ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಹಾಕಿರುವವರನ್ನು ಶಿಕ್ಷಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಬಳಿ ಯಾವುದೇ ಕಾನೂನು ಇಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ. ಪಾಲಿಕೆಯ ಬೈಲಾದಲ್ಲಿ ಯಾವುದೇ ಅವಕಾಶ ಇಲ್ಲ ಎಂದೂ ಹೈಕೋರ್ಟ್ ಗರಂ ಆಗಿದೆ. ಈ ವಿಷಯವನ್ನು ಲಘುವಾಗಿ ಪರಿಗಣಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಸರ್ಕಾರ ಮತ್ತು ಪಾಲಿಕೆಯನ್ನು ಎಚ್ಚರಿಸಿದೆ.
ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿ ಮತ್ತು 2024ರ ಜುಲೈನಲ್ಲಿ ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಬೆಂಗಳೂರಿನಲ್ಲಿನ ಅಕ್ರಮ ಫ್ಲೆಕ್ಸ್-ಹೋರ್ಡಿಂಗ್ಸ್ ಮತ್ತು ಬ್ಯಾನರ್‌ಗಳ ಹಾವಳಿಯಿಂದ ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಆದರೂ, ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅಂತೆಯೇ ಉದ್ದೇಶಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಹೀರಾತು ಬೈಲಾ-2024ರಲ್ಲಿ ಅನಧಿಕೃತವಾಗಿ ಪ್ಲೆಕ್ಸ್, ಹೋರ್ಡಿಂಗ್ಸ್ ಅಳವಡಿಸುವವರನ್ನು ಶಿಕ್ಷಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ. ಅನಧಿಕೃತ ಪ್ಲೆಕ್ಸ್, ಹೋರ್ಡಿಂಗ್ಸ್ ಅಥವಾ ಬ್ಯಾನರ್ ಹಾಕುವುದರಿಂದ ವಾಹನ ದಟ್ಟಣೆ ಉಂಟಾಗುವುದಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಮತ್ತು ಬಿಬಿಎಂಪಿ ಕೂಡಲೇ ಅನಧಿಕೃತವಾಗಿ ಪ್ಲೆಕ್ಸ್, ಹೋರ್ಡಿಂಗ್ಸ್ ಅಥವಾ ಬ್ಯಾನರ್ ಹಾಕುವವರಿಗೆ ದಂಡದ ಪ್ರಮಾಣ ನಿಗದಿ ಮಾಡಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳನ್ನು ಕುರಿತು ಸೂಕ್ತ ಉತ್ತರ ನೀಡಬೇಕು ಎಂದು ಹೈಕೋರ್ಟ್ ವಿಚಾರಣೆಯನ್ನು 2025 ರ ಜನವರಿ 16 ಕ್ಕೆ ಮುಂದೂಡಿದೆ.