ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ಏರಿಸಲು ಯೋಜನೆ: ಸಚಿವ ದಿನೇಶ್ ಗುಂಡೂರಾವ್

Most read

ಬೆಳ್ತಂಗಡಿ: ರಾಜ್ಯದ ಪ್ರತಿಯೊಂದು ತಾಲೂಕು ಆಸ್ಪತ್ರೆಗಳನ್ನು ಜಿಲ್ಲಾಸ್ಪತ್ರೆಗಳ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಚ್ಚಿನ ಗ್ರಾಮದಲ್ಲಿ ಇಂದು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವರು ಮಾತನಾಡುತ್ತಿದ್ದರು.

ಸಾರ್ವಜನಿಕರಿಗೆ ತಾಲೂಕು ಆಸ್ಪತ್ರೆಗಳಲ್ಲಿಯೇ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿಕೊಡುವುದು ಮುಖ್ಯವಾಗಿದೆ. ಜನರು ಜಿಲ್ಲಾಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಜಿಲ್ಲಾಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳನ್ನು ತಾಲೂಕು ಆಸ್ಪತ್ರೆಗಳಲ್ಲಿಯೇ ಒದಗಿಸುವ ಮೂಲಕ ಜನರ ಸಮೀಪಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುತ್ತೇವೆ. ಈ ಸಂಬಂಧ ಮುಂಬರುವ ಬಜೆಟ್ ನಲ್ಲಿ  ಮಹತ್ವದ ಯೋಜನೆ ಘೋಷಣೆಯಾಗಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

ಈ ನಿಟ್ಟಿನಲ್ಲಿ ಪ್ರಸ್ತುತ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿಯೂ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ತಜ್ಞ ವೈದ್ಯರ ಸೇವೆ ಲಭ್ಯವಾಗಲಿದೆ. ಅಲ್ಲದೇ ತಜ್ಞ ವೈದ್ಯರಿಗೆ ಬೇಕಾಗುವ ಎಲ್ಲ ವೈದ್ಯಕೀಯ ಪರಿಕರಿಗಳನ್ನು ಸರ್ಕಾರ ತಾಲೂಕು ಆಸ್ಪತ್ರೆಗಳಲ್ಲಿಯೂ ಒದಗಿಸುತ್ತೇವೆ. ದಿನದ 24 ಗಂಟೆಯೂ ತಾಲೂಕು ಆಸ್ಪತ್ರೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಬಿಜೆಪಿ ಶಾಸಕ ಹರೀಶ್ ಪುಂಜಾ ವೇದಿಕೆಯ ಮೇಲಿದ್ದ ಸಚಿವ ದಿನೇಶ್ ಗುಂಡೂರಾವ್ ಎದುರು ಎರಡು ಬೇಡಿಕೆಯನ್ನು ಮುಂದಿಟ್ಟರು. ನಾನೊಬ್ಬ ಆಶಾ ಕಾರ್ಯಕರ್ತೆಯರ ಕುಟುಂಬದಿಂದ ಬಂದವನಾಗಿದ್ದು, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು. ಹಾಗೂ 70 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ  ಹೆಚ್ಚಿನ ಸಹಕಾರ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸುವ ಕಾರ್ಯ ಮಾಡಬೇಕು. ನೀವು, ನಿಮ್ಮ ಸಂಸದರು ಕೇಂದ್ರದಲ್ಲಿ ಪ್ರಭಾವ ಬಳಸಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ವಿಸುವಂತೆ ಒತ್ತಾಯಿಸಿ ಎಂದು ಶಾಸಕ ಹರೀಶ್ ಪುಂಜಾ ಅವರಿಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು. ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ 5 ಸಾವಿರ ಗೌರವಧನ ನೀಡುತ್ತಿದೆ. ಕೇಂದ್ರ ಸರ್ಕಾರ 3 ಸಾವಿರ ನೀಡುತ್ತಿದ್ದು , ಅದರಲ್ಲೂ ಶೇ. 40 ರಷ್ಟು ಪಾಲನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಪ್ರತಿ ಬಾರಿ ರಾಜ್ಯ ಸರ್ಕಾರ ಗೌರವಧನ ಹೆಚ್ಚಳ  ಮಾಡಿಕೊಂಡು ಬರುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳವಾಗಿಯೇ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ ವಯೋ ವಂದನ ಯೋಜನೆ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರ್ಕಾರ ಮುಕ್ತವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೆಲವು ಸ್ಪಷ್ಟನೆ ಕೇಳಿ ನವೆಂಬರ್ ತಿಂಗಳಿನಲ್ಲಿಯೇ ಪತ್ರ ಬರೆಯಲಾಗಿದೆ. ಕೇಂದ್ರದಿಂದ ಇನ್ನೂ ಉತ್ತರ ದೊರೆತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯ ಪ್ರಕಾರ ಶೇ. 60 ರಷ್ಟು ಕೇಂದ್ರ ಹಾಗೂ ಶೇ 40 ರಷ್ಟು ರಾಜ್ಯ ಸರ್ಕಾರ ಅನುದಾನ ನೀಡಬೇಕು. ಆದರೆ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ಶೇ. 75 ರಷ್ಟು ಅನುದಾನದ ಪಾಲನ್ನು ಭರಿಸುತ್ತಿದ್ದು, ಶೇ. 25 ರಷ್ಟು ಅನುದಾನವನ್ನು ಮಾತ್ರ ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ 1 ಕೋಟಿ 20 ಲಕ್ಷ ಕುಟುಂಬಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನು ಜೋಡಿಸಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯದ 65 ಲಕ್ಷ ಕುಟುಂಬಗಳನ್ನು ಮಾತ್ರ ಈ ಯೋಜನೆಗೆ ಪರಿಗಣಿಸಿದೆ. ರಾಜ್ಯ ಸರ್ಕಾರ 1 ಕೋಟಿ 20 ಲಕ್ಷ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ತಂದಿರುವುದರಿಂದ  ಬಹುತೇಕ 70 ವರ್ಷ ಮೇಲ್ಪಟ್ಟವರು ಯೋಜನೆಯ ಲಾಭ ಪಡೆಯಬಹುದಾಗಿದೆ.. ಈ ಎಲ್ಲ ವಿಚಾರಗಳ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟ ಉತ್ತರ ಸಿಕ್ಕ ಬಳಿಕ ವಯೋ ವಂದನ ಯೋಜನೆಯನ್ನ ರಾಜ್ಯ ಅನುಷ್ಠಾನಗೊಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು

More articles

Latest article