ಬೆಂಗಳೂರು: ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಮೋದಿ,ಅಮಿತ್ ಷಾ ಅವರು ಕರ್ನಾಟಕವನ್ನ ದ್ವೇಷ ಮಾಡುತ್ತಾರೆ. ಕರ್ನಾಟಕದ ರೈತರನ್ನ ದ್ವೇಷ ಮಾಡ್ತಾರೆ. ಬರ ಪರಿಹಾರ ಹಣ ಕೊಡಿ ಎಂದು ಕೇಳಿದ್ರೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿಯೇ ನಾವು ಇಂದು ಪ್ರತಿಭಟನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡದಿರುವುದನ್ನು ಖಂಡಿಸಿ ವಿಧಾನಸೌಧದ ಮುಂದೆ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೆಪ್ಟೆಂಬರ್ 22ರಂದು ಬರ ಪರಿಹಾರ ಹಣ ಬಗ್ಗೆ ಮನವಿ ಕೊಟ್ಟಿದ್ದೆವು. ಕೇಂದ್ರ ಬರ ಪರಿಹಾರ ತಂಡ ಬಂದು ಪರಿಶೀಲನೆ ಮಾಡಿ ವರದಿ ಕೊಟ್ಟಿದೆ. ಕರ್ನಾಟಕದಲ 223 ೨) ತಾಲೂಕುಗಳಲ್ಲಿ ಭೀಕರವಾದ ಬರಗಾಲ ಇದೆ. 100 ವರ್ಷದಲ್ಲಿ ಈ ರೀತಿಯ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗೆ ಅನುದಾನ ಕೇಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ರು. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳ್ತಿಲ್ಲ. ರೈತರಿಗೆ ಮೊದಲ ಕಂತಿನಲ್ಲಿ 2000 ಸಾವಿರ ರೂಪಾಯಿ ಕೊಟ್ಟಿದ್ದೇವೆ. ಒಟ್ಟು 650 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ರೈತರ ಬವಣೆಗೆ ಸಮರ್ಪಕವಾಗಿ ಸ್ಪಂದಿಸಿದ್ದೇವೆ ಎಂದರು.
18,172 ಕೋಟಿ ರೂ ಬರ ಪರಿಹಾರ ಕೇಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿಯೇ ನಾವು ಕೇಳ್ತಿದ್ದೇವೆ. ಮೋದಿ, ಅಮಿತ್ ಷಾ ಯಾವ ಮುಖ ಹೊತ್ತುಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಬರಲು ಮೋದಿ, ಅಮಿತಾ ಷಾ ನೈತಿಕತೆ ಇಲ್ಲ. ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಕೊಟ್ಟಿಲ್ಲ. ರಾಷ್ಟ್ರೀಯ ಯೋಜನೆ ಅಂತಲೂ ಘೋಷಣೆ ಮಾಡಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಹಣ ಕೂಡ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಇದುವರೆಗೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಪ್ರವಾಹ ಬಂದಾಗ ಬರಲಿಲ್ಲ, ಭೀಕರವಾದ ಬರಗಾಲ ಬಂದಾಗ ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಬರುತ್ತಿದ್ದಾರೆ. ಹೀಗಾಗಿಯೇ ನಾವು ಗೋ ಬ್ಯಾಕ್ ಅಮಿತ್ ಷಾ ಎಂದು ಹೇಳುತ್ತಿದ್ದೇವೆ ಎಂದರು.
ಸುಪ್ರೀಂಕೋರ್ಟ್ ನಮಗೆ ಕರುಣೆ ತೋರಿಸಿದೆ. ನಾವು ಸುಪ್ರೀಂ ಕೋರ್ಟ್ ಗೆ ಹೋಗದೇ ಇದ್ರೆ ಒಂದೇ ಒಂದು ರೂಪಾಯಿ ಕೊಡುತ್ತಿರಲಿಲ್ಲ. ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದರು. ಈಗ ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಅವರು ಆಗ್ರಹಿಸಿದರು.