Sunday, September 8, 2024

ನಗರಾಭಿವೃದ್ಧಿ ಮಾದರಿಯೂ ಶ್ರೀಸಾಮಾನ್ಯನ ಬವಣೆಯೂ

Most read

ಭಾರತ ಅನುಸರಿಸುತ್ತಿರುವ ನಗರೀಕರಣದ ಮಾದರಿ ಮತ್ತು ಇದಕ್ಕೆ ಪೂರಕವಾಗಿ ವಿಸ್ತರಿಸುತ್ತಿರುವ ನೂತನ ಮೂಲ ಸೌಕರ್ಯ ಸಾಧನಗಳು ಹೆಚ್ಚು ಹೆಚ್ಚು ಜನರನ್ನು ಅಂಚಿಗೆ ತಳ್ಳುವ ಒಂದು ಮಾದರಿಯಾಗಿದೆ. ಇದೇ ಮಾದರಿಯನ್ನು ಆಗ್ರಾದಿಂದ ಕೋಲಾರದವರೆಗೆ ಅನುಕರಿಸಲಾಗುತ್ತಿದೆ. ಮೈಸೂರಿನ ತಳಸ್ತರದ ಜನತೆಯ ಪಾಲಿಗೆ “ ಮುಡಾ ನಿನ್ನ ಸಹವಾಸ ಬೇಡ ” ಎಂದು ಜಪಿಸುವುದೊಂದೇ ದಾರಿ- ನಾ ದಿವಾಕರ, ಚಿಂತಕರು

1990ರಲ್ಲಿ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿದ ನವ ಉದಾರವಾದಿ ಬಂಡವಾಳಶಾಹಿಯು ಈಗ ತನ್ನ ಕಳೆದ ಮೂರೂವರೆ ದಶಕಗಳಲ್ಲಿ ತನ್ನ ಪರ್ಯಟನವನ್ನು ಪೂರೈಸಿ ವೃತ್ತದ ಆದಿ ಬಿಂಬವನ್ನು ತಲುಪಿದೆ. ನವ ಉದಾರವಾದಿ ಆರ್ಥಿಕ ಚಿಂತನೆಯನ್ನು ಪ್ರಧಾನವಾಗಿ ನಿರ್ದೇಶಿಸುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಸ್ಥಳೀಯ ಔದ್ಯಮಿಕ ಬಂಡವಾಳವು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ನೆರವಾಗಿರುವುದೇ ಭಾರತದ ನಗರೀಕರಣದ ಮುಖ್ಯ ಲಕ್ಷಣವಾಗಿ ಕಾಣುತ್ತದೆ. 2008ರ ಜಾಗತಿಕ ಆರ್ಥಿಕ ಕುಸಿತದ ಬೆನ್ನಲ್ಲೇ ದಿಕ್ಕು ಬದಲಿಸಿದ ಆರ್ಥಿಕತೆಯ ಮಾರ್ಗಗಳು ಅನುಸರಿಸಲಾರಂಭಿಸಿದ್ದು ಮೂಲ ಸೌಕರ್ಯಗಳನ್ನಾಧರಿಸಿದ ಅಭಿವೃದ್ಧಿಯ ಮಾದರಿಗಳನ್ನು.

ನವಿರಾದ-ಅಗಲವಾದ ರಸ್ತೆಗಳು, ನಗರಗಳನ್ನು ಪರಸ್ಪರ ಸಂಪರ್ಕಿಸುವ ಚತುಷ್ಪತ-ಷಟ್ಪಥ-ಅಷ್ಟಪಥ-ದಶಪಥ ಹೆದ್ದಾರಿಗಳು, ಇವುಗಳನ್ನು ಸಂಪರ್ಕಿಸಲು ಬೇಕಾದ ಮೇಲ್ಸೇತುವೆಗಳು, ಹೆದ್ದಾರಿಗಳಿಂದ ವಿಭಜನೆಗೊಳಗಾದ ಹಳ್ಳಿಗಾಡುಗಳ ಇಬ್ಭಾಗಗಳನ್ನು ಸಂಪರ್ಕಿಸುವ ಭೂತಳ ದಾರಿಗಳು (Underpass)̧  ದೇಶದ ದೊಡ್ಡ ನಗರಗಳನ್ನು ಸಂಪರ್ಕಿಸಲು ಅಗತ್ಯವಾದ ಅತ್ಯಾಧುನಿಕ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಮತ್ತು ಊರ್ಧ್ವಮುಖಿಯಾಗಿ ಬೆಳೆಯುತ್ತಿರುವ ನಗರದ ಜನದಟ್ಟಣೆ ಮತ್ತು ಸಂಚಾರವನ್ನು ನಿರ್ವಹಿಸಲು ಬೇಕಾದ ಆಂತರಿಕ ಸಂಚಾರ ವ್ಯವಸ್ಥೆ, ಈ ಎಲ್ಲವೂ ಸಹ ನಗರೀಕರಣದ ಒಂದು ಭಾಗವಾಗಿಯೇ ಬೆಳೆದುಬಂದಿದ್ದು, ಕಾರ್ಪೋರೇಟ್‌ ಬಂಡವಾಳ ಹೂಡಿಕೆಗೆ ಪ್ರಶಸ್ತ ಭೂಮಿಕೆಗಳಾಗಿ ಪರಿಣಮಿಸಿದವು.

ಸ್ಮಾರ್ಟ್‌ ಸಿಟಿ ಎಂಬ ಸುಂದರ ಪದನಾಮದೊಂದಿಗೆ ಆರಂಭವಾದ ನರೇಂದ್ರ ಮೋದಿ ಸರ್ಕಾರದ ಯೋಜನೆ ನೆನೆಗುದಿಗೆ ಬಿದ್ದಿದ್ದರೂ ಇದರ ಆದಿಯನ್ನು ನಾವು 2008ರ ಮಾರುಕಟ್ಟೆ ಕುಸಿತದಲ್ಲಿ ಗುರುತಿಸಬಹುದು. ನಗರಾಭಿವೃದ್ಧಿ ಎನ್ನುವ ಪರಿಕಲ್ಪನೆಗೇ ಹೊಸ ತಿರುವು ನೀಡಿದ ಮಾರುಕಟ್ಟೆ ಆರ್ಥಿಕತೆಯು ನಗರೀಕರಣ-ನಗರಾಭಿವೃದ್ಧಿ-ನಗರ ವಿಸ್ತರಣೆ ಮತ್ತು ನಗರ ಸೌಂದರ್ಯೀಕರಣದ ವಿವಿಧ ಮಜಲುಗಳಲ್ಲಿ ಅಭಿವೃದ್ಧಿಯ ಸೂಚ್ಯಂಕಗಳನ್ನು ಕಾಣಲಾರಂಭಿಸಿತ್ತು. ಕರ್ನಾಟಕದಲ್ಲಿ ರಿಯಲ್‌ ಎಸ್ಟೇಟ್‌ ಒಂದು ಉದ್ಯಮವಾಗಿ ತದನಂತರ ಮಾಫಿಯಾ ಆಗಿ ಬೆಳೆಯಲಾರಂಭಿಸಿದ್ದು 2008ರ ನಂತರದಲ್ಲೇ ಎನ್ನುವುದು ಗಮನಾರ್ಹ ಅಂಶ. ಹಳ್ಳಿಗಳನ್ನು, ಗ್ರಾಮೀಣ ಕೃಷಿ ಭೂಮಿಯನ್ನು ಹಾಗೂ ಪ್ರಾಕೃತಿಕ ಬೆಟ್ಟಗುಡ್ಡಗಳನ್ನು ಕಬಳಿಸುತ್ತಲೇ ಬೆಳೆದ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿರ್ಮಾಣವಾಗಲಾರಂಭಿಸಿದ ವಸತಿ ಬಡಾವಣೆಗಳು ರಿಯಲ್‌ ಎಸ್ಟೇಟ್‌ ಮಾಫಿಯಾಗಳ ಕರ್ಮಭೂಮಿಯಾಗಿ ಪರಿಣಮಿಸಿದ್ದವು.

ಈ ಬೆಳವಣಿಗೆಯೇ ಕರ್ನಾಟಕದಾದ್ಯಂತ ನಗರಾಭಿವೃದ್ಧಿಯ ಹೊಸ ಅಧ್ಯಾಯವನ್ನೂ ಆರಂಭಿಸಿತ್ತು. ಗ್ರಾಮೀಣ ಪ್ರದೇಶಗಳಿಂದ ವಲಸೆ ಬಂದು ನಗರಗಳಲ್ಲಿ ನೆಲೆಸುವ ಕೆಳಸ್ತರದ ದುಡಿಯುವ ವರ್ಗಗಳಿಗೆ ಹಾಗೂ ಕೃಷಿ-ವ್ಯವಸಾಯವನ್ನು ತೊರೆದು ನೌಕರಿಗಳಿಗಾಗಿ ನಗರದತ್ತ ಮುಖ ಮಾಡುವ ಗ್ರಾಮೀಣ ಬಡಜನತೆಗೆ ಹಾಗೂ ಐಟಿ-ಬಿಟಿ ಕ್ಷೇತ್ರ, ಔದ್ಯೋಗಿಕ ವಲಯ ಮತ್ತು ಡಿಜಿಟಲ್‌ ಸೇವಾ ಕೇಂದ್ರಗಳನ್ನು ಅಲಂಕರಿಸುವ ಕೆಳಮಧ್ಯಮ ವರ್ಗಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸುವುದು ನಗರೀಕರಣದ ಒಂದು ಪ್ರಧಾನ ಕಾರ್ಯಸೂಚಿಯಾಗಿ ಪರಿಣಮಿಸಿತ್ತು. ಈ ಹಂತದಲ್ಲಿ ಸಮಾಜದ ಕೆಳಸ್ತರದ ಜನಸಾಮಾನ್ಯರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು ಹೆಚ್ಚು ಆಸ್ಥೆ ತೋರಬೇಕಿತ್ತು. ಹೆಚ್ಚಿನ ಬಡಾವಣೆಗಳನ್ನು ಕೈಗೆಟುಕುವ ಬೆಲೆಗಳಲ್ಲಿ ಪೂರೈಸುವ ಕಾರ್ಯಯೋಜನೆಗೆ ಮುಂದಾಗಬೇಕಿತ್ತು.

ಆದರೆ ನಡೆದದ್ದೇ ಬೇರೆ. 2010ರ ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಕ್ರಿಯವಾಗಿದ್ದ ʼಉಡ ʼಗಳು ( ಅಂದರೆ ಪ್ರಾಣಿ ಅಲ್ಲ, ಆಯಾ ಜಿಲ್ಲೆಗಳೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರ ಎಂಬ ಪದಗಳ ಮೊದಲ ಅಕ್ಷರಗಳನ್ನು ಜೋಡಿಸುವ ತ್ರಾಸ ತಪ್ಪಿಸಲೆಂದು ನಾವು ಆಂಗ್ಲ ಭಾಷೆಯ UDA ಬಳಸುತ್ತಿರುವ ಮಾದರಿ- MUDA, HUDA ಇತ್ಯಾದಿ.) ತಮ್ಮ ಮೂಲ ಉದ್ದೇಶಗಳನ್ನೇ ಮರೆತು, ಹೊಸ ಬಡಾವಣೆಗಳ ನಿರ್ಮಾಣವನ್ನೇ ಕೈಬಿಡಲಾರಂಭಿಸಿದವು. ಇದಕ್ಕೆ ಬದಲಾಗಿ ಖಾಸಗಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ನಗರಗಳ-ಪಟ್ಟಣಗಳ ಸುತ್ತಲೂ ಬಡಾವಣೆಗಳನ್ನು ನಿರ್ಮಿಸಲಾರಂಭಿಸಿದರು.

ಜನತೆಗೆ ʼ ಸುಲಭ ʼವಾಗಿ ವಸತಿ ಸೌಕರ್ಯ ಒದಗಿಸುವ ಸಲುವಾಗಿ ಬ್ಯಾಂಕುಗಳು ʼದುಬಾರಿʼ ಸಾಲಗಳನ್ನು ಉದಾರವಾಗಿ ನೀಡಲಾರಂಭಿಸಿದವು. ಇಂದು ಮೈಸೂರಿನಲ್ಲಿ ಬಹಳ ಸದ್ದು ಮಾಡುತ್ತಿರುವ MUDA ಹಗರಣದಲ್ಲಿ ಈ ಹಿನ್ನೆಲೆಯಲ್ಲಿ ಗಮನಿಸಬೇಕಿರುವುದು ಈ ಔದ್ಯಮಿಕ ಸಾಮ್ರಾಜ್ಯದ ಬೆಳವಣಿಗೆ ಮತ್ತು ವಿಸ್ತರಣೆಯನ್ನು. ಕಳೆದ ಹದಿನೈದು ವರ್ಷಗಳಲ್ಲಿ ಮೈಸೂರಿನ ಅಥವಾ ಯಾವುದೇ ನಗರದ, ಯಾವ ರಾಜಕೀಯ ನಾಯಕರೂ ಸಹ ಹೊಸದಾಗಿ MUDA ಬಡಾವಣೆಗಳನ್ನು ಆರಂಭಿಸಲು ಆಗ್ರಹಿಸಿಲ್ಲ. ಅಥವಾ ಅರ್ಜಿ ಗುಜರಾಯಿಸಿ ಎರಡು ದಶಕಗಳೇ ಕಳೆದರೂ ನಿವೇಶನ ಸಿಗದ ಸಾಮಾನ್ಯ ಜನರ ಅಹವಾಲನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಿಯಲ್‌ ಎಸ್ಟೇಟ್‌ ಉದ್ಯಮವು ಅಧಿಕಾರ ರಾಜಕಾರಣದ ಬಂಡವಾಳ ಕ್ರೋಢೀಕರಣಕ್ಕೆ ಪ್ರಸ್ತಭೂಮಿಯಂತಿದೆ.

ಇದರ ಒಂದು ಆಯಾಮವನ್ನು MUDA ವಿವಾದದಲ್ಲಿ ನೋಡುತ್ತಿದ್ದೇವೆ. ಯಾವುದೇ ʼಉಡʼ ಗಳನ್ನು ಗಮನಿಸಿದರೂ ನಮಗೆ ಗೋಚರಿಸುವುದು ಅಪಾರ ಸಂಖ್ಯೆಯ ಖಾಲಿ ನಿವೇಶನಗಳು, ನಿಯಮಬಾಹಿರವಾಗಿ ಕಟ್ಟಿರುವ ಬಹುಮಹಡಿ ವಸತಿ ಗೃಹಗಳು ಮತ್ತು ವರ್ಷಗಳು ಕಳೆದರೂ ಮನೆ ನಿರ್ಮಾಣವಾಗದ ಅನಾಥ ಗೃಹ ನಿವೇಶನಗಳು. ಇದಕ್ಕೆ ಕಾರಣಗಳು ಹಲವು. ಬಡ-ಕೆಳಮಧ್ಯಮ ವರ್ಗಗಳಿಗೆ ಒಂದು ನಿವೇಶನ ಸೂರಿಗೆ ಆಧಾರವಾದರೆ ಈ ಉದ್ಯಮಿಗಳಿಗೆ ಪ್ರತಿಯೊಂದು ನಿವೇಶನವೂ ಮಾರುಕಟ್ಟೆ ಲಾಭದ ಒಂದು ಕಚ್ಚಾ ವಸ್ತು. ಬಂಡವಾಳಶಾಹಿಯು ಭೂಮಿಯನ್ನು Commodify (ಸರಕೀಕರಣ) ಮಾಡುವ ಒಂದು ವಿಧಾನ ಇದು. ಇದಕ್ಕೆ ಬಲಿಯಾಗುವುದು ಬಂಡವಾಳವಿಲ್ಲದ ಶ್ರೀಸಾಮಾನ್ಯರು.

ಹಾಗಾಗಿಯೇ ಈಗ MUDA ಹಗರಣದ ಸುತ್ತ  ನಡೆಯುತ್ತಿರುವ ಚರ್ಚೆಗಳಲ್ಲಿ ನಿವೇಶನಗಳಿಗಾಗಿ ಬಕಪಕ್ಷಿಗಳಂತೆ ಕಾಯುತ್ತಾ ಕುಳಿತಿರುವ ಸಾಮಾನ್ಯ ಜನತೆಯ ಹಿತಾಸಕ್ತಿಗಳಾಗಲೀ, ಮಹದಾಕಾಂಕ್ಷೆಯಾಗಲೀ ಒಂದು ವಿಷಯವೇ ಆಗುವುದಿಲ್ಲ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಆಳ್ವಿಕೆಯ ಯಂತ್ರಗಳನ್ನು ಬಳಸಿಕೊಂಡು ತಮ್ಮ ಕುಟುಂಬದ ಸದಸ್ಯರಿಗಾಗಿ ನಿವೇಶನಗಳನ್ನು ಕಬಳಿಸಿರುವ ಚುನಾಯಿತ/ಪರಾಜಿತ/ಹಾಲಿ/ಮಾಜಿ ಶಾಸಕ-ಸಂಸದರ ಹಿತಾಸಕ್ತಿಗಳಷ್ಟೇ ಪ್ರಧಾನವಾಗುತ್ತವೆ. ಇವರಲ್ಲಿ ಎಷ್ಟು ಮಂದಿ ಪ್ರಾಮಾಣಿಕವಾಗಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿರುವ MUDA ನಿವೇಶನಗಳ ವಿವರವನ್ನಾಗಲೀ, ಕುಟುಂಬ ಸದಸ್ಯರ ಹೆಸರಿನಲ್ಲಿ ತಾವೇ ನಿರ್ಮಿಸಿರುವ ಬಡಾವಣೆಗಳ ವಿವರಗಳನ್ನಾಗಲೀ ಜನರ ಮುಂದಿಡುತ್ತಾರೆ ? MUDA ಅಧ್ಯಕ್ಷ ಪದವಿಯೂ ಸಚಿವ ಹುದ್ದೆಯಷ್ಟೇ ಆಕರ್ಷಣೀಯವಾಗಿ ಕಾಣುತ್ತಿರುವ ವರ್ತಮಾನ ರಾಜಕಾರಣದಲ್ಲಿ , ರಾಜಕಾರಣಿಗಳು ಅವರ ಹಿಂಬಾಲಕರು, ಅನುಯಾಯಿಗಳು, ಅಭಿಮಾನಿಗಳು ಎಷ್ಟು ನಿವೇಶನಗಳನ್ನು ಸಂಪಾದಿಸಿದ್ದಾರೆ ಎಂಬ ವಿವರ ದೊರೆಯಲು ಸಾಧ್ಯವೇ ?

ಇಲ್ಲಿ ನಡೆಯುವ ತುಷ್ಟೀಕರಣ ರಾಜಕಾರಣದ ಬಗ್ಗೆ ನಮ್ಮ ರಾಜಕೀಯ ಸಂಕಥನಗಳು ನಡೆಯುವುದೇ ಇಲ್ಲ. ಸರ್ಕಾರಗಳು ವ್ಯಕ್ತಿಗತ/ಸಾಂಘಿಕ ಪ್ರತಿರೋಧದ ದನಿಗಳನ್ನು ತೆಪ್ಪಗಾಗಿಸುವ ಸಲುವಾಗಿಯೂ  ಇಂತಹ ಸಾಂಸ್ಥಿಕ ಮಾರ್ಗಗಳನ್ನು ಅನುಸರಿಸುವ ದೀರ್ಘ ಪರಂಪರೆಯೇ ನಮ್ಮದಾಗಿದೆ. ಇದಕ್ಕೆ ಯಾವ ಸರ್ಕಾರವೂ ಹೊರತಲ್ಲ ಎನ್ನುವುದು ವಿಪರ್ಯಾಸ ಎನಿಸಿದರೂ ವಾಸ್ತವ. ಆದರೆ ಇಲ್ಲಿ ಕಳೆದುಕೊಳ್ಳುವವರು, ಅವಕಾಶವಂಚಿತರು, ನಿರ್ಭಾಗ್ಯರು ಯಾರು ? ಮತ್ತದೇ ಶಾಶ್ವತ ನಿವೇಶನಾಕಾಂಕ್ಷಿಗಳು, ಶ್ರೀಸಾಮಾನ್ಯ ಪ್ರಜೆ, ಬಂಡವಾಳವೂ ಇಲ್ಲದ ಬಂಡವಾಳದ ಆಸರೆಯೂ ಇಲ್ಲದ ದುಡಿಯುವ ವರ್ಗಗಳು. ಭಾರತ ಅನುಸರಿಸುತ್ತಿರುವ ನಗರೀಕರಣದ ಮಾದರಿ ಮತ್ತು ಇದಕ್ಕೆ ಪೂರಕವಾಗಿ ವಿಸ್ತರಿಸುತ್ತಿರುವ ನೂತನ ಮೂಲ ಸೌಕರ್ಯ ಸಾಧನಗಳು ಹೆಚ್ಚು ಹೆಚ್ಚು ಜನರನ್ನು ಅಂಚಿಗೆ ತಳ್ಳುವ ಒಂದು ಮಾದರಿಯಾಗಿದೆ. ಇದೇ ಮಾದರಿಯನ್ನು ಆಗ್ರಾದಿಂದ ಕೋಲಾರದವರೆಗೆ ಅನುಕರಿಸಲಾಗುತ್ತಿದೆ. ಮೈಸೂರಿನ ತಳಸ್ತರದ ಜನತೆಯ ಪಾಲಿಗೆ “ ಮುಡಾ ನಿನ್ನ ಸಹವಾಸ ಬೇಡ ” ಎಂದು ಜಪಿಸುವುದೊಂದೇ ದಾರಿ.

ನಾ.ದಿವಾಕರ

ಚಿಂತಕರು

ಇದನ್ನೂ ಓದಿ- http://ಸೋರುತಿಹುದು ಮನೆಯ ಮಾಳಿಗೆ…https://kannadaplanet.com/the-floor-of-the-house-is-leaking/

More articles

Latest article