ವರ್ಷಪೂರ್ತಿ ಕನ್ನಡ ಬಳಸಿ, ಬೆಳೆಸಿದರೆ ರಾಜ್ಯೋತ್ಸವ ನಿತ್ಯೋತ್ಸವವಾಗುತ್ತದೆ: ಅಗ್ರಹಾರ ಕೃಷ್ಣಮೂರ್ತಿ

Most read

ಬೆಂಗಳೂರು: ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿದ್ದ ರಾಜ್ಯೋತ್ಸವವು  ಬಳಿಕ ಆ ತಿಂಗಳು ಪೂರ್ತಿ ಆಚರಿಸಲಾಗುತ್ತಿತ್ತು. ಇದೀಗ ಡಿಸೆಂಬರ್‌ನಲ್ಲೂ ರಾಜ್ಯೋತ್ಸವ ಆಚರಿಸಲಾಗುತ್ತದೆ. ವರ್ಷಪೂರ್ತಿ ಕನ್ನಡವನ್ನು ಬಳಸಿ, ಬೆಳೆಸಿದರೆ ರಾಜ್ಯೋತ್ಸವ ಎಂಬುದು ನಿತ್ಯೋತ್ಸವವಾಗುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಕಾರ್ಯದರ್ಶಿ ಹಾಗೂ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.

 ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್) ಮತ್ತು ಶಕ್ತಿ ವಾಹಿನಿ ಕನ್ನಡ ಬಳಗದ ವತಿಯಿಂದ ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕವಿ ಡಾ.ನಿಸಾರ್ ಅಹಮ್ಮದ್ ಅವರು ಕನ್ನಡದ ಕುರಿತು ನಿತ್ಯೋತ್ಸವ ತಾಯಿ, ನಿತ್ಯೋತ್ಸವ ಎಂದು ಬರೆದಿದ್ದಾರೆ. ಅದೇ ರೀತಿ ಕನ್ನಡವನ್ನು ವರ್ಷ ಪೂರ್ತಿ ಬಳಸಿದಾಗಷ್ಟೇ ನಿತ್ಯೋತ್ಸವವಾಗುತ್ತದೆ,” ಎಂದರು.

ಕನ್ನಡ ರಾಜ್ಯೋತ್ಸವ ಎಂಬ ಭಾವುಕ ಉತ್ಸವದಲ್ಲಿ ಭಾಗಿಯಾಗುವುದರ ಜತೆಗೆ ಕನ್ನಡ ಮತ್ತು ಕರ್ನಾಟಕದ ವ್ಯಕ್ತಿಗಳು ಸೇರಿದಂತೆ ಜನರ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ, ವಿವಿಧ ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ ಯೋಚಿಸಬೇಕು. ನಮ್ಮ ರಾಜಕಾರಣ, ಸಾಂಸ್ಕೃತಿಕ ಒಡನಾಟಗಳು ಸರಿಯಾಗದೆಯೇ ಎಂಬ ಬಗ್ಗೆ ಚಿಂತನೆ ನಡೆಸಿ ಅವುಗಳನ್ನು ಸರಿ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು,” ಎಂದು ಹೇಳಿದರು.

ಭಾಷೆಗಳ ನಡುವಿನ ತಿಕ್ಕಾಟದ ನಡುವೆಯೂ ಎಲ್ಲರೂ ಒಂದಾಗಿ ವಿಭಿನ್ನತೆಯಲ್ಲಿ ಏಕತೆಯನ್ನು ಕಾಣುತ್ತಿರುವುದೇ ಈ ದೇಶದ ಹೆಮ್ಮೆ. ಭಾಷೆ ಎಂಬುದು ಭಾವನಾತ್ಮಕ ಅಂಶ. ಹೀಗಾಗಿ ವಿವಿಧ ಭಾಷಿಕರ ಮಧ್ಯೆ ತಿಕ್ಕಾಟಗಳು ನಡೆಯುತ್ತವೆ. ಅದರ ಮಧ್ಯೆಯೂ ಏಕತೆಯನ್ನು ಕಾಣುತ್ತಿರುವುದು ಭಾರತದ ವಿಶೇಷತೆ,” ಎಂದು ಹೇಳಿದರು.

ಕೆಪಿಸಿಎಲ್ ತಾಂತ್ರಿಕ ನಿರ್ದೇಶಕ ಕೃಷ್ಣಮೂರ್ತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ನಿರ್ದೇಶಕ ಆರ್.ನಾಗರಾಜ, ಪ್ರಧಾನ ವ್ಯವಸ್ಥಾಪಕ ಡಾ.ಆಶಾ ಎಸ್., ಶಕ್ತಿವಾಹಿನಿ ಕನ್ನಡ ಬಳಗದ ಅಧ್ಯಕ್ಷ ಸತೀಶ ರಾಜಾ ಜಿ. ಗೌಡ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

More articles

Latest article