ಬೆಂಗಳೂರು: 2 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಕೆ ರಾಜಕೀಯ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದಾಳೆ. ಅದರಲ್ಲಿ ಪ್ರಮುಖವಾಗಿ ಕೋಲಾರದ ಮಾಜಿ ಸಚಿವ ವರ್ತೂರು ಪ್ರಕಾಶ್ ಹೆಸರು ಕೇಳಿ ಬಂದಿದೆ.
2.945 ಕೆಜಿ ಚಿನ್ನ ಖರೀದಿಸಿ 2.42 ಕೋಟಿ ವಂಚಿಸಿದ ಆರೋಪದಲ್ಲಿ ಬಾಗಲಗುಂಟೆ ನಿವಾಸಿ ಶ್ವೇತಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯಿಂದ ಅಪಾರ ಪ್ರಮಾಣದ ಚಿನ್ನ, ಕಾರು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಅವಿನ್ಯೂ ರಸ್ತೆಯ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನಾಭರಣ ಖರೀದಿಸಿದ್ದಳು. ಆದರೆ ಹಣ ನೀಡದ ಕಾರಣ ಶಾಪ್ ಮಾಲೀಕರು ದೂರು ನೀಡಿದ್ದರು.
ಎಸಿಪಿ ಗೀತಾ ನೇತೃತ್ವದ ತಂಡ ಮೈಸೂರಿನಲ್ಲಿದ್ದ ಶ್ವೇತಾಳನ್ನು ಬಂಧಿಸಿ ಕರೆತಂದಿದೆ. ಈಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿಕೊಂಡಿದ್ದಾಳೆ. ಚಿನ್ನದ ವ್ಯಾಪಾರಿ ಎಂದು ಹೇಳಿಕೊಂಡು ಸಗಟು ದರದಲ್ಲಿ ಆಭರಣ ಖರೀದಿಸಿ ವಂಚನೆ ಮಾಡಿರುವ ಆರೋಪ ಈಕೆಯ ಮೇಲಿದೆ.
ಇತ್ತೀಚೆಗೆ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ಮಾಲೀಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಳಿಕ ಬರೋಬ್ಬರಿ 2 ಕೋಟಿ ಮೌಲ್ಯದ ಚಿನ್ನ ಖರೀದಿಸಿದ್ದಾಳೆ. ಅಲ್ಲಿಯೂ ಹಣವನ್ನೂ ನೀಡದೆ ಚಿನ್ನವನ್ನೂ ಮರಳಿಸದೆ ವಂಚನೆ ಮಾಡಿದ್ದಾಳೆ. ಜ್ಯುವೆಲರ್ಸ್ ಮಾಲೀಕ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್ ಅವರನ್ನು ವಿಚಾರಣೆಗೆ ಪೊಲೀಸರು ನಿರ್ಧರಿಸಿದ್ದಾರೆ. ಶ್ವೇತಾ, ವರ್ತೂರು ಪ್ರಕಾಶ್ ಅವರ ವಿಳಾಸ ನೀಡಿರುವುದರಿಂದ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ವರ್ತೂರು ಪ್ರಕಾಶ್ ಶುಕ್ರವಾರ ಪೊಲೀಸ್ ಸ್ಟೇಷನ್ ನಿಂದ ಮಾಹಿತಿ ಬಂದಿದೆ. ಸೋಮವಾರ ಹೇಳೀಕೆ ನೀಡಲು ಕರೆದಿದ್ದಾರೆ. ಅಲ್ಲಿಗೆ ಹೋಗಿ ಮಾಹಿತಿ ಕೊಡುತ್ತೇನೆ. ಕೆಲವು ತಿಂಗಳ ಹಿಂದೆ ಶ್ವೇತಾ ನಮ್ಮ ಮನೆಗೆ ಬಂದಿದ್ದು, ಸಮಾಜ ಸೇವಕಿ ಎಂದು ಪರಿಚಯಿಸಿಕೊಂಡಿದ್ದರು. ಆಕೆ ಚಿನ್ನ ಖರೀದಿಸಿರುವ ವಿಷಯ ನನಗೆ ತಿಳಿದಿಲ್ಲ. ಜ್ಯುವೆಲ್ಲರಿ ಮಾಲೀಕರು ನನಗೆ ಹೇಳೀ ಚಿನ್ನ ಕೊಟ್ಟಿಲ್ಲ. ದೂರು ನೀಡಿರುವ ವಿಚಾರ ಒಡವೆ ಅಂಗಡಿಯವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.