ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಇಂದು ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಹಲವು ಭಾಗಗಳಿಂದ ಹರಿದು ಬಂದಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸುಡುವ ಬಿಸಿಲಿನ ನಡುವೆಯೂ ಉತ್ಸಾಹದಿಂದ ಪಾಲ್ಗೊಂಡು ತಮ್ಮ ನಾಯಕಿಯ ಪರವಾಗಿ ಜಯಘೋಷ ಮೊಳಗಿಸಿದರು.
ಇಂದು ಬೆಳಿಗ್ಗೆ ಕಾರವಾರದ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಡಾ. ಅಂಜಲಿ ನಿಂಬಾಳ್ಕರ್ ವಿಶೇಷ ಪೂಜೆ ನೆರವೇರಿಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಕಾರವಾರ ಶಾಸಕ ಸತೀಶ್ ಸೈಲ್, ಮುಖಂಡರಾದ ನಿವೇದಿತ್ ಆಳ್ವಾ, ಸಾಯಿ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಇಂದು ಉತ್ತರ ಕನ್ನಡ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾವೆಲ್ಲರೂ ಒಟ್ಟಾಗಿ ನಮ್ಮ ನೆಲ, ನಮ್ಮ ಜಲ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ಮುಂದಿನ ಪೀಳಿಗೆಗೆ ಸುಭದ್ರ ಉತ್ತರ ಕನ್ನಡವನ್ನು ನಿರ್ಮಾಣ ಮಾಡೋಣ ಎಂದು ನುಡಿದರು.