ಮುಕ್ತ ವಿಚಾರದ ನೆಪದಲ್ಲಿ ವಿಶ್ವವಿದ್ಯಾಲಯಗಳು ಮತೀಯವಾಗಬಾರದು: ಬರಗೂರು ರಾಮಚಂದ್ರಪ್ಪ ಸಲಹೆ

Most read

ಶಿವಮೊಗ್ಗ: ಯಾವುದೇ ವಿಶ್ವವಿದ್ಯಾನಿಲಯಗಳು ಮುಕ್ತ ವಿಚಾರದ ನೆಪದಲ್ಲಿ ಮತೀಯವಾಗಬಾರದು ಎಂದು  ಖ್ಯಾತ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ  ಪ್ರತಿಪಾದಿಸಿದ್ದಾರೆ.

ಕುವೆಂಪು ವಿಶ್ವವಿದ್ಯಾನಿಲಯದಲ್ಲಿಂದು ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಯಾವುದೇ ವಿಶ್ವವಿದ್ಯಾನಿಲಯ  ಮುಕ್ತವಾಗಿ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಬಹುದು. ಆದರೆ ಆ ವಿಷಯ ಮತೀಯವಾಗಬಾರದು. ಅಂತಹ ವಾತಾವರಣವನ್ನು  ನಿರ್ಮಾಣ ಮಾಡುವುದು  ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ಕುರಿತಾಗಿ ಡಾ. ಬರಗೂರು ಅವರು ಈ ಎಚ್ಚರಿಕೆ ನೀಡಿದರು.

ವಿಶ್ವವಿದ್ಯಾನಿಲಯಗಳು ಎಲ್ಲವನ್ನೂ ಕೇಳಬೇಕು ಎನ್ನುವುದು ನಿಜವಾದರೂ ಯಾರು ಸುಂದರವಾದ ಸುಳ್ಳನ್ನು ಹೇಳುತ್ತಾರೋ ಅದನ್ನು ನಂಬಿ ಬಿಡುವ ಸಾಧ್ಯತೆಗಳಿರುತ್ತವೆ.. ಸುಳ್ಳು ಸುಂದರವಾಗಿರುತ್ತದೆ. ಸತ್ಯ ಕಠೋರವಾಗಿರುತ್ತದೆ.  ಸುಳ್ಳಿಗೆ ಸಾಕ್ಷಿ ಬೇಕಿಲ್ಲ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದಾಗಿದೆ.  ಹಾಗಾಗಿ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಮುಕ್ತವಾಗಿರೋಣ ಎಂದರು.

ಹಾಗೆಯೇ ಅಂತಹ ವಿಚಾರಗಳನ್ನು ಪ್ರತಿಪಾದಿಸುವಲ್ಲಿ ನಮಗೊಂದು ನಿರ್ದಿಷ್ಠ ಗುರಿ ಇರಬೇಕು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ  ವಿಚಾರಗಳಲ್ಲಿ  ಮುಕ್ತವಾಗಿರೋಣ, ಆದರೆ  ಇಡೀ ಸಮಾಜ ಮತೀಯವಾಗಿರದಂತೆ ನೋಡಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದರು.

ಯಾವುದೇ ವಿಚಾರಗಳ ಬಗ್ಗೆ ನಮಗೆ ನಿರ್ದಿಷ್ಟವಾದ ನಿಲುವು ಇರಬೇಕಾಗುತ್ತದೆ. ಅನಂತಮೂರ್ತಿ ಅವರೂ ಇದನ್ನೇ ಹೇಳಿದ್ದರು. ಬೇರೆಯವರ ವಿಚಾರಧಾರೆಯನ್ನು ಕೇಳಬಾರದು ಎಂದಲ್ಲ. ಕೇಳುವಾಗ  ವಿದ್ಯಾರ್ಥಿಗಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಶರತ್ ಅನಂತಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಜಂಟಿ ನಿರ್ದೇಶಕ  ಅಶೋಕ್ ಎನ್. ಚಲವಾದಿ ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ಕನ್ನಡ ಭಾರತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ  ಕುಲಸಚಿವ ಎ. ಎಲ್ ಮಂಜುನಾಥ್,  ಪ್ರೋ. ಶ್ರೀಕಂಠಕೂಡಿಗೆ, ಪ್ರೊ. ಸಣ್ಣರಾಮ, ಪ್ರೊ. ಕೇಶವಶರ್ಮ, ಪ್ರೊ. ಕುಮಾರಚಲ್ಯ  ಅವರುಗಳನ್ನು ಗೌರವಿಸಲಾಯಿತು.

More articles

Latest article