ಬೆಂಗಳೂರು: ಹಿಂದೆ ಕೆನರಾ ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ಆಖೈರುಗೊಳಿಸಿಲ್ಲ. ಬಿಜೆಪಿಯ ಭದ್ರಕೋಟೆಯಂತೆ ಕಾಣುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದ್ದು, ಒಂದೊಮ್ಮೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದರೆ ಅವರ ಗೆಲುವಿನ ಸಾಧ್ಯತೆ ಹೆಚ್ಚು.
ಈ ಕುರಿತು ಖಾಸಗಿ ಸಂಸ್ಥೆಯೊಂದು ಸಮೀಕ್ಷೆ ನಡೆಸಿದ್ದು, ಇತರ ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಿದರೆ ಪ್ರಬಲ ಸ್ಪರ್ಧೆ ನೀಡಬಹುದು ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷ ಸದ್ಯದಲ್ಲೇ ಟಿಕೆಟ್ ಘೋಷಣೆ ಮಾಡಲಿದ್ದು, ನಿಂಬಾಳ್ಕರ್ ಅವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸತತ ನಾಲ್ಕು ಬಾರಿ ಸೇರಿದಂತೆ ಒಟ್ಟು ಆರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಅನಂತ್ ಕುಮಾರ್ ಹೆಗಡೆಯವರ ಕುರಿತು ಕ್ಷೇತ್ರದಲ್ಲಿ ತೀವ್ರ ಸ್ವರೂಪದ ಜನಾಕ್ರೋಶವಿದೆ. ಉತ್ತರ ಕನ್ನಡ ಕ್ಷೇತ್ರದ ಅಭಿವೃದ್ಧಿಗೆ ಹೆಗಡೆ ಕೊಡುಗೆ ಶೂನ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ಬಿಜೆಪಿಯ ಹಿಂದುತ್ವ ಅಜೆಂಡಾ ಮತ್ತು ಮೋದಿಯ ಹೆಸರಿನಿಂದಲೇ ಹೆಗಡೆ ಗೆಲ್ಲುತ್ತ ಬಂದಿದ್ದಾರೆ. ಈ ಬಾರಿ ಜನಾಕ್ರೋಶದ ಕಾರಣದಲ್ಲಿ ಬಿಜೆಪಿ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡುತ್ತಿಲ್ಲ. ಬದಲಾಗಿ ಅವರದೇ ಬ್ರಾಹ್ಮಣ ಸಮುದಾಯದವರಾದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಹಲವು ಹೆಸರುಗಳು ಕೇಳಿಬರುತ್ತಿದ್ದರೂ, ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರು ಮುಂಚೂಣಿಯಲ್ಲಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲೇ ಇರುವ ಖಾನಾಪುರದ ಶಾಸಕಿಯಾಗಿದ್ದ ನಿಂಬಾಳ್ಕರ್ ಅವರಿಗೆ ಕ್ಷೇತ್ರದ ಒಳಹೊರಗುಗಳು ಗೊತ್ತಿವೆ. ಖಾನಾಪುರ, ಕಿತ್ತೂರು ಹಾಗು ಉತ್ತರ ಕನ್ನಡ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮರಾಠಾ ಸಮುದಾಯದ ಮತಗಳೂ ಗಣನೀಯ ಪ್ರಮಾಣದಲ್ಲಿದೆ. ಹೀಗಾಗಿ ಮರಾಠಾ ಸಮುದಾಯಕ್ಕೆ ಸೇರಿದ ಅಂಜಲಿ ನಿಂಬಾಳ್ಕರ್ ಅವರಿಗೆ ಇದೆಲ್ಲ ಅನುಕೂಲಕರವಾಗಿದೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ನಾಮಧಾರಿಗಳು (ಈಡಿಗ, ಬಿಲ್ಲವ) ಹೆಚ್ಚುಕಡಿಮೆ ಸಮ ಸಂಖ್ಯೆಯಲ್ಲಿದ್ದು, ಶೇ. 50 ಕ್ಕೂ ಹೆಚ್ಚು ಜನಸಂಖ್ಯೆ ಈ ಸಮುದಾಯಗಳದ್ದೇ ಆಗಿದೆ. ನಾಮಧಾರಿಗಳಲ್ಲಿ ಬಿಜೆಪಿ ಮತ್ತು ಅನಂತ ಕುಮಾರ್ ಹೆಗಡೆಯವರ ಮೇಲಿನ ಅಸಮಾಧಾನ ಈ ಬಾರಿ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ನಿಂಬಾಳ್ಕರ್ ಸ್ಪರ್ಧಿಸಿದರೆ ಮೋದಿ, ಹಿಂದುತ್ವವನ್ನು ಬದಿಗಿರಿಸಿ ಈ ಸಮುದಾಯದ ಬಹುತೇಕರು ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ.
ಬ್ರಾಹ್ಮಣ ಮತ್ತು ನಾಮಧಾರಿಗಳನ್ನು ಹೊರತುಪಡಿಸಿದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಎಸ್ ಸಿ ಎಸ್ ಟಿ, ಮುಸ್ಲಿಂ, ಮರಾಠಾ ಮತ್ತು ಲಿಂಗಾಯಿತ ಸಮುದಾಯಗಳು. ನಾಮಧಾರಿ, ಎಸ್ ಸಿ ಎಸ್ ಟಿ, ಮುಸ್ಲಿಂ, ಮರಾಠಾ ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ ಅಂಜಲಿ ನಿಂಬಾಳ್ಕರ್ ಅವರ ದಾರಿ ಸುಗುಮವಾಗಲಿದೆ. ನಾಮಧಾರಿ ಸಮುದಾಯದ ಯುವಕರು ಈ ಬಾರಿ ಬದಲಾವಣೆ ಬಯಸಿದ್ದು, ಅಂಜಲಿಯವರಿಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧ್ಯ ಎನ್ನುತ್ತಾರೆ ಈ ಸಮುದಾಯದ ಮುಖಂಡರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಕ್ಷೇತ್ರಗಳೂ ಸೇರಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಖಾನಾಪುರದಲ್ಲೇ ಹುಟ್ಟಿ ಬೆಳೆದಿರುವ ಅಂಜಲಿ ನಿಂಬಾಳ್ಕರ್ ತಮ್ಮ ಮತಕ್ಷೇತ್ರದಿಂದ ನಿರಾಯಾಸವಾಗಿ ಲೀಡ್ ಪಡೆಯಬಹುದು. ಕಿತ್ತೂರಿನಲ್ಲಿ ಈ ಬಾರಿಗೆ ಕಾಂಗ್ರೆಸ್ ಗೆದ್ದಿದೆ. ಅಲ್ಲಿ ಬಾಬಾ ಸಾಹೇಬ ಪಾಟೀಲ ಅವರು ಕಾಂಗ್ರೆಸ್ ಶಾಸಕರಾಗಿ ಜಯಭೇರಿ ಬಾರಿಸಿದ್ದಾರೆ. ಹೀಗಾಗಿ ಕಿತ್ತೂರಿನಲ್ಲೂ ಕಾಂಗ್ರೆಸ್ ಹೆಚ್ಚಿನ ಮತ ಗಳಿಸಬಹುದು. ಹಳಿಯಾಳ ಮತ್ತು ಕಾರವಾರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಇಲ್ಲಿನ ಶಾಸಕರಾದ ಆರ್.ವಿ.ದೇಶಪಾಂಡೆ ಮತ್ತು ಸತೀಶ್ ಕೃಷ್ಣ ಸೈಲ್ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮುನ್ನಡೆ ಕೊಡಿಸಲು ಶಕ್ತರು.
ಕುಮಟಾದಲ್ಲಿ ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ. ದಿನಕರ ಕೇಶವ ಶೆಟ್ಟಿ ಇಲ್ಲಿನ ಶಾಸಕರು. ಇಲ್ಲಿ ಬ್ರಾಹ್ಮಣ ಮತದಾರರ ಸಂಖ್ಯೆ ಹೆಚ್ಚು. ಶಿರಸಿಯಲ್ಲಿ ಭೀಮಣ್ಣ ಟಿ.ನಾಯ್ಕ ಮತ್ತು ಭಟ್ಕಳದಲ್ಲಿ ಎಂ.ಎಸ್.ವೈದ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದುಬಂದಿದ್ದಾರೆ. ಯಲ್ಲಾಪುರದಲ್ಲಿ ಮೂಲ ಕಾಂಗ್ರೆಸಿಗರೇ ಆದ ಶಿವರಾಮ್ ಹೆಬ್ಬಾರ್ ಬಿಜೆಪಿ ಶಾಸಕರಾಗಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿರುವ ಕುರಿತು ಮುನಿಸಿಕೊಂಡಿರುವ ಅವರು ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬಾರದೆ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಹೆಬ್ಬಾರ್ ಈ ಬಾರಿ ಚುನಾವಣೆಯಲ್ಲಿ ಯಾವ ದಾಳ ಉರುಳಿಸುತ್ತಾರೆ ಎಂಬುದು ಕುತೂಹಲಕಾರಿ. ಎಂಟು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹೀಗಾಗಿ ಆರು ಶಾಸಕರ ಬಲ ಕಾಂಗ್ರೆಸ್ ಅಭ್ಯರ್ಥಿಗೆ ದೊರೆಯುವುದು ನಿಶ್ಚಿತ.
ಯಾವಾಗಲೂ ಬಿಜೆಪಿಗೆ ಮೊದಲ ಫಲಿತಾಂಶ ತಂದುಕೊಡುತ್ತಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಈಗ ಮೊದಲಿನಂತಿಲ್ಲ. ಬಿಜೆಪಿ ಭದ್ರಕೋಟೆ ಈ ಬಾರಿ ಛಿದ್ರಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ದೊರೆತರೆ ಕಾಂಗ್ರೆಸ್ ಹಾದಿ ಮತ್ತಷ್ಟು ಸುಗಮವಾಗು ಸಾಧ್ಯತೆ ಇದೆ.

 
                                    
