“ವರ್ತಮಾನ ಭಾರತ” |ಕಾವ್ಯ – ಧರ್ಮ – ರಾಜಕೀಯ ಮೀಮಾಂಸೆಯ ಮೇರು ಕೃತಿ

Most read

ಡಾ. ಜಿ. ರಾಮಕೃಷ್ಣ

ಇದೇ ಮಾರ್ಚ್‌ 17 ರಂದು ಬೆಳಿಗ್ಗೆ 10.30 ಕ್ಕೆ ಕಸಾಪದ ಕೃಷ್ಣರಾಜ ಪರಿಷತ್‌ ಮಂದಿರದಲ್ಲಿ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರ “ವರ್ತಮಾನ ಭಾರತ” ಪುಸ್ತಕ ಬಿಡುಗಡೆಯಾಗಲಿದೆ. ಸಮಕಾಲೀನ ಭಾರತದ ಬೆಳವಣಿಗೆಗಳ ಕುರಿತು ಸಂವಾದವೂ ನಡೆಯಲಿದೆ. ಈ ಪುಸ್ತಕಕ್ಕೆ ಡಾ. ಜಿ. ರಾಮಕೃಷ್ಣ ಬರೆದಿರುವ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.

ಎಲ್ಲ ಸಮಕಾಲೀನ ಸನ್ನಿವೇಶ ಮತ್ತು ಬೆಳೆವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಮತ್ತು ವ್ಯಾಖ್ಯಾನಿಸುತ್ತಾ ಇಡೀ ಸಮಾಜಕ್ಕೆ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವುದರಲ್ಲಿ ಮಾತ್ರವೇ ಅಲ್ಲದೆ ಅವನ್ನು ಮೂರ್ತವಾಗಿ ಅಳವಡಿಸುವ ಕೆಲಸದ ಜವಾಬ್ದಾರಿಯನ್ನು ಹೊತ್ತು ನಿಜಕ್ಕೂ ಒಬ್ಬ ನೈಜ ಸಾಂಸ್ಕೃತಿಕ – ಸಾಮಾಜಿಕ ಕಾರ್ಯಕರ್ತರಾಗಿರುವವರು ಪ್ರೊ|| ಪುರುಷೋತ್ತಮ ಬಿಳಿಮಲೆ ಅವರು. ಅಪಾರ ವಿದ್ವತ್ತು ಮತ್ತು ಕ್ರಿಯಾಶೀಲತೆಯುಳ್ಳ ಅವರು ಸಹಜವಾಗಿಯೇ ಅಂದಂದಿನ ವಿದ್ಯಮಾನಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಿ, ಸರಿ – ತಪ್ಪುಗಳನ್ನು ಒಪ್ಪವಾಗಿ ಸಮುದಾಯದ ಮುಂದೆ ಇರಿಸುತ್ತಾ ಬಂದಿದ್ದಾರೆ. ಯಾವುದೇ ವಿಷಯವೂ ಅವರ ದೃಷ್ಟಿಪಥದ ಹೊರಗೆ ಉಳಿಯುವಂಥದಲ್ಲ; ವಿಶೇಷವಾಗಿ ನಮ್ಮ ರಾಜ್ಯದ ಶಿಕ್ಷಣ, ಸಾಮಾಜಿಕ ನಡತೆ ಮತ್ತು ಚಿಂತನಾ ವಿಧಾನಗಳನ್ನು ಸಮಗ್ರವಾಗಿ ತೆರೆದಿಡುವ ಸಾಮರ್ಥ್ಯ ಅವರಲ್ಲಿದೆ. ಅದಕ್ಕೊಂದು ನೇರ ದೃಷ್ಟಾಂತವೆಂಬಂತೆ ಒಟ್ಟು ಅವರ 21 ಪ್ರಬಂಧಗಳನ್ನು ಆಯ್ದು ಅವರೀಗ ತಮ್ಮೊಂದು ಪ್ರಬಂಧ ಸಂಕಲನವನ್ನು ಹೊರತಂದಿದ್ದಾರೆ. ಸಮಕಾಲೀನ ಸಂದರ್ಭಕ್ಕೆ ಭೈಷಜ್ಯರೂಪದಲ್ಲಿ ದೊರಕುವ ಹೊಳಹುಗಳಿಗೆ ಇಲ್ಲಿಯ ಪ್ರತಿಯೊಂದು ಪ್ರಬಂಧವೂ ಒಂದು ಖನಿಯೇ ಆಗಿದೆ. ಆ ಕಾರಣದಿಂದಲೇ ಈ ಗ್ರಂಥವು ಅವರ ಒಂದು ಮಹತ್ತರ ಕೊಡುಗೆಯಾಗಿದೆ. ಇಲ್ಲಿಯ  ಕಣ್‌ನೆಲೆಯನ್ನು ಎಷ್ಟು ಸಾರ್ಥಕವಾಗಿ ನಮ್ಮದಾಗಿಸಿ ಕೊಳ್ಳುತ್ತೇವೆಂಬುದನ್ನು ನಮ್ಮ ನಮ್ಮ ಚಿಂತನಾ ಪ್ರಖರತೆ ಮತ್ತು ನಿಷ್ಠೆ ನಿರ್ಧರಿಸಬಲ್ಲವು.

ಇಪ್ಪತ್ತೊಂದು ಲೇಖನಗಳಿರುವ ಈ ಸಂಕಲನದಲ್ಲಿ ಪ್ರತ್ಯೇಕ ವಿಷಯಗಳನ್ನು ಕುರಿತ ಗಾಢ ಮತ್ತು ನಿಷ್ಕೃಷ್ಟ ಚಿಂತನೆಗಳಿವೆ. ಇಡೀ ದೇಶಕ್ಕೆ ಪರಿಚಯವಿರುವ ಧೀರೋದಾತ್ತ ರೈತ ಚಳುವಳಿಯಿಂದ ಹಿಡಿದು ಒಂದು ಕೀರ್ತಿಶಾಲಿ ವಿಶ್ವವಿದ್ಯಾನಿಲಯವನ್ನು ಹಾಳುಗೆಡಹುವ ಕ್ರೂರ ಹುನ್ನಾರವನ್ನು ಬಯಲುಮಾಡುವುದನ್ನೊಳಗೊಂಡು ಪ್ರಜಾಪ್ರಭುತ್ವದ ನೆಲೆಗಳು, ಹುಚ್ಚೆದ್ದ ಸಮರಶೀಲತೆ, ಭಾಷಾನೀತಿ, ಕಾವ್ಯಧರ್ಮ, ರಾಷ್ಟ್ರೀಯತೆಯ ಮಜಲುಗಳು, ಮೌಖಿಕ ಇತಿಹಾಸ, ಸಾಹಿತ್ಯ ವಿಮರ್ಶೆ, ಮಾಧ್ಯಮಗಳ ಹೀನಾಯ ಮೌನ, ಮುಂತಾದ ವಿಷಯಗಳು ಇಲ್ಲಿ ಅಡಕ ಗೊಂಡಿವೆ. ನಮ್ಮ ಪ್ರಸಕ್ತ ಚಿಂತನೆಗಳ ಆಯಾಮಗಳನ್ನು ಗುರುತಿಸಿ ಪ್ರತಿಯೊಂದು ಸಂದರ್ಭದಲ್ಲೂ ಸಾಧಕ – ಬಾಧಕಗಳನ್ನು ಗುರುತಿಸುವುದು ಅವರ ವೈಶಿಷ್ಟ್ಯ. ಯಾವುದಕ್ಕೂ ಅಂಕಿ – ಅಂಶಗಳ ಆಧಾರವಿಲ್ಲದೆ ಚರ್ಚೆಯನ್ನು ಬೆಳೆಸದಿರುವುದು ಪ್ರೊಫೆಸರ್ ಬಿಳಿಮಲೆಯವರ ವಿದ್ವತ್ತಿನ ಶಿಸ್ತು. ನಮ್ಮ ಪ್ರಸಕ್ತ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವ ಪದ್ಧತಿಯು ಧರಿಸಿರುವ ಹಾಗೂ ಧರಿಸಬಹುದಾದ ಲಕ್ಷಣಗಳನ್ನು ವಿಮರ್ಶೆ ಮಾಡುವಾಗ ಸಹ ಅವರು ಅಂಕಿ – ಅಂಶಗಳನ್ನು ಗಮನಿಸದೆ ವಾದವನ್ನು ಮಂಡಿಸುವುದಿಲ್ಲ. ಉದಾಹರಣೆಗೆ, ಶ್ರೀಲಂಕಾದ ರಾಜಕೀಯ ಸಂದಿಗ್ಧತೆಯನ್ನು ಕುರಿತ ಲೇಖನವನ್ನು ವಿಚಕ್ಷಣೆಯಿಂದ ಗಮನಿಸಬಹುದು. ಪೂರ್ಣಪ್ರಮಾಣದ ಮಾಹಿತಿ ಇಲ್ಲದೆ ವಿಶ್ಲೇಷಣೆ ನೀಡುವುದು ನೈಜ ವಿದ್ವತ್ತಿನ ಲಕ್ಷಣವಲ್ಲ.

 ಭಾಷೆಗಳ ಅಳಿವು – ಉಳಿವು, ಅವನ್ನು ಗಟ್ಟಿಗೊಳಿಸಬೇಕಾದ ಅವಶ್ಯಕತೆ ಮತ್ತು ಅದಕ್ಕಿರುವ ಮಾರ್ಗಗಳು, ಹಾಗೂ ಆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಪ್ರೊ|| ಬಿಳಿಮಲೆಯವರಿಗೆ ಬಹಳ ಆಸಕ್ತಿಯ ವಿಷಯ. ಆ ಬಗ್ಗೆ ಅವರ ವ್ಯವಸಾಯವು ವಿಶಾಲವಾಗಿದೆ, ವಿಪುಲವಾಗಿದೆ. ಅನೇಕ ಸಂದರ್ಭಗಳಲ್ಲಿ ಇದು ಅನುರಣಿತಗೊಂಡಿದೆ; ಅದಕ್ಕೆ ಕಾರಣ ಅವರ ಆಸಕ್ತಿ ಮತ್ತು ಆತಂಕ. ಇಂತಹ ಮೂಲಭೂತ ಸಂಗತಿಯ ಬಗ್ಗೆ ನಿರ್ಲಕ್ಷ್ಯವು ಸರ್ವಥಾ ಸಾಧುವಲ್ಲವೆಂಬುದನ್ನು ಲೇಖಕರು ಸುಸಂಗತವಾಗಿ ಪ್ರತಿಪಾದಿಸಿದ್ದಾರೆ. ಅಂತೆಯೇ, ತಮ್ಮದೇ ವಿಶ್ವವಿದ್ಯಾನಿಲಯವಾದ ಜೆ ಎನ್ ಯು ಹೇಗೆ ಶಿಥಿಲಗೊಳ್ಳುತ್ತಿದೆ, ಅದರ ಹಿಂದಿನ ಕಾಣದ ಕೈಗಳು ಯಾವುವು, ಅದರ ಮೌಲಿಕತೆಯನ್ನು ದುರಾಡಳಿತಗಾರರು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದನ್ನು ಮನನೊಂದು ದಾಖಲಿಸಿದ್ದಾರೆ.

ಯಾವ ಉಪಯುಕ್ತ ಸಂಸ್ಥೆಯನ್ನೂ ಬಾಳಲು ಬಿಡದಿರುವುದು ಇಂದಿನ ಸಂಪ್ರದಾಯವಾಗಿಬಿಟ್ಟಿದೆ. ಆ ನೆಲೆಯಲ್ಲಿಯೇ ದೇಶದುದ್ದಗಲಕ್ಕೂ ಹಿಂದಿ ಭಾಷೆಯ ಹೇರಿಕೆ ಮತ್ತು ರಾಜ್ಯಗಳ ಭಾಷೆಗಳ ಬಗ್ಗೆ ಔದಾಸೀನ್ಯ ಕಂಡುಬರುತ್ತಿರುವುದು. ಸಂವಿಧಾನದತ್ತವಾದ ಪ್ರಜಾಪ್ರಭುತ್ವಕ್ಕೆ ಕುತ್ತುಂಟಾಗುತ್ತಿರುವುದೂ ಇಂತಹ ಸಂಕುಚಿತ ದೃಷ್ಟಿಯಿಂದಲೇ. ಇಂದಿನ ಅಪಾಯಕಾರಿ ಬೆಳವಣಿಗೆಗಳು ಒಂದೇ ಎರಡೇ! ಮಾನ್ಯ ಪ್ರೊಫೆಸರ್ ಬಿಳಿಮಲೆಯವರು ಅಂತಹ ಹತ್ತಾರು ದೃಷ್ಟಾಂತಗಳನ್ನು ಓದುಗರ ಮುಂದಿರಿಸಿದ್ದಾರೆ. ಆಘಾತಕಾರಿ ಅಂಶವೆಂದರೆ ನಮ್ಮ ಪರಂಪರೆಯ ಉದಾತ್ತ ತತ್ತ್ವಗಳಿಗೆ ಕುತ್ತುಂಟಾಗಿರುವುದು. ಉದಾಹರಣೆಗೆ, ಮತಧರ್ಮಗಳ ಸಾಮರಸ್ಯ, ಪುರಾಣೇತಿಹಾಸಗಳ ಬಗೆಗಿನ ನಿರ್ದಿಷ್ಟ ನಿಲುವು, ಭಕ್ತಿ ಸಂಪ್ರದಾಯದ ಜನಪರ ಕಾಳಜಿ, ಮುಂತಾದುವನ್ನು ಹೆಸರಿಸಬಹುದು. ಪ್ರಸ್ತುತ ಸಂಕಲನದಲ್ಲಿ ಇಂಥವೆಲ್ಲಾ ಚರ್ಚೆಗೆ ಒಳಪಟ್ಟಿವೆ, ವೈಚಾರಿಕವಾಗಿ ಗ್ರಹಿಸಲ್ಪಟ್ಟಿವೆ. ತಥಾಕಥಿತ ಹಿಂದುತ್ವದ ಅಮಲಿನಿಂದಾಗಿ ದೀರ್ಘಕಾಲಿಕ ಸಂಪತ್ತಾದ ಆದಿವಾಸಿ ಸಂಸ್ಕೃತಿ ಮತ್ತು ಸಾಹಿತ್ಯ ಲುಪ್ತವಾಗುವ ಸಂಭವ ಸಹ ದೇಶವನ್ನು ಕಾಡುತ್ತಿದೆ. ಆ ಬಗ್ಗೆ ಶ್ರೀ. ಬಿಳಿಮಲೆ ಅವರು ಸ್ಪಷ್ಟವಾಗಿ ಹಿಂದುತ್ವ ಮತ್ತು ಆದಿವಾಸಿ ಸಂಸ್ಕೃತಿ ಬೇರೆಬೇರೆ ಧ್ರುವಗಳಿಗೆ ಸೇರುತ್ತವೆಂಬುದನ್ನು ಸಾರವತ್ತಾಗಿ ನಿರೂಪಿಸಿದ್ದಾರೆ.

ಪದೇಪದೇ ಹೇಳಲಾಗುತ್ತಿರುವ ಒಂದು ಸಂಗತಿಯೆಂದರೆ ನಮ್ಮ ದೇಶವು ಆರ್ಥಿಕತೆಯ ನೆಲೆಯಲ್ಲಿ ಅಗಾಧವಾದ ದಾಪುಗಾಲು ಹಾಕುತ್ತಿದೆಯೆಂಬುದು. ವಿಶ್ವದ ಆರ್ಥಿಕತೆಯಲ್ಲಿ ನಾವು ಮೂರನೆಯ ಸ್ಥಾನಕ್ಕೇರಿದ್ದೇವೆಂಬ ಹುಸಿ ಘೋಷಣೆ ನಿರಂತರವಾಗಿ ಕೇಳಿಬರುತ್ತದೆ. ಹಾಗೆ ಪ್ರಬಲವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ವಿದೇಶಿ ಗಣ್ಯರು ಬಂದಾಗ ಹಲವು ವಸತಿ ಪ್ರದೇಶಗಳನ್ನು ಟಾರ್ಪಾಲಿನಿಂದ ಮುಚ್ಚಿ ಅಲ್ಲಿನ ಜನರನ್ನು ಅದೃಶ್ಯರನ್ನಾಗಿಸುವ ಬೀಭತ್ಸ ಕೃತ್ಯವೇಕೆ ನಡೆಯುತ್ತದೆಂಬುದಕ್ಕೆ ಯಾವ ಅಂಗೀಕಾರಾರ್ಹ ಸಮಜಾಯಿಷಿಯೂ ದೊರಕುವುದಿಲ್ಲ. ವಾಸ್ತವವನ್ನು ಮುಚ್ಚಿಟ್ಟು ಮಿಥ್ಯೆಯನ್ನೇಕೆ ಪ್ರಚುರಗೊಳಿಸಬೇಕಾಗಿದೆ ಎಂಬುದು ನಿಗೂಢವಾಗಿ ಉಳಿಯುವಂತಹ ಸಂಗತಿಯೂ ಅಲ್ಲ. ಸೋಗಲಾಡಿ ಪ್ರದರ್ಶನಗಳು ವಾಸ್ತವವನ್ನು ಇಲ್ಲವಾಗಿಸುವುದಿಲ್ಲವೆಂಬುದು ಸ್ಪಷ್ಟವಾಗಿದೆ.

ಕೆಲವು ವರ್ಷಗಳಿಂದ ನಡೆಯುತ್ತಿರುವ ಹಲವು ಅಸಹ್ಯ ಪ್ರಹಸನಗಳು ಯಾವ ಸುಪ್ರಜೆಯನ್ನೇ ಆಗಲಿ ಬಾಧಿಸುತ್ತವೆ: ಅವುಗಳಲ್ಲಿ ದೇಶವನ್ನು ಅಂಧಶ್ರದ್ಧೆಯ ತವರೂರನ್ನಾಗಿಸಲು ನಮ್ಮ ಖ್ಯಾತ ವಿಶ್ವವಿದ್ಯಾಲಯಗಳನ್ನು ಬಳಸುತ್ತಿರುವುದು ತೀರಾ ಪ್ರಶ್ನಾರ್ಹವಾದಂತಹ ಒಂದು ಅಕ್ರಮ. ಇಂತಹ ಅಂಶಗಳನ್ನು ಪ್ರೊಫೆಸರ್ ಬಿಳಿಮಲೆಯವರು ವಿವಿಧ ಸಂದರ್ಭಗಳಲ್ಲಿ ಪ್ರಸ್ತಾಪಿಸಿ ನಮ್ಮ ನೈಜ ಹಾದಿ ಯಾವುದಾಗಬೇಕೆಂಬುದನ್ನು ನಿಖರವಾಗಿ ಗುರುತಿಸಿದ್ದಾರೆ. ಹೀಗಾಗಿ ಈ ಸಂಕಲನವು ಸಮಗ್ರ ಮತ್ತು ಮೌಲಿಕ ಚಿಂತನೆಗಳ ಆಗರವಾಗಿದೆ. ಇಲ್ಲಿಯ ವಿಶ್ಲೇಷಣೆಗಳಿಂದ ಮೂಡುವ ಹಲವು ಹೊಳಹುಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುವ ಸಂಕಲ್ಪ ಅಗತ್ಯವಾಗಿದೆ. ಉದಾಹರಣೆಗೆ, ಭಾಷಾ ನೀತಿಯನ್ನು ಕುರಿತ ಐದನೆಯ ಲೇಖನದಲ್ಲಿ ಲೇಖಕರು ಸಾಂದರ್ಭಿಕವಾಗಿ ನೂತನವೆನ್ನಲಾದ ಶಿಕ್ಷಣ ನೀತಿಯನ್ನು ಆಳವಾಗಿ ಪರಾಮರ್ಶೆ ಮಾಡಿದ್ದಾರೆ, ಹಲವು ಪರ್ಯಾಯಗಳನ್ನು ಸೂಚಿಸಿದ್ದಾರೆ. ಅದೊಂದು ಮಹತ್ತರ ಕೊಡುಗೆಯೇ ಸರಿ. ಅವರ ಎಲ್ಲ ಲೇಖನಗಳು ಮತ್ತು ವಿಚಾರಗಳು ನಮ್ಮ ದೇಶದ ಬಗೆಗಿನ ಕಾಳಜಿಯನ್ನು ಸ್ಫುಟವಾಗಿ ವ್ಯಕ್ತಪಡಿಸುತ್ತವೆ.

ನಮ್ಮ ದೇಶದಲ್ಲೀಗ ಯುವಕರ ದಿಕ್ಕುತಪ್ಪಿಸಿ ಅವರನ್ನು ಬಾಡಿಗೆ ಭಂಟರೆಂಬಂತೆ ನಡೆಸಿಕೊಳ್ಳುವ ಕ್ಷುದ್ರ ಯೋಜನೆ ರೂಪುಗೊಂಡಂತೆ ತೋರುತ್ತಿದೆ. ಅಲ್ಲದೆ ಕಾವ್ಯ, ಪುರಾಣ, ಇತಿಹಾಸ, ದೇವಸ್ಥಾನ, ಪ್ರಾಚೀನ ಸ್ಮಾರಕಗಳು, ಇತ್ಯಾದಿಗಳ ಸ್ವರೂಪವನ್ನು ಕಲಸುಮೇಲೋಗರ ಮಾಡಿ ಅನೂಹ್ಯ ಮತ್ತು ಶುದ್ಧ ಅವೈಚಾರಿಕ ಹಾದಿಯನ್ನು ಪ್ರಜ್ಞಾಪೂರ್ವಕವಾಗಿ ತುಳಿಯ ಹೊರಟಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎಲ್ಲರಿಗೂ ತಿಳಿದಂತೆ, ಶ್ರೇಷ್ಠ ಮತ್ತು ಸೌಮ್ಯ ದಾಶರಥಿ ಶ್ರೀರಾಮಚಂದ್ರ ಶತಶತಮಾನಗಳಿಂದ ಮೇರು ಕಾವ್ಯಪುರುಷನಾಗಿ ರಂಜಿಸಿದ, ಅತಿಶಯವಾಗಿ ಸನ್ಮಾರ್ಗದ ಹಾದಿಗಾಗಿ ತಹತಹಿಸಿದ. ವಾಲ್ಮೀಕಿ ಅವನನ್ನು ಅದ್ಭುತ ಬಹುರೂಪಿ ಮಾನವನನ್ನಾಗಿ ಚಿತ್ರಿಸಿದ. ಮೊಟ್ಟಮೊದಲ ಅಧ್ಯಾಯದಲ್ಲೇ ಕವಿಯು ಅವನನ್ನು ಶ್ರೇಷ್ಠ ಗುಣವಂತ, ವೀರ, ಧರ್ಮಜ್ಞ, ಕೃತಜ್ಞ, ಸತ್ಯವಾನ್,  ದೃಢವ್ರತಿ, ಇತ್ಯಾದಿಯಾಗಿ ಕಲ್ಪಿಸಿಕೊಂಡನೇ ವಿನಾ ದೈವೀಪುರುಷನೆಂದು ಬಗೆಯಲಿಲ್ಲ. ಅವನ ವ್ಯಕ್ತಿತ್ವವು ಕ್ರಮೇಣ ಅವನನ್ನು ಪುರಾಣ ಪುರುಷನನ್ನಾಗಿಸಿತು. ನಂತರ ಅವನನ್ನು ಇತಿಹಾಸದ ಒಬ್ಬ ಜೀವಂತ ವ್ಯಕ್ತಿಯೆಂಬಂತೆ ವ್ಯವಹರಿಸುವ ಅಪ್ರಾಮಾಣಿಕ ಐತಿಹ್ಯವನ್ನು ಪೋಷಿಸಲಾಯಿತು. ಈಗಲಾದರೋ ಕೆಲವರಿಗೆ ಅವನು  ’ರಾಮಲಲ್ಲಾ’ ಆಗಿಬಿಟ್ಟಿದ್ದಾನೆ. ಎಷ್ಟೋ ಮಂದಿಗೆ ಆಪ್ತವಾಗದ ಒಂದು ಮಾತು ಹೇಳುವುದಾದರೆ ಅವನೀಗ ಅಷ್ಟೇನೂ ಗಾಂಭೀರ್ಯವಿಲ್ಲದ ರಾಜಕೀಯ ಪುರುಷನೋ ದಾಳವೋ ಆಗಿಬಿಟ್ಟಿದ್ದಾನೆ. ಮಹಾಕವಿಯಾಗಿದ್ದ ವಾಲ್ಮೀಕಿ ಭಾರತದ ಹೆರಡೋಟಸ್ ಎಂಬಂತೆ ಚರಿತ್ರಕಾರನಾಗಿಬಿಟ್ಟಿದ್ದಾನೆ! ಇದನ್ನು ಅವಮರ್ಯಾದೆ ಎಂದರೆ ತಪ್ಪಾಗಲಾರದು. ಇನ್ನು ಕಾಳಿದಾಸನ ಶಕುಂತಲೆಯನ್ನು ಪೋಷಿಸಿದ ಕಣ್ವಮುನಿಯ ಆಶ್ರಮವನ್ನು ಎಂಥದೋ ಕಳಪೆಯ ಸಂಶೋಧನೆಯಿಂದ ಗುರುತಿಸಿ ಅಲ್ಲೊಂದು ’ಪ್ರೇಮ ಮಂದಿರ’ ಕಟ್ಟಿಬಿಡಬಹುದೇನೊ, ಅಥವಾ ಹಿಮಾಲಯದಲ್ಲಿ ಪಾರ್ವತಿಯು ಶಿವನಿಗಾಗಿ ತಪಸ್ಸನ್ನು ಗೈದ ಸ್ಥಳವನ್ನು ಶೋಧಿಸಿ ಅಲ್ಲೊಂದು ’ಪಾರ್ವತೀಕುಟಿ’ಯನ್ನು ನಿರ್ಮಿಸಿಬಿಡಬಹುದೇನೊ! ಇಂತಹ ಅಸಾಧ್ಯ ಕಪ್ಪು ಕುಹರಕ್ಕೆ ಬಿದ್ದುಹೋಗದಂತೆ ಮಾನ್ಯ ಬಿಳಿಮಲೆಯವರ ಕಾವ್ಯ – ಧರ್ಮ – ರಾಜಕೀಯ ಮೀಮಾಂಸೆಯನ್ನು ನಾವಿಂದು ಬೌದ್ಧಿಕ ಶಿಸ್ತು ಮತ್ತು ಕಾವ್ಯವಿಮರ್ಶೆಗೆ ಮೇರು ಮಾದರಿಯೆಂದು ಸ್ವೀಕರಿಸುವುದು ಔಚಿತ್ಯಪೂರ್ಣವಾಗಿರುತ್ತದೆ. ಈ ಸಂಕಲನದಲ್ಲಿ ಸೇರ್ಪಡೆಗೊಂಡಿರುವ ಅವರ ಹಲವು ಪುಸ್ತಕ ವಿಮರ್ಶೆಗಳು ಹಾಗೂ ಅಭಿಜಾತ ಸಾಹಿತ್ಯ ಕೃತಿಗಳ ಪರಿಚಯಾತ್ಮಕ ಪ್ರಬಂಧಗಳು ಬೋಧಪ್ರದವಾಗಿರುವುದೂ ಒಂದು ವಿಶೇಷ.

ನಮ್ಮ ರಾಷ್ಟ್ರದ ಸಂವಿಧಾನದ ಬಗೆಗೆ ಘೋರ ತಕರಾರು ಅನಿವಾರ್ಯವೋ ಎಂಬಂತೆ ತನ್ನನ್ನು ತಾನು ಸಾಂಸ್ಕೃತಿಕ ಸಂಸ್ಥೆಯೆಂದು ಹೇಳಿಕೊಳ್ಳುವ ಆರೆಸ್ಸೆಸ್ ಸ್ವಯಂ ವೈರುದ್ಧ್ಯಗಳನ್ನು ಆಗಾಗ್ಗೆ ಪ್ರಕಟಿಸುವುದುಂಟು. ಅದನ್ನು ಪ್ರತಿಪಾದಿಸುವ ಒಂಭತ್ತನೆಯ ಅಧ್ಯಾಯವು ಪ್ರಸ್ತುತ ಗ್ರಂಥದ ಒಂದು ಮೂಲಭೂತ ಆಕಾಂಕ್ಷೆಯನ್ನು ಪ್ರತಿಫಲಿಸುತ್ತದೆ. ಸಂವಿಧಾನದ ಪ್ರತಿಯನ್ನು ಸುಟ್ಟುಹಾಕುವ ಹೇಸಿಗೆಯ ಪ್ರಸಂಗ ಜರುಗಿದಾಗ ಸಹ ಈ ’ಸಾಂಸ್ಕೃತಿಕ’ ಸಂಸ್ಥೆಯು ವಿಚಲಿತವಾಗಲಿಲ್ಲ. ಬದಲಾಗಿ, ಸಂವಿಧಾನದ ಆಮೂಲಾಗ್ರ ಬದಲಾವಣೆಯ ಮಾತನ್ನು ಮುನ್ನೆಲೆಗೆ ತಂದಿತು. ಅದನ್ನು ಕಾರ್ಯಗತಗೊಳಿಸಲು ಕಾತರವಾಗಿರುವ ಮಂದಿ ಅಧಿಕಾರದ ಅಮಲಿನಿಂದ ಎಲ್ಲ ರಾಜಕೀಯ ನಡೆವಳಿಕೆಗಳನ್ನೂ ಗಾಳಿಗೆ ತೂರಿ ದೇಶವನ್ನು ಅತಂತ್ರದ ಸ್ಥಿತಿಯತ್ತ ದೂಡುತ್ತಿದ್ದಾರೆಂಬ ಸೂಚನೆ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ.  ಸಂವಿಧಾನಕ್ಕೆ ತಿದ್ದುಪಡಿಗಳು ಸರ್ವಥಾ ವರ್ಜ್ಯವೆಂದು ಯಾರೂ ಆಗ್ರಹಿಸುವುದಿಲ್ಲ, ಆದರೆ ದೇಶದಲ್ಲಿ ಪ್ರಜಾತಂತ್ರದ ವ್ಯವಸ್ಥೆಗೇ ಧಕ್ಕೆಯುಂಟುಮಾಡುವಂತಹ ಬದಲಾವಣೆಗಳು ಸರ್ವಥಾ ಅಂಗೀರಾರ್ಹವಲ್ಲ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಅಡಿಗಲ್ಲಿಗೆ ಚ್ಯುತಿಯುಂಟಾಗುವ ಕೆಡುಕನ್ನು ನಿವಾರಿಸುವ ಜವಾಬ್ದಾರಿಯನ್ನು ಇಡೀ ದೇಶದ ಶುದ್ಧ ಮತ್ತು ಚೈತನ್ಯಪೂರಿತ ಮನಸ್ಸುಗಳು ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆಯವರು ನಮ್ಮ ಸಂವಿಧಾನವನ್ನು ಪರಿಶೀಲಿಸುವ ತೃಪ್ತಿಕರ ಹರಹು ಒಂದು ಸಂಹಿತೆಯ ಸೂತ್ರೀಕರಣದ ರೂಪದಲ್ಲಿದೆ: “ಪಾರಂಪರಿಕ ರಾಜತ್ವ, ಧಾರ್ಮಿಕ ಜಡ್ಡುತನ, ಮತೀಯತೆ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ ನಮಗೆ ದೇಶದ ಪೌರತ್ವವನ್ನು ಸಂವಿಧಾನವು ಒದಗಿಸಿಕೊಟ್ಟಿದೆ; ಅನೇಕ ಹುಸಿಮಾತುಗಳಿಂದ ನಮ್ಮನ್ನು ಬಿಡಿಸಿ ನಾವೆಲ್ಲರೂ ಖಂಡಿತವಾಗಿಯೂ ನಂಬಬಹುದಾದ ಒಂದು ಆಶ್ವಾಸನೆಯನ್ನು ನೀಡಿದೆ” (ಪು. 128). ಈ ಆಶ್ವಾಸನೆಯು ಸಾಕಾರವಾಗಿ ರೂಪುತಾಳಲು ಬೇಕಾಗುವ ಚಿಂತನೆ ಮತ್ತು ಕ್ರಿಯಾಶೀಲತೆಗೆ ದಾರಿದೀಪವಾಗಿ ಆತ್ಮೀಯರಾದ ಶ್ರೀ. ಪುರುಷೋತ್ತಮ ಬಿಳಿಮಲೆಯವರು ಈ ಸಂಕಲನವನ್ನು ನಮ್ಮ ಮುಂದಿಟ್ಟಿದ್ದಾರೆ. ಅದರ ಸಮದರ್ಶಿತ್ವ ಅನುಷ್ಠಾನದಿಂದ ಸಮಾನತೆ, ಪ್ರಗತಿ ಮತ್ತು ಪ್ರಜಾಪ್ರಭುತ್ವದ ದೃಢೀಕರಣದತ್ತ ಅಳುಕದೆ ಹೆಜ್ಜೆ ಹಾಕೋಣ. ಅದೇ ಮಾನ್ಯ ಬಿಳಿಮಲೆ ಅವರಿಗೆ ನಾವು ತೋರಬಹುದಾದ ಗೌರವ, ಸಾದರಪಡಿಸಬಹುದಾದ ಅಭಿನಂದನೆ.

(“ವರ್ತಮಾನ ಭಾರತ” ಪುಸ್ತಕಕ್ಕೆ ಡಾ.ಜಿ. ರಾಮಕೃಷ್ಣ ಬರೆದ ಮುನ್ನುಡಿಯ ಆಯ್ದ ಭಾಗ)

More articles

Latest article