ಬೆಂಗಳೂರು: ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಪದಾಧಿಕಾರಿಗಳು ಮತ್ತು ನಾನಾ ಸಮುದಾಯಗಳ ಮುಖಂಡರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, “ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ”ಯನ್ನು ಜಾರಿಗೊಳಿಸಲು ಒತ್ತಾಯಿಸಿದರು.
ಮಹಾ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ.ಎಂ.ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ನೂರಕ್ಕೂ ಅಧಿಕ ಮಂದಿ ನಿಯೋಗದಲ್ಲಿದ್ದರು.
ಮಹಾ ಒಕ್ಕೂಟದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಉಪಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಸಚಿವ ಸಂಪುಟದಲ್ಲಿ ವರದಿ ಕುರಿತು ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಒಕ್ಕೂಟದ ಹಕ್ಕೊತ್ತಾಯ:-
1.ಕರ್ನಾಟಕ ಸರ್ಕಾರದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಮಾನ್ಯ ಕಾಂತರಾಜ್ ಅವರ ನೇತ್ರತ್ವದಲ್ಲಿ ಸಮೀಕ್ಷೆ ಮಾಡಿ, ಮಾನ್ಯ ಜಯಪ್ರಕಾಶ್ ಹೆಗಡೆಯವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ” ಯನ್ನು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಂಡಿಸಿ ಅಂಗೀಕರಿಸಿ, ಅನುಮೋದಿಸಿ, ಜಾರಿಗೆ ತರಬೇಕು.
2.ರಾಜ್ಯದಲ್ಲಿ ಚಾಲ್ತಿಯಿರುವ ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇಕಡಾ 75 ಕ್ಕೆ ವಿಸ್ತರಿಸಬೇಕು. ಎಸ್ ಸಿ, ಎಸ್ ಟಿ, ಒಬಿಸಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಬೇಕು.
3.ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮೀಸಲಾತಿ ನೀತಿ ಜಾರಿಗೆ ತರಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಸೂಕ್ತ ರೀತಿಯಲ್ಲಿ ಒತ್ತಾಯಿಸಬೇಕು.
4.ವಿಧಾನಸಭೆ, ಲೋಕಸಭೆಗಳಲ್ಲಿ ಯಂತಹ ಶಾಸನ ಸಭೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಲಿಸಬೇಕು. ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಬೇಕು. ಈ ಕುರಿತು ಕೇಂದ್ರದ ಮೇಲೆ ಒತ್ತಡ ಹಾಕಬೇಕು.
5.ಕರ್ನಾಟಕದ ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತರಲು ಕಾನೂನು ರೂಪಿಸಬೇಕು.
6.ಕೇಂದ್ರ ಸರ್ಕಾರ ಲ್ಯಾಟರಲ್ ಎಂಟ್ರಿ ಇತ್ಯಾದಿ ಅಕ್ರಮ ಮಾರ್ಗಗಳ ಮೂಲಕ ಶೋಷಿತ ಸಮುದಾಯಗಳಿಗೆ ನೇಮಕಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ತಕ್ಷಣ ಕೇಂದ್ರದ ಬ್ಯಾಕ್ ಲಾಗ್ ಹುದ್ದೆಯನ್ನು ಭರ್ತಿ ಮಾಡಲು ಒತ್ತಡ ಹಾಕಬೇಕು.
7.ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಿಂದುಳಿದವರಿಗೂ ಬ್ಯಾಕ್ ಹುದ್ದೆ ಭರ್ತಿ ಮಾಡಲು ಕ್ರಮವಹಿಸಬೇಕು. ಈ ಹಕ್ಕೊತ್ತಾಯ ಗಳನ್ನು ಜಾರಿಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಶೋಷಿತ ಸಮುದಾಯಗಳ ಜನತೆ ಮತ್ತು ಸಂಘ ಸಂಸ್ಥೆಗಳು ಒತ್ತಾಯಿಸುತ್ತೇವೆ. ನವಂಬರ್ ತಿಂಗಳ ಮೊದಲ ವಾರದ ಒಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಜಾರಿಗೊಳಿಸದಿದ್ದಲ್ಲಿ ರಾಜ್ಯ ಸರ್ಕಾರದ
ವಿರುದ್ಧ ತೀವ್ರವಾದ ಹೋರಾಟವನ್ನು ಮಾಡುತ್ತೇವೆ.