“ಬಸವ ದರ್ಶನ” ದಲ್ಲಿ ವೈದಿಕರ ಶಡ್ಯಂತ್ರ ಬಯಲು ಮಾಡುತ್ತಿರುವ ನಿವೇದಿತಾ

Most read

ರಾಮದುರ್ಗ: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ “ಕನ್ನಡದ ಕೋಟ್ಯಾಧಿಪತಿ”ಯಲ್ಲಿ ಭಾಗವಹಿಸಲು ತಮಗೆ ಸಿಕ್ಕ ಸುವರ್ಣಾವಕಾಶವನ್ನು ಸಹ ಬಿಡದೆ ಬಸವಾದಿ ಶರಣರ ತತ್ವಪ್ರಸಾರದಲ್ಲಿ ತೊಡಗಿಸಿಕೊಂಡವರು ಪ್ರಸ್ತುತ ರಾಮದುರ್ಗ ತಾಲೂಕು ನಾಗನೂರಿನ ಬಸವಾಶ್ರಮದ ಕಾರ್ಯದರ್ಶಿ ನಿವೇದಿತಾ. ಆ ಕಾರ್ಯಕ್ರಮದುದ್ದಕ್ಕೂ ನಿವೇದಿತಾ ಹರಿಸಿದ ವಚನಾಮೃತದಿಂದ ಎದುರಿಗಿದ್ದ ಡಾ. ಪುನೀತ್ ರಾಜಕುಮಾರ್ ನಿಬ್ಬೆರಗಾದರೆ, ಇವರ ಮಾತು, ವಚನಗಳನ್ನು ಆಸ್ವಾಧಿಸಿದ ಕನ್ನಡ ಕುಲಕೋಟಿ ಪುಳಕಗೊಂಡಿದ್ದು, ಇವರ ಅಪಾರ ಪಾಂಡಿತ್ಯಕ್ಕೆ ಹುಬ್ಬೇರಿಸಿದ್ದು ಇಂದು ಇತಿಹಾಸ.

https://www.jiocinema.com/tv-shows/kannadada-kotyadhipati/1/niveditha-s-fight-for-education/3209934

ಅದೇ ಬಸವಾನುಯಾಯಿ ನಿವೇದಿತಾ, ಇಂದು “ವಚನ ದರ್ಶನ” ಸಂಪಾದನ ಕೃತಿಯ ಹಿಂದೆ ವೈದಿಕ, ಮನುವಾದಿಗಳ ಶಡ್ಯಂತ್ರವಿದೆ ಎಂದು ಹೇಳಿದ್ದಕ್ಕೆ ಕಟುಹಿಂದೂತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಚರ್ಚೆಯಲ್ಲಿರುವ, ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಿಡುಗಡೆಯಾಗುತ್ತಿರುವ “ವಚನ ದರ್ಶನ” ಪುಸ್ತಕವು ಹಲವರು ಬರೆದ ಲೇಖನಗಳ ಸಂಪಾದಿತ ಕೃತಿ.  

“ವಚನ ದರ್ಶನ ಮೇಲ್ನೋಟಕ್ಕೆ ಬಸವಣ್ಣನವರ ಕುರಿತಾದ ಪುಸ್ತಕದಂತೆ ತೋರಿದರೂ, ಇದರ ಒಳಹೊಕ್ಕು ನೋಡಿದರೆ ಇದು ಬಸವಣ್ಣನವರ ತತ್ವಾದರ್ಶ, ಜೀವನ ವಿಧಾನಗಳ ವಿರುದ್ಧವಾಗಿರುವುದು ಸ್ಪಷ್ಟವಾಗುತ್ತದೆ.  ವೈದಿಕತೆ, ಅದರಲ್ಲಿನ ಡಂಬಾಚಾರವನ್ನು ವಿರೋಧಿಸಿ 12ನೇ ಶತಮಾನದಲ್ಲಿ ವಚನ ಚಳುವಳಿಯ ಮೂಲಕ ವಿಚಾರ ಕ್ರಾಂತಿಗೆ ಅಡಿಪಾಯ ಹಾಕಿದವರು ಬಸವಾದಿ ಶರಣರು. ಆದರೆ ಈ ಕೃತಿಯಲ್ಲಿ ಬಸವಣ್ಣನವರ ಎಲ್ಲ ಆಶಯಗಳನ್ನು ಗಾಳಿಗೆ ತೂರಿ, ‘ಬಸವಣ್ಣನವರು ವೈದಿಕ ಪರಂಪರೆಯ ವಿರೋಧಿಯಾಗಿರಲಿಲ್ಲ’ ಎಂದು ಹೇಳುವ ಮೂಲಕ ಬಸವ ತತ್ವದ ವಿರುದ್ಧ ಶಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ನಿವೇದಿತಾ, ಈ ಪುಸ್ತಕ ಹೂರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

https://youtu.be/t2aPSnIAnJI?si=lmXwR81hCF-VHr18

ಕೃತಿ ಮುಟ್ಟುಗೋಲು ಹಾಕಲು ಆಗ್ರಹ

“ವೈದಿಕರು ಬಹಳ ಹಿಂದಿನಿಂದಲೂ ನಡೆಸುತ್ತಿರುವ ಬಸವ ಧರ್ಮವನ್ನು ತಿರುಚುವ ಪ್ರಯತ್ನಕ್ಕೆ ಈ ಪುಸ್ತಕ ನೀರೆರೆಯುವಂತಿದೆ. ಇಂತಹ ಪುಸ್ತಕದ ವಿರುದ್ಧ ದೇಶಾದ್ಯಂತ ಬಸವಾನುಯಾಯಿ ಲಿಂಗಾಯತರು ನಿಲ್ಲಬೇಕಾಗಿದೆ. ಸರಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು” ಎನ್ನುವುದು ನಿವೇದಿತಾ ಅವರ ಆಗ್ರಹ. ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿರುವ ನಿವೇದಿತಾ ಅವರು, ಈ ಪುಸ್ತಕದಲ್ಲಿರುವ ವಿವಾದಿತ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. “

ಬಸವಣ್ಣನವರು ವೈದಿಕತೆ, ಡಾಂಬಿಕತನ, ಮೌಢ್ಯತೆಯನ್ನು ತಮ್ಮ ಜೀವನದುದ್ದಕ್ಕೂ ವಿರೋಧಿಸಿ ಚಳವಳಿ ರೂಪಿಸಿದರೋ, ಅದೆಲ್ಲವನ್ನು ನಗಣ್ಯಗೊಳಿಸಿ ವೈದಿಕತೆಯನ್ನು ಬಸವಣ್ಣನವರು ಆದರಿಸಿ, ಗೌರವಿಸಿದರು ಎನ್ನುವಂತೆ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಇದು ಲಿಂಗಾಯತರಿಗಷ್ಟೇ ಅಲ್ಲದೇ ಜಗತ್ತಿನ ಬಸವಾನುಯಾಗಿಗಳಿಗೆ ಮಾಡುವ ಅನ್ಯಾಯ. ಲಿಂಗಾಯತ ಧರ್ಮದ ತಿರುಳನ್ನೇ ತಿರುಚುವ ಕೆಲಸ ಈ ಪುಸ್ತಕದ ಮೂಲಕ ನಡೆಯುತ್ತಿದೆ. ಈ ಪುಸ್ತಕ ಬಿಡುಗಡೆ ಹೆಸರನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನಡೆಯುತ್ತಿರುವ ವೈದಿಕರ ಬಸವ ತತ್ವ ವಿರೋಧಿ ಚಟುವಟಿಕೆಯನ್ನು ಸರ್ಕಾರ ನಿಲ್ಲಿಸಬೇಕು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಬೇಕು” ಎನ್ನುವುದು ನಿವೇದಿತಾರ ಒತ್ತಾಯವಾಗಿದೆ.

ಹಿಂದೂ ಸಂಘಟನೆಗಳ ವಿರೋಧ:

ವಚನ ದರ್ಶನ ಪುಸ್ತಕದ ಕುರಿತು ನಿವೇದಿತಾ ಅವರು ಮಾತನಾಡಿರುವ ವೀಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಅವರ ಕುಟುಂಬದ ಮೇಲೆ ಹಲ್ಲೆ ಪ್ರಯತ್ನಗಳೂ ನಡೆದಿವೆ. ಶರಣ ದಂಪತಿಗಳಾದ ನಿವೇದಿತಾ ಅವರ ತಂದೆ ತಾಯಿಗಳು ಇದಕ್ಕೆಲ್ಲ ಕುಗ್ಗದೆ ಅವರ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಸ್ಥಳೀಯ ಜನನಾಯಕರು, ಶರಣೆ ಬಸವ ಗೀತಾ ತಾಯಿಯವರ ಭಕ್ತರು ಈ ಕುರಿತು ಯಾವ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ರಾಜ್ಯಾದ್ಯಂತ ಬಸವಾನುಯಾಯಿಗಳು, ಪ್ರಗತಿಪರರು ನಿವೇದಿತಾ ಅವರಿಗೆ ಕರೆ ಮಾಡಿ ಬೆಂಬಲಕ್ಕೆ ನಿಂತಿದ್ದಾರೆ.

More articles

Latest article