ಹೊಸದಿಲ್ಲಿ: ಶಿಕ್ಷೆಗೆ ತಡೆಯಾಜ್ಞೆ ಇದ್ದರೂ ಡಿಎಂಕೆ ಮುಖಂಡ ಪೊನ್ಮುಡಿ ಅವರನ್ನು ಸಚಿವ ಸಂಪುಟ ಸೇರ್ಪಡೆ ಪ್ರಸ್ತಾಪವನ್ನು ತಿರಸ್ಕರಿಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನೀವು ಸುಪ್ರೀಂ ಕೋರ್ಟ್ ಅನ್ನೇ ಧಿಕ್ಕರಿಸುತ್ತಿದ್ದೀರಿ ಎಂದು ಹೇಳಿದೆ. ರಾಜ್ಯಪಾಲರು ಸಂವಿಧಾನವನ್ನು ಅನುಸರಿಸದೇ ಹೋದಾಗ ಅದನ್ನು ನೋಡಿಕೊಂಡು ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಸಹ ದೇಶದ ಅತ್ಯುನ್ನತ ನ್ಯಾಯಾಲಯ ಖಾರವಾಗಿ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ, ಒಂದು ದಿನದೊಳಗೆ ಪೊನ್ಮುಡಿ ಅವರನ್ನು ಸಚಿವರನ್ನಾಗಿ ನೇಮಿಸಲು ಆದೇಶಿಸಿದೆ.
ಡಿಎಂಕೆ ಮುಖಂಡ ಪೊನ್ಮುಡಿ ಅವರನ್ನು ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ರಾಜ್ಯಪಾಲ ಆರ್.ಎನ್.ರವಿ ನಿರಾಕರಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹೀಗೆ ಸಚಿವರ ಸೇರ್ಪಡೆಯನ್ನು ನಿರಾಕರಿಸುವುದು ಅಸಂವಿಧಾನಿಕ ಎಂದು ಡಿಎಂಕೆ ದೂರಿತ್ತು.
ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಸಂಗ್ರಹಿಸಿದ ಪ್ರಕರಣವೊಂದರಲ್ಲಿ ಖುಲಾಸೆಗೊಂಡಿದ್ದ ಪೊನ್ಮುಡಿ ಅವರ ಮೇಲಿದ್ದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿ ಶಿಕ್ಷೆ ನೀಡಿತ್ತು. ಇದರಿಂದಾಗಿ ಪೊನ್ಮುಡಿ ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ನಂತರ ಪೊನ್ಮುಡಿ ಅವರಿಗೆ ನೀಡಲಾದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಇದಾದ ನಂತರ ರಾಜ್ಯ ಸರ್ಕಾರ ಪೊನ್ಮುಡಿ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿತ್ತು. ಆದರೆ ತಮಿಳುನಾಡು ರಾಜ್ಯಪಾಲ ಆರ್.ಎನ್ ರವಿ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಪೊನ್ಮುಡಿ ಅವರ ಮೇಲಿನ ಶಿಕ್ಷೆಯ ತೀರ್ಪನ್ನು ತಡೆಹಿಡಿಯಲಾಗಿದೆಯಷ್ಟೆ, ಅವರು ಇನ್ನೂ ನಿರ್ದೋಷಿ ಎಂದು ತೀರ್ಪು ಬಂದಿಲ್ಲ. ಹೀಗಾಗಿ ಅವರ ಸೇರ್ಪಡೆ ಮಾಡಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದರು.
ಇಂದು ಡಿಎಂಕೆ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೊಂಡು ಸುಪ್ರೀಂಕೋರ್ಟ್, ತಮಿಳುನಾಡು ರಾಜ್ಯಪಾಲರ ವರ್ತನೆ ವಿರುದ್ಧ ಕೆಂಡಾಮಂಡಲಗೊಂಡಿತು. ನಾಳೆಯೊಳಗೆ ಪೊನ್ಮುಡಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸದೇ ಹೋದಲ್ಲಿ. ರಾಜ್ಯಪಾಲರಿಗೆ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುವಂತೆ ನಾವು ಆದೇಶವನ್ನು ನೀಡಬೇಕಾಗುತ್ತದೆ ಎಂದು ಗುಡುಗಿದ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ತಮಿಳುನಾಡು ರಾಜ್ಯಪಾಲರು ಮತ್ತು ಅವರ ನಡವಳಿಕೆಯ ಬಗ್ಗೆ ನಾವು ಗಂಭೀರ ಕಾಳಜಿ ಹೊಂದಿದ್ದೇವೆ. ಅವರು ಸುಪ್ರೀಂ ಕೋರ್ಟ್ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ನಾಳೆ ಏನು ನಡೆಯುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ಅವರು ನುಡಿದರು.
ನಾವು ವ್ಯಕ್ತಿ/ಸಚಿವರ ಬಗ್ಗೆ ಭಿನ್ನ ದೃಷ್ಟಿಕೋನ ಹೊಂದಿರಬಹುದು. ಆದರೆ ನಾವು ಸಾಂವಿಧಾನಿಕ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಮುಖ್ಯಮಂತ್ರಿಗಳು ಇಂಥ ವ್ಯಕ್ತಿಯನ್ನು ಸಚಿವರಾಗಿ ನೇಮಿಸಲು ಬಯಸುತ್ತೇನೆ ಎಂದು ಹೇಳಿದರೆ, ಸಂಸದೀಯ ಪ್ರಜಾಪ್ರಭುತ್ವದ ಭಾಗವಾಗಿ ಹಾಗೆಯೇ ಮಾಡಬೇಕಿರುವುದು ರಾಜ್ಯಪಾಲರ ಕರ್ತವ್ಯ. ಅವರು ಸರ್ಕಾರದ ವಿಧ್ಯುಕ್ತ ಮುಖ್ಯಸ್ಥರಾಗಿರುತ್ತಾರೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ನ್ಯಾಯಾಲಯ ಒಮ್ಮೆ ಶಿಕ್ಷೆಗೆ ತಡೆ ನೀಡಿದರೆ, ಅವರನ್ನು ಕಳಂಕಿತರು ಎಂದು ಹೇಳುವಂತಿಲ್ಲ ಎಂದು ನ್ಯಾಯಮೂರ್ತಿ ಪರ್ದಿವಾಲಾ ಹೇಳಿದರು.
ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡ ನಂತರ ಆರ್ ಎನ್ ರವಿ, ಪದೇಪದೇ ತಮಿಳುನಾಡು ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿದ್ದು, ಡಿಎಂಕೆ ಸರ್ಕಾರ ಈ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ. . ಈ ಹಿಂದೆ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗಳಿಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಇದಲ್ಲದೆ ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮುಖ್ಯಮಂತ್ರಿ ಸ್ಟಾಲಿನ್ ಪತ್ರ ಬರೆದು ರಾಜ್ಯಪಾಲ ಹುದ್ದೆಯಿಂದ ಆರ್ ಎನ್ ರವಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದರು.