ಉತ್ತರಾಖಂಡ; ಶಾಸಕರ ಮನೆಯತ್ತ ಗುಂಡು ಹಾರಿಸಿದ ಬಿಜೆಪಿ ಮುಖಂಡ

Most read

ಡೆಹ್ರಾಡೂನ್: ಉತ್ತರಾಖಂಡದ ಖಾನಪುರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಣ ವಾಕ್ಸಮರ ತೀವ್ರಗೊಂಡಿದೆ.  ಬಿಜೆಪಿಯ ಮಾಜಿ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಅವರು, ಹಾಲಿ ಶಾಸಕ ಉಮೇಶ್‌ ಕುಮಾರ್‌ ಅವರ ನಿವಾಸದ ಎದುರು  ಗುಂಡು ಹಾರಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

ತಮ್ಮ ಬೆಂಬಲಿಗರ ಗುಂಪಿನೊಂದಿಗೆ ಶಾಸಕ ಉಮೇಶ್‌ ಕುಮಾರ್‌ ಅವರ ನಿವಾಸದ ಬಳಿ ಆಗಮಿಸಿದ ಪ್ರಣವ್‌ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಥಳಿಸುವುದು ಮತ್ತು ಕಲ್ಲು ತೂರಾಟ ನಡೆಸುತ್ತಿರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ. ಇಂತಹ ಒಂದು ವಿಡಿಯೊವನ್ನು ಎಕ್ಸ್‌/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಶಾಸಕರು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿಯ ಮಾಜಿ ಶಾಸಕ ಪ್ರಣವ್‌ ಸಿಂಗ್‌ ಅವರು ತಮ್ಮ ಬೆಂಬಲಿಗ ಗೂಂಡಾಗಳೊಂದಿಗೆ ಬಂದು, ಡಜನ್‌ಗಟ್ಟಲೆ ಶಸ್ತ್ರಾಸ್ತ್ರಗಳಿಂದ ನೂರಾರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕೃತ್ಯಕ್ಕೆ ಪ್ರತಿಯಾಗಿ ಪ್ರಣವ್‌ ಅವರನ್ನು ಕೊಲ್ಲಲು ಶಾಸಕ ಸಹ ಪಿಸ್ತೂಲ್‌ ಹಿಡಿದು ಮುನ್ನುಗ್ಗುತ್ತಿರುವುದು ಮತ್ತು ಅವರನ್ನು ಪೊಲೀಸರು ತಡೆದಿರುವ ವಿಡಿಯೊ ಸಹ ಹರಿದಾಡುತ್ತಿದೆ. ಘಟನೆ ಬೆನ್ನಲ್ಲೇ, ಪ್ರಣವ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಪ್ರಣವ್‌ ಅವರ ಪತ್ನಿ, ಶಾಸಕ ಉಮೇಶ್‌ ಅವರು ತಮ್ಮ ಪತಿಗೆ ಬೆದರಿಕೆ ಹಾಕಿದ್ದು, ಮಕ್ಕಳ ಮೇಲೆ ಆಯುಧ ಬೀಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.

ಹಾಲಿ ಮತ್ತು ಮಾಜಿ ಶಾಸಕರಿಬ್ಬರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡೂ ಕಡೆಯವರ ಶಸ್ತ್ರಾಸ್ತ್ರ ಪರವಾನಗಿ ರದ್ದು ಮಾಡಲಾಗುವುದು ಎಂದು ಹರಿದ್ವಾರ ಎಸ್‌ಎಸ್‌ಪಿ ಪ್ರಮೋದ್‌ ಡೋಬಲ್‌ ತಿಳಿಸಿದ್ದಾರೆ. ಪ್ರಣವ್‌ ಸಿಂಗ್‌ ಅವರು, ಖಾನಪುರ ವಿಧಾನಸಭಾ ಕ್ಷೇತ್ರಕ್ಕೆ 2012 ಹಾಗೂ 2017ರಲ್ಲಿ ನಡೆದ ಚುನಾವಣೆಗಳಲ್ಲಿ ಕ್ರಮವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಗೆದ್ದಿದ್ದರು. 2022ರಲ್ಲಿ ಪ್ರಣವ್‌ ಪತ್ನಿ ರಾಣಿ ದೇವಯಾನಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿ ಉಮೇಶ್‌ ಕುಮಾರ್‌ ಜಯ ಗಳಿಸಿದ್ದರು.

More articles

Latest article