ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವುಲಾರ್ ವೀವ್ ಪಾಯಿಂಟ್ ಬಳಿ ಇಂದು ಸೇನಾ ವಾಹನವೊಂದು ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಐವರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಸಾವನಪ್ಪಿದ್ದಾರೆ. ಇನ್ನುಳಿದ ಮೂವರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಂಡಿಪೋರಾದ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷ ಡಾ. ಮಸರತ್ ಇಕ್ಬಾಲ್ ವಾನಿ ಹೇಳಿದ್ದಾರೆ.
ಕಳೆದ ವಾರವೂ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೇನಾ ವಾಹನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಪರಿಣಾಮ ಕರ್ನಾಟಕದ ಮೂವರು ಸೇರಿದಂತೆ ಐವರು ಯೋಧರು ಸಾವನ್ನಪ್ಪಿದ್ದರು. ವಾಹನದ ಚಾಲಕ ಸೇರಿದಂತೆ ಇತರ ಐವರು ಗಂಭೀರ ಗಾಯಗೊಂಡಿದ್ದರು. ಒಂದು ವಾರದ ಅವಧಿಯಲ್ಲಿ ಅದೇ ಮಾದರಿಯ ಮತ್ತೊಂದು ಘಟನೆ ನಡೆದಿದೆ.