“ಮುಸ್ಸಂಜೆ ಮಾತು” ಪುಸ್ತಕದ ಟಿಕ್ ಆಗದ ಬಕೆಟ್ ಲಿಸ್ಟುಗಳು

Most read

ಕನ್ನಡ ಪ್ಲಾನೆಟ್ ಅಂಕಣಕಾರರಾದ ಪ್ರಸಾದ್ ನಾಯ್ಕ್ ರವರ ಹೊಸ ಪುಸ್ತಕ “ಮುಸ್ಸಂಜೆ ಮಾತು” 23.03.2025ರಂದು ಲೋಕಾರ್ಪಣೆಗೊಂಡಿದೆ.ಬೆಂಗಳೂರಿನ ವೀರಲೋಕ ಪ್ರಕಾಶನದಿಂದ ಪ್ರಕಟವಾಗಿರುವ “ಮುಸ್ಸಂಜೆ ಮಾತು” ಬದುಕಿನ ಮುಸ್ಸಂಜೆಯ ಕತೆಗಳನ್ನು ಓದುಗರಿಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವಿದು ಎಂಬುದು ಲೇಖಕರ ಸವಿನಯ ಅನಿಸಿಕೆ. ಕನ್ನಡ ಪ್ಲಾನೆಟ್ ಓದುಗರಿಗಾಗಿ “ಮುಸ್ಸಂಜೆ ಮಾತು” ಕೃತಿಯ ಆಯ್ದ ಅಧ್ಯಾಯವೊಂದು ಇಲ್ಲಿದೆ.

ನಿಮ್ಮ ಕನಸುಗಳನ್ನು ಕಾದಿಟ್ಟುಕೊಳ್ಳಿ”

ಹೀಗೊಂದು ಶೀರ್ಷಿಕೆಯಿದ್ದ ಪುಟ್ಟ ಪುಸ್ತಕವೊಂದು ಕುನ್ಝುಮ್ ಪುಸ್ತಕದಂಗಡಿಯ ಕಪಾಟಿನಲ್ಲಿ ಕಂಡಂತಾಯಿತು. ಏನೋ ಸ್ವಾರಸ್ಯಕರವಾಗಿದೆಯಲ್ಲ ಅಂತ ಕೈಗೆತ್ತಿಕೊಂಡೆ. ಮತ್ತದೇ ಪರಿಚಿತ ಹೆಸರು. ರಸ್ಕಿನ್ ಬಾಂಡ್.

ಪ್ರತೀಬಾರಿ ಪುಸ್ತಕದಂಗಡಿಗೆ ಹೋದಾಗಲೂ ರಸ್ಕಿನ್ ಬಾಂಡ್ ರವರ ಹೊಸ ಪುಸ್ತಕವೊಂದು ನನಗೆ ಕಾಣಸಿಗುತ್ತದೆ. ಇತ್ತೀಚೆಗಂತೂ ಅದು ಹೆಚ್ಚಾದಂತೆಯೂ ನನಗನ್ನಿಸಿದೆ. ಬಾಂಡ್ ರವರ ಹಳೆಯ ಬಿಡಿ ಲೇಖನಗಳನ್ನೇ ಕಲೆ ಹಾಕಿ ಈ ಖ್ಯಾತನಾಮ ಪ್ರಕಾಶಕ ಸಂಸ್ಥೆಗಳು ಹೊಸ ಪುಸ್ತಕಗಳನ್ನು ಮಾರುಕಟ್ಟೆಗೆ ಬಿಡುತ್ತಿವೆಯೋ ಹೇಗೆ ಎಂದು ನಾನು ಹಲವು ಬಾರಿ ಸಂಶಯದಿಂದಲೇ ನೋಡಿದ್ದಿದೆ. ಏಕೆಂದರೆ ಅವರ ಜನಪ್ರಿಯತೆ ಹಾಗಿದೆ. ಮಕ್ಕಳ ಸಾಹಿತ್ಯಲೋಕದಲ್ಲಂತೂ ಬಾಂಡ್ ಖುದ್ದು ತಾನೊಬ್ಬ ಬ್ರಾಂಡ್ ಎನ್ನುವಷ್ಟು ಸಾಹಿತ್ಯಕೃಷಿ ಮಾಡಿ ಯಶಸ್ವಿಯಾದವರೂ ಹೌದು.

ರಸ್ಕಿನ್ ಬಾಂಡ್ ಈ ಪುಸ್ತಕದಲ್ಲಿ ತನ್ನ ತರುಣ ಒಡನಾಡಿಗಳಿಗೆ ಪತ್ರಗಳ ರೂಪದಲ್ಲಿ ಕೆಲ ತಿಳಿಮಾತುಗಳನ್ನು ಹೇಳಿದ್ದಾರೆ. ಬಾಂಡ್ ತಮ್ಮ ಪಾಡಿಗೆ ಈ ಬರಹಗಳನ್ನು ಬರೆದು ಒಂದೆಡೆ ಇಟ್ಟಿರಬಹುದು. ಆದರೆ ಇವುಗಳನ್ನು ಕಲೆ ಹಾಕಿ ಪುಸ್ತಕವೊಂದನ್ನು ಮಾಡಲೇಬೇಕೆಂಬ ಹುಕಿಯೊಂದು ಪ್ರಕಾಶಕರಿಗೆ ಇದ್ದಂತೆ ಅಲ್ಲಿ ಕಾಣುತ್ತಿತ್ತು. ಹೀಗಾಗಿ ಕೃತಿಯು ಚಂದದ ಬರಹಗಳ ಪುಟ್ಟ ಸಂಕಲನವಾದರೂ ಒಟ್ಟಾರೆಯಾಗಿ ಅಲ್ಲೊಂದು ಆಕಾರ ಕಾಣುವುದಿಲ್ಲ. ಸುಮಾರಾಗಿರುವ ಚಿತ್ರವೊಂದನ್ನು ದಡಸೇರಿಸುವ ಸಂಪೂರ್ಣ ಜವಾಬ್ದಾರಿಯು ಕೆಲವೊಮ್ಮೆ ಸ್ಟಾರ್ ನಟ-ನಟಿಯರ ಹೆಗಲಿಗೇರುವಂತೆ, ಓದುಗರನ್ನು ಸೆಳೆಯಲು ಅಲ್ಲಿದ್ದ ಏಕೈಕ ಅಂಶವು ರಸ್ಕಿನ್ ಬಾಂಡ್ ಮಾತ್ರ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ರಸ್ಕಿನ್ ಬಾಂಡ್

ಆದರೆ ಪ್ರತೀಬಾರಿಯಂತೆ ಈ ಬಾರಿಯೂ ನನ್ನನ್ನು ಯೋಚನೆಗೆ ಹಚ್ಚಿದ್ದು ರಸ್ಕಿನ್ ಬಾಂಡ್ ಈಗಲೂ ಬರೆಯುತ್ತಿದ್ದಾರೆಯೇ ಎಂಬ ಪ್ರಶ್ನೆ. ಏಕೆಂದರೆ ನಾನು ಈ ಲೇಖನವನ್ನು ಬರೆಯುವ ಹೊತ್ತಿಗೆ ಅವರಿಗೆ ಆಗಲೇ ತೊಂಭತ್ತಾಗಿದೆ. ಆ ವಯಸ್ಸಿನಲ್ಲೂ ಬರೆಯುತ್ತಿದ್ದ ಮತ್ತು ಬರೆಯುತ್ತಿರುವ ಲೇಖಕರ ಸಂಖ್ಯೆಯುನಮ್ಮ ನಡುವೆ ಯಾವತ್ತಿಗೂ ಕಮ್ಮಿಯೇ. ಆದರೆ ನನ್ನ ಸಂದೇಹವು ಇಲ್ಲಿ ಮತ್ತೊಮ್ಮೆ ಸುಳ್ಳಾಗಿತ್ತು. ಈ ಪುಸ್ತಕವು ಪ್ರಕಟವಾಗುವ ಕೆಲವೇ ತಿಂಗಳುಗಳ ಹಿಂದೆ ರಸ್ಕಿನ್ ಬಾಂಡ್ ಖುದ್ದಾಗಿ ಬರೆದಿರುವ ಕೈಬರಹದ ಪತ್ರದ ಪ್ರತಿಯೊಂದನ್ನು ಪುಸ್ತಕದಲ್ಲಿ ಸೇರಿಸಲಾಗಿದೆ.ಸುಮಾರು ಒಂದು ಪುಟದಷ್ಟು ದೀರ್ಘವಾಗಿರುವ ಆ ಚಂದದ ಪತ್ರದಲ್ಲಿ ರಸ್ಕಿನ್ಬಾಂಡ್ ಸಹಿ,ಪತ್ರವನ್ನು ಬರೆದ ದಿನಾಂಕಗಳೆಲ್ಲವನ್ನೂ ಓದುಗರು ನೋಡಬಹುದು.

ಹೌದು.ಬಾಂಡ್ ಗೆ ತೊಂಭತ್ತಾಗಿರಬಹುದು.ಆದರೆ ಅವರು ಇಂದಿಗೂ ಬರೆಯುತ್ತಿದ್ದಾರೆ.ತಮ್ಮ ಹಳೆಯ ದಿನಗಳಿಗೆ ಹೋಲಿಸಿದರೆ ಅದು ಸಾಕಷ್ಟು ಕಮ್ಮಿಯಿರಬಹುದು.ಹಾಗಂತ ಅವರು ಬರೆಯುವುದನ್ನು ನಿಲ್ಲಿಸಿಲ್ಲ. ಅವರ ಲವಲವಿಕೆಯ ಬರವಣಿಗೆಗೆ ಇಂದಿಗೂ ಮುಪ್ಪು ಬಂದಿಲ್ಲ.

ಹೀಗಿರುವಾಗ ಥಟ್ಟನೆ ಮನಸ್ಸಿನಲ್ಲೊಂದು ಯೋಚನೆಯು ಮೈದಾಳುತ್ತದೆ…

ನಮ್ಮಂಥವರು ಈ ಬದುಕಿನ ಓಟದಲ್ಲಿ ತೊಂಭತ್ತರವರೆಗೆ ತಲುಪುವುದು ಸಾಧ್ಯವೇ?ಒಂದು ಪಕ್ಷ ಸಾಧ್ಯವಾದರೂ ಆ ಹಂತದಲ್ಲಿ ಬಾಂಡ್ ರವರಷ್ಟು ಕ್ರಿಯಾಶೀಲರಾಗಿರುವುದು ನಮ್ಮಿಂದ ಸಾಧ್ಯವಾಗಬಹುದೇ?

ನನಗಂತೂ ಗೊತ್ತಿಲ್ಲ!

*************

ಇಂಗ್ಲಿಷ್ ಸಾಹಿತ್ಯದ ಗಂಧಗಾಳಿಯಿರದಿದ್ದ ಬಾಲ್ಯಕಾಲದಲ್ಲೂ ನಾವು ರಸ್ಕಿನ್ ಬಾಂಡ್ ಹೆಸರನ್ನು ಕೇಳಿದ್ದೆವು ಎಂಬುದನ್ನು ಇಂದು ನೆನಪಿಸಿಕೊಳ್ಳುವಾಗ ಅಚ್ಚರಿಯಾಗುತ್ತದೆ.

ಅದ್ಹೇಗೋ ಏನೋ ರಸ್ಕಿನ್ ಬಾಂಡ್ ಎಂಬ ಹೆಸರು ಅದ್ಯಾವುದೋ ರೀತಿಯಲ್ಲಿ ನಮ್ಮೊಡನೆ ಸೇರಿಹೋಗಿತ್ತು. ಈ ಹೆಸರನ್ನು ಯಾರಿಂದಲೋ ಕೇಳಿದ್ದೆವೋ, ಎಲ್ಲಿಂದಲೋ ಓದಿದ್ದೆವೋ ಎಂಬುದೂ ನೆನಪಾಗುತ್ತಿಲ್ಲ. ಆದರೆ “ರಸ್ಕಿನ್ ಬಾಂಡ್” ಎಂಬ ಹೆಸರೊಂದು ಮಾತ್ರ ನಮ್ಮೆಲ್ಲರಿಗೆ ಸುಮಾರಾಗಿ ಗೊತ್ತಿತ್ತು. ತಮ್ಮ ಹೆಸರಿನಲ್ಲಿದ್ದ ಬಾಂಡ್ ನಿಂದಾಗಿ ಅವರನ್ನು ಒಮ್ಮೊಮ್ಮೆ ಸರ್ವಶಕ್ತ, ಮಹಾಚಾಣಾಕ್ಷ ಸಾಹಸಿ ಜೇಮ್ಸ್ ಬಾಂಡ್ ನಂತೆಯೂ, ಏನೋ ಒಂಥರಾ ಕೂಲ್ ಹೆಸರಾಗಿದ್ದ ರಸ್ಕಿನ್ ನಿಂದಾಗಿ ಯಾರೋ ಹಾಲಿವುಡ್ ನಟನಿರಬೇಕು ಅಂತಲೂ ನಾವು ಒಂದು ಹಂತದಲ್ಲಿ ಲೆಕ್ಕಹಾಕಿದ್ದೆವು. ಏಕೆಂದರೆ ಹಾಗಂದರೇನು ಎಂಬುದನ್ನು ಥಟ್ಟನೆ ತಿಳಿದುಕೊಳ್ಳಲು ಆಗ ಇಂಟರ್ನೆಟ್-ಗೂಗಲ್ ಗಳಿನ್ನೂ ಬಂದಿರಲಿಲ್ಲ. ಅಲ್ಲದೆ ರಸ್ಕಿನ್ ಬಾಂಡ್ ಅಥವಾ ಅವರ ಸಾಹಿತ್ಯವನ್ನು ಅಷ್ಟಾಗಿ ಬಲ್ಲವರು ಕೂಡ ನಮ್ಮ ಸುತ್ತಮುತ್ತಲಿರಲಿಲ್ಲ.

ಹೀಗೆ ಈ ರಸ್ಕಿನ್ ಬಾಂಡ್ ಎಂಬ ಹೆಸರು ಅದೆಷ್ಟೋ ಕಾಲ ನಮ್ಮ ನಡುವಿನಲ್ಲಿದ್ದೂ ತನ್ನದೇ ಆದ ರೀತಿಯಲ್ಲಿ ಅಜ್ಞಾತವೆಂಬಂತಿತ್ತು. ಉದಾಹರಣೆಗೆ ಈ “ಬರ್ಮುಡಾ ಟ್ರಯಾಂಗಲ್” ಅಂತಿದೆಯಲ್ಲ. ನಮ್ಮ ಸುತ್ತಮುತ್ತಲಿನ ಹತ್ತರಲ್ಲಿ ಎಂಟು ಮಂದಿ ಖಂಡಿತ ಈ ಪದವನ್ನು ಕೇಳಿರುತ್ತಾರೆ.ಆದರೆ ಏನೆಂದು ವಿಚಾರಿಸಿದರೆ ಅವರಿಗೆ ಈ ಬಗ್ಗೆ ಅಷ್ಟೇನೂ ಗೊತ್ತಿರುವುದಿಲ್ಲ. ಎಲ್ಲೋ ಕೇಳಿದಂಗಿದೆಯಪ್ಪಾ ಎಂದು ಹೇಳಿ ಸುಮ್ಮನೆ ಜಾರಿಕೊಂಡುಬಿಡುತ್ತಾರೆನಮ್ಮಂತಹ ಪಾಮರರ ಪಾಲಿಗೆ ರಸ್ಕಿನ್ ಬಾಂಡ್ ಇದ್ದಿದ್ದು ಕೂಡ ಹೀಗೆಯೇ.

ದಿನಗಳು ಸುಮ್ಮನೆ ತಮ್ಮ ಪಾಡಿಗೆ ಕಳೆಯುತ್ತಿದ್ದವು. ಕ್ಯಾಲೆಂಡರುಗಳು ಬದಲಾಗುತ್ತಿದ್ದವು. ನಮಗೆ ವಯಸ್ಸಾಗುತ್ತಿದ್ದಂತೆ ಬಾಂಡ್ ಗೂ ವಯಸ್ಸಾಗುತ್ತಿತ್ತು. ಹಾಗಂತ ಹೊಸ ಹೆಸರುಗಳ ಅಲೆಯಲ್ಲಿ ಅವರೇನೂ ಕೊಚ್ಚಿಹೋಗಲಿಲ್ಲ. ಬದಲಾಗಿ ಪುಸ್ತಕದಂಗಡಿಗಳ ಕಪಾಟುಗಳಲ್ಲಿ ಬಾಂಡ್ ಹೊಸ ಅವತಾರಗಳಲ್ಲಿ ಬಂದು ನಿಲ್ಲುವುದನ್ನು ಕಂಡಾಗ ನಮಗೀಗ ಅಚ್ಚರಿಯಾಗುತ್ತಿದೆ. ತಮ್ಮ ಬಳಿ ಹೇಳಿಕೊಳ್ಳಬೇಕಾದ ಕತೆಗಳು ಇನ್ನೂ ಸಾಕಷ್ಟಿವೆಯೆಂದು ರಸ್ಕಿನ್ ಬಾಂಡ್ ಇಂದಿಗೂ ಹೇಳುತ್ತಾರೆ. ಋತುಗಳಂತೆ ಬಂದುಹೋಗುವ ಅವರ ಹೊಸ ಪುಸ್ತಕಗಳು ಕೂಡ ಅವರ ಈ ಮಾತುಗಳನ್ನು ಸಾಬೀತುಪಡಿಸುತ್ತಲೇ ಇವೆ.

ಕಳೆದ ಒಂದು ದಶಕದಲ್ಲಿ ಗಮನಿಸಿರುವ ಅವರ ಕೆಲ ಛಾಯಾಚಿತ್ರಗಳನ್ನು ನೋಡುತ್ತಾ, ನನ್ನ ಮನದಲ್ಲಿರುವ ರಸ್ಕಿನ್ ಬಾಂಡ್ ಇಮೇಜ್ ಕೂಡ ಕೊಂಚ ಬದಲಾಗಿದೆ. ಮಸೂರಿಯ ಒಂದು ಮೂಲೆಯಲ್ಲಿ,ತನ್ನ ಸುತ್ತ ಪ್ರಕೃತಿಯ ಹಚ್ಚಹಸಿರ ಚಾದರವನ್ನು ಹೊದ್ದುಕೊಂಡು, ಮನೆಯಂಗಳದಲ್ಲಿ ಆರಾಮ ಕುರ್ಚಿಯನ್ನೊಂದು ಹಾಕಿ, ಬಾಂಡ್ ನೋಟ್-ಪ್ಯಾಡ್ ಒಂದನ್ನಿಟ್ಟುಕೊಂಡು ಬರೆಯುತ್ತಿರುವಂತೆ ಒಂದು ಇಮೇಜ್ ನಿಧಾನವಾಗಿ ಮನದಲ್ಲಿ ರೂಪುಗೊಳ್ಳುತ್ತದೆ. ರಸ್ಕಿನ್ ಬಾಂಡ್ ನಿಜಕ್ಕೂ ಹಾಗಿದ್ದರೋ ಇಲ್ಲವೋ ಎಂಬುದು ಬೇರೆ ಸಂಗತಿ. ಆದರೆ ನನ್ನ ಕಲ್ಪನೆಯ ಬಾಂಡ್ ಮಾತ್ರ ಈ ಅವತಾರದಲ್ಲೇ ನನ್ನೊಂದಿಗೆ ಉಳಿಯುತ್ತಾರೆ ಎಂಬ ನಂಬಿಕೆ ನನ್ನದು.

ಇತ್ತೀಚೆಗೆ ಉದ್ಯೋಗನಿಮಿತ್ತದ ಕೆಲಸವೆಂದು ಡೆಹ್ರಾಡೂನಿಗೆ ಹೋಗಬೇಕಾಗಿ ಬಂದಾಗ ಮಸೂರಿಯ ಹೆಸರು ಮತ್ತೊಮ್ಮೆ ಕಿವಿಗಪ್ಪಳಿಸಿತ್ತು. ಜೊತೆಗೇ ರಸ್ಕಿನ್ ಬಾಂಡ್ ನೆನಪಾಗಿದ್ದರು. ಒಮ್ಮೆ ಹೋದರೆ ಹೇಗೆ, ಮಾತನಾಡಿಸಿದರೆ ಹೇಗೆ ಅಂತೆಲ್ಲ ಒಂದು ಕ್ಷಣ ಅನ್ನಿಸಿದ್ದೇನೋ ಸತ್ಯ. ಆದರೆ ತಮ್ಮ ಪುಟ್ಟ ಖಾಸಗಿ ಜಗತ್ತಿನಲ್ಲಿ, ಬೆಚ್ಚಗೆ ಬದುಕುತ್ತಿರುವ ಖ್ಯಾತ ವಯೋವೃದ್ಧರನ್ನು ಮಾತನಾಡಿಸಲೆಂದು ಹೋಗಲೂ ಒಂದು ಬಗೆಯ ಸಿದ್ಧತೆ ಬೇಕಲ್ಲ ಎಂದು ನಂತರ ಅನ್ನಿಸಿತು. ಒಟ್ಟಿನಲ್ಲಿ ಮುಹೂರ್ತ ಕೂಡಿಬರಲಿಲ್ಲ.

ನಾನು ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ಖ್ಯಾತ ಲೇಖಕ, ಪತ್ರಕರ್ತ, ಅಂಕಣಕಾರರಾಗಿದ್ದ ಖುಷ್ವಂತ್ ಸಿಂಗ್ ಇನ್ನೂ ಬದುಕಿದ್ದರು. ದಕ್ಷಿಣ ದಿಲ್ಲಿಯ ಖಾನ್ ಮಾರ್ಕೆಟ್ ಬಳಿಯಲ್ಲಿದ್ದ ಸುಜಾನ್ ಸಿಂಗ್ ಪಾರ್ಕ್ ನಿವಾಸದಲ್ಲಿ ಖುಷ್ವಂತ್ ನೆಲೆಸಿದ್ದಾರೆ ಎಂಬುದನ್ನು ಹಲವೆಡೆ ಓದಿದ್ದೆ. ಆದರೆ ಅವರನ್ನು ಭೇಟಿಯಾಗಿ ಮಾತಾಡಿಸುವಷ್ಟು ಆತ್ಮವಿಶ್ವಾಸವಿರಲಿಲ್ಲ. ಖುಷ್ವಂತ್ ರಿಗೆ ಆಗಲೇ ವಯಸ್ಸು ತೊಂಭತ್ತೆೈದು ಮೀರಿತ್ತು. ಅವರ ಕಟ್ಟುನಿಟ್ಟಿನ ಶಿಸ್ತಿನ ಜೀವನಶೈಲಿಯ ಬಗ್ಗೆ ಕೇಳಿದ್ದ-ಓದಿದ್ದ ದಂತಕತೆಗಳೆಷ್ಟೋ. ಸಾಲದ್ದಕ್ಕೆ ತಮ್ಮ ಮನೆಯ ಹೊರಗೆ ಅವರು “Please do not ring the bell unless expected” (ನಿಮ್ಮ ಆಗಮನದ ನಿರೀಕ್ಷೆಯು ನಮಗಿರದ ಹೊರತು ದಯವಿಟ್ಟು ಕರೆಗಂಟೆ ಬಾರಿಸಬೇಡಿ) ಅಂತೆಲ್ಲ ಒಂದು ಫಲಕವನ್ನು ಬೇರೆ ಹಾಕಿದ್ದರಂತೆ! ಹೀಗಿರುವಾಗ ನಮ್ಮಂತಹ ಬಾಲಂಗೋಚಿಗಳು ಅವರನ್ನು ಹುಡುಕಿಕೊಂಡು ಮಾತನಾಡಿಸುವುದು ಅಷ್ಟರಲ್ಲೇ ಇತ್ತು.

ಖುಷ್ವಂತ್ ಸಿಂಗ್ ನಿಧನರಾದಾಗಲೂ ನಾನು ದಿಲ್ಲಿಯಲ್ಲೇ ಇದ್ದೆ. ಆಗ ಅವರಿಗೆ ತೊಂಭತ್ತೊಂಭತ್ತರ ಪ್ರಾಯ. ಛೇ, ಇನ್ನೊಂದು ವರ್ಷ ಬದುಕಿದ್ದರೆ ಖುಷ್ವಂತಜ್ಜ ಸೆಂಚುರಿ ಬಾರಿಸುತ್ತಿದ್ದರು ಮತ್ತು ಈ ನೆಪದಲ್ಲಿ ಏನಾದರೂ ತಮ್ಮ ಬಗ್ಗೆಯೇ ತಮಾಷೆಯಾಗಿ ಬರೆದುಕೊಳ್ಳುತ್ತಿದ್ದರು ಎಂದು ನಮ್ಮನ್ನೂ ಸೇರಿದಂತೆ ದೇಶದಾದ್ಯಂತ ಅವರ ಓದುಗ ಅಭಿಮಾನಿಗಳು ಬೇಜಾರಾಗಿದ್ದು ನನಗಿನ್ನೂ ನೆನಪಿದೆ. ದಿಲ್ಲಿಯಲ್ಲಿದ್ದೂ ಭೇಟಿಯಾಗಲಾರದೆ ನನ್ನ ಮಟ್ಟಿಗೆ ಖಾಲಿತನವೊಂದನ್ನು ಉಳಿಸಿಹೋದ ಮತ್ತೊಂದು ಜೀವವೆಂದರೆ ಇಮ್ರೋಜ್. ಖ್ಯಾತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ರವರ ಸಂಗಾತಿಯಾಗಿದ್ದ ಇಮ್ರೋಜ್ “ನಡೆದಾಡುವ ತಾಜ್ ಮಹಲ್” ಎಂದೇ ಹೆಸರಾಗಿದ್ದವರು. ಪ್ರತಿಭಾವಂತ ಚಿತ್ರಕಲಾವಿದನಾಗಿದ್ದ ಇಮ್ರೋಜ್ ರನ್ನು ಒಳ್ಳೆಯ ಕವಿಯಾಗಿಸಿದ ಕೀರ್ತಿಯು ನಿಸ್ಸಂದೇಹವಾಗಿ ಅಮೃತಾರಿಗೆ ಮತ್ತು ಇಮ್ರೋಜ್ ರೆಡೆಗೆ ಅವರಿಗಿದ್ದ ಒಲವಿಗೆ ಸಲ್ಲಬೇಕು.

ಅಂದುಕೊಂಡ ಕೆಲಸಗಳನ್ನು ಆದಷ್ಟು ಬೇಗ ಮಾಡಿಬಿಡುವುದೇ ಜಾಣತನ. ಯಾಕೆಂದರೆ ಕಾಲ ಯಾರಿಗೂ ಕಾಯುವುದಿಲ್ಲ!

*************

 2024ರಲ್ಲಿ ಪ್ರಕಟವಾಗಿರುವ ತನ್ನ ಹೊಸ ಕೃತಿಯಲ್ಲಿ (ಹೋಲ್ಡ್ ಆನ್ ಟು ಯುವರ್ ಡ್ರೀಮ್ಸ್: ಅ ಲೆಟರ್ ಟು ಯಂಗ್ ಫ್ರೆಂಡ್ಸ್) ತೊಂಭತ್ತರ ತುಂಟ ರಸ್ಕಿನ್ ಬಾಂಡ್ ತನ್ನ ಬಗ್ಗೆಯೇ ಬರೆದುಕೊಳ್ಳುವ ಪರಿಯನ್ನೊಮ್ಮೆ ನೋಡಿ:

“ಹಾಗೆ ನೋಡಿದರೆ ನಾನೋರ್ವ ಆಶಾವಾದಿ ಮನುಷ್ಯ. ಆದರೆ ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಅದೊಂದು ಬಗೆಯ ವಿಚಿತ್ರ ನಿರಾಸೆಯೊಂದು ನನ್ನನ್ನು ಆವರಿಸಿಕೊಳ್ಳುತ್ತದೆ. ನಾನು ಬರೆದಿರುವ ಅಷ್ಟೂ ಪುಸ್ತಕಗಳು, ಕತೆಗಳು, ನೂರಾರು ಟಿಪ್ಪಣಿಗಳು ಅರ್ಥವಿಲ್ಲದ್ದು ಅನ್ನಿಸಿಬಿಡುತ್ತದೆ. ಆಗಲೇ ನನಗನ್ನಿಸುವುದು, ಈ ಬರವಣಿಗೆಯನ್ನು ಬಿಟ್ಟು ಬೇರೇನಾದರೂ ಮಾಡುತ್ತಿದ್ದರೆ ಬಹುಷಃ ಚೆನ್ನಾಗಿರುತ್ತಿತ್ತೇನೋ ಅಂತ. ಆದರೆ ಅಂಥದ್ದೇನಿದೆ ಅಂತ ಯೋಚಿಸಿ ನೋಡಿದರೆ ಮತ್ತದೇ ಗೊಂದಲಗಳ ಜಾತ್ರೆ.

“ಮೊಟ್ಟೆ ಬೇಯಿಸಬಹುದೇನೋ”, ಎಂದು ಒಂದು ಕ್ಷಣ ನನಗೆ ನಾನೇ ಹೇಳಿಕೊಳ್ಳುತ್ತೇನೆ. ಅದೇ… ಮಾಲ್ ರೋಡಿನಲ್ಲಿ ಪ್ರವಾಸಿಗರಿಗಾಗಿ ಮೊಟ್ಟೆಗಳನ್ನು ಬೇಯಿಸಿ ಕೊಡುತ್ತಾರಲ್ವಾ ಕೆಲವರು. ಥೇಟು ಅವರಂತೆ. ಮೊಟ್ಟೆ ಬೇಯಿಸಿಕೊಡುವುದು ಮಹಾಕಷ್ಟವೇನಲ್ಲ. ಅದೊಂದು ಕೆಲಸವನ್ನು ನಾನು ಇಂದಿಗೂ ಮಾಡಬಲ್ಲೆ. ಆದರೆ ಈಗೀಗ ಮಾಲ್ ರೋಡಿನಲ್ಲಿ ಬಹುಬೇಗನೆ ಥಂಡಿಗಾಳಿ ಬೀಸತೊಡಗುತ್ತದೆ. ಹೀಗಿರುವಾಗ ಅಲ್ಲಿರುವ ಗಟ್ಟಿಗರ ನಡುವೆ ನಾನು ಬರ್ಖತ್ತಾಗುವುದು ಕಷ್ಟ.

“ಈ ಏರಿಯಾದಲ್ಲೇ ಅದ್ಭುತ ಅನ್ನಿಸುವಂತಹ ಆಮ್ಲೆಟ್ ಗಳನ್ನು ಮಾಡಬಲ್ಲ ಜೀನಿಯಸ್ ವ್ಯಕ್ತಿಯೊಬ್ಬನಿದ್ದಾನೆ. ಸರಳ, ಸಜ್ಜನಿಕೆಯ ಮನುಷ್ಯ. ನಾನು ಆ ಕಡೆ ಹೋದಾಗಲೆಲ್ಲ ಪ್ರೀತಿಯಿಂದ ಮಾತಾಡಿಸುತ್ತಾನೆ. ನನ್ನ ಕತೆಗಳು ಅವನ ಆಮ್ಲೆಟ್ ನಂತೆಯೇ ರುಚಿಕರವಾಗಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು ಅಂತೆಲ್ಲ ನಾನು ಯೋಚಿಸುತ್ತೇನೆ. ಕನಿಷ್ಠಪಕ್ಷ ಅಷ್ಟು ರುಚಿಕರ ಆಮ್ಲೆಟ್ ಸಿದ್ಧಪಡಿಸುವುದಾದರೂ ನನ್ನಿಂದ ಸಾಧ್ಯವಾಗಬೇಕಿತ್ತು. ಆದರೆ ಅದೇನು ಮಾಡಿದರೂ ನಾನು ಮಾಡುವ ಆಮ್ಲೆಟ್ ನಲ್ಲಿ ಕೆಲವೊಮ್ಮೆ ವಿಚಿತ್ರ ಎಡವಟ್ಟುಗಳಾಗಿಬಿಡುತ್ತವೆ. ರೂಪ-ರುಚಿಗಳೆರಡೂ ಕೆಟ್ಟುಹೋಗುತ್ತವೆ. ನಾನೇನಾದರೂ ಮುಂದೆ ಆತ್ಮಕತೆಯೊಂದನ್ನು ಬರೆದಲ್ಲಿ ಅದಕ್ಕೆ “101 ವಿಫಲ ಆಮ್ಲೆಟ್ ಗಳು” ಎಂದೇ ಹೆಸರಿಡಬಹುದು!”

ಹೀಗೆ ರಸ್ಕಿನ್ ಬಾಂಡ್ ಬರಹವನ್ನು ಓದುತ್ತಾ, ಮನಸಾರೆ ನಗುತ್ತಾ, ಪುಸ್ತಕವನ್ನು ಮುಚ್ಚಿಡುತ್ತೇನೆ. ಅವರ ಬರವಣಿಗೆಯನ್ನು ಓದುತ್ತಿದ್ದ ಬದುಕಿನ ಕಳೆದೆರಡು ನಿಮಿಷಗಳು ಬಾಂಡ್ ಹೇಳುತ್ತಿದ್ದ ಆಮ್ಲೆಟ್ಟಿನಷ್ಟೇ ರುಚಿಕರವಾಗಿತ್ತು ಅಂತೆಲ್ಲ ಅನ್ನಿಸಿ ಮನಸ್ಸು ಪ್ರಫುಲ್ಲವಾಗಿಬಿಡುತ್ತದೆ.

*************

(“ಮುಸ್ಸಂಜೆ ಮಾತು” ಕೃತಿಯು ಈಗ ವೀರಲೋಕ ಪ್ರಕಾಶನ (7022122121, 8861212172), ಸಾಹಿತ್ಯಲೋಕ ಪಬ್ಲಿಕೇಷನ್ಸ್ (9945939436), ಹರಿವು ಬುಕ್ಸ್ (80888 22171) ಸೇರಿದಂತೆ ನಾಡಿನ ಹಲವು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ಇಲ್ಲಿ ನೀಡಿರುವ ನಂಬರುಗಳಿಗೆ ಕರೆ/ವಾಟ್ಸಾಪ್ ಮಾಡಿ ಓದುಗರು ಕೃತಿಯನ್ನು ನೇರವಾಗಿ ತಮ್ಮ ವಿಳಾಸಕ್ಕೆ ತರಿಸಿಕೊಳ್ಳಬಹುದು. ಈ ಕೆಳಗಿನ ಲಿಂಕ್ ಗಳನ್ನು ಬಳಸಿಯೂ ಆಸಕ್ತರು ಪುಸ್ತಕವನ್ನು ತರಿಸಿಕೊಳ್ಳಬಹುದು.  

ವೀರಲೋಕ ಪ್ರಕಾಶನ: https://veeralokabooks.com/book/mussanje-maatu 

ಹರಿವು ಬುಕ್ಸ್: https://harivubooks.com/products/mussanje-maatu-collection-of-articles-prasad-naik-kannada-book )

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article