ಹಿಂದೂ ಮುಸ್ಲಿಂ ಧ್ರುವೀಕರಣ ಬಿಟ್ಟರೆ ಬೇರೆ ಅಸ್ತ್ರವೇ ಇಲ್ಲದೆ ಮತ್ತೆ ಮೊದಲಿನ ಸ್ಥಿತಿಗೆ ಬಿಜೆಪಿ(1989) ಬಂದಾಯಿತು. 10 ವರ್ಷಗಳ ಆಡಳಿತದ ಮೂಲಕ ಜನಮಾನಸವನ್ನು ಗೆಲ್ಲದೇ ಸೋತು ಮತ್ತೆ ಮತೀಯ ಬ್ರಹ್ಮಾಸ್ತ್ರಕ್ಕೇ ಶರಣಾಗ ಬೇಕಾಯಿತು. ಆದರೆ ಪ್ರಜಾಪ್ರಭುತ್ವ ಈ ಅಸ್ತ್ರವನ್ನು ಬಿಜೆಪಿ ಕಡೆಗೇ ತಿರುಗಿಸುತ್ತಿದೆ.-ಎಂ ಜಿ ಹೆಗಡೆ, ಜನಪರ ಹೋರಾಟಗಾರ.
2013 ರ ವೇಳೆಗೆ ಅಣ್ಣಾ ಹಜಾರೆ ಬಾಬಾ ರಾಮದೇವ, ಕೇಜ್ರಿವಾಲ್ ಹಾಗೂ ಇತರರಿಂದ ಕಾಂಗ್ರೆಸ್ ನ ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಭಾರೀ ಅಂದೋಲನ ಹುಟ್ಟಿಕೊಂಡಿತು. ಭ್ರಷ್ಟಾಚಾರ, ಕಪ್ಪು ಹಣ, ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹಣ ಹೀಗೆ ಪುಂಖಾನುಪುಂಖ ಆರೋಪಗಳು. ಜೊತೆಗೆ ಇಟೆಲಿಯಲ್ಲಿ ಸೋನಿಯಾ ಗಾಂಧಿಯವರು ಅಪಾರ ಹಣ ಶೇಖರಿಸಿಟ್ಟಿದ್ದಾರೆ, ಸ್ವಿಸ್ ಬ್ಯಾಂಕ್ ನಲ್ಲಿ ಅವರ ಖಾತೆಯಿದೆಯೆಂದೂ ಲೆಕ್ಕ ಮಾಡಲಾಗದಷ್ಟು ಸೊನ್ನೆಗಳನ್ನು ಉದ್ದಕ್ಕೆ ಟೈಪ್ ಮಾಡಿ ಹರಿಬಿಡಲಾಯಿತು.
ನಾನು ಆಗ ರಾಜಕೀಯದಿಂದ ದೂರವಿದ್ದ ದಿನಗಳು. ದೆಹಲಿಯ ಹೋರಾಟ ದೇಶದಾದ್ಯಂತ ವಿಸ್ತರಿಸಿತು. ಅರೇ ಇಷ್ಟೊಂದು ಭ್ರಷ್ಟಾಚಾರವೇ? ಕಾಂಗ್ರೆಸ್ ಆದರೇನು, ನಾನೂ ನಾಲ್ಕು ದಿನ ಮಂಗಳೂರು ಕದ್ರಿ ಪಾರ್ಕ್ ಬಳಿ ಮೊಂಬತ್ತಿ ಹಿಡಿದು ಧಿಕ್ಕಾರ ಕೂಗಿದ್ದಾಯಿತು.
ಈ ನಡುವೆ ಒಬ್ಬರು ಅರ್ಥ ಕ್ರಾಂತಿ ಎಂಬ ಪುಸ್ತಕ ಕೊಟ್ಟು, ಸಂವಾದ ಕಾರ್ಯಕ್ರಮಕ್ಕೂ ಕರೆದಿದ್ದರು. ಹೋಗಿದ್ದೆ ಕೂಡಾ. ಅದರಲ್ಲಿ ಕರೆನ್ಸಿಯೇ ಇಲ್ಲದ, ಎಲ್ಲಾ ರೀತಿಯ ತೆರಿಗೆ ರದ್ದು ಪಡಿಸಿ, ಬ್ಯಾಂಕ್ ವಹಿವಾಟಿನ ಮೇಲೆ ತೆರಿಗೆ ಸಂಗ್ರಹಿಸುವ, ದೊಡ್ಡ ಮುಖ ಬೆಲೆಯ ನೋಟು ರದ್ದತಿಯ ಸಂಗತಿಗಳ ಮೇಲೆ ಸಂವಾದವಾಗಿತ್ತು. ಅನಿಲ್ ಬೊಕ್ಲೆ ಅನ್ನುವ ವ್ಯಕ್ತಿಯ ಸಿದ್ಧಾಂತವಿದು. ಪುಸ್ತಕದ ಒಂದೆರಡು ಪುಟ ಹಾಕಿದ್ದೇನೆ ನೋಡಿ. ಅಂದರೆ ಈ ನೋಟ್ ಬ್ಯಾನ್ ಮತ್ತು ಆರ್ಥಿಕ ವಿಷಯದ ಬದಲಾವಣೆ ಮೊದಲೇ ಯೋಜಿತ. ಆರ್ಥಿಕ ಕ್ರಾಂತಿಯ ಯೋಜನೆಗಳನ್ನು ನಮ್ಮ ದೇಶದಲ್ಲಿ ಜಾರಿಗೆ ತರುವುದು ಪ್ರಾಯೋಗಿಕವೂ ಅಲ್ಲ, ಸಾಧ್ಯವೂ ಇಲ್ಲ. ಪ್ರಯೋಜನವೂ ಕಾಣದು.
ನಾನು ಆಗ ಇದನ್ನೆಲ್ಲಾ ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅಂತೂ ಚುನಾವಣೆ ಬಂತು. ನಾನು ಪಕ್ಷದಲ್ಲಿ ಸಕ್ರಿಯವಿರಲಿಲ್ಲ. ಭ್ರಷ್ಟಾಚಾರ ರಹಿತ ನಾಯಕ ಪೂಜಾರಿಯವರಿಗೆ ಒಂದು ವೋಟು ಕೊಟ್ಟು ಸುಮ್ಮನೆ ಇದ್ದೆ. ಮೋದಿಯವರ ಭಾಷಣ ಕೇಳಿದ ಮೇಲೆ ಹೊಸ ಪ್ರಧಾನಿ ಒಂದಿಷ್ಟು ಒಳ್ಳೆಯ ಕೆಲಸ ಮಾಡಬಹುದು ಅನ್ನಿಸಿತ್ತು.
2016 ರಲ್ಲಿ ನೋಟು ರದ್ದತಿ ಘೋಷಣೆಯಾಯಿತು. ಆಗ ನಾನು ಈ ಅರ್ಥಕ್ರಾಂತಿ ಪುಸ್ತಕ ಮತ್ತೆ ನೋಡಿದೆ. ಇದೇ ಅನಿಲ್ ಬೊಕ್ಲೆ ಮೋದಿಯವರನ್ನು ಭೇಟಿ ಮಾಡಿದ ಬಗ್ಗೆಯೂ ಸುದ್ದಿಯಾಗಿತ್ತು. ಆಗ ನಾನು ನನ್ನ ಹೊಸ ಮನೆಯ ಕಟ್ಟೋಣದ ತಲೆ ಬಿಸಿಯ ಅಂತಿಮ ಹಂತದಲ್ಲಿದ್ದೆ.
ಎಲ್ಲವನ್ನೂ ಅಲ್ಲಿಂದಲ್ಲಿಗೆ ನೋಡಿ ಬಿಟ್ಟು ಬಿಡುತ್ತಿದ್ದೆ. ನೋಟ್ ಬ್ಯಾನ್ ನಿಂದ ಕಪ್ಪು ಹಣ ವಸೂಲಿಯಾಗುತ್ತೆ ಅನ್ನುವ ಸಣ್ಣ ಭ್ರಮೆಗೂ ಒಳಗಾಗಿದ್ದೆ. ಚಕ್ರವರ್ತಿ ಸೂಲಿಬೆಲೆ ಭಾಷಣ, ಈ ಪುಸ್ತಕದ ಅಂಶಗಳು, ಮೋದಿಯವರ ಕ್ರಮಗಳು ಒಂದಕ್ಕೊಂದು ಲಿಂಕ್ ಆಗುತ್ತಲೇ ಇತ್ತು.
2018 ರ ನಂತರ ಸ್ವಲ್ಪ ಮಟ್ಟಿಗೆ ಮತ್ತೆ ಸಾಮಾಜಿಕವಾಗಿ ತೊಡಗಿ ಕೊಳ್ಳತೊಡಗಿದೆ. ಬಿಜೆಪಿ ಸರ್ಕಾರದ ಯಾವ ಘೋಷಣೆಯೂ ಕಾರ್ಯರೂಪಕ್ಕೆ ಬರುತ್ತಿಲ್ಲವಲ್ಲ. ಸ್ವಿಸ್ ಬ್ಯಾಂಕ್ ಸೋನಿಯಾರವರ ಹಣ, ಎಂತದ್ದೂ ಸುದ್ದಿಯಿಲ್ಲ. ಬೆಲೆ ಏರಿಕೆ ನಿಧಾನ ಏರು ಮುಖವಾದಾಗ ನಾನು ಫೇಸ್‌ಬುಕ್ ಲ್ಲಿ ಬರೆಯತೊಡಗಿದೆ. ಡಾಲರ್ ಮೋಡಗಳನ್ನು ಮುಟ್ಟುತ್ತಿದೆ. ವಿದೇಶಿ ಸಾಲ ಸಾಗರದಾಚೆಗೆ ಹೋಗಿ ನಿಂತಿದೆ. ಕಪ್ಪು ಹಣ ಹೊರ ತಂದು ತೆರಿಗೆ ಕಟ್ಟುವ ಜನರಿಗೆ ನೀಡುತ್ತೇನೆ ಎಂಬ ಮೋದಿಯವರ ಆಶ್ವಾಸನೆ??
2013 ರಿಂದ ಫೇಸ್‌ಬುಕ್ ಜಾಲತಾಣದ ತುಂಬಾ ಬಿಜೆಪಿಗರದೇ ಆರ್ಭಟ. ಅದು ಎಷ್ಟು ಪ್ರಭಾವಶಾಲಿಯಾಗಿ ಮಾಡಿದ್ದರು ಎಂದರೆ ಕಾಂಗ್ರೆಸ್ ನವರಿಗೆ ಚುನಾವಣೆ ಮುಗಿದ ಮೇಲೆಯೇ ಅರ್ಥವಾದದ್ದು.
ಕೊನೆ ಕೊನೆಗೆ ಬಿಜೆಪಿ ವಿರುದ್ಧ ಬರೆಯಲೂ ಭಯಪಡುವ ಸ್ಥಿತಿ ನಿರ್ಮಾಣವಾಯಿತು. ಟೀಕೆ ಟಿಪ್ಪಣಿ ಬರೆದರೆ ಸುತ್ತಲಿನಿಂದ ಅವಾಚ್ಯ ಶಬ್ದಗಳ ಆಕ್ರಮಣ. ಇದನ್ನು ವಿರೋಧಿಸುವ ಬಗೆಯೂ ಗೊತ್ತಿರಲಿಲ್ಲ. ಮಾಧ್ಯಮಗಳಂತೂ ಮೋದಿಯ ಪಾದದಡಿಯಲ್ಲಿ ಕುಳಿತಾಗಿತ್ತು.
ನಂತರ ಒಮ್ಮೆಲೆ ಮಹಾತ್ಮಾ ಗಾಂಧಿಯವರ ಅವಹೇಳನ ದೇಶದಾದ್ಯಂತ ಪ್ರಾರಂಭವಾಗಿ ನೋಟಿನಿಂದ ಅವರ ಚಿತ್ರ ತೆಗೆಯಲಾಗುವುದು ಅನ್ನುವ ಮಟ್ಟಕ್ಕೆ ತಲುಪಿತು. ಮುಂದಿನ ಆಹಾರ ನೆಹರೂ. ಗಾಂಧಿಯವರೂ ಹುಟ್ಟಿದ್ದು ಮುಸ್ಲಿಂಗೆ, ನೆಹರೂ ವಂಶ ಮುಸ್ಲಿಂ ವಂಶ.. ಹೀಗೆ ಯಾವುದೇ ಆಡೆತಡೆಯಿರದ ನಿಂದನಾ ಪ್ರವಾಹ.
ಒಂದು ಅಂಶ ಗಮನಿಸಿ. ಬಿಜೆಪಿ ಪರಿವಾರದ, ಸರ್ಕಾರದ ವಿರುದ್ಧ ಯಾರೇ ಮಾತನಾಡಲಿ ಅವರನ್ನು ಮುಸ್ಲಿಂ ಪರ ಎಂದು ಟ್ಯಾಗ್ ಮಾಡುತ್ತಾರೆ. ನಂತರ ಹಿಂದೂ ವಿರೋಧಿ, ದೇಶದ್ರೋಹಿ ಎಂದು ಲೇಬಲ್ ಅಂಟಿಸುವುದು ಜೋರಾಗಿಯೇ ನಡೆಯಿತು. ಇದು ಯಾರೋ ಒಬ್ಬಿಬ್ಬರ ಕೆಲಸವಲ್ಲ. ಸಂಘಟಿತ ಉದ್ದೇಶಪೂರ್ವಕ ಚಳುವಳಿ. ಅದಕ್ಕೆ ಮೊದಲು ಗಾಂಧಿಯವರನ್ನೇ ಬಳಸಿಕೊಂಡದ್ದು.
ಬಿಜೆಪಿ ಪರಿವಾರದ ಮಿತ್ರರನ್ನು ಸ್ವಲ್ಪ ಇರಿಟೇಟ್ ಮಾಡಿ ತಕ್ಷಣ ” ನೀನು ಬ್ಯಾರಿ ಬೆಂಬಲಿಗ, ನಿನ್ನ ಡಿ ಎನ್ ಎ ಪರೀಕ್ಷೆ ಮಾಡಬೇಕು” ಅನ್ನುತ್ತಾರೆ. ಬಿಜೆಪಿ ಅಂದರೆ ಹಿಂದೂ ಧರ್ಮ ಅನ್ನುವ ಲೆವೆಲ್ ರೀಚ್ ಆಗಿದ್ದಾರೆ.
ಅವರ ಚಿಂತಕರು ಬರಹಗಾರರು ಟಿವಿ ಆ್ಯಂಕರ್ ಗಳು ರಾಷ್ಟ್ರ ವಾದಿಗಳೆಂದು(ಇದೊಂದು ವ್ಯಾಧಿ) ನಾಮಾಂಕಿತರಾದರು. ವಿರೋಧಿಗಳು ರಾಷ್ಟ್ರ ದ್ರೋಹಿಗಳೆಂದು ಬಿರುದು ಪಡೆದರು.
2013 ರಿಂದ 2022 ರವರೆಗೆ ರಾಹುಲ್ ಗಾಂಧಿಯವರನ್ನು, ಸೋನಿಯಾ ಗಾಂಧಿಯವರನ್ನು ಎಷ್ಟು ಸಾಧ್ಯವೋ ಅಷ್ಟು ಹೀನಾಯವಾಗಿ ಚಾರಿತ್ರ್ಯ ಹನನ, ನಿಂದನೆ. ಲೇವಡಿಗೆ ಒಳಪಡಿಸಲಾಯಿತು.
2019 ರಲ್ಲೂ ಬಿಜೆಪಿ ಅಧಿಕಾರಕ್ಕೆ ಬಾರದ ಸ್ಥಿತಿ ನಿರ್ಮಾಣವಾಯಿತು. ಆಗ ಪುಲ್ವಾಮ ದಾಳಿಯಿಂದ ಬಿಜೆಪಿ ಮತ್ತೆ ಮಿಂಚಿತು. ಇದೇ ವೇಳೆ ಪ್ರತಿ ಪಕ್ಷಗಳು ಒಂದಾಗದೆ ಮತಗಳು ವಿಭಜನೆಯಾದದ್ದೂ ಅನುಕೂಲವಾಯಿತು. ಆನಂತರದ ದಿನಗಳಲ್ಲಿ ಮತ್ತಷ್ಟು ವ್ಯಗ್ರವಾಗಿ ಬಿಜೆಪಿ ತನ್ನ ವಿರೋಧಿಗಳ ಮೇಲೆ ದಾಳಿ ಶುರು ಮಾಡಿತು. ಏನೇ ಬರೆದರೂ ಮೋದಿ ಭಕ್ತರು ನನ್ನ ವಾಲ್ ನಲ್ಲಿ ವಿಷ ಕಾರಲು ಶುರುಮಾಡಿದರು. ಈ ಎಲ್ಲಾ ಬೆಳವಣಿಗೆಯು ನಾನು ಮತ್ತೆ ನೇರ ರಾಜಕೀಯಕ್ಕೆ ಬರಲು ಕಾರಣವಾಯಿತು.
ಈ ನಡುವೆ ಮಂಡ್ಯಕ್ಕೆ ಸಕ್ಕರೆ ಪತ್ರ, ಮಂಗಳೂರು ಜೆರೋಸಾ ಶಾಲೆ ಪ್ರಕರಣದಲ್ಲಿ ಬಿಜೆಪಿ ಕೋಮುವಾದಕ್ಕೆ ಹೊಡೆತ ಬಿತ್ತು. ಮಾಧ್ಯಮಗಳ ಕೋಮುವಾದದ ವಿರುದ್ಧದ ನನ್ನ ವಿಡಿಯೋ ರಾಜ್ಯದಾದ್ಯಂತ ಪ್ರಚಾರವಾಯಿತು. ಆಕ್ರೋಶಗೊಂಡ ಬಿಜೆಪಿ ಮತ್ತು ಎರಡು ಟಿವಿ ಚಾನೆಲ್ ನವರು ನನ್ನ ಫೋಟೋಕ್ಕೆ ಉಗುಳುವ ಕಾರ್ಯಕ್ರಮ ನಡೆಸಿದ್ದಲ್ಲದೆ, ನೂರಾರು ನಿಂದನಾತ್ಮಕ, ಬೆದರಿಕೆ ಕರೆಗಳೂ ಬಂದಿತ್ತು.
ಬೆಲೆ ಏರಿಕೆ ವಿದೇಶಿ ಸಾಲ, ಡಾಲರ್ ಮೌಲ್ಯ, ನಿರುದ್ಯೋಗ, ಭ್ರಷ್ಟಾಚಾರ ಏರುತ್ತಲೇ ನಡೆಯಿತು. ನಿಧಾನವಾಗಿ ಜನ ಮಾತನಾಡ ತೊಡಗಿದರು, ಬೇರೆ ಬೇರೆ ಚಳುವಳಿ ಪ್ರಾರಂಭವಾಯಿತು. ರಾಹುಲ್ ರ ಪಾದಯಾತ್ರೆ ಹೊಸ ಶಕ್ತಿ ನೀಡಿತು.
ಕಾಂಗ್ರೆಸ್ ಪಕ್ಷಕ್ಕಿಂತ ಮೊದಲು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಮೋದಿ ಭಕ್ತರ ವಿರುದ್ಧ ತೊಡೆತಟ್ಟಿ ನಿಂತರು. ಮೋದಿ ಕಾಸಿಗೆ ಕೈಚಾಚಿರುವ ಮಿಡಿಯಾಗಳ ವಿರುದ್ಧ ನೂರಾರು ಯೂಟ್ಯೂಬ್ ಚಾನೆಲ್ ಗಳು ಹುಟ್ಟಿಕೊಂಡವು. ಬಿಜೆಪಿ ಗುಲಾಮರಾಗಲು ಒಪ್ಪದ ಅನೇಕ ಹಿರಿಯ ಪತ್ರಕರ್ತರು ಇಂತಹ ಚಾನೆಲ್ ಗಳಿಗೆ ಜೀವ ತುಂಬಿದರು.
ವಿಚಿತ್ರ ಅಂದರೆ ಸ್ವತಃ ಮೋದಿಯವರ ಭಾಷಣದ ಒಂದಂಶವೂ ಜಾರಿಗೆ ಆಗದಿದ್ದರೂ, ಅದನ್ನು ಒಪ್ಪಿಕೊಳ್ಳುತ್ತಲೇ, ಕೇವಲ ಮುಸ್ಲಿಂರ ಮೇಲಿನ ದ್ವೇಷಕ್ಕೆ ನಾವು ಬಿಜೆಪಿಗೆ ವೋಟು ಕೊಡಬೇಕೆಂಬುದು ಮೋದಿ ಭಕ್ತರು ಭಯಸುತ್ತಾರೆ.( ಮೋದಿ ಬಾರದಿದ್ದರೆ ಹಿಂದೂ ಉಳಿಯಲ್ಲ)
ಅಂದರೆ ಇಡೀ ಚುನಾವಣೆ ಮುಸ್ಲಿಂರ ವಿರುದ್ಧ ದ್ವೇಷ ಸಾಧನೆಗೆ ನಡೆಯಬೇಕು. ಯಾಕೆ ? ಅದಕ್ಕೂ ಅವರ ಬಳಿ ಸರಿಯಾದ ಉತ್ತರವಿಲ್ಲ.
ಅಂದರೆ ಹಿಂದೂ ಮುಸ್ಲಿಂ ಧ್ರುವೀಕರಣ ಬಿಟ್ಟರೆ ಬೇರೆ ಅಸ್ತ್ರವೇ ಇಲ್ಲದೆ ಮತ್ತೆ ಮೊದಲಿನ ಸ್ಥಿತಿಗೆ ಬಿಜೆಪಿ(1989) ಬಂದಾಯಿತು. 10 ವರ್ಷಗಳ ಆಡಳಿತದ ಮೂಲಕ ಜನಮಾನಸವನ್ನು ಗೆಲ್ಲದೇ ಸೋತು ಮತ್ತೆ ಮತೀಯ ಬ್ರಹ್ಮಾಸ್ತ್ರಕ್ಕೇ ಶರಣಾಗಬೇಕಾಯಿತು. ಆದರೆ ಪ್ರಜಾಪ್ರಭುತ್ವ ಈ ಅಸ್ತ್ರವನ್ನು ಬಿಜೆಪಿ ಕಡೆಗೇ ತಿರುಗಿಸುತ್ತಿದೆ.
ಇದೀಗ ಯದ್ಧ ಸಮಬಲವಾಗಿದೆ. ರಾಜಕೀಯ ಸೋಲು ಗೆಲುವು ಬೇರೆ. ಇಂದಿನ ಮಾಹಿತಿಯ ಪ್ರಕಾರ ಬಿಜೆಪಿ ಸಮ್ಮಿಶ್ರ ಸರ್ಕಾರ ಮಾಡಬೇಕಾಗುತ್ತದೆ. ಅದಕ್ಕೆ ಗಡ್ಕರಿ ಪ್ರಧಾನಿಯಾಗುತ್ತಾರೆ ಎಂಬ ಸಮೀಕ್ಷೆ ಒಂದೆಡೆಯಾದರೆ, ಇಂಡಿಯಾ ಒಕ್ಕೂಟವೇ ಪೂರ್ಣ ಬಹುಮತ ಸಾಧಿಸುತ್ತದೆ ಅನ್ನುವ ಸಮೀಕ್ಷೆ ಇದೆ. ಒಟ್ಟಾರೆ one party..one leader ..one nation ಘೋಷಣೆಯನ್ನು ಜನಸಾಮಾನ್ಯರು ಗುಡಿಸಿ ಹಾಕಿದ್ದಾರೆ. ಅದೇ ಭಾರತದ ಪ್ರಜಾಪ್ರಭುತ್ವದ ಜೀವ ಮತ್ತು ಶಕ್ತಿ.
ಇಂದಿರಾಗಾಂಧಿ ತುರ್ತುಪರಿಸ್ಥಿತಿ ತಂದಾಗಲೂ ಜನ ಹೀಗೆ ಮಾಡಿದ್ದರು. ಅಟಲಜೀಯವರನ್ನೂ ಸೋಲಿಸಿದ್ದರು. ಭಾರತೀಯ ಪ್ರಜಾಪ್ರಭುತ್ವಕ್ಕೆ ಇದು ಹೊಸತಲ್ಲ. ಇದರ ಹೊಡೆತ ತಿನ್ನುವವರು ಮಾತ್ರ ಹೊಸಬರು.
ಎಂ ಜಿ ಹೆಗಡೆ
ಜನಪರ ಹೋರಾಟಗಾರರು
ಇದನ್ನೂ ಓದಿ- http://ಕೆನರಾ ಕ್ಷೇತ್ರದಲ್ಲಿ ಯಾಕೆ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರೇ ಗೆಲ್ಲಬೇಕು ಎಂದರೆ…..https://kannadaplanet.com/why-anjali-hemant-nimbalkar-should-win/