ವೀರಪ್ಪ ಮೊಯಿಲಿಯವರು ಕರಾವಳಿಗೆ ಬಂದು ಫಲಾನುಭವಿಗಳಿಗೆ ಭೂ ಮಸೂದೆಯ ದಿನಗಳನ್ನು ನೆನಪಿಸಬೇಕು

Most read

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವೀರಪ್ಪ ಮೊಯಿಲಿಯವರು ಇದ್ದಾರೆ. ಈಗ ಕರಾವಳಿಯ ಹಿಂದುಳಿದ ವರ್ಗದವರು ಆರೆಸ್ಸೆಸ್ಸಿನ ಹಿಂದುತ್ವದ ದ್ವೇಷ-ಪ್ರೇಮದಲ್ಲಿ ಮುಳುಗಿರುವುದರಿಂದ ಅವರಿಗೆ ಇಂದಿರಾ ಗಾಂಧಿ-ದೇವರಾಜ ಅರಸರ ಕಾಲದ ಕಾಂಗ್ರೆಸ್ ಪಕ್ಷವು ಇಲ್ಲಿಯ ಭೂರಹಿತ ಕೃಷಿ ಕಾರ್ಮಿಕರನ್ನು ನೇರ ಭೂ-ಒಡೆಯರನ್ನಾಗಿ ಮಾಡಿದ ಮಧುರ ಸನ್ನಿವೇಶವನ್ನು ಮತ್ತೊಮ್ಮೆ ನೆನಪು ಮಾಡಿಕೊಡುವ ಅಗತ್ಯವಿದೆ. ಹಾಗಾಗಿ ಕಡೆ ಪಕ್ಷ ತಮ್ಮ ತವರು ನೆಲ ಕರಾವಳಿಯಲ್ಲಾದರೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಅವರು ಹೋಗಬಹುದು.  50 ವರ್ಷದಷ್ಟು ಕಾಲ ಕಾಂಗ್ರೆಸ್ಸಿನ ಉಪ್ಪು ತಿಂದ ಋಣ ತೀರಿಸುವುದಕ್ಕೆ ಇದು ಒಳ್ಳೆಯ ಸಂದರ್ಭ ಪ್ರವೀಣ್‌ ಎಸ್‌ ಶೆಟ್ಟಿ

ದ.ಕ. ಜಿಲ್ಲೆಯಲ್ಲಿ ಬಿ‌ಜೆ‌ಪಿಯಿಂದ ನಿಂತಿರುವ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟರು ಉದರ ನಿರ್ವಹಣೆಗಾಗಿ 8 ವರ್ಷ ಸೇನಾಪಡೆಯಲ್ಲಿ ಸೇವೆ ಮಾಡಿ ಬಂದಿರುವುದು ನಿಜ. ಆದರೆ ಕಂಬಳ, ಲಿಟ್-ಫೆಸ್ಟ್ ಮತ್ತು ಗಿಡ ನೆಡುವ ಅಭಿಯಾನದ ಹೊರತು ಬೇರೆ ದೊಡ್ಡ ಸಮಾಜ ಸೇವೆಗಾಗಿ ಅವರು ಗುರುತಿಸಿ ಕೊಂಡಿಲ್ಲ.

ನಗರವಾಸಿ ಬಂಟ ಮತದಾರರು ತಮ್ಮ ಜಾತಿಯ ಅಭಿಮಾನದಿಂದ ಕ್ಯಾ. ಚೌಟರಿಗೆ ಸಾರಾಸಗಟು ಓಟು ಕೊಡುತ್ತಾರೆ ಎಂದು ನನ್ನ ಸಂಬಂಧಿಕರ ಮೂಡ್ ನೋಡಿ ನಾನು ಹೇಳಬಲ್ಲೆ. ಇದೇ ರೀತಿ ಬಿಲ್ಲವರೂ ತಮ್ಮ ಜಾತಿಯ ಅಭ್ಯರ್ಥಿಗೆ ಸ್ವಜಾತಿ ಅಭಿಮಾನದಿಂದ ಯಾಕೆ ಮತ ಕೊಡಬಾರದು?

ದ.ಕ ಜಿಲ್ಲೆಯಲ್ಲಿ ಈಗ ಹಿಂದುತ್ವ ಅರ್ಥ ಕಳೆದುಕೊಂಡಿದೆ.  ಸಿದ್ರಾಮಯ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಲಪಂಥೀಯರಿಂದ ಭಯಂಕರ ಆಪಪ್ರಚಾರ, ಕೆಟ್ಟ ಬೈಗಳು ಮತ್ತು ನಿರಂತರ ಟ್ರೋಲಿನ ಹೊರತಾಗಿಯೂ ಈ ಗ್ಯಾರಂಟಿ ಯೋಜನೆಗಳಿಂದ ಲಾಭ ಪಡೆದ ಹಿಂದುಳಿದ ವರ್ಗದ ಹೆಂಗಸರೆಲ್ಲಾ ಈ ಬಾರಿ ಸಿದ್ರಾಮಣ್ಣ ಹೇಳಿದ ಅಭ್ಯರ್ಥಿಗೆನೇ ತಾವು ಓಟು ಹಾಕುವುದು ಎಂದು ಹೇಳುತ್ತಿದ್ದಾರೆ. ದ.ಕ ದಲ್ಲಿ ಒಂದು ಲಕ್ಷ ಮತದಾರರನ್ನು ಹೊಂದಿರುವ ಮೊಗವೀರ ಸಮುದಾಯದಲ್ಲಿ  ಮಹಿಳೆಯರು ಹೆಚ್ಚಾಗಿ ಈಗ ಕಾಂಗ್ರೆಸ್ಸಿನತ್ತ ಸಹಾನುಭೂತಿ ಹೊಂದಿದ್ದಾರೆ. ಇದು ಬಿ‌ಜೆ‌ಪಿಯವರ ನಿದ್ದೆಗೆಡಿಸಿದೆ. ಹಿಂದುತ್ವದ ಮೊತ್ತಮೊದಲ ಪ್ರಯೋಗ ಶಾಲೆಯಾದ ನಮ್ಮ ಕರಾವಳಿ ಈಗ ಹೊಸ ದಿಕ್ಕಿನತ್ತ ಆಲೋಚಿಸುವ ಸಾಮಾರ್ಥ್ಯ ಗಳಿಸಿದೆ.  ಉತ್ತರ ಭಾರತದಲ್ಲಿರುವ ದೇವರ ಮೂರ್ತಿಯನ್ನು ತೋರಿಸಿ ಇನ್ನು ದಕ್ಷಿಣ ಭಾರತದ ಮತದಾರರನ್ನು ಮಂಗ ಮಾಡುವುದು ಸಾಧ್ಯವಿಲ್ಲ.

ಪದ್ಮೆರಾಜ್‌ ಮತ್ತು ಬೃಜೇಶ್ ಚೌಟ

ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ವಿಪರ್ಯಾಸವೆಂದರೆ ಬಿಲ್ಲವರೆ ಬಿಲ್ಲವ ಅಭ್ಯರ್ಥಿಗೆ ಮತ ಕೊಡುವುದಿಲ್ಲ. ಹಿಂದುತ್ವದ ಅಮಲಿನಲ್ಲಿ ಮುಳುಗಿ ಹೋಗಿರುವ ಬಿಲ್ಲವ ಮತದಾರರು ಕೋಮು ದ್ವೇಷ ಸಾಧಿಸಿ ಜೈಲಿಗೆ ಹೋಗಬಲ್ಲರು, ಆದರೆ ತಮ್ಮದೇ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಡಲಾರರು. ಬಿಲ್ಲವ ಯುವಕರಿಗೆ ಮೇಲ್ಜಾತಿ ಬಂಟ ಬ್ರಾಹ್ಮಣ ಜೈನರ ಹಿಂದೆ ಇರುವುದರಲ್ಲೇ ಹೆಚ್ಚು ಆನಂದ ಸಿಗುತ್ತದೆಯೆನೋ. ದ.ಕ ಜಿಲ್ಲೆಯಲ್ಲಿ ಒಟ್ಟು 18 ಲಕ್ಷ ಮತದಾರರಿದ್ದು ಅದರಲ್ಲಿ ಮುಸ್ಲಿಂ ಮತ್ತು ಬಿಲ್ಲವರು ತಲಾ ಮೂರೂ ಮುಕ್ಕಾಲು ಲಕ್ಷ ಇದ್ದಾರೆ. ಆದರೆ ಬಂಟರು ಇರುವುದು ಕೇವಲ ಒಂದೂಕಾಲು ಲಕ್ಷ ಮಾತ್ರ. ಆದರೂ ಹಿಂದಿನ 15 ವರ್ಷದಿಂದ ಇಲ್ಲಿ ಬಂಟ ಜಾತಿಯ ಅಭ್ಯರ್ಥಿಯೇ ಗೆಲ್ಲುತ್ತಿರುವುದು ಆಶ್ಚರ್ಯ.        

1974 ರಲ್ಲಿ ದೇವರಾಜ ಅರಸು ಮತ್ತು ಇಂದಿರಾ ಗಾಂಧಿಯವರ ಭೂಸುಧಾರಣಾ ಕಾಯ್ದೆ ಅಡಿ ಕರಾವಳಿಯಲ್ಲಿ ಅತಿ ಹೆಚ್ಚು ಲಾಭ ಪಡೆದವರು ಬಿಲ್ಲವ ಸಮುದಾಯದ ಕೃಷಿ ಕಾರ್ಮಿಕರು. ಆಗ ಸಾವಿರಾರು ಬಿಲ್ಲವ ಕುಟುಂಬಗಳು ತಾವು ಕನಸಿನಲ್ಲಿಯೂ ಊಹಿಸದಿದ್ದ ಭೂಮಾಲೀಕರಾದರು. ನಾಲ್ಕು ದಶಕಗಳ ಆನಂತರ ಅವರ ಮಕ್ಕಳು-ಮೊಮ್ಮಕ್ಕಳು ಇದೇ ಭೂಮಿಯನ್ನು ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಮಾರಿ ಈಗ ಕೋಟ್ಯಾಧಿಶರಾಗಿದ್ದಾರೆ.  ಆದರೆ ತಮ್ಮ ಈ ಶ್ರೀಮಂತಿಕೆಗೆ ಮೂಲ ಕಾರಣ ದೇವರಾಜ ಅರಸು ಮತ್ತು ಇಂದಿರಾ ಗಾಂಧಿಯವರ ದೂರದೃಷ್ಟಿಯ ಭೂ ಸುಧಾರಣಾ ಕಾಯ್ದೆ ಎಂಬುದನ್ನೇ ಮರೆತು, “ಕಾಂಗ್ರೆಸ್ ನವರು ನಮಗಾಗಿ ಏನು ಮಾಡಿದ್ದಾರೆ,  ನಮ್ಮ ತಂದೆ-ಅಜ್ಜನವರು ನಮಗಾಗಿ ಏನು ಮಾಡಿದ್ದಾರೆ”? ಎಂದು ಪ್ರಶ್ನಿಸಿ ಪಿತೃದ್ರೋಹ ಮಾಡಿ ತಮ್ಮ ಘೋರ ಮರೆಗುಳಿತನ ತೋರಿಸುತ್ತಿದ್ದಾರೆ.  ದೇವರಾಜ ಅರಸರ ಕಾಂಗ್ರೆಸ್ ಸರಕಾರದ ಉಪಕಾರ ಮರೆತು ಈಗಿನ ಪೀಳಿಗೆಯ ಯುವ ಬಿಲ್ಲವರು ಹಿಂದುತ್ವದ ಕಾಲಾಳುಗಳಾಗಿ ಕೋಮು ದ್ವೇಷ ಸಾಧಿಸುತ್ತಾ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ.  ಮುಸ್ಲಿಮರ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ಉದ್ಯೋಗ ವ್ಯಾಪಾರ ಮಾಡಿ ಸಾಕಷ್ಟು ಹಣ ಗಳಿಸಿ ಬಂದವರಲ್ಲೂ ಕೋಮು ದ್ವೇಷ ಇರುವುದು ವಿಪರ್ಯಾಸ. 

ಇಂದಿರಾ ಮತ್ತು ದೇವರಾಜ ಅರಸು

1974 ರಲ್ಲಿ ಭೂ ಸುಧಾರಣೆ ಕಾಯ್ದೆಯಡಿ ಲಾಭ ಪಡೆದವರು ಕೇವಲ ಬಿಲ್ಲವರು ಮಾತ್ರವಲ್ಲ. ಅನೇಕ ಇತರ ಜಾತಿಗಳ ಕೃಷಿ ಕಾರ್ಮಿಕರೂ ಈ ಕಾಯ್ದೆಯ ಲಾಭ ಪಡೆದಿದ್ದಾರೆ.  ಬಿಲ್ಲವರ ಆ ನಂತರ ಭೂ ಸುಧಾರಣೆ ಕಾಯ್ದೆಯ ಅತಿ ಹೆಚ್ಚು ಲಾಭ ಪಡೆದವರು ಬಂಟ ಜಾತಿಯ ಕೃಷಿ ಕಾರ್ಮಿಕರು ಎಂಬ ಸತ್ಯ ಈಗ ಅನೇಕರು ಮರೆತಿರಬಹುದು.  ಭೂರಹಿತ ಬಂಟ ರೈತರು ಜೈನ ಬ್ರಾಹ್ಮಣ ಅಥವಾ ತಮ್ಮದೇ ಬಂಟ ಜಾತಿಯ ಜಮೀನುದಾರರಲ್ಲಿ ಕೃಷಿ ಕಾರ್ಮಿಕರಾಗಿದ್ದರು. ಆಗ ಅನೇಕ ಬಡ ಬಂಟ ರೈತರೂ ಜೈನ-ಬ್ರಾಹ್ಮಣ-ಧನಿಕ ಬಂಟರಲ್ಲಿ ಗೇಣಿ-ಜೀತ ಮಾಡುತ್ತಿದ್ದವರು ಹೊಸ ಭೂ ಸುಧಾರಣಾ ಕಾಯ್ದೆಯಡಿ ತಾವೇ ಸ್ವತಃ ಭೂಮಾಲೀಕರಾದರು.

ಇಂತಹಾ ಬಂಟ ರೈತರ ಮಕ್ಕಳು-ಮೊಮ್ಮಕ್ಕಳು ಇಂದಿಗೂ ದೇವರಾಜ ಅರಸು-ಇಂದಿರಾ ಗಾಂಧಿಯವರ ಉಪಕಾರವನ್ನು ಮರೆತಿಲ್ಲ. ಇವರು ಈಗಲೂ ಕಾಂಗ್ರೆಸ್ಸಿಗೇ ಮತ ಕೊಡುತ್ತಾರೆ.  ನಾನೇ ನೋಡಿರುವಂತೆ ಇವರು ತಮ್ಮ ಮನೆಯಲ್ಲಿ ಈಗಲೂ ಗಾಂಧೀಜಿ, ನೆಹರು, ಇಂದಿರಾಜಿಯವರ ಫೋಟೋಗಳನ್ನು ಇಟ್ಟುಕೊಂಡಿದ್ದಾರೆ. ಇದುವೇ ಬಿಲ್ಲವ ಮತ್ತು ಬಂಟ ಕೃಷಿಕರ ನಡುವಿನ “ಕೃತಜ್ಞತೆ ಮತ್ತು ಕೃತಘ್ನತೆಯ” ವ್ಯತ್ಯಾಸ.

84 ವರ್ಷದ ವೀರಪ್ಪ ಮೊಯ್ಲಿಯವರು ಚುನಾವಣಾ ರಾಜಕೀಯದಿಂದ ನಿವೃತ್ತರಾದರು ನಿಜ. ಆದರೆ ಅವರು ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇನ್ನೂ ಇದ್ದಾರೆ.  ಹಾಗಾಗಿ ಕಡೆ ಪಕ್ಷ ತಮ್ಮ ತವರು ನೆಲ ಕರಾವಳಿಯಲ್ಲಾದರೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಅವರು ಹೋಗಬಹುದು.  50 ವರ್ಷದಷ್ಟು ಕಾಲ ಕಾಂಗ್ರೆಸ್ಸಿನ ಉಪ್ಪು ತಿಂದ ಋಣ ತೀರಿಸುವುದಕ್ಕೆ ಇದು ಒಳ್ಳೆಯ ಸಂದರ್ಭ. ಇವರು ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು.

ವೀರಪ್ಪ ಮೊಯಿಲಿ

ದೇವರಾಜ ಅರಸು-ಇಂದಿರಾ ಗಾಂಧಿಯವರ ಭೂ ಸುಧಾರಣೆ ಕಾಲದ ಕಾಂಗ್ರೆಸ್ಸಿಗರಲ್ಲಿ ಕರಾವಳಿಯಲ್ಲಿ ಈಗ ಬದುಕಿರುವುದು ಮೊಯ್ಲಿ ಮತ್ತು ಜನಾರ್ಧನ ಪೂಜಾರಿ ಮಾತ್ರ.  ಜನಾರ್ಧನ ಪೂಜಾರಿಯವರಿಗೆ ಅನಾರೋಗ್ಯದಿಂದ ಮನೆಯಿಂದ ಹೊರಗೆ ಹೋಗಲಾಗುತ್ತಿಲ್ಲ. ಪುಣ್ಯಕ್ಕೆ ಮೊಯ್ಲಿಯವರ ಆರೋಗ್ಯ ಉತ್ತಮವಾಗಿದೆ. ಹಾಗಾಗಿ ಅವರು ಕರಾವಳಿಯಲ್ಲಿ ಹಳ್ಳಿ-ಹಳ್ಳಿಗೆ ಹೋಗಿ ಪ್ರಚಾರ ಮಾಡಿದರೆ 1974 ರ ದೇವರಾಜ ಅರಸರ ಭೂ ಕಾಯ್ದೆಯಿಂದ ಲಾಭ ಪಡೆದ ಕುಟುಂಬದವರಿಗೆಲ್ಲಾ ತಮ್ಮ ಹಳೆಯ ತಲೆಮಾರಿನ ಸವಿದಿನ ನೆನಪಿಗೆ ಬಂದು ಅವರು ಮತ್ತೆ ಕಾಂಗ್ರೆಸ್ಸಿನತ್ತ ವಾಲುವುದು ಖಚಿತ.

ಆದರೆ, ಮೊಯ್ಲಿಯವರೆ ನೀವು ಸ್ವಲ್ಪ ಆಲೋಚಿಸಿ. ಕೆರೆಯ ನೀರನು ಸ್ವಲ್ಪವಾದರೂ ಕೆರೆಗೆ ಚೆಲ್ಲಿ ಕರಾವಳಿಯವರ ವರ ಪಡೆದು ಬಳಿಕ ತಮ್ಮ ನಿವೃತ್ತ ಜೀವನ ನೆಮ್ಮದಿಯಿಂದ ಅನುಭವಿಸಬಹುದು ಅಲ್ಲವೇ?.  ಹೇಗೂ ರಾಮಾಯಣ ಮಹಾನ್ವೇಷಣೆಯ ಎರಡನೇ ಭಾಗ ಬರೆಯುವ ಉದ್ದೇಶ ನಿಮಗೆ ಇದೆಯೆಂದು ಕೇಳಿದ್ದೇವೆ. ಅದು ಯಶಸ್ವಿಯಾಗಲಿ ಎಂದು ನಮ್ಮ ಪ್ರಾರ್ಥನೆ.

ಪ್ರವೀಣ್ ಎಸ್ ಶೆಟ್ಟಿ.

ಸಾಮಾಜಿಕ ಚಿಂತಕರು

ಇದನ್ನೂ ಓದಿ-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ- ಹಿಂದುತ್ವ ವರ್ಸಸ್‌ ಅಭಿವೃದ್ಧಿ

More articles

Latest article