ಬೀದರ್: ವೀರಶೈವ ಲಿಂಗಾಯತ ಎನ್ನುವ ಪದ ಕುರಿತು ವಚನ ಸಾಹಿತ್ಯದಲ್ಲಿ ಎಲ್ಲಿಯೂ ಉಲ್ಲೇಖ ಇಲ್ಲ. ವೀರಶೈವ ಲಿಂಗಾಯತ ಎನ್ನುವ ಪದವೇ ಅವೈಜ್ಞಾನಿಕ, ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಒಳ ಪಂಗಡ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 22, ಸೋಮವಾರದಿಂದ ಆರಂಭವಾಗಲಿರುವ ಸಮೀಕ್ಷೆಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ, ಜಾತಿಯ ಕಾಲಂನಲ್ಲಿ ಲಿಂಗಾಯತ ಬಣಜಿಗ, ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಂಬಾರ, ಲಿಂಗಾಯತ ಹಡಪದ ಸೇರಿದಂತೆ ತಮ್ಮ ತಮ್ಮ ಪಂಗಡಗಳನ್ನು ಬರೆಸಬಹುದು. ಹೀಗೆ ಲಿಂಗಾಯತದಲ್ಲಿ ಒಟ್ಟು 97 ಒಳಪಂಗಡಗಳಿವೆ ಎಂದು ತಿಳಿಸಿದರು.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವುದಕ್ಕೆ ಅನೇಕ ಆಧಾರಗಳಿವೆ. 1871ರ ಜನಗಣತಿ ಸಂದರ್ಭದ ದಾಖಲಾತಿಗಳಲ್ಲೂ ಲಿಂಗಾಯತ ಧರ್ಮ ಇರುವುದನ್ನು ಕಾಣಬಹುದಾಗಿದೆ. ದೇಶದಲ್ಲಿ ಆರು ಧರ್ಮಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದೆ. ಲಿಂಗಾಯತಕ್ಕೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಹಿಂದೂ ಧರ್ಮದ ಬಗ್ಗೆ ನಮಗೂ ಗೌರವ ಇದೆ. ಎನ್ನುವುದರ ಬಗ್ಗೆ ಅಭಿಮಾನ ಇದೆ. ಭೌಗೋಳಿಕವಾಗಿ, ಜೀವನಪದ್ಧತಿ ಅನುಸರಿಸುತ್ತಿರುವುದರಿಂದ ಜೈನರು, ಬೌದ್ಧರು, ಕ್ರೈಸ್ತರು, ಸಿಖ್ಖರು ಹಿಂದೂಗಳು. ಆದರೆ, ಅವರು ಅವರ ಧರ್ಮದ ಕಾಲಂನಲ್ಲಿ ಅವರ ಧರ್ಮದ ಹೆಸರನ್ನು ಬರೆಸುತ್ತಾರೆ. ಅದೇ ರೀತಿ ಲಿಂಗಾಯತರು ಕೂಡ ಲಿಂಗಾಯತ ಎಂದೇ ಬರೆಸಬೇಕು ಎಂದರು.
ವೀರಶೈವ ಪದದ ವಿರುದ್ಧ ಮೊಕದ್ದಮೆ ಇದೆ:
‘2002ನೇ ಇಸಾಲಿಗೂ ಮುನ್ನ ಲಿಂಗಾಯತರ ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದಷ್ಟೇ ಇದೆ. ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಗಣ್ಯರ ದಾಖಲಾತಿಗಳಲ್ಲಿ ಲಿಂಗಾಯತ ಎಂದಷ್ಟೇ ಇದೆ. ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ದಾಖಲಾತಿ ಕಂಪ್ಯೂಟರೀಕರಣ ಆದಾಗ ಉದ್ದೇಶಪೂರ್ವಕವಾಗಿ ವೀರಶೈವ ಪದ ಸೇರಿಸಲಾಗಿದೆ. ಇದರ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾ ಈಗಾಗಲೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ ಎಂದು ತಿಳಿಸಿದರು.