ಕಲ್ಬುರ್ಗಿ : ರಾಜ್ಯದ ಬರಪರಿಹಾರ ಸಂಬಂಧಿಸಿದಂತೆ ಕೇಂದ್ರದ ಬಳಿ 18,174 ಕೋಟಿ ರೂ. ನೀಡುವಂತೆ ಮನವಿ ಮಾಡಿದ್ದೆವು. ಆದರೆ, ನಾವು ಕೇಳಿದ್ದಕ್ಕಿಂತ 1/4 ಕ್ಕಿಂತಲೂ ಬರಪರಿಹಾರ ಕಡಿಮೆ ಇದೆ. 3,454 ಕೋಟಿ ರೂ. ಪರಿಹಾರ ಎಲ್ಲಿ ಸಾಲುತ್ತದೆ? ಅಧಿಕಾರಿಗಳ ಜೊತೆ ಚರ್ಚಿಸಿ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಲಬುರಗಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, “ದೇಶದಲ್ಲಿ ಇದೇ ಮೊದಲ ಬಾರಿಗೆ ಬರಪರಿಹಾರ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದೆವು. ಸುಪ್ರೀಂ ಕೋರ್ಟ್ ತಿಳಿಸಿದ ಮೇಲೂ ಇಷ್ಟು ಕಡಿಮೆ ಪರಿಹಾರ ಕೊಟ್ಟಿದೆ” ಎಂದು ಅಸಮಾಧಾನಗೊಂಡರು.
”ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರಗಳು ಬರುವುದು ಸರಿಯಲ್ಲ, ಕೂಡಲೇ ಸರಿಪಡಿಸಿಕೊಳ್ಳಿ ಎಂದಿದೆ. ಈ ಸಂಬಂಧ ನಾಳೆ ವಿಚಾರಣೆ ಇದೆ” ಎಂದರು.
ಪ್ರಧಾನಿ ಅವರು ಸುಳ್ಳು ಹೇಳುತ್ತಿದ್ದಾರೆ
ಹಿಂದುಳಿದ ವರ್ಗ, ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರ ಮೀಸಲಾತಿ ಕಾನೂನಾತ್ಮಕ ಎಂಬುದು ಗೊತ್ತಿದ್ದರೂ, ರಾಜಕೀಯವಾಗಿ ಹತಾಶರಾಗಿ ಪ್ರಧಾನಿ ಅವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಧೋರಣೆಯನ್ನು ನಾನು ಖಂಡಿಸುತ್ತೇನೆ ಎಂದರು.
ಹಿಂದುಳಿದ ವರ್ಗಗಳ ಮೀಸಲಾತಿ ಮುಸ್ಲಿಂರಿಗೆ ಕೊಟ್ಟಿದ್ದಾರೆ ಎಂದು ಪ್ರಧಾನಿ ಹೇಳುತ್ತಿರುವುದು ಅತ್ಯಂತ ಸುಳ್ಳು. ಮತಗಳನ್ನು ಧ್ರುವೀಕರಣಗೊಳಿಸಲು ಸುಳ್ಳು ಹೇಳಿ ಮೋದಿಯವರು ಸಂವಿಧಾನದ ಧೈಯೋದ್ದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಹೇಳಿದರು.