ಖಾನಾಪುರ (ಬೆಳಗಾವಿ ಜಿಲ್ಲೆ): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ, ಸಂಭ್ರಮದ ಹೂಮಳೆಯೊಂದಿಗೆ ಹರ್ಷೋಧ್ಘಾರದ ಬೆಂಬಲ ವ್ಯಕ್ತವಾಯಿತು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆಯಾದ ನಂತರ ಮೊದಲ ಬಾರಿಗೆ ಖಾನಾಪುರ ಶನಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಡಾ. ಅಂಜಲಿ ನಿಂಬಾಳ್ಕರ್ ಆಗಮಿಸಿದಾಗ ಸಾವಿರಾರು ಅಭಿಮಾನಿಗಳು ನೆರೆದು ಪುಷ್ಪವೃಷ್ಟಿ ಮಾಡಿದರು. ಈ ಸಂದರ್ಭದಲ್ಲಿ ನಮ್ಮ ಮುಂದಿನ ಎಂಪಿ ಡಾ. ಅಂಜಲಿ ನಿಂಬಾಳ್ಕರ್ ಎಂಬ ಘೋಷಣೆಗಳು ಕೇಳಿ ಬಂದವು.
ಖಾನಾಪುರದವರಿಗೆ ಈ ಬಾರಿ ಲೋಕಸಭಾ ಕ್ಷೇತ್ರದ ಟಿಕೆಟ್ ದೊರೆತಿರುವುದರಿಂದ ಇಡೀ ಕ್ಷೇತ್ರದಾದ್ಯಂತ ಸಂಭ್ರಮ ಮನೆ ಮಾಡಿದ್ದು, ಈ ಬಾರಿ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ ಅವರ ಪರವಾದ ಅಲೆಯೇ ಏಳುತ್ತಿದೆ.
ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಚಿವರುಗಳಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ವಿಧಾನಪರಿಷತ್ ಸದಸ್ಯ ಎಚ್.ಚನ್ನರಾಜ್ ಸೇರಿದಂತೆ ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ವೃತ್ತಿಯಿಂದ ವೈದ್ಯರಾಗಿರುವ ಡಾ.ಅಂಜಲಿ ನಿಂಬಾಳ್ಕರ್, ರಾಜಕೀಯ ಸೇರ್ಪಡೆಗೊಂಡು ಖಾನಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಅವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಇಳಿಸುತ್ತಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಹೆಸರು ಇನ್ನೂ ಇಲ್ಲಿ ಅಂತಿಮಗೊಂಡಿಲ್ಲ. ಐದು ಬಾರಿ ಸಂಸದರಾದರೂ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡದೇ ಜನರ ವಿರೋಧ ಕಟ್ಟಿಕೊಂಡಿರುವ ಅನಂತ ಕುಮಾರ್ ಹೆಗಡೆಯವರಿಗೆ ಈ ಬಾರಿ ಟಿಕೆಟ್ ಕೊಡದೇ ಇರುವ ಸಾಧ್ಯತೆ ಇದ್ದು, ಅವರ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ.