ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನೇದಿನೇ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ಟಿಕೆಟ್ ಘೋಷಣೆಯಾದ ದಿನದಿಂದಲೇ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಆರಂಭಿಸಿರುವ ಡಾ. ಅಂಜಲಿ ಎಲ್ಲ ವರ್ಗದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಮತ್ತೊಂದೆಡೆ ಟಿಕೆಟ್ ವಂಚಿತ ಅನಂತ ಕುಮಾರ್ ಹೆಗಡೆ ಮತ್ತು ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವಿನ ಒಳಜಗಳಗಳಿಂದಾಗಿ ಬಿಜೆಪಿ ಪಾಳಯ ಮಂಕಾಗಿ ಕುಳಿತಿದ್ದು, ಹಿನ್ನೆಡೆ ಅನುಭವಿಸುತ್ತಿದೆ.
ಟಿಕೆಟ್ ನಿರಾಕರಣೆಯಿಂದ ಸಿಟ್ಟಿಗೆದ್ದಿರುವ ಅನಂತ್ ಕುಮಾರ್ ಹೆಗಡೆ ತಟಸ್ಥವಾಗಿಯೇ ಉಳಿದಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾಗಲು ಬಯಸಿದರೂ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಅನಂತ ಕುಮಾರ್ ಹೆಗಡೆ ಅನುಯಾಯಿಗಳೂ ಸಹ ಮೌನವಾಗಿ ಉಳಿದಿದ್ದಾರೆ. ʻನಮ್ಮವರಿಗೆ ಟಿಕೆಟ್ ಕೊಟ್ಟಿಲ್ಲ, ಯಾರು ಗೆದ್ದರೆ ನಮಗೇನು?ʼ ಎಂದು ಅನಂತ್ ಅನುಯಾಯಿಗಳು ಅಭಿಪ್ರಾಯಪಡುತ್ತಿದ್ದಾರೆ. ಮೊದಲಿನಿಂದಲೂ ಅನಂತ್ ಕುಮಾರ್ ಹೆಗಡೆ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ ಸಂಬಂಧ ಚೆನ್ನಾಗೇನೂ ಇರಲಿಲ್ಲ. ಟಿಕೆಟ್ ಘೋಷಣೆಯ ನಂತರ ಇಬ್ಬರ ನಡುವಿನ ಬಿರುಕು ಮತ್ತಷ್ಟು ಆಳವಾಗಿದೆ. ನಾವಿಬ್ಬರೂ ಅಣ್ಣತಮ್ಮಂದಿರಿದ್ದಂತೆ, ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳುತ್ತಿದ್ದಾರಾದರೂ ಅಂಥ ಬೆಳವಣಿಗೆಗಳೇನೂ ಸಂಭವಿಸುವ ಹಾಗೆ ಕಾಣುತ್ತಿಲ್ಲ.
ಕ್ಷೇತ್ರಕ್ಕೆ ಅಭ್ಯರ್ಥಿಯಾದ ನಂತರ ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಚುರುಕಾಗಿ ಓಡಾಡುತ್ತಿದ್ದು, ಎಲ್ಲೆಡೆ ಅವರಿಗೆ ಅಭಿಮಾನದ ಸ್ವಾಗತ ಎದುರಾಗುತ್ತಿದೆ. ಟಿಕೆಟ್ ಘೋಷಣೆಯ ನಂತರ ಅವರ ಹುಟ್ಟೂರು ಖಾನಾಪುರದಲ್ಲಿ ಅಭಿಮಾನಿಗಳು ಹೂಮಳೆಗರೆದು ಸ್ವಾಗತಿಸಿದ್ದರು. ಇದಾದ ನಂತರ ಉತ್ತರ ಕನ್ನಡ ಕ್ಷೇತ್ರದ ಎಲ್ಲ ತಾಲ್ಲೂಕುಗಳಲ್ಲಿ ಅವರು ಓಡಾಟ ಆರಂಭಿಸಿದ್ದಾರೆ.
ಉತ್ತರ ಕನ್ನಡದ ಯಲ್ಲಾಪುರ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಅನೇಕ ಹೆಣ್ಣುಮಕ್ಕಳು ತಮ್ಮ ಮನೆಯ ಮಗಳಿನಂತೆ ಉಡಿ ತುಂಬಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಕಾರವಾರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಾ. ಅಂಜಲಿ, “ಇದು ಕಾಂಗ್ರೆಸ್- ಬಿಜೆಪಿ ನಡುವಿನ ಚುನಾವಣೆಯಲ್ಲ. ಬಡವರು ಮತ್ತು ಅದಾನಿ-ಅಂಬಾನಿ ವಿರುದ್ಧದ ಚುನಾವಣೆ. ಯುವಕರ ಕೈಗೆ ಉದ್ಯೋಗ ಒದಗಿಸುವ ಚುನಾವಣೆ. ರೈತರಿಗೆ ನ್ಯಾಯ ನೀಡುವ ಚುನಾವಣೆ. ಮಹಿಳೆಯರಿಗೆ ಮಾನ- ಸಮ್ಮಾನ ನೀಡುವ ಚುನಾವಣೆ. 30 ವರ್ಷಗಳಿಂದ ದೆಹಲಿಯಲ್ಲಿ ಬಿಜೆಪಿ ಸಂಸದರು ಏನನ್ನೂ ಮಾತನಾಡಿಲ್ಲ. ನೀವೆಲ್ಲ ಆಶೀರ್ವಾದ ಮಾಡಿದರೆ ಕ್ಷೇತ್ರದ ಹೆಸರನ್ನ ದೆಹಲಿಯವರೆಗೂ ಒಯ್ಯುತ್ತೇನೆ. ಜಿಲ್ಲೆಯ ಸಮಸ್ಯೆಗಳನ್ನ ಪರಿಹರಿಸಲು ಎಲ್ಲರೊಂದಿಗೆ ಚರ್ಚಿಸಿ ಶ್ರಮಿಸುತ್ತೇನೆ. ಖಾನಾಪುರದಿಂದ ಬಂದಿದ್ದರೂ ನಿಮ್ಮನೆ ಮಗಳೆಂದು ಆಶೀರ್ವದಿಸಿ” ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಮಂಕಾಳ ಎಸ್.ವೈದ್ಯ, ಶಾಸಕ ಸತೀಶ್ ಸೈಲ್, ಮುಖಂಡರಾದ , ಸಾಯಿ ಗಾಂವ್ಕರ್, ಸತೀಶ್ ನಾಯ್ಕ, ಸಮೀರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಅಂಕೋಲದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಭಾಂಗಣ ಕಾರ್ಯಕರ್ತರಿಂದ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು. ಅಲ್ಲೂ ಸಹ ಸಚಿವರಾದ ಮಂಕಾಳ ಎಸ್.ವೈದ್ಯ, ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರಿಗೆ ತಾವು ಬೆನ್ನೆಲುಬಾಗಿ ನಿಲ್ಲುವುದಾಗಿ ಘೋಷಿಸಿದರು. ಮುಖಂಡರಾದ ಸಾಯಿ ಗಾಂವ್ಕರ್, ಪಾಂಡುರಂಗ ಗೌಡ, ಕೆ.ಹೆಚ್ ಗೌಡ, ವಿನೋದ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಬನವಾಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ, “ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶ್ರೀ ರಾಹುಲ್ ಗಾಂಧಿಯವರು ಘೋಷಿಸಿದಂತೆ ಪಂಚ ನ್ಯಾಯ ಜಾರಿಗೆ ತರುವುದು ಗ್ಯಾರಂಟಿ” ಎಂದು ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಘೋಷಿಸಿದರು. ದಾಂಡೇಲಿಗೂ ಭೇಟಿ ನೀಡಿದ ಅವರು ಅನೇಕ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಕಿತ್ತೂರು ಕ್ಷೇತ್ರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಮುಖಂಡರಾದ ಬಾಬಾಸಾಹೇಬ್ ಪಾಟೀಲ್, ರಾವ್ ಸಾಹೇಬ್ ಪಾಟೀಲ್, ಶಿವನ ಗೌಡ ಪಾಟೀಲ್, ದೀಪಕ್ ಗೌಡ ಪಾಟೀಲ್, ನಿಂಗಪ್ಪ ಅರಕೇರಿ ಮತ್ತು ರೋಹಿಣಿ ಬಾಬಾಸಾಹೇಬ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿಯವರಿಗೆ ಶಕ್ತಿ ತುಂಬುವ ಶಪಥ ಮಾಡಿದರು.
ಹಳಿಯಾಳದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುತ್ಸದ್ಧಿ ಆರ್.ವಿ.ದೇಶಪಾಂಡೆ ಭಾಗವಹಿಸಿದ್ದರು. ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಈ ಬಾರಿ ಅಂಜಲಿ ನಿಂಬಾಳ್ಕರ್ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರದು ಎಂದು ಹೇಳಿದರು. ಸಚಿವರಾದ ಮಂಕಾಳ ಎಸ್ ವೈದ್ಯ ಕಾಂಗ್ರೆಸ್ ಗೆಲ್ಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು.
ವೃತ್ತಿಯಿಂದ ವೈದ್ಯರಾದ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ತಮ್ಮ ಅಪಾರ ರಾಜಕೀಯ ಜ್ಙಾನ, ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ತುಡಿತ, ಬಡವರ ಪರವಾದ ಕಾಳಜಿಗಳಿಂದ ದಿನೇದಿನೇ ಜನರ ಗಮನ ಸೆಳೆಯುತ್ತಿದ್ದಾರೆ.
ಬಿಜೆಪಿ ಭದ್ರಕೋಟೆಯಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೋಟೆ ಬಿರುಕು ದೊಡ್ಡದಾಗಿ ಕಾಣಿಸುತ್ತಿದ್ದು, ಡಾ.ಅಂಜಲಿ ನಿಂಬಾಳ್ಕರ್ ಪರವಾದ ಒಲವು ಎಲ್ಲೆಡೆ ವ್ಯಕ್ತವಾಗುತ್ತಿದೆ.