Saturday, December 7, 2024

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ವರ್ಟಿಕಲ್‌ ಗಾರ್ಡನ್‌  ಅನಾವರಣ

Most read

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ -2 ನಲ್ಲಿ ‘ಟೈಗರ್ ವಿಂಗ್ಸ್’ ಶೀರ್ಷಿಕೆಯ “ವರ್ಟಿಕಲ್‌ ಗಾರ್ಡನ್‌”ಅನಾವರಣಗೊಂಡಿದೆ. ಫ್ರೆಂಚ್ ದೇಶದ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಕೇಂದ್ರದೊಂದಿಗೆ ಗುರುತಿಸಿಕೊಂಡಿರುವ ವಿಶ್ವದರ್ಜೆಯ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಅವರ ಸಹಯೋಗದೊಂದಿಗೆ ಈ ವರ್ಟಿಕಲ್‌ ಗಾರ್ಡನ್‌ಅನ್ನು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಟರ್ಮಿನಲ್ -2 (T2) ನಲ್ಲಿ ನಿರ್ಮಿಸಿರುವ ಈ ವರ್ಟಿಕಲ್‌ ಗಾರ್ಡನ್‌ 30 ಅಡಿ ಎತ್ತರ ಹಾಗೂ 160 ಅಡಿ ಅಗಲ (2 ಗೋಡೆಗಳಿದ್ದು, ಪ್ರತಿ ಗೊಡೆ 80 ಅಡಿ ಅಗಲವಿದೆ) ದಲ್ಲಿ ವಿಸ್ತೃತವಾಗಿ ಬೆಳೆಸಲಾಗಿದೆ.

ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿದ್ದು ಇದೇ ಮೊದಲು. ಮೂಲಭೂತ ಸೌಕರ್ಯಗಳೊಂದಿಗೆ ಪ್ರಕೃತಿಯನ್ನು ಸೆರೆ ಹಿಡಿದಂತ ಸುಂದರ ದೃಶ್ಯಾವಳಿಂದ ಈ ಗೋಡೆ ಉದ್ಯಾನ ಕಂಗೊಳಿಸಲಿದೆ.  ‘ಟೈಗರ್ ವಿಂಗ್ಸ್’ ನ ಈ ವರ್ಟಿಕಲ್‌ ಗಾರ್ಡನ್‌ 153 ವಿವಿಧ ಜಾತಿಗಳ 15,000 ಕ್ಕೂ ಹೆಚ್ಚು ಸಸ್ಯಗಳಿಂದ ನಿರ್ಮಿಸಲಾಗಿದೆ. ಪ್ಯಾಟ್ರಿಕ್‌ ಬ್ಲಾಂಕ್‌ ಅವರು ಕರ್ನಾಟಕ ಸೇರಿದಂತೆ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಕಾಡುಗಳಿಗೆ ತೆರಳಿ, ಅಪರೂಪದ ಆಯ್ದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿ, ಈ ಲಂಬ ಉದ್ಯಾನವನ್ನು ನಿರ್ಮಿಸಿದ್ದಾರೆ.

ಈ ಗೋಡೆ ಉದ್ಯಾನವನ್ನು ಮಣ್ಣು ರಹಿತವಾಗಿ ನಿರ್ಮಿಸಲಾಗಿದ್ದು, ಈ ತಂತ್ರಜ್ಞಾನವನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಮತ್ತೊಂದು ವಿಶೇಷವೆಂದರೆ, ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಶಕ್ತಿ ಮತ್ತು ಅದರ ಗಾಂಭೀರ್ಯತೆಯನ್ನು ಪ್ರತಿಬಿಂಬಿಸುವಂತೆ ಈ ಗೋಡೆ ಉದ್ಯಾನ ನಿರ್ಮಾಣಗೊಂಡಿದೆ. ಅದಕ್ಕಾಗಿಯೇ ಈ ವರ್ಟಿಕಲ್‌ ಗಾರ್ಡನ್‌ಗೆ ‘ಟೈಗರ್ ವಿಂಗ್ಸ್’ ಎಂದು ಹೆಸರಿಡಲಾಗಿದೆ.  ಶತಾವರಿ ಸಸ್ಯಗಳು ವಿಮಾನದ ರೆಕ್ಕೆಗಳ ಸಿಲೂಯೆಟ್ ಅನ್ನು ಗುರುತಿಸುತ್ತದೆ, ಇನ್ನು, ಕೆಂಪು, ಕಿತ್ತಳೆ, ಹಳದಿ ಮತ್ತು ಬಿಳಿ ಇಕ್ಸೋರಾ ಹೂವುಗಳು ಹುಲಿ ಬಣ್ಣಗಳನ್ನು ಪ್ರತಿನಿಧಿಸುತ್ತವೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, “ಬೆಂಗಳೂರಿನಲ್ಲಿ ಸುಸ್ಥಿರತೆ, ಕಲಾತ್ಮಕತೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ದೃಷ್ಟಿಕೋನವನ್ನು ತರಲು ಬಯಸಿದ್ದೇವೆ. ಬಿಎಲ್‌ಆರ್‌ ವಿಮಾನ ನಿಲ್ದಾಣದಲ್ಲಿ ಪ್ಯಾಟ್ರಿಕ್‌ ಅವರ ಹೊಸ ವಿಧಾನದಿಂದ ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳನ್ನು ಬೆಳೆಯುವಂತೆಯೇ ಬೆಳೆಯಲು ಅನುವು ಮಾಡಿಕೊಟ್ಟಿದೆ ಎಂದಿದ್ದಾರೆ.

ಟರ್ಮಿನಲ್ 2 ನಾಲ್ಕು ಮೂಲ ತತ್ವಗಳಿಂದ ನಿರ್ಮಿಸಲ್ಪಟ್ಟಿದೆ,  ಉದ್ಯಾನವದಲ್ಲಿ ಟರ್ಮಿನಲ್, ತಂತ್ರಜ್ಞಾನ, ಕಲೆ ಮತ್ತು ಸುಸ್ಥಿರತೆ ಈ ನಾಲ್ಕು ತತ್ವಗಳ ಮೂಲಕ ಬೆಂಗಳೂರಿನ ನೈಜ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.

ಹೆಸರಾಂತ ಸಸ್ಯಶಾಸ್ತ್ರಜ್ಞ ಪ್ಯಾಟ್ರಿಕ್ ಬ್ಲಾಂಕ್ ಮಾತನಾಡಿ, “ಟೈಗರ್ ವಿಂಗ್ಸ್” ಪ್ರಕೃತಿ ಮತ್ತು ವಾಸ್ತುಶಿಲ್ಪದ ನಡುವಿನ ಸಂಬಂಧವನ್ನು ಸಾಕಾರಗೊಳ್ಳುವ ಸ್ವಪ್ನವಾಗಿದೆ. ವಿಶೇಷವಾದ ಭಾವನೆಯನ್ನು ಬಳಸಿಕೊಳ್ಳುವ ಮೂಲಕ, ಪ್ರಕೃತಿಯ ಮಡಿಲಿನಲ್ಲಿ ಸಸ್ಯಗಳು ಬೆಳೆಯುವ ವಾತಾವರಣವನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಅನುಭವವನ್ನು ಇನ್ನಷ್ಟು ಉಲ್ಲಾಸಗೊಳಿಸಲಿದೆ. ನಮ್ಮ ಸುತ್ತಲೂ ಪರಿಸರವೇ ತುಂಬಿರುವ ಸಂತಸ ನೀಡಲಿದೆ ಎಂದು ಹೇಳಿದ್ದಾರೆ.

More articles

Latest article