ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮುನ್ನಡೆಸುವ ಜವಾಬ್ದಾರಿ ಪಾಕ್‌ ಹೆಗಲಿಗೆ: ಪಿಎಂ ಮೋದಿ ಏನು ಮಾಡುತ್ತಿದ್ದೀರಿ?; ಕಾಂಗ್ರೆಸ್‌ ಪ್ರಶ್ನೆ

Most read

ಬೆಂಗಳೂರು: ಪಹಲ್ಗಾಮ್ ದಾಳಿ ನಡೆದ ಹೊತ್ತಿನಲ್ಲೇ 20 ಬಿಲಿಯನ್ ಡಾಲರ್ ಹಣವನ್ನು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್)  ಪಾಕಿಸ್ತಾನಕ್ಕೆ ನೀಡಿದೆ.ಆ ಸಂದರ್ಭದಲ್ಲಿ ಶ್ರೀಲಂಕಾ, ಬಾಂಗ್ಲಾ, ನೇಪಾಳ, ಮಾಲ್ಡೀವ್ಸ್‌ ಸೇರಿದಂತೆ ಸಣ್ಣ ರಾಷ್ಟ್ರಗಳೂ ನಮ್ಮ ಪರವಾಗಿ ನಿಮ್ಮಲಿಲ್ಲ. ಶ್ರೀಲಂಕಾಕ್ಕೆ ನಾವು ಆರ್ಥಿಕ ಸಹಾಯ ಮಾಡಿದರೂ ನಮ್ಮ ಪರವಾಗಿ ಹೇಳಿಕೆ ನೀಡಲಿಲ್ಲ. ಮೋದಿ ಅವರು 8 ಸಾವಿರ ಕೋಟಿಯ ಜೆಟ್ ವಿಮಾನದಲ್ಲಿ ಇಡೀ ಪ್ರಪಂಚ ಸುತ್ತುತ್ತಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ಚೀನಾದಲ್ಲಿ ಜೂನ್ ತಿಂಗಳಲ್ಲಿ ನಡೆದ ಶಾಂಘೈ ಕಾರ್ಪೋರೇಷನ್ ಆರ್ಗನೈಜೇಷನ್ ಸಮಿಟ್ ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಲು ಸಭೆಯ ನಡಾವಳಿಯಲ್ಲಿ ತಿರಸ್ಕರಿಸಲಾಯಿತು. ಆಗ ರಾಜನಾಥ್ ಸಿಂಗ್ ಏಕೆ ಮೌನವಾಗಿದ್ದರು. ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರು ದೇಶಕ್ಕೆ ಉತ್ತರ ನೀಡಬೇಕು ಎಂದರು.

ಮೋದಿ ನೇತೃತ್ವದ ಭಾರತ ಸರ್ಕಾರಕ್ಕೆ ವಿಶ್ವಮಟ್ಟದಲ್ಲಿ ಇದು ಭಾರಿ ಹಿನ್ನಡೆ ಹಾಗೂ ನಮ್ಮ ವಿದೇಶಾಂಗ ನೀತಿಗಳ ವೈಫಲ್ಯ ಎನ್ನುವುದನ್ನು ಎತ್ತಿ ತೋರಿಸುತ್ತದೆ. ವಿದೇಶಾಂಗ ಸಚಿವರು ತಮ್ಮ ಪ್ರತಿಭಟನೆ ದಾಖಲಿಸದೆ ಎಲ್ಲಿಯೋ ಅಡಗಿಕೊಂಡಿದ್ದಾರೆ.  ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನಕ್ಕೆ ನೀಡಲಾಗಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತಿದೆ. ತೋಳಕ್ಕೆ ಕುರಿಗಳ ಹಿಂಡನ್ನು ಕಾಯುವ ಕೆಲಸ ನೀಡಲಾಗಿದೆ. ಪಾಕಿಸ್ತಾನ ಪ್ರಣೀತ ಪಹಲ್ಗಾಮ್ ದಾಳಿಯ ಘಟನೆ ಹಸಿಯಾಗಿ ಇರುವಾಗಲೇ ಇಂತಹ ಸ್ಥಾನಮಾನ ಪಾಕಿಸ್ತಾನಕ್ಕೆ ದೊರೆತಿರುವುದು ಅವಮಾನಕರ ಎಂದು ಖಂಡಿಸಿದ್ದಾರೆ.

ಪಾಕಿಸ್ತಾನದ ಭಯೋತ್ಪಾದಕ ಉತ್ತೇಜನ ಕೃತ್ಯಗಳು ಅನೇಕ ಬಾರಿ ಬಯಲಾಗಿದೆ. ಮೃತ ಒಸಮಾ ಬಿನ್ ಲಾಡೆನ್ ಸೇರಿದಂತೆ ಭಾರತ ವಿರೋಧಿ ಕೆಲಸ ಮಾಡುತ್ತಿರುವ ಅಬ್ದುಲ್ ರೌಫ್, ಮಸೂದ್ ಅಜರ್, ಹಾಫಿ ಸಯ್ಯೀದ್, ದಾವೂದ್ ಇಬ್ರಾಹಿಂ ಇವರಿಗೆಲ್ಲಾ ಆವಾಸಸ್ಥಾನವಾಗಿದೆ. ಜೈಶ್ ಎ ಮೊಹಮದ್, ಜಮಾತ್ ಉಲ್ ದವಾ, ತೆಹ್ರಿಕ್ ಅಜಾದಿ ಜಮ್ಮು ಅಂಡ್ ಕಶ್ಮೀರ್, ಹಿಜ್ಬುಲ್ ಮುಜಾಹಿದ್ದೀನ್, ಹರ್ಕತ್ ಉಲ್ ಮುಜಾಹಿದ್ದೀನ್, ಲಷ್ಕರ್ ಎ ತೋಯ್ಬಾ, ಕಾಶ್ಮೀರ್ ಜಿಹಾದ್ ಫೋರ್ಸ್, ಜಮ್ಮು ಅಂಡ್ ಕಾಶ್ಮೀರ್ ಸ್ಟೂಡೆಂಟ್ ಲಿಬರೇಷನ್ ಪ್ರಂಟ್, ತೆಹರಿಕ್ ಎ ಹುರಿಯತ್ ಇದೆಲ್ಲವು ಸಹ ಪಾಕಿಸ್ತಾನದಿಂದಲೇ ತಮ್ಮ ಕಾರ್ಯಾಚರಣೆ ನಡೆಸುತ್ತಿವೆ. ಇಂತಹ ದೇಶ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿ ಹೊರುವುದು ಚೋದ್ಯವಲ್ಲವೇ?

ಪಾಕಿಸ್ತಾನ ಸುಮಾರು 21 ಕಡೆ ಭಯೋತ್ಪಾದಕ ಕ್ಯಾಂಪ್ ಗಳನ್ನು ನಡೆಸುತ್ತಿದೆ. ಮಕ್ಸರೇ ಅಕ್ಸಾ, ಚೇಲಾ ಬಂದಿ, ಅಬ್ದುಲ್ಲಾ ಬಿನ್ ಮಸೂದ್, ಗಡಿ, ಬಾಲಾಕೋಟ್, ಗುಲ್ ಪುರ್ ಹೀಗೆ ಅನೇಕ ಕಡೆ ಇವೆ. ಇಷ್ಟೇಲ್ಲಾ ಮಾಹಿತಿ ಇದ್ದರೂ ಬಿಜೆಪಿ ಸರ್ಕಾರ, ಏನು ಮಾಡುತ್ತಿದೆ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

More articles

Latest article