೆ 60% ಕೊಡುತ್ತೇವೆ, ಉಳಿದಂತೆ 40% ಹಣವನ್ನು ರಾಜ್ಯಗಳು ಕೊಡಬೇಕೆಂಬ ಬಾಂಬ್ ಅನ್ನು ಹಾಕಿದ್ದು ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹಾಕಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ವಿಪರೀತ ತೆರಿಗೆ ಸಂಗ್ರಹ ಮಾಡಿಯೂ ಕೂಡಾ, ಮತ್ತೆ ಮತ್ತೆ ರಾಜ್ಯಗಳ ಮೇಲೆ ಮತ್ತೆ ಮತ್ತೆ ಆರ್ಥಿಕ ಹೊರೆಯನ್ನು ಹಾಕುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಮನ್ ರೇಗಾ ಯೋಜನೆಯ ಮೂಲ ಸ್ವರೂಪವನ್ನು ಬದಲಿಸದೇ, ಗಾಂಧೀಜಿಯ ಹೆಸರನ್ನು ಯೋಜನೆಗೆ ಮರು ನಾಮಕರಣ ಮಾಡುವ ಮೂಲಕ ತಮ್ಮ ದೇಶ ವಿರೋಧಿ ನಡವಳಿಕೆಗೆ ಕಡಿವಾಣ ಹಾಕಲಿ ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಮೂರ್ತಿ ಅವರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯಕುಮಾರ್ ಅವರು, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್ ಅವರು ಉಪಸ್ಥಿತರಿದ್ದರು

More articles

Latest article