ನುಡಿ ನಮನ – ಅರಾಜಕ ಗುರುವಿನ ಅಕಾಲ ನಿರ್ಗಮನ

Most read

“ತಪ್ಪು ಮಾಡದವ್ರ ಯಾರವ್ರೇ ತಪ್ಪೇ ಮಾಡದೋರ್ ಎಲ್ಲವ್ರೆ?

ಅಪ್ಪಿ ತಪ್ಪಿ ತಪ್ಪಾಗುತ್ತೆ

ಬೆಳ್ಳಿ ಕೂಡ ಕಪ್ಪಾಗುತ್ತೆ

ತಿದ್ಕೊಳ್ಳಕ್ಕೆ ದಾರಿ ಐತೆ “

ಇದು ಗುರುಪ್ರಸಾದ್ ರವರು ನಿರ್ದೇಶಿಸಿದ ಮಠ ಚಲನಚಿತ್ರದ ಜನಪ್ರಿಯ ಹಾಡು. ಈ ಸಿನೆಮಾದ ನಿರ್ದೇಶಕರೂ ಅಪ್ಪಿ ತಪ್ಪಿಯೋ, ಬುದ್ಧಿಪೂರ್ವಕವಾಗಿಯೋ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದರು. ತಿದ್ದಿಕೊಳ್ಳಲಿಕ್ಕೆ ದಾರಿ ಕಾಣದೇ ಅಂತಿಮ ತಪ್ಪನ್ನೂ ಮಾಡಿಕೊಂಡು ಬದುಕಿಗೆ ಬೆನ್ನುತಿರುಗಿಸಿ  ನಿರ್ಗಮಿಸಿದರು.

ಈ ಯಶಸ್ಸು ಎನ್ನುವುದೇ ಹೀಗೆ. ಯಶಸ್ಸಿನ ರುಚಿ ಕಂಡು ಮೇಲಕ್ಕೇರಿದವರು ಕೆಳಕ್ಕೆ ಬಿದ್ದಾಗ ಮಾನಸಿಕವಾಗಿ ಕುಗ್ಗುತ್ತಾರೆ. ಮತ್ತೆ ಯಶಸ್ಸನ್ನು ಗಳಿಸಲು ಪ್ರಯತ್ನಿಸಿ ಕಷ್ಟ ನಷ್ಟಗಳಿಗೆ ಒಳಗಾಗಿ ಅತೀವ ಸಂಕಷ್ಟಗಳಿಗೆ ಗುರಿಯಾಗುತ್ತಾರೆ. ಮುಂದಿನ ಹಾದಿ ಕಠಿಣವಾದಾಗ ದಾರಿ ಬದಲಾಯಿಸಲೂ ಯತ್ನಿಸದೆ ಪಯಣವನ್ನೇ ನಿಲ್ಲಿಸುತ್ತಾರೆ.

ಗುರುಪ್ರಸಾದ್

ಕನ್ನಡ ಸಿನೆಮಾ ಕ್ಷೇತ್ರದ ಪ್ರತಿಭಾವಂತ ಬರಹಗಾರ, ನಟ, ನಿರ್ದೇಶಕ ಗುರುಪ್ರಸಾದ್ ರವರು ಮಾಡಿದ್ದೇ ಅದನ್ನು. ತಿದ್ದಿಕೊಳ್ಳಲು ಇದ್ದಿರಬಹುದಾದ ದಾರಿಗಳ ಅನ್ವೇಷಣೆ ಮಾಡುವುದನ್ನು ಬಿಟ್ಟು, ಕ್ಲಿಷ್ಟಕರವಾದರೆ ಮಾರ್ಗವನ್ನೇ ಬದಲಾಯಿಸುವ ಯೋಚನೆಯನ್ನೂ ಮಾಡದೆ ತಮ್ಮ ಬದುಕಿನ ಪಯಣವನ್ನು ಅಕಾಲಿಕವಾಗಿ ಅಂತ್ಯಗೊಳಿಸಿದ್ದಾರೆ. ತಾನಾಗಿಯೇ ಸಾವು ಬರುವುದಕ್ಕಿಂತ ಮುನ್ನ ತಾವೇ ಸಾವನ್ನು ಆಹ್ವಾನಿಸಿಕೊಂಡಿದ್ದಾರೆ.

ಎಲ್ಲವೂ ಸರಿಯಾಗಿದ್ದರೆ ನವೆಂಬರ್ ಎರಡರಂದು ಗುರುಪ್ರಸಾದರವರು ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಹಾಗಾಗಲೇ ಇಲ್ಲ. ಯಾಕೆಂದರೆ ಇಟ್ಟ ಗುರಿ ತಲುಪಲಾಗದ ನೋವಿನಲ್ಲಿ ಗುರು ನೇಣಿನ ಉರುಳಿಗೆ ಕೊರಳು ಕೊಟ್ಟು ಅದಾಗಲೇ ಐದಾರು ದಿನಗಳಾಗಿದ್ದರೂ ಯಾರಿಗೂ ಗೊತ್ತಾಗಲೇ ಇಲ್ಲ. ನವೆಂಬರ್ 3 ರಂದು ಅಪಾರ್ಟ್‌ ಮೆಂಟಿನ ಫ್ಲಾಟಿನಿಂದ ಕೆಟ್ಟ ವಾಸನೆ ನೆರೆಹೊರೆಯವರ ಮೂಗಿಗೆ ಬಡಿದಾಗಲೇ ದುರಂತ ಗೊತ್ತಾಗಿದ್ದು. ಗುರುಪ್ರಸಾದ್ ಇನ್ನಿಲ್ಲವೆಂದು ಸುದ್ದಿಯಾಗಿದ್ದು.

52 ವರ್ಷ ಖಂಡಿತ ಸಾಯುವ ವಯಸ್ಸಲ್ಲ. ತಪ್ಪುಗಳಾಗಿದ್ದರೆ ತಿದ್ದಿಕೊಳ್ಳಲು ಪರ್ಯಾಯ ಮಾರ್ಗಗಳಿಗೇನೂ ಕೊರತೆ ಇರಲಿಲ್ಲ. ಆದರೆ ಭಾವಜೀವಿಗೆ ಬದುಕು ಒಡ್ಡಿದ ತೀವ್ರತೆಯ ಆಘಾತಗಳನ್ನು ತಡೆದುಕೊಳ್ಳಲಾಗಲಿಲ್ಲ. ಕಾಡುವ ಖಿನ್ನತೆಯಿಂದ ಹೊರಗೆ ಬರಲಾಗಲೇ ಇಲ್ಲ.

ಆಸೆ ಪಟ್ಟು ಮಾಡಿದ ರಂಗನಾಯಕ ಸಿನೆಮಾ ನಿರೀಕ್ಷಿಸಿದಂತೆ ಗೆಲ್ಲದೆ ಹೀನಾಯವಾಗಿ ಸೋತಿತು. ನಾಯಕ ನಟನಾಗಿ ಅಭಿನಯಿಸಿ ನಿರ್ದೇಶಿಸಿದ ಎದ್ದೇಳು ಮಂಜುನಾಥ-2 ಸಿನೆಮಾ ಮೂರು ವರ್ಷಗಳಾದರೂ ಬಿಡುಗಡೆ ಭಾಗ್ಯ ಕಾಣಲೇ ಇಲ್ಲ. ಈ ಸಿನೆಮಾ ನಿರ್ಮಾಣಕ್ಕೆ ಮಾಡಿಕೊಂಡ ಸಾಲಗಳ ಸಾಲು ಬೆಳೆದು ನಿಂತಿತ್ತು. ಸಾಲ ಕೊಟ್ಟವರ ಒತ್ತಡ ಕಿರುಕುಳ ತಾಳದಂತಾಗಿತ್ತು, ಚೆಕ್ ಬೌನ್ಸ್ ಗಳ ಸುಳಿಯಲ್ಲಿ ಸಿಲುಕಿಕೊಂಡು ಶಿಕ್ಷೆಯಾಗುವ ಭಯ ಕಾಡುತ್ತಿತ್ತು. ಜೊತೆಗೆ ದೀರ್ಘಕಾಲದಿಂದ ಕಾಡುವ ಸೋರಿಯಾಸಿಸ್ ಎನ್ನುವ ಚರ್ಮರೋಗದ ಬಾಧೆ ಮಾನಸಿಕವಾಗಿ ಕುಗ್ಗಿಸಿತ್ತು. ಮೊದಲ ಪತ್ನಿ ಹಾಗೂ ಮಗಳಿಂದ ಬೇರೆಯಾದ ಬೇಸರ. ಎರಡನೇ ಪತ್ನಿಗೂ ನಾಲ್ಕು ವರ್ಷದ ಹೆಣ್ಣು ಮಗು ಇದ್ದು ಮತ್ತೊಂದು ಮಗು ಗರ್ಭದಲ್ಲಿ ಬೆಳೆಯುತ್ತಿತ್ತು. ಇಷ್ಟೆಲ್ಲದರ ನಡುವೆ ನಿತ್ಯ ಜೀವನ ನಿರ್ವಹಣೆಯೇ ಆತಂಕಕಾರಿಯಾಗಿತ್ತು. ಸಾಲಗಾರರ ಕಾಟದಿಂದ ಆಗಾಗ ಮನೆ ಬದಲಾಯಿಸಬೇಕಾಯ್ತು‌. ಹೊಸದಾಗಿ ಸಾಲ ಹುಟ್ಟದಾಯ್ತು. ಆರ್ಥಿಕ ಅಡಚಣೆಯಿಂದಾಗಿ ಹೆಂಡತಿಯನ್ನು ತವರು ಮನೆಗೆ ಕಳುಹಿಸಲಾಗಿತ್ತು. ಇಷ್ಟೆಲ್ಲ ಸಂಘರ್ಷಗಳನ್ನು ಏಕಕಾಲಕ್ಕೆ ಅನುಭವಿಸುತ್ತಿದ್ದ ಭಾವನಾತ್ಮಕ ಜೀವಕ್ಕೆ ಬದುಕೇ ಭಾರವಾಗಿತ್ತು. ತೀವ್ರ ಸಂಕಷ್ಟಗಳ ಸುಳಿಯಲ್ಲಿ ಸಿಕ್ಕ ಪ್ರತಿಭಾವಂತ ಗುರುಪ್ರಸಾದ್ ರವರು ಸಕಲ ಕಷ್ಟಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಅಂತಿಮ ನಿರ್ಧಾರ ತೆಗೆದುಕೊಂಡರು. ಬದುಕು ಒಡ್ಡಿದ ಒತ್ತಡಗಳಿಂದ ಪಾರಾಗಲು ಸಾವೊಂದೇ ಪರಿಹಾರ ಎಂದುಕೊಂಡು ನೇಣಿಗೆ ಕೊರಳೊಡ್ಡಿ ಸಾವನ್ನು ಆಹ್ವಾನಿಸಿದರು.

ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಏಕಾಂಗಿಯಾಗಿ ಬೆಂಗಳೂರಿನ ಹೊರವಲಯದಲ್ಲಿರುವ ಟಾಟಾ ನ್ಯೂ ಹೆವನ್ ವಸತಿ ಸಮುಚ್ಛಯದಲ್ಲಿ ಅನಾಮಿಕನಂತೆ ತಮ್ಮ ಬದುಕಿನ ಕೊನೆಯ ದಿನಗಳನ್ನು ಒಬ್ಬಂಟಿಯಾಗಿ ಕಳೆಯುತ್ತಿದ್ದ ಗುರುಪ್ರಸಾದ್ ರವರಿಗೆ ಆ ಅಸಹನೀಯ ಏಕಾಂತವೇ ಖಿನ್ನತೆಯನ್ನು ಹೆಚ್ಚಿಸಿತು. ನಿದ್ದೆ ಮಾತ್ರೆಗಳಿಲ್ಲದೆ ಮಲಗುವುದೂ ಅಸಾಧ್ಯವಾಗಿತ್ತು. ಇಂತಹ ಸಮಯದಲ್ಲಿ ಧೈರ್ಯ ತುಂಬುವವರು ಯಾರಾದರೂ ಜೊತೆಯಲ್ಲಿರಬೇಕಿತ್ತು. ಆದರೆ ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದ ಗುರುಪ್ರಸಾದರವರು ಎಲ್ಲರಿಂದಲೂ ದೂರಾಗಿ ಏಕಾಂಗಿತನವನ್ನು ಆಯ್ಕೆ ಮಾಡಿಕೊಂಡಿದ್ದರು. ಆ ಒಂಟಿತನವೇ ಕಂಟಕವಾಗಿ ಕಾಡಿ ಸಂಕಟವನ್ನು ಉದ್ದೀಪನಗೊಳಿಸಿ ಸಾವಿಗೆ ಪ್ರಮುಖ ಕಾರಣವಾಯ್ತು.

ಎಲ್ಲರಿಂದಲೂ ದೂರಾಗಲು ಅವರ ವಿಕ್ಷಿಪ್ತ ನಡವಳಿಕೆ, ಸಿಟ್ಟು ಸೆಡವುಗಳೂ ಕಾರಣವಾಗಿದ್ದವು ಎಂಬುದು ನಿಜ. ನಟರೊಂದಿಗೆ, ನಿರ್ಮಾಪಕರೊಂದಿಗೆ, ಫೈನಾನ್ಸರ್‌ಗಳೊಂದಿಗೆ ಅಷ್ಟೇ ಯಾಕೆ ಜೀವನವನ್ನು ಹಂಚಿಕೊಂಡ ಸಂಗಾತಿಗಳೊಂದಿಗೂ ಹೊಂದಾಣಿಕೆಗಳು ಮುರಿದು ಬಿದ್ದು ಮನಸ್ತಾಪಗಳೇ ಅತಿಯಾಗಿದ್ದು ಗುರುಪ್ರಸಾದರು ನಡೆದು ಬಂದ ದಾರಿಯಲ್ಲಿ ಅಡೆತಡೆಗಳಾಗಿ ಪರಿಣಮಿಸಿದವು. ಅವರಿಗಿದ್ದ ವಿಕ್ಷಿಪ್ತ ವ್ಯಕ್ತಿತ್ವ ಹಾಗೂ ವಿಭಿನ್ನ ಆಲೋಚನೆಗಳೇ ಸಿನೆಮಾ ರಂಗದಲ್ಲಿ ಯಶಸ್ಸನ್ನು ತಂದು ಕೊಟ್ಟವು, ಹಾಗೂ ಅವೇ ಕಾರಣಗಳು ಅವರ ದುರಂತ ಅಂತ್ಯಕ್ಕೂ ಕಾರಣಗಳಾದವು.

2006 ರಿಂದ 18 ವರ್ಷಗಳ ಕಾಲ ಸಿನೆಮಾವನ್ನೇ  ಉಸಿರಾಡುತ್ತಾ ಬದುಕಿದ ಗುರುಪ್ರಸಾದ್ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ರಂಗನಾಯಕ ಹಾಗೂ ಎದ್ದೇಳು ಮಂಜುನಾಥ -2 ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಮೊದಲಿನ ಎರಡು ಸಿನೆಮಾಗಳು ಸೂಪರ್ ಹಿಟ್ ಆಗಿ ಗುರುಪ್ರಸಾದರವರಿಗೆ ಹೆಸರನ್ನು ತಂದುಕೊಟ್ಟವು. ಡೈರೆಕ್ಟರ್ ಸ್ಪೆಷಲ್ ಮತ್ತು ರಂಗನಾಯಕ ಈ ಎರಡೂ ಸಿನೆಮಾಗಳು ಇನ್ನಿಲ್ಲದಂತೆ ನೆಲ ಕಚ್ಚಿದವು. ಕೊನೆಯ ಸಿನೆಮಾ ಎದ್ದೇಳು ಮಂಜುನಾಥ -2 ತಯಾರಾಗಿದ್ದರೂ ಬಿಡುಗಡೆ ಮಾಡಲು ಸಾಧ್ಯವಾಗದೇ ಅದು ಸಾಲದ ಸಂಕಷ್ಟಕ್ಕೆ ಸಿಲುಕಿಸಿ ಪ್ರಾಣಕ್ಕೆ ಸಂಚಕಾರ ತಂದೊಡ್ಡಿತು. ಆದರೆ ಯಶಸ್ವಿಯಾದ ಆ ಎರಡು ಸಿನೆಮಾಗಳಿವೆಯಲ್ಲಾ ಅವುಗಳೇ ಗುರುಪ್ರಸಾದರ ಪ್ರತಿಭೆಗೆ, ಭಿನ್ನ ಆಲೋಚನೆಗೆ, ವಿಭಿನ್ನ ನಿರೂಪಣೆಗೆ ಸಾಕ್ಷಿಯಾಗಿವೆ. ಅಪಾರವಾದ ಓದು ಹಾಗೂ ತೀಕ್ಷ್ಣವಾದ ಬರವಣಿಗೆಗಳು ಗುರುಪ್ರಸಾದರವರ ಸಾಮರ್ಥ್ಯವನ್ನು ಹೆಚ್ಚಿಸಿತ್ತು. ದಕ್ಕಿದ ಪ್ರತಿಭೆಯನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಂಡಿದ್ದರೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಹುದಾಗಿತ್ತು. ಆದರೆ ಈ ಓವರ್ ಕಾನ್ಫಿಡೆನ್ಸ್ ಅನ್ನೋದು ಹಲವಾರು ಬಾರಿ ದಾರಿ ತಪ್ಪಿಸುತ್ತದೆ. ಮಹತ್ವಾಕಾಂಕ್ಷೆ ಎನ್ನುವುದು ಸರಿಯಾದ ದಾರಿಯಲ್ಲಿ ಕ್ರಮಿಸದೇ ಹೋದರೆ ಗುರಿ ತಪ್ಪುತ್ತದೆ. ಅದಕ್ಕೆ ಗುರುಪ್ರಸಾದರವರೇ ಬಹು ದೊಡ್ಡ ಉದಾಹರಣೆ.

ಇಷ್ಟಕ್ಕೂ ಗುರುಪ್ರಸಾದರಂತಹ ಅಪರೂಪದ ಪ್ರತಿಭಾವಂತನ ಅಕಾಲಿಕ ಸಾವಿಗೆ ಕಾರಣರು ಯಾರು? ಅದು ಅವರದೇ ಸ್ವಯಂಕೃತ ಅಪರಾಧ ಎನ್ನುವುದು ಸುಲಭ. ಆದರೆ ಆತ್ಮಹತ್ಯೆಗೆ ಪ್ರಚೋದಿಸುವ ಬಾಹ್ಯ ಒತ್ತಡಗಳೂ ಕಾರಣವಾಗುತ್ತವೆ ಎಂಬುದನ್ನು ಮರೆಯಲಾಗದು. ಈ ಸಿನೆಮಾ  ಕ್ಷೇತ್ರದಲ್ಲಿ ಯಶಸ್ಸು ಎನ್ನುವುದು ರಮ್ಮಿ ಆಟದಂತೆ ಗ್ಯಾಂಬ್ಲಿಂಗ್ ಆಗಿದೆ. ಕೆಲವೊಮ್ಮೆ ಅಕಸ್ಮಾತ್ ಯಶಸ್ಸು ದೊರೆಯುತ್ತದೆ. ಅದರ ಮತ್ತಿನಲ್ಲೇ ಮೈಮರೆತು ಮತ್ತೆ ಮತ್ತೆ ವಿವೇಚನಾರಹಿತವಾಗಿ ಎಲ್ಲವನ್ನೂ ಪಣಕ್ಕಿಡುತ್ತಾ ಹೋದರೆ ಸೋಲು ಸವಾಲೆಸೆಯುತ್ತದೆ. ಸೋಲುಗಳನ್ನು ದಿಟ್ಟವಾಗಿ ಎದುರಿಸದೇ ಹೋದರೆ, ಅಪಾಯವನ್ನು ಅರಿತು ಆಟದಿಂದ ಹೊರಗೆ ಬಾರದೇ ಹೋದರೆ ಬದುಕು ಮುಳುಗುತ್ತದೆ. ಹಾಗೆ ಮುಳುಗುವವರನ್ನು ಮೇಲೆತ್ತುವ ಔದಾರ್ಯತೆ ನಮ್ಮ ಸಿನೆಮಾ ರಂಗದಲ್ಲಿಲ್ಲ. ಯಾರಾದರು ಹೇಗೋ ಯಶಸ್ಸನ್ನು ಪಡೆದಿದ್ದೇ ಆದರೆ ಅವರನ್ನು ಹೇಗೆ ಸೋಲಿಸಬೇಕು ಎಂದು ಶಡ್ಯಂತ್ರ ಮಾಡುವವರೂ ಚಲನಚಿತ್ರ ಕ್ಷೇತ್ರದಲ್ಲಿದ್ದಾರೆ. ಸೋಲಿನ ಸುಳಿಯಲ್ಲಿ ಸಿಕ್ಕವರಿಗೆ ಸಹಾಯ ಒದಗಿಸಿ ಬದುಕಿಸುವ ದೊಡ್ಡಗುಣ ಈ ಕ್ಷೇತ್ರದಲ್ಲಿ ಕಮ್ಮಿ. ಹೀಗಾಗಿ ಸಿನೆಮಾ ಕ್ಷೇತ್ರದಲ್ಲಿ ಇರುವ ಅಸಹಕಾರಗಳೂ ಗುರುಪ್ರಸಾದರಂತಹ ಬುದ್ಧಿವಂತರ ನಿರ್ಗಮನಕ್ಕೆ ಕಾರಣವಾಗಿದೆ. ಇಂತಹ ಪ್ರತಿಭಾವಂತ ನಿರ್ದೇಶಕನಿಗೆ  ನಿರ್ಮಾಪಕರುಗಳು ಕರೆದು ಅವಕಾಶಗಳನ್ನು ಕೊಡಬಹುದಾಗಿತ್ತು, ಕೊಡಲಿಲ್ಲ.

ಗುರುಪ್ರಸಾದರವರಿಗೆ ಬರವಣಿಗೆ ಕಲೆ ಸಿದ್ದಿಸಿತ್ತು. ಪ್ರೇಕ್ಷಕರನ್ನು ಆಕರ್ಷಣೆಗೆ ಒಳಗಾಗುವಂತೆ ಸಂಭಾಷಣೆ ಬರೆಯುವ ಸಾಮರ್ಥ್ಯವೂ ಇತ್ತು. ಸಿನೆಮಾಗಳಿಗೆ ಸ್ಕ್ರಿಪ್ಟ್ ಬರೆಯುವ ತಂತ್ರಗಾರಿಕೆ ಒಲಿದಿತ್ತು. ಮಾತಾಡುವ ಕಲೆಯೂ ಹೇಗೋ ಗೊತ್ತಾಗಿತ್ತು, ಹೀಗಾಗಿ ಸಿನೆಮಾಗೆ ಬಂಡವಾಳ ಹೂಡುವವರು ಸಿಕ್ಕುವವರೆಗೂ ಬರವಣಿಗೆಯನ್ನೇ ಬದುಕಾಗಿಸಿಕೊಂಡಿದ್ದರೂ ಬದುಕಬಹುದಾಗಿತ್ತು. ಆದರೆ ಯಶಸ್ಸಿನ ಮೆಟ್ಟಿಲೇರುವ ಧಾವಂತದಲ್ಲಿ ಜಾರುವ ನೆಲವನ್ನು ಗಮನಿಸಿ ಎಚ್ಚರಿಕೆ ವಹಿಸದೇ ಇರುವುದರಿಂದಲೇ ಖಿನ್ನತೆ ಆವರಿಸಿತು, ವಿಕ್ಷಿಪ್ತತೆ ಅತಿಯಾಯಿತು. ಸಾವೊಂದೇ ಸಮಸ್ಯೆಗಳಿಂದ ದೂರಾಗುವ ಅಂತಿಮ ದಾರಿಯಾಗಿ ಕಂಡಿತು.

ಬೇಸರವಿದೆ ಬರಹಗಾರನ ಅಕಾಲಿಕ ಅಗಲಿಕೆಯಿಂದ

ನೋವಾಗುತ್ತಿದೆ ಪ್ರತಿಭೆಯೊಂದರ ನಿರ್ಗಮನದಿಂದ

ತಳಮಳವಾಗುತ್ತಿದೆ ಸಾಧಕನನ್ನು ಉಳಿಸಿಕೊಳ್ಳಲಾಗದ ವ್ಯವಸ್ಥೆಯಿಂದ

‘ಮಠ’ದ ಗುರುವಿಗೆ ಅಂತಿಮ ನಮನ

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ – ಕನ್ನಡದಲ್ಲಿ ಜೀವಿಸೋಣ !

More articles

Latest article