ಮೊನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ವೀಣೆ ಬ್ರಹ್ಮ ಪೆನ್ನಓಬಳಯ್ಯ ನಿಧನ: ಸಿಎಂ ಸಿದ್ದರಾಮಯ್ಯ ಶೋಕ

Most read

ಬೆಂಗಳೂರು: 70ನೇ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದ ವೀಣೆ ಬ್ರಹ್ಮ ಎಂದೇ ಖ್ಯಾತರಾಗಿದ್ದ ಪೆನ್ನ ಓಬಳಯ್ಯ  ಅವರು ಇಂದು ನಿಧನ ಹೊಂದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿ ಪುರದ ನಿವಾಸಿಯಾಗಿದ್ದ ಅವರು ಇಡೀ ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದರು.  ಅವರಿಂದ ನೂರಾರು ಜನ ವೀಣೆ ತಯಾರಿಸುವುದನ್ನ ಕಲಿತಿದ್ದಾರೆ.

103 ವರ್ಷದ ಪೆನ್ನ ಹೋಬಳಯ್ಯ ಅವರ ಈ ಸಾಧನೆಯನ್ನು ಗುರುತಿಸಿ ಮೊನ್ನೆ ನವಂಬರ್‌ 1ರಂದು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಲು ಬಂದ ಪೆನ್ನಓಬಳಯ್ಯ  ಅಸ್ವಸ್ಥರಾಗಿದ್ದರು. ಅವರ ಪರವಾಗಿ ಅವರ ಮಕ್ಕಳು ಪ್ರಶಸ್ತಿ ಸ್ವೀಕಾರ ಮಾಡಿದ್ದರು . ಪ್ರಶಸ್ತಿ ಪಡೆದ ಮರುದಿನವೇ ಅವರು ಮೃತಪಟ್ಟಿದ್ದಾರೆ.

ಜೊತೆಗೆ ಆಸಕ್ತರಿಗೆ ವೀಣೆ ತಯಾರಿಕೆಯ ಕೌಶಲ್ಯವನ್ನು ಕಲಿಸಿ, ಸಾಂಪ್ರದಾಯಿಕ ಸಾಹಿತ್ಯದ ನಿರಂತರತೆಯನ್ನು ಕಾಪಾಡುವಲ್ಲಿ ಶ್ರಮಿಸಿದ್ದರು.

ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ಪೆನ್ನಓಬಳಯ್ಯ ಅವರ ಅಗಲಿಕೆ ದುರಾದೃಷ್ಟಕರ. ಸಿಂಪಾಡಿ ಪುರದ  ಹೆಸರನ್ನು ತಮ್ಮ ವೀಣಿಗಳ ಮೂಲಕ ರಾಷ್ಟ್ರಕ್ಕೆ ಪರಿಚಯಿಸಿದ ಪೆನ್ನ ಓಬಳಯ್ಯ ಅವರ ಸಾಂಸ್ಕೃತಿಕ ಸೇವೆಯನ್ನು ನೆನೆಯುತ್ತಾ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.

ಶಿವರಾಜ ತಂಗಡಗಿ ಅವರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ವೀಣೆ ತಯಾರಕ ಪೆನ್ನ ಓಬಳಯ್ಯ ಅವರ ನಿಧನ ಅತೀವ ದುಃಖ ತಂದಿದೆ ಎಂದು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

More articles

Latest article