ಉತ್ತರ ಪ್ರದೇಶ: ಉಚಿತ ಮದ್ಯ ಹಂಚಿಕೆ ವಿರುದ್ಧ ಆಪ್ ಹೋರಾಟ

Most read

ನವದೆಹಲಿ: ಉತ್ತರ ಪ್ರದೇಶದ ಮದ್ಯದಂಗಡಿಗಳಲ್ಲಿ ಉಚಿತ ಮದ್ಯ ನೀಡುತ್ತಿರುವುದನ್ನು ಖಂಡಿಸಿ ಮಾರ್ಚ್ 29ರಂದು ರಾಜ್ಯದಾದ್ಯಂತ ಪ್ರತಿಭಟನೆಗಳನ್ನು ನಡೆಸುವುದಾಗಿ ಸಲು ಆಮ್ ಆದ್ಮಿ ಪಕ್ಷ (AAP) ತಿಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ನಾಯಕ ಸಂಜಯ್ ಸಿಂಗ್, ಅಬಕಾರಿ ನೀತಿಗೆ ಸಂಬಂಧಿಸಿ ಬಿಜೆಪಿ ನಾಯಕರು ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅಬಕಾರಿ ನೀತಿ ಕುರಿತು ಆರೋಪಗಳನ್ನು ಮಾಡಿದ್ದ ಬಿಜೆಪಿ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳಾದ ಇ.ಡಿ ಮತ್ತು ಸಿಬಿಐ ಬಳಸಿಕೊಂಡು ತನಿಖೆ ನಡೆಸಿದ್ದರು. ಆದರೆ, ಅವರದ್ದೇ ಸರ್ಕಾರ ಅಧಿಕಾರದಲ್ಲಿರುವ ಉತ್ತರಪ್ರದೇಶದಲ್ಲಿ ಉಚಿತ ಮದ್ಯ ವಿತರಣೆ ಮಾಡುತ್ತಿರುವ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಸಂಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 1ರಂದು ಉತ್ತರಪ್ರದೇಶದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ರಾಜ್ಯದ ಹಲವು ನಗರಗಳಾದ್ಯಂತ ಮದ್ಯದಂಗಡಿಗಳು ಭಾರಿ ರಿಯಾಯಿತಿ ಘೋಷಿಸಿವೆ ಎಂದು ವರದಿಯಾಗಿದೆ. ಹಳೆಯ ಸ್ಟಾಕ್ ಅನ್ನು ಖಾಲಿ ಮಾಡದಿದ್ದರೆ ಅಂಗಡಿ ಮಾಲೀಕರು ಭಾರಿ ನಷ್ಟ ಅನುಭವಿಸಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ರೈತರು, ಶಿಕ್ಷಣ ಮತ್ತು ನಿರುದ್ಯೋಗದಂತಹ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ತೋರುತ್ತಿಲ್ಲ. ಉಚಿತ ಮದ್ಯದಂತಹ ಕೊಡುಗೆಗಳನ್ನು ನೀಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

More articles

Latest article