ಉತ್ತರ ಪ್ರದೇಶದ ಮತಗಟ್ಟೆಯೊಂದರಲ್ಲಿ 16ರ ಬಾಲಕನೊಬ್ಬ ಬಿಜೆಪಿ ಅಭ್ಯರ್ಥಿ ಪರ ಹಲವು ಬಾರಿ ಮತ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಆತನನ್ನು ಭಾನುವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಮರು ಮತದಾನಕ್ಕೆ ಸೂಚನೆ ನೀಡಲಾಗಿದೆ.
ಇಟಾಹ್ ಜಿಲ್ಲೆಯ ಖಿರಿಯಾ ಪಮಾರನ್ ಎಂಬ ಗ್ರಾಮದ ನಿವಾಸಿಯಾಗಿರುವ ಹಾಗೂ ಬಿಜೆಪಿ ಕಾರ್ಯಕರ್ತ ಅನಿಲ್ ಸಿಂಗ್ ಠಾಕೂರ್ ಪುತ್ರ ರಾಜನ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಈ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸಿದ್ದ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಫರೂಕಾಬಾದ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಕೇಶ್ ರಜಪೂತ್ ಪರವಾಗಿ ಯುವಕ ಎಂಟು ಬಾರಿ ಮತ ಚಲಾಯಿಸಿರುವುದು ಎರಡು ನಿಮಿಷಗಳ ವಿಡಿಯೋದಲ್ಲಿ ಕಾಣಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಫ್ಯಾಕ್ಟ್ ಚೆಕ್ ಸಂಸ್ತಾಪಕ ಮಹಮದ್ ಜುಬೇರ್ ಅವರು, ಈ ಯುವನ ತಾನು ಎಂಟು ಬಾರಿ ಬಿಜೆಪಿ ಅಭ್ಯರ್ಥಿಗೆ ವೋಟ್ ಹಾಕಿರುವುದನ್ನು ವಿಡಿಯೋ ಮೂಲಕ ತೋರಿಸಿದ್ದಾರೆ. ಅಭ್ಯರ್ಥಿಯ ಹೆಸರು ಇವಿಎಂ ಮಿಷಲ್ ನಲ್ಲಿ ಕಾಣಬಹುದು. ಫರೂಕಾಬಾದ್ ಲೋಕಸಭಾ ಕ್ಷೇತ್ರದಿಂದ ರಾಕೇಶ್ ರಜಪೂತ್ ಎಂದು ಟ್ವೀಟ್ ಮಾಡಿದ್ದಾರೆ.
ನಂತರ, ವಿಡಿಯೋದಲ್ಲಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತ ಅನಿಲ್ ಸಿಂಗ್ ಠಾಕೂರ್ ಅವರ ಪುತ್ರ 16 ವರ್ಷದ ರಾಜನ್ ಸಿಂಗ್ ಠಾಕೂರ್. ಅನಿಲ್ ಗ್ರಾಮ ಪ್ರಧಾನರಾಗಿದ್ದು, ಬಿಜೆಪಿ ಸದಸ್ಯರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದಾದ ನಂತರ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಾಯಕರು ಹಂಚಿಕೊಂಡಿದ್ದು, ಮರು ಮತದಾನಕ್ಕೆ ಆಗ್ರಹಿಸಿದ್ದರು.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತವು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದೆ. ಎಆರ್‌ಒ ಪ್ರತೀತ್ ತ್ರಿಪಾಠಿ ನೀಡಿದ ದೂರಿನ ಅನ್ವಯ ನಯಾ ಗಾವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.