ಉತ್ತರ ಪ್ರದೇಶ ರಾಜ್ಯ ವಿಭಜನೆಯ ಪ್ರಸ್ತಾವನೆ | ಇಂಡಿಯಾ ಮೈತ್ರಿಕೂಟಕ್ಕೆ ಲಾಭವೇ? ನಷ್ಟವೇ?

Most read

2012-13 ರಲ್ಲಿ ಡಾ. ಮನಮೋಹನ್ ಸಿಂಗ್ ಸರಕಾರ (UPA ಸರಕಾರ) ಆಂಧ್ರ ಪ್ರದೇಶ ರಾಜ್ಯವನ್ನು ತೆಲಂಗಾಣ -ಆಂಧ್ರ ಎಂದು ವಿಭಜಿಸಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತು. ಒಂದು ವೇಳೆ ಅಂದು 9 ಕೋಟಿ ಜನಸಂಖ್ಯೆ ಇದ್ದ ಆಂಧ್ರ ಪ್ರದೇಶವನ್ನು ವಿಭಜಿಸುವ ಬದಲು ಅಂದು 18 ಕೋಟಿ ಜನಸಂಖ್ಯೆ ಇದ್ದ ಉತ್ತರ ಪ್ರದೇಶವನ್ನು ವಿಭಜಿಸಿದ್ದರೆ ಇಂದು ಕಾಂಗ್ರೆಸ್ ಪಕ್ಷ ತೆಲಂಗಾಣ-ಆಂಧ್ರದಲ್ಲಿ ತನ್ನ ಆಳ ಬೇರು ಉಳಿಸಿಕೊಳ್ಳುವುದರ ಜತೆಗೆ ಉತ್ತರ ಪ್ರದೇಶದ ವಿಭಜಿತ ನಾಲ್ಕೂ ರಾಜ್ಯಗಳಲ್ಲಿ ಮೂಲ ಬೇರು ಉಳಿಸಿಕೊಳ್ಳುತ್ತಿತ್ತು- ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಸೋನಿಯಾ ಗಾಂಧಿಯವರು ಮೊನ್ನೆ ಒಂದು ಸಭೆಯಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ ಎಂದು ಹೇಳಿದರು.  ಆದರೆ 2012-13 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸ್ವತಃ ಸೋನಿಯಾ ಗಾಂಧಿಯವರ ಕಾಂಗ್ರೆಸ್ ನೇತೃತ್ವದ ಯು‌ಪಿ‌ಎ ಸರಕಾರವೇ ಮಾಡಿರುವ ಎರಡು ದೊಡ್ಡ ತಪ್ಪುಗಳಿಂದಾಗಿ ನಮ್ಮ ಪ್ರಜಾತಂತ್ರ ಇಂದು ಈ ದುಸ್ಥಿತಿಗೆ ತಲುಪಿದೆ ಎಂಬುದನ್ನು ಗಮನಿಸಬೇಕು !

ಮೊದಲನೇ ತಪ್ಪು  2012-13 ರಲ್ಲಿ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಮಾಯಾವತಿಯವರು ತನ್ನ ಬೃಹತ್ ರಾಜ್ಯವನ್ನು ನಾಲ್ಕು ಸಣ್ಣ ರಾಜ್ಯಗಳಾಗಿ ವಿಭಾಗಿಸಬೇಕು ಎಂಬ ಪ್ರಸ್ತಾವನೆಯನ್ನು ಉ.ಪ್ರ ವಿಧಾನಸಭೆಯಲ್ಲಿ ಪಾಸ್ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. ಆದರೆ ಕೇಂದ್ರದ ಕಾಂಗ್ರೆಸ್- ಯು‌ಪಿ‌ಎ ಸರಕಾರವು ಮಾಯಾವತಿಯವರ ಈ ಪ್ರಸ್ತಾವನೆಯನ್ನು ಕಡೆಗಣಿಸಿತು. ಅದರಿಂದಾಗಿ ಇಂದು ಉತ್ತರ ಪ್ರದೇಶ ಭಯಂಕರ ಜಂಗಲ್ ರಾಜ್ಯವಾಗಿದೆ.  ಅದೇ ಸಂದರ್ಭದಲ್ಲಿ ವಿನಾಕಾರಣ ತೆಲಂಗಾಣದ ಟಿ‌ಆರ್‌ಎಸ್ ಒತ್ತಡಕ್ಕೆ ಮಣಿದು ಆಂಧ್ರಪ್ರದೇಶವನ್ನು ವಿಭಾಗಿಸಿ ಅಲ್ಲಿಯೂ ಕೈಸುಟ್ಟುಕೊಂಡಿತು.

ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಂತಹಾ (ಯು ಪಿ) 26 ಕೋಟಿ (ಸರಕಾರಿ ಸಂಖ್ಯೆ 24 ಕೋಟಿ) ಜನಸಂಖ್ಯೆಯುಳ್ಳ ಬಡ ಅವಿದ್ಯಾವಂತ ರಾಜ್ಯದ ಕಾನೂನು ವ್ಯವಸ್ಥೆಯನ್ನು ಬಿ‌ಜೆ‌ಪಿ ಪಕ್ಷ ಬಿಡಿ, ಕಾಂಗ್ರೆಸ್ ಸಹಿತ ಯಾವುದೇ ಪಕ್ಷವೂ ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶದ ಭೌಗೋಳಿಕ ವಿಸ್ತಾರ ಕರ್ನಾಟಕಕ್ಕಿಂತ ಸ್ವಲ್ಪ ಹೆಚ್ಚಿದೆ ಅಷ್ಟೇ,  ಆದರೆ ಯು.ಪಿ ಯ ಜನಸಂಖ್ಯೆ ಕರ್ನಾಟಕಕ್ಕಿಂತ ನಾಲ್ಕು ಪಟ್ಟು ದೊಡ್ಡದಿದೆ.  ಬಡತನ, ನಿರಕ್ಷರತೆ, ಮಹಿಳೆಯರ-ಮಕ್ಕಳ ಶೋಷಣೆ ಮತ್ತು ಅಪರಾಧಿಗಳಿಂದ ತುಂಬಿರುವ ಯು.ಪಿ ಒಂದು ಜಂಗಲ್ ರಾಜ್ಯವಾಗಿದೆ.  ಹಾಗಾಗಿ 2013 ರಲ್ಲಿ ಉತ್ತರ ಪ್ರದೇಶದ ವಿಭಜನೆಯಾಗಿ ನಾಲ್ಕು ಸಣ್ಣ ರಾಜ್ಯವಾಗಿದ್ದರೆ ಅಲ್ಲಿ ಅಭಿವೃದ್ಧಿ ವೇಗ ಪಡೆಯುತ್ತಿತ್ತು ಹಾಗೂ ಕಾನೂನು ವ್ಯವಸ್ಥೆ ಸರಿಪಡಿಸಬಹುದಿತ್ತು.

ಉತ್ತರ ಪ್ರದೇಶವು ನಾಲ್ಕು ಸಣ್ಣ ರಾಜ್ಯಗಳಾದರೆ ಪಶ್ಚಿಮ ಭಾಗಕ್ಕೆ ಹರಿತ್ ಪ್ರದೇಶ, ಮಧ್ಯದ ಭಾಗಕ್ಕೆ ಅವಧಾ, ರಾಜಸ್ಥಾನಕ್ಕೆ ತಾಗಿರುವ ನೈರುತ್ಯ ಭಾಗಕ್ಕೆ ಬುಂದೇಲಖಂಡ, ಹಾಗೂ ಬಿಹಾರಕ್ಕೆ ತಾಗಿರುವ ಭಾಗಕ್ಕೆ ಪೂರ್ವಂಚಲ ಎಂದು ಮಯಾವತಿಯವರು 2012-13 ರಲ್ಲಿಯೇ ಹೆಸರು ಸೂಚಿಸಿದ್ದರು. ದಿಲ್ಲಿಗೆ ಹತ್ತಿರವಿರುವ ಆಧುನಿಕ “ಗ್ರೇಟರ್ ನೋಯ್ಡಾ” ನಗರವನ್ನು ಹೊಂದಿರುವ ಪಶ್ಚಿಮ-ಉ.ಪ್ರ ಈಗಾಗಲೇ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಹರಿಯಾಣಾದಷ್ಟೇ ಅಭಿವೃದ್ಧಿ ಹೊಂದಿದೆ.  ಆದರೆ ಬಿಹಾರಕ್ಕೆ ತಾಗಿರುವ ಪೂರ್ವ-ಉ.ಪ್ರ (ಪೂರ್ವಾಂಚಲ) ಮಾತ್ರ ಆರ್ಥಿಕವಾಗಿ ಬಿಹಾರಕ್ಕಿಂತಲೂ ಹೆಚ್ಚು ಹಿಂದುಳಿದಿದೆ. 2013 ರಲ್ಲಿಯೇ ಉ.ಪ್ರ ವಿಭಜನೆಯಾಗಿದ್ದರೆ 2017 ರಲ್ಲಿ ಆದಿತ್ಯನಾಥರ ಭೀಷಣ ಠಾಕೂರ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಅದು ಕೇವಲ ಪೂರ್ವಾಂಚಲ ಎಂಬ ಪೂರ್ವ-ಉ ಪ  ದ ಸಣ್ಣ ಪ್ರದೇಶಕ್ಕೆ ಸೀಮಿತವಾಗಿರುತ್ತಿತ್ತು. ಉಳಿದ ಮೂರು ಭಾಗಗಳು ಬೇರೆ ನೇತಾರರ  ಅಥವಾ ಬೇರೆ ಪಕ್ಷಗಳ ಆಡಳಿತದಲ್ಲಿ ಉತ್ತಮ ಕಾನೂನು ವ್ಯವಸ್ಥೆ ಹೊಂದಿರುತ್ತಿದ್ದವು. ಅದೇ 2012-13ರ ಮಾಯಾವತಿಯವರ ಹಳೆಯ ಪ್ರಸ್ತಾವನೆಯನ್ನು ಈಗಲೂ ಊರ್ಜಿತಗೊಳಿಸಬಹುದು. ಆದರೆ ಎಲ್ಲಾ ಪಕ್ಷಗಳಲ್ಲೂ ಇಚ್ಛಾ ಶಕ್ತಿಯ ಕೊರತೆ ಇದೆ.  ಜತೆಗೆ ಚುನಾವಣೆಯ ಲಾಭ-ನಷ್ಟದ ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರವೂ ಅಡಗಿದೆ.

ಗ್ರೇಟರ್‌ ನೋಯ್ಡಾ ಸಿಟಿ

ಉತ್ತರ ಪ್ರದೇಶದ ಎಲ್ಲಾ ರಾಜಕಾರಣಿಗಳು, ಹಿರಿಯ ಸರಕಾರಿ ನೌಕರರು ಮತ್ತು ಬಲಾಢ್ಯ ಉದ್ಯಮಿಗಳು ತಮ್ಮ ಕಪ್ಪು ಸಂಪಾದನೆಗಳನ್ನು ದಿಲ್ಲಿಯ ಹೊರವಲಯದ ಆಧುನಿಕ ನೋಯ್ಡಾ ನಗರದಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗಾಗಿ ಪಶ್ಚಿಮ ಯು.ಪಿ ಯವರ ಹೊರತು ಉಳಿದ ಮೂರು ಭಾಗದ ರಾಜಕಾರಣಿಗಳು ಮತ್ತು ಉದ್ಯಮಿಗಳು ಈ ನೋಯಿಡಾ ನಗರ ತಮ್ಮ ಅಧಿಕಾರದ ವ್ಯಾಪ್ತಿಯಿಂದ ಹೊರ ಹೋಗುವುದನ್ನು ಸಹಿಸಲಾರರು. ಈಗ ಈ ಸ್ಥಾಪಿತ ಹಿತಾಸಕ್ತಿಗಳೆ ಉ.ಪ್ರ ರಾಜ್ಯವನ್ನು ವಿಭಜಿಸುವುದಕ್ಕೆ ದೊಡ್ಡ ಅಡ್ಡಗಾಲು ಹಾಕುತ್ತಿರುವುದು.  ಆದರೂ ಈ ಚುನಾವಣೆಯ ಸಮಯದಲ್ಲಿ ಉ.ಪ್ರ.ದ  ವಿಭಜನೆಯ ಪ್ರಸ್ತಾಪ ಸುದ್ದಿಯಾದರೆ ಅಲ್ಲಿಯ ಸಾಮಾನ್ಯ ಜನರಲ್ಲಿ ಸಂಚಲನ ಮೂಡುವುದು ಖಚಿತ. ಯಾಕೆಂದರೆ ಈಗಿರುವ ಒಂದು ರಾಜಧಾನಿಯ ಜತೆಗೆ ಮೂರು ಹೊಸ ರಾಜಧಾನಿ ಕಟ್ಟುವುದರಿಂದ ಲಕ್ಷಾಂತರ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಖಾಸಗಿ ವಲಯದಲ್ಲಿ ಸಣ್ಣ ವ್ಯಾಪಾರಸ್ಥರಿಗೆ ಅಪಾರ ಅವಕಾಶ ತೆರೆದುಕೊಳ್ಳುತ್ತದೆ.  ಇದು ಅಲ್ಲಿಯ ರೋಗಿಷ್ಠ ಆರ್ಥಿಕತೆಗೆ ಕಾಯಕಲ್ಪ ಒದಗಿಸುವುದು ಖಚಿತ.

ಆಂಧ್ರವನ್ನು 2013 ರಲ್ಲಿ ವಿಭಜಿಸಿದಾಗ ಆಡಳಿತಾತ್ಮಕವಾಗಿ ಹೆಚ್ಚು ಸಮಸ್ಯೆ ಆಗಲಿಲ್ಲ. ಹಾಗಿರುವಾಗ ಉ.ಪ್ರ ವನ್ನು ಈಗ ನಾಲ್ಕು ರಾಜ್ಯಗಳಾಗಿ ವಿಭಾಗಿಸಿದರೂ ಹೆಚ್ಚಿನ ಆಡಳಿತಾತ್ಮಕ ಸಮಸ್ಯೆ ಉಂಟಾಗಲಾರದು. ರಾಜ್ಯದ ಮಧ್ಯ ಭಾಗದಲ್ಲಿರುವ ಅವಧ ಪ್ರದೇಶಕ್ಕೆ ಈಗಾಗಲೇ ಇರುವ ಲಖನೌ ಮಹಾನಗರವೇ ರಾಜಧಾನಿಯಾಗಿ ಮುಂದುವರಿಯುತ್ತದೆ. ಇನ್ನು ಉಳಿದ ಮೂರು ಭಾಗಕ್ಕೆ ಹೊಸ ರಾಜಧಾನಿ ಬೇಕಾಗಬಹುದು. ಪಶ್ಚಿಮದ ಹರಿತ್ ಪ್ರದೇಶಕ್ಕೆ ನೋಯ್ಡಾ, ಅಲಿಗಢ, ಮೀರತ್ ಅಥವಾ ಆಗ್ರಾ ರಾಜಧಾನಿಯಾಗಬಹುದು, ನೈರುತ್ಯದ ಬುಂದೇಲಖಂಡ ಭಾಗಕ್ಕೆ ಝಾನ್ಸಿ ನಗರ ರಾಜಧಾನಿ ಆಗಬಹುದು. ಈಗಲೂ ಅತ್ಯಂತ ಹಿಂದುಳಿದಿರುವ ಪೂರ್ವ ಭಾಗದ ಪೂರ್ವಾಂಚಲಕ್ಕೆ ಗೋರಖಪುರ ಅಥವಾ ವಾರಣಾಸಿ ರಾಜಧಾನಿ ಆಗಬಹುದು.

ಇದರಿಂದ ಇತರ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುವ ಲಾಭವೆಂದರೆ ನಮ್ಮ ತೆರಿಗೆ ಸಂಗ್ರಹವನ್ನು ಉತ್ತರ ಪ್ರದೇಶದ ಗುಡಾಣ ಹೊಟ್ಟೆಗೆ ಸುರಿಯಬೇಕಿಲ್ಲ. ಯಾಕೆಂದರೆ ಪಶ್ಚಿಮದ ಹರಿತ್ ಪ್ರದೇಶ ಹರಿಯಾಣಾದಷ್ಟೆ ಕೈಗಾರಿಕೆ ಮತ್ತು ಕೃಷಿಯಲ್ಲಿ ಮುಂದುವರಿದಿದೆ. ಹಾಗಾಗಿ ಅವರ ತೆರಿಗೆ ಸಂಗ್ರಹ ಅವರ ಅಭಿವೃದ್ಧಿಗೆ ಸಾಕಾಗುತ್ತದೆ. ಇನ್ನು ಮಧ್ಯದ ಅವಧಾ ಪ್ರದೇಶದಲ್ಲಿಯೂ ಕಾನ್ಪುರದಂತಹಾ 35 ಲಕ್ಷ ಜನಸಂಖ್ಯೆಯ ಔದ್ಯೋಗಿಕ ನಗರವಿದೆ ಹಾಗೂ 40 ಲಕ್ಷ ಜನಸಂಖ್ಯೆಯ ರಾಜಧಾನಿ ಲಖನೌ ನಗರವಿದೆ,  ಜತೆಗೆ ಪ್ರಯಾಗರಾಜ್-ಅಲಹಾಬಾದ್, ಮತ್ತು ಹೊಸ ಅಯೋಧ್ಯೆಯಂತಹ ದೊಡ್ಡ ದೊಡ್ಡ ಶ್ರೀಮಂತ ಧಾರ್ಮಿಕ ಪ್ರವಾಸಿ ಕೇಂದ್ರಗಳಿವೆ.  ಇನ್ನು ದಕ್ಷಿಣದ ಬುಂಡೆಲ-ಖಂಡದಲ್ಲಿ ಝಾನ್ಸಿಯಂತಹ ದೊಡ್ಡ ಔದ್ಯೋಗಿಕ ನಗರವಿದೆ, ಅಲ್ಲಿ ಸುತ್ತಮುತ್ತ ಅನೇಕ  ಮಿಲಿಟರಿ ರಕ್ಷಣಾ ಸಾಮಾಗ್ರಿ ಉತ್ಪಾದಿಸುವ ದೊಡ್ಡ ಸರಕಾರಿ ಕೈಗಾರಿಕೆಗಳಿವೆ. 

ಪ್ರಯಾಗ ರಾಜ್

ಆದರೆ ಪೂರ್ವಾಂಚಲ ಪ್ರದೇಶವು ಬಿಹಾರಕ್ಕಿಂತಲೂ ಹೆಚ್ಚು ಬಡತನ ಹೊಂದಿದ್ದರೂ ಅಲ್ಲಿ ಕಾಶಿ-ವಾರಣಾಸಿ, ಗೋರಖಪುರ್, ಖುಷಿನಗರ, ಸಿದ್ಧಾರ್ಥ ನಗರದಂತಹಾ ಪ್ರಸಿದ್ಧ ಪ್ರವಾಸಿ ಕೇಂದ್ರಗಳಿದ್ದು ಅವು ಭವಿಷ್ಯದಲ್ಲಿ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಮೊತ್ತದ ತೆರಿಗೆ ಗಳಿಸಲು ಶಕ್ತವಾಗಿವೆ.  ಆದರೂ ಕೇಂದ್ರದಿಂದ ಧನ ಸಹಾಯ ಬೇಕಾಗಬಹುದು.  ಹೀಗೆ ಆರ್ಥಿಕವಾಗಿ ಸಧೃಡ ಇರುವ ಉತ್ತರ ಪ್ರದೇಶದ ಮೂರು ಭಾಗಗಳಿಗೆ  ದಕ್ಷಿಣ ಭಾರತದ ರಾಜ್ಯಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ ದೊಡ್ಡ ಪಾಲು ಕೊಡಬೇಕಾಗಿಲ್ಲ. ಅವರವರ ತೆರಿಗೆ ಗಳಿಕೆಯೇ ಅವರಿಗೆ ಸಾಕಾಗುತ್ತದೆ. ಆದರೆ ಕೇವಲ ಪೂರ್ವಾಂಚಲಕ್ಕೆ ಕೇಂದ್ರದಿಂದ ಧನಸಹಾಯ ಬೇಕಾಗುತ್ತದೆ.

ಈಗ ಕೇಂದ್ರ ಸರಕಾರವು ಉತ್ತರ ಪ್ರದೇಶದ ಒಟ್ಟು 26 ಕೋಟಿಯ ಬೃಹತ್  ಜನಸಂಖ್ಯೆಯನ್ನು ನಮಗೆ ತೋರಿಸಿ ಅವರಿಗೆ ಅನುಕಂಪದ ಆಧಾರದಲ್ಲಿ ಕೇಂದ್ರದಿಂದ ಹೆಚ್ಚು ಸಹಾಯ ಬೇಕು ಎಂಬ ನೆಪವೊಡ್ಡಿ  ನಮ್ಮ ದಕ್ಷಿಣ ರಾಜ್ಯಗಳ  ತೆರಿಗೆ ಸಂಗ್ರಹದಿಂದ ಅತಿ ದೊಡ್ಡ ಪಾಲನ್ನು ರೋಗಿಷ್ಠ ರಾಜ್ಯ ಉ.ಪ್ರದ  ಬಕಾಸುರ ಹೊಟ್ಟೆಗೆ ಸುರುವುತ್ತಿದೆ.  ಒಂದು ವೇಳೆ ಉ.ಪ್ರ ವಿಭಜನೆಯಾದರೆ ಅಲ್ಲಿಯ ಮುಂದುವರಿದ ಮೂರು ಭಾಗಕ್ಕೆ ನಮ್ಮ ದಕ್ಷಿಣ ಭಾರತದ ತೆರಿಗೆ ಸಂಗ್ರಹವನ್ನು ಉತ್ತರ ಪ್ರದೇಶವು  ಬಡ ರಾಜ್ಯ ಎಂಬ ನೆಪದಲ್ಲಿ ಧಾರೆ ಎರೆಯಬೇಕಿಲ್ಲ.  ನಮ್ಮ ಕರ್ನಾಟಕದ ತೆರಿಗೆ ಸಂಗ್ರಹದಲ್ಲಿ ದೊಡ್ಡ ಪಾಲು ಕೇಂದ್ರ ಸರಕಾರದಿಂದ ನಮಗೇ ಮರಳಿ ಸಿಗುತ್ತದೆ.  ಹಾಗಾಗಿ ಉತ್ತರ ಪ್ರದೇಶದ ವಿಭಜನೆಯು ದಕ್ಷಿಣ ಭಾರತದ ರಾಜ್ಯಗಳ ಆರ್ಥಿಕ ಹಿತಾಸಕ್ತಿಗೂ ಪೂರಕವಾಗಿದೆ.

ಇನ್ನೊಂದು ಮುಖ್ಯ ವಿಷಯವೆಂದರೆ ಉ.ಪ್ರ ದ ಎಲ್ಲಾ ನಾಲ್ಕೂ ಭಾಗಗಳಲ್ಲಿ ತೆರಿಗೆ ಸಂಗ್ರಹ ಸಮರ್ಪಕವಾಗಿಲ್ಲ.  ಅಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ದಲಾಲರ ಮಾಫಿಯಾದ್ದೆ ಕಾರುಬಾರು. ಎಲ್ಲಾ  ಕ್ಷೇತ್ರದಲ್ಲಿಯೂ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ.  ಅದರಿಂದಾಗಿ ನೇರ ತೆರಿಗೆಯಾಗಲಿ ಅಥವಾ ಪರೋಕ್ಷ ತೆರಿಗೆಯಾಗಲಿ ಮುಕ್ಕಾಲು ಪಾಲು ಅಲ್ಲಿ ಸೋರಿಕೆಯಾಗಿ ಹೋಗುತ್ತದೆ.  ಹಾಗಾಗಿ ಆ ರಾಜ್ಯದ ವಿಭಜನೆಯಿಂದ ತೆರಿಗೆ ಸಂಗ್ರಹ ಇಲಾಖೆಗಳನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸ ಬಹುದು. ಅಲ್ಲಿಯ ತೆರಿಗೆ ಸಂಗ್ರಹ ಉತ್ತಮವಾದರೆ ದಕ್ಷಿಣ ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ಅವರ ಅವಲಂಬನೆ ಕಡಿಮೆಯಾಗುತ್ತದೆ.  (ನಾನು ನನ್ನ ಬ್ಯಾಂಕ್ ಸರ್ವಿಸ್ ನಲ್ಲಿ ನಾಲ್ಕು ವರ್ಷ ಉತ್ತರ ಪ್ರದೇಶದಲ್ಲಿ ಉದ್ಯೋಗ ಮಾಡಿ ಬಂದಿದ್ದೇನೆ. ಹಾಗಾಗಿ ಅಲ್ಲಿಯ ವಿಷಯಗಳು ಗೊತ್ತಿವೆ.  ಅಲ್ಲಿಯ 26 ಕೋಟಿ ಜನಸಂಖ್ಯೆಯಲ್ಲಿ ಹಲವಾರು ಉಪಭಾಷೆ ಮತ್ತು ಉಪಸಂಸ್ಕೃತಿಗಳಿದ್ದು, ಅಲ್ಲಿಯ ಬೇರೆ ಬೇರೆ ಉಪಭಾಷೆಯ ಜನರ ಸ್ವಭಾವ, ನಡವಳಿಕೆ, ಜಾತಿ ಪದ್ಧತಿ ಮತ್ತು ಆಹಾರ ಪದ್ಧತಿಗಳಲ್ಲೂ ಬಹಳ ವ್ಯತ್ಯಾಸಗಳಿವೆ.  ಉ.ಪ್ರದ ಉಪಭಾಷೆಗಳೆಂದರೆ  ಪಶ್ಚಿಮದಲ್ಲಿ ಕೌರವಿ ಬೃಜ್ ಭಾಷಾ, ನೈರುತ್ಯದಲ್ಲಿ ಬುಂದೇಲಿ, ಮಧ್ಯದಲ್ಲಿ ಕನೌಜಿ, ಅವಧಿ ಮತ್ತು ಉರ್ದು, ಹಾಗೂ ಪೂರ್ವದಲ್ಲಿ ಭೋಜಪುರಿ ಮತ್ತು ಭಗೇಲಿ ಉಪಭಾಷೆಗಳನ್ನು ಸ್ಥಳೀಯ ಜನರು ಮಾತಾಡುತ್ತಾರೆ. ಇವೆಲ್ಲಾ ಪುರಾತನ ಪ್ರಾಕೃತ-ಪಾಲಿ ಭಾಷೆಯಿಂದ ಟಿಸಿಲೊಡೆದ ಭಾಷೆಗಳು).

ಉತ್ತರಾಖಂಡ

1999 ರಲ್ಲಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಉತ್ತರ ಪ್ರದೇಶದಿಂದ ಒಂದು ಸಣ್ಣ ಭಾಗವನ್ನು ಕೊರೆದು ಉತ್ತರಾಖಂಡ ರಾಜ್ಯವನ್ನು ರಚಿಸಿದರು. ಆಗ ಅಲ್ಲಿಯ ಜನಸಂಖ್ಯೆ ಕೇವಲ 50 ಲಕ್ಷ ಮಾತ್ರವಿತ್ತು. ಈಗ 90 ಲಕ್ಷವಿದೆ.   ಇಷ್ಟು ಸಣ್ಣ ರಾಜ್ಯವನ್ನು ರಚಿಸಲು ಕಾರಣ ಉತ್ತರಾಖಂಡದ ಬ್ರಾಹ್ಮಣ ಮತ್ತು ಠಾಕೂರ್ ಮೇಲ್ಜಾತಿಯವರ ಒತ್ತಡ. ಈ ಚಿಕ್ಕ ರಾಜ್ಯದ ಜನಸಂಖ್ಯೆಯಲ್ಲಿ ಬ್ರಾಹ್ಮಣರು 23% ಇದ್ದರೆ ಠಾಕೂರರು 27% ಇದ್ದಾರೆ.  ಅಲ್ಲಿಯ ರಾಜಕಾರಣ ಸಂಪೂರ್ಣ ಈ ಎರಡು ಮೇಲ್ಜಾತಿಯ ಕಪಿ ಮುಷ್ಟಿಯಲ್ಲಿ ಇದೆ.  ಆದರೆ ಬೃಹತ್ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು 12% ಇದ್ದರೆ ಠಾಕೂರರು ಕೇವಲ 6% ಮಾತ್ರ ಇರುವುದು.  ಅಲ್ಲಿಯ ದೊಡ್ಡ ಸಮುದಾಯವೆಂದರೆ 16% ಇರುವ ಯಾದವರು ಮತ್ತು 7% ಇರುವ ಕುರ್ಮೀ ಕ್ಷತ್ರಿಯರು. ಮುಸ್ಲಿಮರು ಉ.ಪ್ರದ ಎಲ್ಲೆಡೆ 18% ಗೂ ಹೆಚ್ಚಿದ್ದಾರೆ. ಜಾಟರು ಪ್ರಬಲ ಜಾತಿಯಾದರೂ ಅವರು ಕೇವಲ ಪಶ್ಚಿಮ ಯು.ಪಿ ಗೆ ಮಾತ್ರ ಸೀಮಿತ.  ಹಾಗಾಗಿ ಈ ಯಾವ ದೊಡ್ಡ ಜಾತಿಗಳೂ ಉ.ಪ್ರದ ವಿಭಜನೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ.

ಇನ್ನೊಂದು ರೋಗಗ್ರಸ್ತ ರಾಜ್ಯವಾದ ಬಿಹಾರದ ಭೌಗೋಳಿಕ ವಿಸ್ತಾರ ಇರುವುದು ಕರ್ನಾಟಕದ ಅರ್ಧದಷ್ಟು. ಆದರೆ ಅದರ ಜನಸಂಖ್ಯೆ ಕರ್ನಾಟಕದ ದುಪ್ಪಟ್ಟು ಅಂದರೆ 13 ಕೋಟಿ ಇದೆ.  ಈ ಬಿಹಾರ ರಾಜ್ಯದಿಂದ  ಮೈಥಿಲಿ ಭಾಷೆ ಮಾತಾಡುವ ಮಿಥಿಲಾಂಚಲವನ್ನು ಮತ್ತು ಹಿಂದಿ-ಭೋಜಪುರಿ-ಮಾಗಾಹಿ ಭಾಷೆ ಮಾತಾಡುವ ಮಗಧ-ಬಿಹಾರವನ್ನು ಪ್ರತ್ಯೇಕ ರಾಜ್ಯವಾಗಿ ವಿಭಾಗಿಸಿದರೆ ಅಲ್ಲಿಯ ಅಭಿವೃದ್ಧಿಯೂ ವೇಗ ಪಡೆಯುತ್ತದೆ ಮತ್ತು ತೆರಿಗೆ ಸಂಗ್ರಹವೂ ಉತ್ತಮವಾಗುತ್ತದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮಹಾನಗರಕ್ಕೆ ಹತ್ತಿರವಾಗಿರುವ ಮಿಥಿಲಾಂಚಲ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.  ಹಾಗೆ ನೋಡಿದರೆ ಮೈಥಿಲಿ ಭಾಷೆಯು ಹಿಂದಿಗಿಂತ ಬಂಗಾಳಿ ಭಾಷೆಗೆ ಹೆಚ್ಚು ಹತ್ತಿರವಾಗಿದೆ ಮತ್ತು ಬ್ರಿಟಿಷರ ಕಾಲದಿಂದಲೂ ಮಿಥಿಲಾದ ಜನರು ಲಕ್ಷ ಗಟ್ಟಲೆ ಸಂಖ್ಯೆಯಲ್ಲಿ ಕಲ್ಕತ್ತಾಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆ ನಿಂತಿದ್ದಾರೆ ಹಾಗೂ ಅಲ್ಲಿಯ ಸಮಾಜದಲ್ಲಿ ಮತ್ತು ವ್ಯಾಪಾರೋದ್ಯಮದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ.  ಮಿಥಿಲಾಂಚಲ ಪ್ರತ್ಯೇಕ ರಾಜ್ಯವಾದರೆ ಕಲ್ಕಾತ್ತಾದ ಮೈಥಿಲಿ (ಮಿಥಿಲಾ) ಉದ್ಯಮಿಗಳು ಮರಳಿ ಬಂದು ಮಿಥಿಲಾಂಚಲದಲ್ಲಿಯೇ ಉದ್ಯಮ ಸ್ಥಾಪಿಸಬಹುದು. ಇದರಿಂದ ಮಿಥಿಲಾಂಚಲದ  ತೆರಿಗೆ ಸಂಗ್ರಹ ಹೆಚ್ಚಿ ಬಿಹಾರ ರಾಜ್ಯವೂ ನಮ್ಮ ದಕ್ಷಿಣ ಭಾರತದ ತರಿಗೆ ಸಂಗ್ರಹವನ್ನು ಕಬಳಿಸುವ ಸ್ಥಿತಿ ತಪ್ಪುತ್ತದೆ.

2012-13 ರಲ್ಲಿ ಡಾ. ಮನಮೋಹನ್ ಸಿಂಗ್ ಸರಕಾರ/ UPA ಸರಕಾರ ಆಂಧ್ರ ಪ್ರದೇಶ ರಾಜ್ಯವನ್ನು ತೆಲಂಗಾಣ -ಆಂಧ್ರ ಎಂದು ವಿಭಜಿಸಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿತು. ಒಂದು ವೇಳೆ ಅಂದು 9 ಕೋಟಿ ಜನಸಂಖ್ಯೆ ಇದ್ದ ಆಂಧ್ರ ಪ್ರದೇಶವನ್ನು ವಿಭಜಿಸುವ ಬದಲು ಅಂದು 18 ಕೋಟಿ ಜನಸಂಖ್ಯೆ ಇದ್ದ ಉತ್ತರ ಪ್ರದೇಶವನ್ನು ವಿಭಜಿಸಿದ್ದರೆ ಇಂದು ಕಾಂಗ್ರೆಸ್ ಪಕ್ಷ ತೆಲಂಗಾಣ-ಆಂಧ್ರದಲ್ಲಿ ತನ್ನ ಆಳ ಬೇರು ಉಳಿಸಿಕೊಳ್ಳುವುದರ ಜತೆಗೆ ಉತ್ತರ ಪ್ರದೇಶದ ವಿಭಜಿತ ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಮೂಲ ಬೇರು ಉಳಿಸಿಕೊಳ್ಳುತ್ತಿತ್ತು. ಕಡೆ ಪಕ್ಷ ಈಗಿನ 2024 ರ ಲೋಕಸಭಾ ಚುನಾವಣೆಯಲ್ಲಾದರೂ ಕಾಂಗ್ರೆಸ್ ನವರು ಉತ್ತರ ಪ್ರದೇಶದಲ್ಲಿ 2012-13 ರಲ್ಲಿ ತಾವು ಮಾಡಿದ ಘೋರ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿ, ಮುಂದೆ ತಮ್ಮ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾವು ಉತ್ತರ ಪ್ರದೇಶವನ್ನು ನಾಲ್ಕು ಸಣ್ಣ ರಾಜ್ಯಗಳಾಗಿ ವಿಭಾಗಿಸಿ 26 ಕೋಟಿ ಜನರ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಆಶ್ವಾಸನೆ ಕೊಡಬಹುದು. ಇದರಿಂದ ಇಂಡಿಯಾ ಮೈತ್ರಿಗೆ ಯುವಕರ ಬಂಪರ್ ಬೆಂಬಲ ಸಿಗುವ ಸಾಧ್ಯತೆ ಇದೆ.

I.N.D.I.A.

ಕಾಂಗ್ರೆಸ್ ಮಾಡಿರುವ ಎರಡನೇ ದೊಡ್ಡ ತಪ್ಪು ಯಾವುದೆಂದರೆ- 2013 ರಲ್ಲಿಯೇ ಸುಬ್ರಹ್ಮಣ್ಯ ಸ್ವಾಮಿಯವರ ಪಿಟಿಷನ್ ಗೆ ಪ್ರತಿಕ್ರಿಯಿಸಿ ಸುಪ್ರೀಂ ಕೋರ್ಟ್ -ದೇಶದ ಮುಂದಿನ ಎಲ್ಲಾ ಚುನಾವಣೆಯಲ್ಲೂ ಇವಿಎಂ ಜೊತೆಗೆ ಪೇಪರ್ ಟ್ರೇಲ್ (ವಿ‌ವಿಪ್ಯಾಟ್) ಜೋಡಿಸಬೇಕು, ಅಷ್ಟೇ ಅಲ್ಲ ವಿ‌ವಿಪ್ಯಾಟ್ ಗಳಲ್ಲಿಯ ಮತಚೀಟಿಗಳನ್ನು ಪೂರ್ತಿಯಾಗಿ 100% ಎಣಿಸಿ ಇವಿಎಂ ಜೊತೆ ತಾಳೆ ಮಾಡಬೇಕು ಎಂದು ಆದೇಶಿಸಿತ್ತು.  ಆದರೆ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿನ ಈ ಆದೇಶವನ್ನು ಅನುಷ್ಠಾನ ಮಾಡಲಿಲ್ಲ.  ಒಂದು ವೇಳೆ ಆಗಲೇ ಕೇವಲ ದಿಲ್ಲಿಯಲ್ಲಾದರೂ ಇವಿಎಂಗಳಿಗೆ ವಿ‌ವಿಪ್ಯಾಟ್ ಜೋಡಿಸಿ ಪ್ರತಿಯೊಂದು ವಿ‌ವಿಪ್ಯಾಟ್‌ ನಲ್ಲಿಯ ನೂರಕ್ಕೆ-ನೂರು ಮತಚೀಟಿಯನ್ನು ಪೂರ್ತಿ ಎಣಿಸುವ ಪದ್ಧತಿಯನ್ನು ಆಗಿನ ಕೇಂದ್ರದ ಕಾಂಗ್ರೆಸ್ ಸರಕಾರ ಸುರು ಮಾಡಿದ್ದರೆ ನಂತರದ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳಲ್ಲಿ ಇವಿಎಂ ತಿರುಚಿ ಮೋಸ ಮಾಡಲು ಯಾವುದೇ ಪಕ್ಷದವರಿಗೂ ಸಾಧ್ಯವಾಗುತ್ತಿರಲಿಲ್ಲ,

ಹೀಗೆ ಎರಡು ಘೋರ ತಪ್ಪುಗಳು 2012-13 ರಲ್ಲಿ ಕಾಂಗ್ರೆಸ್ಸಿನಿಂದಲೇ ಆಗಿದ್ದರಿಂದ, ನಂತರ ಇವಿಎಂ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಸಂಶಯ ಮೂಡಿಸಿರುವ  ಸರಕಾರವು  ದೇಶದ ಆರ್ಥಿಕತೆಯನ್ನು ನಾಶ ಮಾಡಿರುವುದಲ್ಲದೆ  ಉತ್ತರ ಪ್ರದೇಶವನ್ನೂ ಜಂಗಲ್ ರಾಜ್ಯ ಮಾಡಿತು. ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸೀಟುಗಳಿವೆ. ಅದರಲ್ಲಿ 2019 ರಲ್ಲಿ BJP+ NDA ಕೂಡಿ 72 ಸ್ಥಾನ ಗೆದ್ದು ಬಂಪರ್ ಜಯ ಗಳಿಸಿತ್ತು. ಈ ಬಾರಿ ವಿರೋಧ ಪಕ್ಷಗಳು ಜನರ ಗಮನ ತಮ್ಮ ಕಡೆಗೆ ಸೆಳೆಯ ಬೇಕಾದರೆ ಉ.ಪ್ರ ರಾಜ್ಯ ವಿಭಜನೆಯಂತಹಾ ಸೂಕ್ಷ್ಮ ವಿಷಯ ಕೈಗೆತ್ತಿಕೊಳ್ಳುವ ಗಂಭೀರ Risk ನ್ನು ತೆಗೆದುಕೊಳ್ಳಲೇ ಬೇಕು.  ಇದು ಇಂಡಿಯಾ ಮೈತ್ರಿ ಕೂಟಕ್ಕೆ ಭಾರೀ ವರದಾನವೂ ಆಗಬಹುದು ಅಥವಾ ಆತ್ಮಹತ್ಯೆಗೆ ಸಮವೂ ಆಗಬಹುದು.

ಅದೇ 2012-13ರ ಮಾಯಾವತಿಯವರ ಹಳೆಯ ಪ್ರಸ್ತಾವನೆಯನ್ನು ಈಗಲೂ ಊರ್ಜಿತಗೊಳಿಸಬಹುದು. ಆಂಧ್ರವನ್ನು 2013 ರಲ್ಲಿ ವಿಭಜಿಸಿದಾಗ ಆಡಳಿತಾತ್ಮಕವಾಗಿ ಹೆಚ್ಚು ಸಮಸ್ಯೆ ಆಗಲಿಲ್ಲ. ಹಾಗಿರುವಾಗ ಉ.ಪ್ರ ವನ್ನು ಈಗ ನಾಲ್ಕು ರಾಜ್ಯಗಳಾಗಿ ವಿಭಾಗಿಸಿದರೂ ಹೆಚ್ಚಿನ ಆಡಳಿತಾತ್ಮಕ ಸಮಸ್ಯೆ ಉಂಟಾಗಲಾರದು. ಕೇವಲ ಮತದಾರರ ಭಾವನೆಗಳನ್ನು ಜಾಗೃತಗೊಳಿಸಿ ಸಣ್ಣ ರಾಜ್ಯಗಳ ಪ್ರಯೋಜನವನ್ನು ಅವರಿಗೆ ವಿವರಿಸಿ, ಈಗಿನ ಅಖಂಡ ಉತ್ತರ ಪ್ರದೇಶದ ಒಣ ಅಭಿಮಾನವನ್ನು ತೊರೆಯಲು ಮನವರಿಕೆ ಮಾಡಿಕೊಟ್ಟರೆ  ರಾಜಕೀಯ ಪಕ್ಷಗಳಿಗೂ ಲಾಭವಿದೆ, ಸಾಮಾನ್ಯ ಜನರಿಗೂ ಲಾಭವಿದೆ, ಜತೆಗೆ ಇಡೀ ದೇಶಕ್ಕೂ ಪ್ರಯೋಜನವಿದೆ.

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

More articles

Latest article