ಹೊಸದಿಲ್ಲಿ: ನಿರೀಕ್ಷೆಯಂತೆ ಎನ್ ಡಿಎ ಆಡಳಿತದ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ.
ಈ ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲದೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಪಕ್ಷಗಳ ಹಂಗಿನಲ್ಲಿರುವ ಬಿಜೆಪಿ ಈ ಎರಡೂ ಪಕ್ಷಗಳ ಮನವೊಲಿಸುವ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ ಈ ಬಿಹಾರ ಮತ್ತು ಆಂಧ್ರಪ್ರದೇಶಗಳು ಸಿಂಹಪಾಲು ದೊರೆತಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2024-25 ಸಾಲಿನ ಬಜೆಟ್ ನಲ್ಲಿ ಆಂಧ್ರದಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಇದಲ್ಲದೆ ಆಂಧ್ರಪ್ರದೇಶಕ್ಕೆ 1,500ಕೋಟಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದರು. ಆಂಧ್ರಪ್ರದೇಶ ಪುನರ್ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಹೇಳಿದರು.
ಇನ್ನೊಂದೆಡೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿರುವ ಬಿಹಾರದಲ್ಲಿ ಹೊಸ ಏರ್ ಪೋರ್ಟ್, ಮೆಡಿಕಲ್ ಕಾಲೇಜು ಸ್ಥಾಪನೆಯ ತೀರ್ಮಾನ ಕೈಗೊಳ್ಳಲಾಗುವುದು. 26 ಕೋಟಿ ವೆಚ್ಚದಲ್ಲಿ ಪ್ರಮುಖ ಹೆದ್ದಾರಿಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಘೋಷಿಸಲಾಗಿದೆ. ಬಿಹಾರದಲ್ಲಿ ಬಂಡವಾಳ ಹೂಡಿಕೆಗೆ ವಿಶೇಷ ಸಹಕಾರದ ಘೋಷಣೆಯನ್ನೂ ಮಾಡಲಾಗಿದೆ.
ಮುದ್ರಾ ಸಾಲ 10 ರಿಂದ 20 ಲಕ್ಷಕ್ಕೆ ಏರಿಕೆ
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಗ್ರಾಮೀಣಾಭಿವೃದ್ದಿಗೆ ರೂ.2.66 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಮಹಿಳಾ ಕಲ್ಯಾಣ ಅಭಿವೃದ್ದಿಗೆ ಮೂರು ಲಕ್ಷ ಕೋಟಿ ರೂ. ಕಾಯ್ದಿರಿಸಲಾಗಿದೆ.
63 ಸಾವಿರ ಗ್ರಾಮಗಳಿಗೆ ಬುಡಕಟ್ಟು ಅನುದಾನ ಒದಗಿಸಲಾಗುವುದು. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಹಕಾರ ನೀಡಲಾಗುವುದು. ಬಡವರಿಗೆ ಡಾರ್ಮೆಟರಿ ಮಾದರಿಯ ಮನೆಗಳ ನಿರ್ಮಾಣ ಮಾಡಲಾಗುವುದು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3 ಕೋಟಿ ಹೊಸ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು.